ಭಾನುವಾರ, ಜೂನ್ 13, 2021
22 °C

ಐರೋಪ್ಯ ಒಕ್ಕೂಟದ 17ನೇ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರೀತಿ ಸಾರ್ವತ್ರಿಕವಾದುದು. ಈ ಸಲ ಬೆಂಗಳೂರು ಸೇರಿದಂತೆ ದೇಶದ 7 ನಗರಗಳಲ್ಲಿ ನಡೆದಿರುವ ಯೂರೋಪಿನ ಚಲನಚಿತ್ರಗಳ ಉತ್ಸವದ ಕೇಂದ್ರ ವಿಷಯವು ಪ್ರೀತಿ ಆಗಿರುವುದು ಅರ್ಥಪೂರ್ಣ~ ಎಂದು ಭಾರತದಲ್ಲಿನ ಸ್ವೀಡನ್ ರಾಯಭಾರಿ ಲಾರ್ಸ್ ಉಲುಫ್ ಲಿಂಡ್‌ಗ್ರೆನ್ ಹೇಳಿದರು.ನಗರದ ವಾರ್ತಾ ಭವನದಲ್ಲಿ ಶುಕ್ರವಾರ ನಡೆದ ಐರೋಪ್ಯ ಒಕ್ಕೂಟದ 17ನೇ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಬಾರಿಯ ಚಿತ್ರೋತ್ಸವದ ಶೀರ್ಷಿಕೆ; `ಪ್ರೀತಿಯಲ್ಲಿ ಯೂರೋಪ್~. `ಭಾರತದಲ್ಲಿ ತಯಾರಾಗುವ ಬಹುತೇಕ ಚಲನಚಿತ್ರಗಳ ಕೇಂದ್ರ ಬಿಂದು ಪ್ರೀತಿಯೇ ಆಗಿದೆ. ಯೂರೋಪಿನ ಸಿನಿಮಾಗಳಲ್ಲಿನ ಪ್ರೀತಿಯನ್ನು ಭಾರತೀಯ ಸಿನಿಮಾಗಳೊಂದಿಗೆ ಹೋಲಿಕೆ ಮಾಡಲು ಈ ಉತ್ಸವ ಸದಾವಕಾಶ ಒದಗಿಸಿದೆ~ ಎಂದರು. `ಕೆಲ ವರ್ಷಗಳ ಹಿಂದೆ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಕೀರ್ಣ ಕಥಾವಸ್ತುವಿನ ಸಿನಿಮಾ ಪ್ರದರ್ಶಿಸಲಾಯಿತು. ಆ ಪ್ರದರ್ಶನ ಮುಕ್ತಾಯಗೊಳ್ಳುವ ಹೊತ್ತಿಗೆ ಉತ್ಸವ ಸಂಘಟಿಸಿದ್ದ ಸ್ವೀಡನ್ ರಾಯಭಾರಿ ಮತ್ತು ಅವರ ಕಚೇರಿಯ ಕೆಲವರು ಮಾತ್ರ ಇದ್ದರು. ಈ ಬಾರಿಯ ಉತ್ಸವವನ್ನು ಜನರು ಉತ್ಸಾಹದಿಂದ ನೋಡುವಂತಾಗಲಿ~ ಎಂದರು.`ಐದೂವರೆ ವರ್ಷಗಳ ಹಿಂದೆ ನಾನು ಭಾರತಕ್ಕೆ ಬಂದೆ. ದೆಹಲಿ ನಂತರ ಬೆಂಗಳೂರಿನಲ್ಲಿ ನಾನು ಹೆಚ್ಚು ಕಾಲ ಕಳೆದಿದ್ದೇನೆ. ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಲು ಖುಷಿಯಾಗುತ್ತದೆ~ ಎಂದು ಅವರು ಹೇಳಿದರು.ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಮಾತನಾಡಿ, `ಹಣ ಗಳಿಕೆ ದೃಷ್ಟಿಯಿಂದ ಯಶಸ್ವಿಯಾದ ಬಹುತೇಕ ಸಿನಿಮಾಗಳಲ್ಲಿ ಸಮಾಜದ ಮುಖ್ಯವಾಹಿನಿಯ ಸಮಸ್ಯೆಗಳು, ಜೀವನ ಚಿತ್ರಗಳು ಚಿತ್ರಣಗೊಂಡಿರುವುದೇ ಇಲ್ಲ. ಆದರೂ ಮುಖ್ಯವಾಹಿನಿ ಸಿನಿಮಾ ಎಂದು ಕರೆಯುವುದು ಏಕೆಂಬುದು ಅರ್ಥವಾಗಿಲ್ಲ~ ಎಂದರು.`ಭಾರತೀಯ ಚಿತ್ರಗಳಲ್ಲಿ ಗ್ರಾಮೀಣ ಭಾರತದ ಚಿತ್ರಣ ತೀರಾ ಕಡಿಮೆ. ಗ್ರಾಮೀಣ ಭಾಗದ ಚಿತ್ರಣ ಇರುವ ಬಹಳಷ್ಟು ಸಿನಿಮಾಗಳಲ್ಲೂ ಹಳ್ಳಿಗಾಡಿನ ನೈಜ ಚಿತ್ರ ಇರುವುದಿಲ್ಲ~ ಎಂದು ವಿಷಾದಿಸಿದರು.ಉತ್ಸವ ಉದ್ಘಾಟಿಸಿ ಮಾತನಾಡಿದ ನಟಿ ಅರಂಧುತಿ ನಾಗ್, `ಯೂರೋಪಿನ ಚಿತ್ರಗಳನ್ನು ನೋಡಲು ಎಲ್ಲರಿಗೂ ಇದು ಸದಾವಕಾಶ~ ಎಂದರು. ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಮೊದಲಾದವರು ಉಪಸ್ಥಿತರಿದ್ದರು. ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ವ್ಯವಸ್ಥಾಪಕ ಟ್ರಸ್ಟಿ ಎಸ್.ವಿದ್ಯಾಶಂಕರ್ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.