ಗುರುವಾರ , ನವೆಂಬರ್ 21, 2019
20 °C

ಐಪೊಮೊದಿಂದ `ಸಿಇಟಿ ರೂಂ'

Published:
Updated:

ಬೆಂಗಳೂರು: ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ನೆರವು ನೀಡಲು ಐಪೊಮೊ ಕಂಪೆನಿ `ಸಿಇಟಿ ರೂಂ' ಎಂಬ ಮೊಬೈಲ್ ಆಧಾರಿತ ಸಾಫ್ಟ್‌ವೇರ್ ಕಾರ್ಯಕ್ರಮವೊಂದನ್ನು ಬಿಡುಗಡೆಮಾಡಿದೆ.`ಸಿಇಟಿ ರೂಂ' ಸಾಫ್ಟ್‌ವೇರ್‌ನಿಂದ ಪರೀಕ್ಷೆಗಳ ಕೊನೆಯ ಕ್ಷಣದ ಸಿದ್ಧತೆ ಮತ್ತು ಸೀಟುಗಳ ಆಯ್ಕೆಗಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಿಗಲಿದೆ. ಸಿಇಟಿ 2013 ರೂಂನಲ್ಲಿ ಕಾಲೇಜು ಮಾಹಿತಿ, ಶ್ರೇಯಾಂಕ ಪಟ್ಟಿ ಮತ್ತು ಸಿಇಟಿ ಪ್ರಕಟಣೆ ಎಲ್ಲವನ್ನೂ ಒಳಗೊಂಡಿದೆ. ವಿದ್ಯಾರ್ಥಿಗಳ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ಜ್ಞಾನ ಪರೀಕ್ಷೆಗೂ ಅದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಪರೀಕ್ಷೆಗೆ `ಗುಡ್‌ನೈಟ್ ಪರೀಕ್ಷೆ' ಎಂದು ಹೆಸರಿಸಲಾಗಿದ್ದು, ಇದೇ 19ರಿಂದ ಪ್ರತಿದಿನ ರಾತ್ರಿ 10ಕ್ಕೆನಡೆಸಲಾಗುತ್ತದೆ.`ಸಿಇಟಿ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ಕರ್ನಾಟಕದ ವಿದ್ಯಾರ್ಥಿ ಸಮುದಾಯದ ಅನುಕೂಲಕ್ಕಾಗಿ ಮೊಟ್ಟಮೊದಲ ಸಲ ವಿಶೇಷ ಮೊಬೈಲ್ ಸೇವೆ ಆರಂಭಿಸಿದ್ದಕ್ಕೆ ನಮಗೆ ಹರ್ಷವಾಗಿದೆ. ಒಂದೇ ವ್ಯವಸ್ಥೆಯಲ್ಲಿ ಎಲ್ಲ ಸೌಲಭ್ಯಗಳೂ ಸಿಗಲಿವೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು' ಎಂದು ಐಪೊಮೊ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಹರಿಪ್ರಕಾಶ್ ಶಾನಭೋಗ ತಿಳಿಸಿದರು.ಈ ಉಚಿತ ಸಾಫ್ಟ್‌ವೇರ್ ಪಡೆಯಲು ಐ ಎಂದು 7259002341 ಈ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. ಸಂಸ್ಥೆಯಿಂದ ತಿರುಗಿ ಬಂದ ಎಸ್‌ಎಂಎಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ ಅದೇ ಸಾಫ್ಟ್‌ವೇರ್ ಲಿಂಕ್ ಹೊಂದಿರುತ್ತದೆ.

ಪ್ರತಿಕ್ರಿಯಿಸಿ (+)