ಬುಧವಾರ, ನವೆಂಬರ್ 20, 2019
22 °C

ಐರೋಪ್ಯ ಒಕ್ಕೂಟ ಜತೆ ವರ್ಷಾಂತ್ಯಕ್ಕೆ ಒಪ್ಪಂದ

Published:
Updated:
ಐರೋಪ್ಯ ಒಕ್ಕೂಟ ಜತೆ ವರ್ಷಾಂತ್ಯಕ್ಕೆ ಒಪ್ಪಂದ

ಬರ್ಲಿನ್ (ಪಿಟಿಐ): ಈ ವರ್ಷಾಂತ್ಯದ ವೇಳೆಗೆ ಬಹು ನಿರೀಕ್ಷಿತ, `ಭಾರತ- ಐರೋಪ್ಯ ಒಕ್ಕೂಟ (ಇಯು) ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ ಸಹಿ ಹಾಕುವ ಬಗ್ಗೆ ಭಾರತ ಮತ್ತು ಜರ್ಮನಿ ಮಧ್ಯೆ ಒಮ್ಮತ ಮೂಡಿದೆ.ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದ ಅನೇಕ ತೊಡಕುಗಳಿಗೆ ಸೂಕ್ತ ಪರಿಹಾರ ದೊರಕಿಲ್ಲ ಹಾಗೂ ಈ ಒಪ್ಪಂದಕ್ಕೆ ಸಂಬಂಧಿಸಿದ ವಿವರಗಳನ್ನು ಸಂಸತ್ತಿನ ಮುಂದೆ ಇಡಬೇಕು ಎಂದು ಭಾರತದಲ್ಲಿ ಬಿಜೆಪಿ ಒತ್ತಾಯಿಸುತ್ತಿದ್ದರೂ ವರ್ಷಾಂತ್ಯದ ವೇಳೆಗೆ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ.ಮೂರು ದಿನಗಳ ಜರ್ಮನಿ ಪ್ರವಾಸವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಿ ಮನಮೋಹನ್ ಸಿಂಗ್ ಅವರು ಜರ್ಮನಿಯ ಚಾನ್ಸಲರ್ ಏಂಜೆಲೊ ಮರ್ಕೆಲ್ ಜತೆ ನೀಡಿದ  ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ವರ್ಷಾಂತ್ಯದ ವೇಳೆಗೆ ಐರೋಪ್ಯ ಒಕ್ಕೂಟ ಮತ್ತು ಭಾರತದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲಿರುವ ವಿಷಯ ಪ್ರಕಟಿಸಿದರು.ಐರೋಪ್ಯ ಒಕ್ಕೂಟದ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾದ ಜರ್ಮನಿಯು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರವೇ ಸಹಿ ಹಾಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.ಈ ಒಪ್ಪಂದ ಏರ್ಪಟ್ಟರೆ ಭಾರತವು ಐರೋಪ್ಯ ಸಮುದಾಯದ 27 ರಾಷ್ಟ್ರಗಳ ಜತೆ ಮುಕ್ತ ವ್ಯಾಪಾರ ಸಂಬಂಧ ಹೊಂದಲಿದ್ದು, ಉದ್ದಿಮೆಗಳ ಅಭಿವೃದ್ಧಿ ಮತ್ತು ಉದ್ಯೋಗ ಹೆಚ್ಚಳಕ್ಕೆ ಭಾರಿ ಅವಕಾಶ ದೊರಕುತ್ತದೆ.ಭಾರತದ ವಿಮಾ ಕ್ಷೇತ್ರದಲ್ಲಿ  ವಿದೇಶಿ ಪಾಲು ಮಿತಿ ಹೆಚ್ಚಳ, ಯುರೋಪ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ವಾಹನಗಳು ಮತ್ತು ಬಿಡಿ ಭಾಗಗಳ ಮೇಲಿನ ಸುಂಕ ಕಡಿತಗೊಳಿಸುವ ಬಗ್ಗೆ ಏಂಜೆಲೊ ಮರ್ಕೆಲ್ ಅವರು ಗುರುವಾರ ಒತ್ತಾಯ ಮಾಡಿದ್ದರಾದರೂ, ದ್ವಿಪಕ್ಷೀಯ ಮಾತುಕತೆಯ ಕೊನೆಯ ದಿನಾವಾದ ಶುಕ್ರವಾರ ಉಭಯ ರಾಷ್ಟ್ರಗಳ ಮುಖಂಡರ ಮಧ್ಯೆ ಒಮ್ಮತ ಏರ್ಪಟ್ಟಿತು.ಬಿಜೆಪಿ ವಿರೋಧ: ವಿವಾದಾತ್ಮಕ ಒಪ್ಪಂದದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಪ್ರಧಾನಿ ಅವರು ವಿರೋಧ ಪಕ್ಷಗಳನ್ನು, ತಜ್ಞರನ್ನು  ಮತ್ತು ಒಪ್ಪಂದದಲ್ಲಿ ಆಸಕ್ತಿ ಹೊಂದಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.ಐರೋಪ್ಯ ರಾಷ್ಟ್ರಗಳ ಜತೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟರೆ ಆ ರಾಷ್ಟ್ರಗಳ ಹೈನೋದ್ಯಮ, ಕುಕ್ಕುಟ, ಸಕ್ಕರೆ, ಗೋಧಿ, ಬೇಕರಿ ಕಚ್ಚಾ ಪದಾರ್ಥಗಳು, ಎಣ್ಣೆ ಬೀಜ, ಮೀನು ಮತ್ತು ತೋಟಗಾರಿಕಾ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಪ್ರವಾಹೋಪಾದಿಯಲ್ಲಿ ಬಂದು ಭಾರತದ ಕೃಷಿ ವಲಯದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಅದು ಟೀಕಿಸಿದೆ.ಇದರ ಜತೆಗೆ, ಆಹಾರ ಭದ್ರತೆಗೂ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಒಪ್ಪಂದಕ್ಕೆ ಮೊದಲು ಸಂಸತ್ತಿನಲ್ಲಿ ಈ ವಿಷಯದ ಚರ್ಚೆ ನಡೆಯಬೇಕು ಎಂದು ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಆಗ್ರಹಿಸಿದ್ದಾರೆ.

 

ಪ್ರತಿಕ್ರಿಯಿಸಿ (+)