ಐಪಿಎಲ್; ವೆಂಕಿ ಅನುಚಿತ ವರ್ತನೆ

7

ಐಪಿಎಲ್; ವೆಂಕಿ ಅನುಚಿತ ವರ್ತನೆ

Published:
Updated:

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ನೀತಿಸಂಹಿತೆ ಅನ್ವಯ ಶಿಸ್ತು ಕ್ರಮ ಜರುಗಿಸುವಂತೆ ನಗರ ಪೊಲೀಸರು ಐಸಿಸಿಗೆ ಶಿಫಾರಸು ಮಾಡಿದ್ದಾರೆ.`ಐಪಿಎಲ್ ಪಂದ್ಯದ ವೇಳೆ ಕ್ರೀಡಾಂಗಣದ ಒಂದನೇ ಪ್ರವೇಶ ದ್ವಾರದ ಬಳಿ ಭಾನುವಾರ ರಾತ್ರಿ ನಡೆದ ಘಟನೆ ಸಂಬಂಧ ನಗರ ಪೊಲೀಸ್ ಕಮಿಷನರ್‌ಗೆ ಸಮಗ್ರ ವರದಿ ಸಲ್ಲಿಸಿದ್ದೇನೆ. ಆ ವರದಿಯ ಪ್ರತಿಯನ್ನೇ ಐಸಿಸಿ ಮತ್ತು ಐಪಿಎಲ್ ಪಂದ್ಯಾವಳಿಯ ಸಂಘಟಕರಿಗೂ ಕಳುಹಿಸಲಾಗಿದೆ. ವೆಂಕಟೇಶ್ ಪ್ರಸಾದ್, ಅವರ ಪತ್ನಿ ಜಯಂತಿ ಮತ್ತು ಸ್ನೇಹಿತೆ ಶಾನನ್ ಅವರು ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಸಿಸಿ ನೀತಿಸಂಹಿತೆ ಅನ್ವಯ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ~ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.ಘಟನೆಯ ಬಳಿಕ ವೆಂಕಟೇಶ್ ಪ್ರಸಾದ್ ದಂಪತಿ ಸ್ನೇಹಿತೆಯ ಜತೆ ತಾವಾಗಿಯೇ ಆಟಗಾರರ ವಲಯದಿಂದ ನಿರ್ಗಮಿಸಿದ್ದರಿಂದ ಆ ಮೂವರ ವಿರುದ್ಧ ಈವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಘಟನಾ ಸ್ಥಳದಲ್ಲಿದ್ದ ಎಎಸ್‌ಐ ಸಹ ಈವರೆಗೂ ದೂರು ನೀಡಿಲ್ಲ ಎಂದರು.ತಾಕತ್ತಿದ್ದರೆ ಹೊರಗೆ ಕಳುಹಿಸಿ:  `ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ವೆಂಕಟೇಶ್ ಪ್ರಸಾದ್, ತಾಕತ್ತಿದ್ದರೆ ಕ್ರೀಡಾಂಗಣದಿಂದ ಹೊರಗೆ ಕಳುಹಿಸಿ ಎಂದು ಸಿಬ್ಬಂದಿಗೆ ಬೆದರಿಕೆ ಹಾಕಿದರು. ಭದ್ರತಾ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಅವರು ಕೇಳಲಿಲ್ಲ~ ಎಂದು ರವಿಕಾಂತೇಗೌಡ ಹೇಳಿದರು. ಆಟಗಾರರ ಸುರಕ್ಷತೆ ಮತ್ತು ಮ್ಯಾಚ್ ಫಿಕ್ಸಿಂಗ್ ನಡೆಯುವ ದೃಷ್ಟಿಯಿಂದ ಆಟಗಾರರ ವಲಯದಲ್ಲಿ ಇತರೆ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಐಸಿಸಿ ಹಾಗೂ ಐಪಿಎಲ್ ಸಂಘಟಕರು ಇಲಾಖೆಗೆ ನಿರ್ದೇಶನ ನೀಡಿದ್ದರು. ಈ ಕಾರಣಕ್ಕಾಗಿಯೇ ಆಟಗಾರರ ವಲಯದಲ್ಲಿ ಇತರೆ ವ್ಯಕ್ತಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು ಎಂದರು.ಘಟನೆ ಹಿನ್ನೆಲೆ: ಡೆಕ್ಕನ್ ಚಾರ್ಜರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಭಾನುವಾರ ನಡೆದ ಐಪಿಎಲ್ ಪಂದ್ಯವನ್ನು ನೋಡಲು ವೆಂಕಟೇಶ್ ಪ್ರಸಾದ್ ದಂಪತಿ ಸ್ನೇಹಿತೆಯ ಜತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು. ಪಂದ್ಯ ಮುಗಿದ ಬಳಿಕ ರಾತ್ರಿ 12.20ರ ಸುಮಾರಿಗೆ ಜಯಂತಿ ಅವರು ಶಾನನ್ ಜತೆ ಕ್ರೀಡಾಂಗಣದ ಆವರಣದ ಒಂದನೇ ಪ್ರವೇಶ ದ್ವಾರದ ಬಳಿ ನಿಂತಿದ್ದರು.ಆ ಪ್ರವೇಶ ದ್ವಾರದ ಮೂಲಕವೇ ಆಟಗಾರರು ಹೊರ ಹೋಗಬೇಕಿದ್ದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಪೊಲೀಸರು, ಸುತ್ತಮುತ್ತ ಜಮಾಯಿಸಿದ್ದ ಪ್ರೇಕ್ಷರರನ್ನು ಹೊರಗೆ ಕಳುಹಿಸುತ್ತಿದ್ದರು. ಈ ವೇಳೆ ಅದೇ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದ ಕಾರೊಂದರ ಬಳಿ ನಿಂತಿದ್ದ ಜಯಂತಿ, ಶಾನನ್ ಅವರಿಗೆ ಹೊರ ಹೋಗುವಂತೆ ಎಎಸ್‌ಐ ಒಬ್ಬರು ಸೂಚಿಸಿದರು.ಇದಕ್ಕೆ ಪ್ರತಿರೋಧ ತೋರಿದ ಜಯಂತಿ ಅವರು, ಎಎಸ್‌ಐಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೊರ ಹೋಗಲು ನಿರಾಕರಿಸಿದರು. ಇದರಿಂದಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.ಈ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಡಿಸಿಪಿ ರವಿಕಾಂತೇಗೌಡ ಮತ್ತು ಹಿರಿಯ ಅಧಿಕಾರಿಗಳು, ಜಯಂತಿ ಅವರೊಂದಿಗೆ ಮಾತುಕತೆ ನಡೆಸಲು ಮುಂದಾದರು. ಆದರೆ, ಹಿರಿಯ ಅಧಿಕಾರಿಗಳ ಜತೆಯೂ ವಾಗ್ವಾದ ನಡೆಸಿದ ಅವರು ಪತಿ ವೆಂಕಟೇಶ್ ಪ್ರಸಾದ್ ಮೊಬೈಲ್‌ಗೆ ಕರೆ ಮಾಡಿದರು. ಘಟನಾ ಸ್ಥಳಕ್ಕೆ ಬಂದ ವೆಂಕಟೇಶ್ ಪ್ರಸಾದ್ ಅವರು ಪೊಲೀಸರ ಜತೆ ಏರುದನಿಯಲ್ಲಿ ಮಾತನಾಡಿದರು. ಅಲ್ಲದೇ ಹಿರಿಯ ಅಧಿಕಾರಿಗಳಿಗೆ ಏಕವಚನದಲ್ಲಿ ನಿಂದಿಸಿ ಹೊರ ಹೋಗಲು ನಿರಾಕರಿಸಿದರು.ರಾಯಲ್ ಚಾಲೆಂಜರ್ಸ್ ತಂಡದ ಸಹಾಯಕ ಕೋಚ್ ಕೂಡ ಆಗಿರುವ ವೆಂಕಟೇಶ್ ಪ್ರಸಾದ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಘಟನೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry