ಐಪಿಎಲ್: ಹೊಸ ಟೆಂಡರ್ ಆಹ್ವಾನಿಸಿದ ಬಿಸಿಸಿಐ

7

ಐಪಿಎಲ್: ಹೊಸ ಟೆಂಡರ್ ಆಹ್ವಾನಿಸಿದ ಬಿಸಿಸಿಐ

Published:
Updated:

ನವದೆಹಲಿ (ಪಿಟಿಐ): ಡೆಕ್ಕನ್ ಚಾರ್ಜರ್ಸ್ ಜೊತೆಗಿನ ಒಪ್ಪಂದ ರದ್ದುಪಡಿಸಿರುವ ಬಿಸಿಸಿಐ ಹೊಸ ಐಪಿಎಲ್ ತಂಡವನ್ನು ಕಂಡುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.ಮಂಡಳಿಯು ಭಾನುವಾರ ಹೊಸ ಫ್ರಾಂಚೈಸ್‌ಗಾಗಿ ಟೆಂಡರ್ ಆಹ್ವಾನಿಸಿದೆ. ಈ ಬಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. `ಬಿಡ್‌ನಲ್ಲಿ ಗೆಲ್ಲುವವರು ಹೊಸ ಐಪಿಎಲ್ ತಂಡವನ್ನು ಹೊಂದುವ ಹಕ್ಕು ಪಡೆಯಲಿದ್ದಾರೆ. ಆ ತಂಡ 2013 ರ ಋತು ಒಳಗೊಂಡಂತೆ ಪ್ರತಿ ವರ್ಷ ನಡೆಯುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಅದೇ ರೀತಿ ಅರ್ಹತೆ ಪಡೆದರೆ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲೂ ಭಾಗವಹಿಸಲಿದೆ~ ಎಂದು ಮಂಡಳಿ ತನ್ನ ಜಾಹೀರಾತಿನಲ್ಲಿ ತಿಳಿಸಿದೆ.12 ನಗರಗಳ ಪರ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಹಮದಾಬಾದ್, ಕಟಕ್, ಧರ್ಮಶಾಲಾ, ಇಂದೋರ್, ಹೈದರಾಬಾದ್, ಕಾನ್ಪುರ, ಕೊಚ್ಚಿ, ನಾಗಪುರ, ನೋಯಿಡಾ, ರಾಜ್‌ಕೋಟ್, ರಾಂಚಿ ಮತ್ತು ವಿಶಾಖಪಟ್ಟಣದ ಪರವಾಗಿ ಬಿಡ್ ಸಲ್ಲಿಸಬಹುದು. ಅಕ್ಟೋಬರ್ 25ರಂದು ಮಧ್ಯಾಹ್ನ  12.00 ಗಂಟೆಯ ಒಳಗಾಗಿ ಬಿಡ್ ಸಲ್ಲಿಸಲು ಬಿಸಿಸಿಐ ತಿಳಿಸಿದೆ.ಕೊನೆಯ ಪ್ರಯತ್ನ ವಿಫಲ: ಐಪಿಎಲ್‌ನಲ್ಲಿ ಉಳಿದುಕೊಳ್ಳಲು ಡೆಕ್ಕನ್ ಚಾರ್ಜರ್ಸ್ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಬಾಂಬೆ ಹೈಕೋರ್ಟ್ ತೀರ್ಪಿನಂತೆ ಬಿಸಿಸಿಐಗೆ 100 ಕೋಟಿ ರೂ. ಬ್ಯಾಂಕ್ ಖಾತರಿ ನೀಡಲು ವಿಫಲವಾದಾಗಲೇ ಈ ತಂಡದ ಭವಿಷ್ಯ ನಿರ್ಧಾರವಾಗಿತ್ತು.ಆದರೆ ತಂಡವನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ (ಡಿಸಿಎಚ್‌ಎಲ್) ಹೈಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆದಾರರನ್ನು ಸಂಪರ್ಕಿಸಿತ್ತು. ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಪಾಡಬೇಕೆಂದು ಮಧ್ಯಸ್ಥಿಕೆದಾರರು ಬಿಸಿಸಿಐಗೆ ಆದೇಶಿಸಿದ್ದರು.ಆದರೆ ಇದನ್ನು ಪ್ರಶ್ನಿಸಿ ಬಿಸಿಸಿಐ ಬಾಂಬೆ ಹೈಕೋರ್ಟ್ ಮೊರೆಹೋಗಿತ್ತು. ಶನಿವಾರ ತೀರ್ಪು ನೀಡಿದ ಹೈಕೋರ್ಟ್ ಮಧ್ಯಸ್ಥಿಕೆದಾರರ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಅದರೊಂದಿಗೆ ಚಾರ್ಜರ್ಸ್ ತಂಡ ಐಪಿಎಲ್‌ನಿಂದ ಶಾಶ್ವತವಾಗಿ ಹೊರಬಿದ್ದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry