ಐಫೋನ್-4ಎಸ್: ಹೊಸ ಸಂಚಲನ

7

ಐಫೋನ್-4ಎಸ್: ಹೊಸ ಸಂಚಲನ

Published:
Updated:
ಐಫೋನ್-4ಎಸ್: ಹೊಸ ಸಂಚಲನ

ಬಹುನಿರೀಕ್ಷೆಯ ಆ್ಯಪಲ್ `ಐಫೋನ್-4 ಎಸ್~  ಮಾರುಕಟ್ಟೆಗೆ ಬಂದಿದೆ. ಸ್ಟೀವ್ ಜಾಬ್ಸ್ ನಿಧನದ ಬೆನ್ನಲ್ಲೇ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಗೊಂಡಿರುವುದರಿಂದ ಗ್ರಾಹಕರು ಜಾಬ್ಸ್‌ಗೆ ಸಲ್ಲಿಸುತ್ತಿರುವ ಶ್ರದ್ಧಾಂಜಲಿ ಎನ್ನುವ ರೀತಿಯಲ್ಲೇ `4-ಎಸ್~ ಖರೀದಿಸುತ್ತಿದ್ದಾರೆ.  ಬಿಡುಗಡೆಯಾದ ಮೂರು ದಿನಗಳಲ್ಲೇ `ಐಫೋನ್-4ಎಸ್‌ನ~ ಮಾರಾಟ 4 ದಶಲಕ್ಷ ಗಡಿಯನ್ನು ದಾಟಿದೆ. ಸುಮಾರು 25 ದಶಲಕ್ಷ ಗ್ರಾಹಕರು  ಹೊಸ ಅಪರೇಟಿಂಗ್ ಸಿಸ್ಟಂ `ಐಒಎಸ್-5~ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಇದರ ಜತೆಗೆ, ಆ್ಯಪಲ್‌ನ ಉಚಿತ ಗ್ರಾಹಕ ಸೇವೆ `ಐ-ಕ್ಲಾಡ್~ಗೆ ಸುಮಾರು 20 ದಶಲಕ್ಷ ಗ್ರಾಹಕರು ಒಪ್ಪಿಗೆ ಸೂಚಿಸಿದ್ದಾರೆ.  ಈ ಸೇವೆಯಡಿ ಗ್ರಾಹಕರು ನಿಸ್ತಂತು ಸಂಪರ್ಕದ ಮೂಲಕ ಜಗತ್ತಿನ ಯಾವುದೇ ಭಾಗದಿಂದ ತಮ್ಮ ಆ್ಯಪಲ್ ಗ್ಯಾಡ್ಜೆಟ್‌ನಲ್ಲಿ ಸಂಪರ್ಕ ವಿಳಾಸ, ವಿಡಿಯೊ, ಚಿತ್ರ ಸೇರಿದಂತೆ ಬಹುವಿಧ ಸೇವೆಗಳನ್ನು ಪಡೆಯಬಹುದು. `ಐ-ಕ್ಲೌಡ್~ ಸೇವೆ ಕೂಡ ಕಳೆದ ವಾರ ಬಿಡುಗಡೆಯಾಗಿದೆ.

ಹಿಂದಿನ ತಲೆಮಾರಿನ ಐಫೋನ್-4 ಕಳೆದ ಜೂನ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಇದು ಕೂಡ ಆ್ಯಪಲ್‌ನ ಬೆಸ್ಟ್ ಸೆಲ್ಲಿಂಗ್ ಉತ್ಪನ್ನಗಳಲ್ಲಿ ಒಂದು.  ಅಕ್ಟೋಬರ್ 4 ರಂದು `ಐಫೋನ್-4ಎಸ್~ ಬಿಡುಗಡೆಯಾದ ನಂತರ ಇದುವರೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್‌ಗಳು ದಾಖಲಾಗಿವೆ. ಸದ್ಯ ಈ ಫೋನ್ ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ 22 ದೇಶಗಳಲ್ಲಿ ಲಭ್ಯವಿದೆ. ಈ ವರ್ಷಾಂತ್ಯಕ್ಕೆ 70ಕ್ಕೂ ಹೆಚ್ಚು ದೇಶಗಳ ಮಾರುಕಟ್ಟೆಗೆ `ಐಫೋನ್-4~ಎಸ್ ಲಗ್ಗೆ ಇಡಲಿದೆ.

`ಐಫೋನ್-4~ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಗಣಕಯಂತ್ರದ ಕೀ-ಬೋರ್ಡ್ ಮೇಲೆ ಟೈಪ್ ಮಾಡಿದ ಅಕ್ಷರಗಳನ್ನು ಸಾಮಾನ್ಯ ಭಾಷೆಗೆ (Decode) ಪರಿವರ್ತಿಸುವ ಸಾಮರ್ಥ್ಯವನ್ನೂ ಹೊಂದಿದೆ. ಆದ್ದರಿಂದಲೇ ಇದನ್ನು ಗೂಢಚಾರ ಫೋನ್ ಆಗಿಯೂ ಬಳಸಬಹುದು. ಬಳಕೆದಾರ ತನ್ನ ಐಫೋನ್-4 ಅನ್ನು ಕೆಲಸದ ಮೇಜಿನ ಪಕ್ಕದಲ್ಲಿಟ್ಟು ಹೋದರೆ, ಮೂರನೆಯ ವ್ಯಕ್ತಿ ಗಣಕಯಂತ್ರದಲ್ಲಿ ಟೈಪ್ ಮಾಡಿದ ಎಲ್ಲ ಸಂಕೇತಗಳನ್ನು ಇದರಲ್ಲಿ ಗುಪ್ತವಾಗಿ ಸೆರೆ ಹಿಡಿಯಬಹುದು. ಹ್ಯಾಕರ್‌ಗಳು ಗಣಕಯಂತ್ರ, ಇ-ಮೇಲ್ ಮತ್ತು ಪ್ರಮುಖ ದತ್ತಾಂಶಗಳನ್ನು ಕದಿಯಲು ನಡೆಸುವ ಪ್ರಯತ್ನಗಳನ್ನು ಇದರ ಮೂಲಕ ತಡೆಗಟ್ಟಬಹುದು.

ಅಮೆರಿಕದ ಜಾರ್ಜಿಯಾ ಟೆಕ್ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್‌ನ  ತಂತ್ರಜ್ಞರ ತಂಡ ಈ ಕುರಿತು ಅಧ್ಯಯನ ನಡೆಸಿದ್ದು, ಹೊಸ `ಐಫೋನ್~ ಡಿಕೋಡ್ ಮಾಡುವ ದತ್ತಾಂಶ  ಶೇ 80ರಷ್ಟು ಕರಾರುವಾಕ್ಕಾಗಿ ಇರುತ್ತದೆ ಎಂದು ಹೇಳಿದೆ. ಇದರಲ್ಲಿ ಬಳಸಲಾಗಿರುವ ವಿಶೇಷ ತಂತ್ರಾಂಶ ಸಾಮಾನ್ಯ ಸಂಕೇತಗಳ ಜತೆಗೆ ಕೀ-ಸ್ಟ್ರೋಕ್ಸ್‌ಗಳನ್ನೂ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.  ಅಷ್ಟೇ ಅಲ್ಲ, ಐಫೋನ್-4ಎಸ್‌ನಲ್ಲಿ ಸುಮಾರು 2 ಲಕ್ಷದವರಗೆ ಅಪ್ಲಿಕೇಷನ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಯಾಮ್ಸಂಗ್: `ಸ್ಮಾರ್ಟ್~ಸಮರ

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜಾಗತಿಕ ಮುಂಚೂಣಿ ಹೊಂದಿದ್ದ ಆ್ಯಪಲ್‌ನ ಮಾರುಕಟ್ಟೆ ಆಧಿಪತ್ಯವನ್ನು ಇದೇ ಮೊದಲ ಬಾರಿಗೆ ಸ್ಯಾಮ್ಸಂಗ್ ಮುರಿದಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕ ಅವಧಿಯಲ್ಲಿ ಸ್ಯಾಮ್ಸಂಗ್ ಮಾರಾಟ ಆ್ಯಪಲ್‌ಗಿಂತ ಶೇ 40ರಷ್ಟು ಹೆಚ್ಚಿದೆ. ವರ್ಷಾಂತ್ಯಕ್ಕೆ ಸ್ಯಾಮ್ಸಂಗ್ ಮಾರುಕಟ್ಟೆ ಪಾಲು ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

`ಗೂಗಲ್ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶವೇ ಸ್ಯಾಮ್ಸಂಗ್‌ನ ಮಾರುಕಟ್ಟೆ ಗುಟ್ಟು. ಅಗ್ಗದ ಮತ್ತು ಬಹೂಪಯೋಗಿ ಆಂಡ್ರಾಯ್ಡ ಅಪ್ಲಿಕೇಷನ್ಸ್‌ಗಳು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ನೆಡೆಗೆ ಹೆಚ್ಚಿನ ಗ್ರಾಹಕರು ವಾಲುವಂತೆ ಮಾಡಿದೆ. ಆ್ಯಪಲ್‌ನೆಡೆಗಿನ ಗ್ರಾಹಕರ ನಿಷ್ಠೆಯನ್ನೂ `ಆಂಡ್ರಾಯ್ಡ~ ನಿಧಾನವಾಗಿ ಬದಲಿಸುತ್ತಿದೆ. 

ಸದ್ಯ ನೋಕಿಯಾವನ್ನು ಹೊರತುಪಡಿಸಿದರೆ ದೇಶೀಯ ಮಾರುಕಟ್ಟೆಯಲ್ಲೂ ಸ್ಯಾಮ್ಸಂಗ್ ಹ್ಯಾಂಡ್‌ಸೆಟ್‌ಗಳೇ ಮುಂಚೂಣಿಯಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಯಾಮ್ಸಂಗ್‌ನ ಟೆಲಿಕಾಂ ವಿಭಾಗದ ಒಟ್ಟು ವರಮಾನ ಪ್ರಸಕ್ತ ಅವಧಿಯಲ್ಲಿ ದ್ವಿಗುಣಗೊಂಡಿದ್ದು 2.5 ಲಕ್ಷ ಕೋಟಿಗಳಷ್ಟಾಗಿದೆ. ನಿವ್ವಳ ಲಾಭದಲ್ಲಿ ಸ್ಮಾರ್ಟ್‌ಫೋನ್ ಮತ್ತು ಮೆಮೊರಿ ಚಿಪ್‌ಗಳ  ಕೊಡುಗೆ ಶೇ 60ರಷ್ಟಿದೆ. ಸಾಗರೋತ್ತರ ಮಾರುಕಟ್ಟೆಗಳಿಗೆ ರಫ್ತಾಗುವ ಹ್ಯಾಂಡ್‌ಸೆಟ್ ಪ್ರಮಾಣವೂ ಕಳೆದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ  ಶೇ 40 ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 300ರಷ್ಟು ಹೆಚ್ಚಿದೆ.

ಹಾಗೆ ನೋಡಿದರೆ 17. 1ದಶಲಕ್ಷ ಆ್ಯಪಲ್ ಐಫೋನ್‌ಗಳು ಎರಡನೆಯ ತ್ರೈಮಾಸಿಕ ಅವಧಿಯಲ್ಲಿ ಮಾರಾಟವಾಗಿವೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಇದು 20 ದಶಲಕ್ಷಗಳಷ್ಟಿತ್ತು. ಇತ್ತ ಆ್ಯಪಲ್ ಮಾರಾಟ ಕುಸಿಯುತ್ತಿದ್ದರೆ, ಸ್ಯಾಮ್ಸಂಗ್ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ.  ಸ್ಯಾಮ್ಸಂಗ್ ಮೂರನೆಯ ತ್ರೈಮಾಸಿಕ ಅವಧಿಯ ಒಟ್ಟು ಮಾರಾಟ ಅಂಕಿ ಅಂಶಗಳನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಮೂಲಗಳ ಪ್ರಕಾರ ಇದು 27 ದಶಲಕ್ಷದಷ್ಟಿದೆ. ಎರಡನೆಯ ತ್ರೈಮಾಸಿಕ ಅವಧಿಯಲ್ಲಿ ಸ್ಯಾಮ್ಸಂಗ್ 19 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದರೆ 16.8 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ನೋಕಿಯಾ ಮಾರಾಟ ಮಾಡಿದೆ.

ವರಮಾನದ ದೃಷ್ಟಿಯಿಂದ ನೋಡಿದರೆ ಸದ್ಯ ಸ್ಯಾಮ್ಸಂಗ್ ಜಾಗತಿಕ ಮುಂಚೂಣಿ ತಂತ್ರಜ್ಞಾನ ಕಂಪೆನಿ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಂಪೆನಿಯ ಕಾರ್ಯನಿರ್ವಹಣಾ ವರಮಾನ 4.25 ಲಕ್ಷ ಕೋಟಿ ಡಾಲರ್‌ಗಳಷ್ಟಾಗಿದೆ. ಹೀಗಿದ್ದರೂ, ಸದ್ಯ ಕಂಪೆನಿಯು ಆ್ಯಪಲ್ ಐಫೋನ್-4ಎಸ್‌ನ  ತೀವ್ರ ಸ್ಪರ್ಧೆ ಎದುರಿಸುತ್ತಿದೆ.

ನೋಕಿಯಾ ಕೂಡ ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇತ್ತೀಚೆಗೆ ಸೋನಿ ಕಾರ್ಪೊರೇಷನ್ ಕೂಡ ತನ್ನ ಮೊಬೈಲ್ ಅಂಗ ಸಂಸ್ಥೆ `ಸೋನಿ ಎರಿಕ್‌ಸನ್‌ನ ಸಂಪೂರ್ಣ ಒಡೆತನ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದು, ಮ್ಯೂಸಿಕ್ ಮತ್ತು ವಿಡಿಯೊ ಜತೆಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯತ್ತಲೂ ಚಿತ್ತ  ಹರಿಸಿದೆ.  ಎಚ್‌ಟಿಸಿ ಕಂಪೆನಿ ಅಗ್ಗದ ದರ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದೆ.

ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಪರಿಷ್ಕೃತ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದರಲ್ಲಿ ಗೂಗಲ್ ಆಂಡ್ರಾಯ್ಡನ ಹೊಸ ಆವೃತ್ತಿ ಇದೆ. ಸ್ಮಾರ್ಟ್‌ಫೋನ್ ಹೊರತುಪಡಿಸಿದರೆ ಕಂಪೆನಿಗೆ ಹೆಚ್ಚಿನ ಲಾಭ ಬರುವುದು ಮೆಮೊರಿ ಚಿಪ್ ಮಾರುಕಟ್ಟೆಯಿಂದ. ಕಳೆದ ಒಂದು ವರ್ಷದಲ್ಲಿ ಕಂಪೆನಿಯು `ಡಿಆರ್‌ಎಎಂ~  ಮೆಮೊರಿ ಚಿಪ್ (Dynamic Random access memory) ಮಾರುಕಟ್ಟೆ ಮೂಲಕ 1.59 ಲಕ್ಷ ಕೋಟಿ ಡಾಲರ್ ವರಮಾನ ಗಳಿಸಿದೆ.

ಮೊಬೈಲ್ ಪ್ರೊಸೆಸರ್‌ನಲ್ಲಿ ಈ ಮೆಮೊರಿ ಚಿಪ್‌ಗಳು ಪ್ರಮುಖ ಪಾತ್ರ ವಹಿಸುತ್ತದೆ. ಆ್ಯಪಲ್ ಐಫೋನ್, ಐಪಾಡ್ ಅಷ್ಟೇ ಅಲ್ಲ, ಸ್ಯಾಮ್ಸಂಗ್‌ನ  ಗ್ಯಾಲೆಕ್ಸಿ ಸ್ಮಾರ್ಟ್‌ಫೋನ್‌ನಲ್ಲಿ ಕೂಡ ಇದೇ `ಡಿಆರ್‌ಎಎಂ~ ಮೆಮೊರಿ ಚಿಪ್‌ಗಳೇ ಕಾರ್ಯನಿರ್ವಹಿಸುತ್ತಿವೆ.  ಸ್ಯಾಮ್ಸಂಗ್‌ನ  ಮೊಬೈಲ್ ಮಾರುಕಟ್ಟೆ ಗಣನೀಯವಾಗಿ ಚೇತರಿಸಿಕೊಳ್ಳುತ್ತಿದೆ. ಮುಂದೊಂದು ದಿನ ಸ್ಮಾರ್ಟ್‌ಫೋನ್ ರಂಗದಲ್ಲಿ ಆ್ಯಪಲ್ ಆಧಿಪತ್ಯವನ್ನು ಸ್ಯಾಮ್ಸಂಗ್ ಮುರಿಯುವ ಸಾಧ್ಯತೆಗಳು ದಟ್ಟವಾಗಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry