ಐರ್ಲೆಂಡ್ ಕ್ಯಾಥೊಲಿಕ್ ಧರ್ಮಗುರು ವಿರೋಧ

7
ಕಾನೂನು ಬದ್ಧ ಗರ್ಭಪಾತಕ್ಕೆ ಶಾಸನ

ಐರ್ಲೆಂಡ್ ಕ್ಯಾಥೊಲಿಕ್ ಧರ್ಮಗುರು ವಿರೋಧ

Published:
Updated:

ಲಂಡನ್ (ಪಿಟಿಐ): ವೈದ್ಯರ ಸಲಹೆ ಮೇರೆಗೆ ಕಾನೂನು ಬದ್ಧ ಗರ್ಭಪಾತಕ್ಕೆ ಅವಕಾಶವಿರುವ ಶಾಸನ ರಚಿಸುವುದಾಗಿ ಐರ್ಲೆಂಡ್ ಸರ್ಕಾರ ಘೋಷಿಸಿರುವ ಬೆನ್ನಿಗೆ ಇಂತಹ ಶಾಸನವನ್ನು ವಿರೋಧಿಸಿ ಎಂದು ಆ ರಾಷ್ಟ್ರದ ಕ್ಯಾಥೊಲಿಕ್ ಧರ್ಮಗುರು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ.ಮಂಗಳವಾರ ನಡೆದ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಯಾಥೊಲಿಕ್ ಪಂಗಡದ ಪ್ರಧಾನ ಧರ್ಮಗುರು ಸೀನ್ ಬ್ರಾಡಿ, `ಗರ್ಭಪಾತವನ್ನು ಜನರು ನೇರವಾಗಿಯೇ ವಿರೋಧಿಸಬೇಕು ಮತ್ತು ಈ ವಿರೋಧ ಸಕಾರಣ ಕೂಡ ಆಗಿದೆ' ಎಂದಿದ್ದಾರೆ ಎಂದು “ಐರಿಷ್ ಟೈಮ್ಸ' ಪತ್ರಿಕೆ ವರದಿ ಮಾಡಿದೆ.`ಜೀವ ರಕ್ಷಣೆಯೇ ಮೂಲಭೂತ ಹೊಣೆಗಾರಿಕೆ ಎಂಬುದು ಎಲ್ಲರ ನಂಬುಗೆಯಾಗಿದೆ. ಈ ನಿಟ್ಟಿನಲ್ಲಿ ಜನರು ತಮ್ಮ ಧ್ವನಿಯನ್ನು ಯಾವುದೇ ಮುಚ್ಚುಮರೆಯಿಲ್ಲದ ವ್ಯಕ್ತಪಡಿಸಬೇಕು. ವಿಧಾತನು ಮಾನವ ಸಂಕುಲಕ್ಕೆ ಜೀವ ರಕ್ಷಣೆಯನ್ನು ಖಾತರಿಗೊಳಿಸಿದ್ದಾನೆ. ಇದನ್ನು ಎಲ್ಲಾ ಸನ್ನಿವೇಶದಲ್ಲೂ ಪಾಲಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ವಿಧಾತನ ಆಶಯವನ್ನು ವಿಶ್ವದ ಬೇರ‌್ಯಾವುದೇ ಶಕ್ತಿ ವಿನಾಶ ಮಾಡಲು ಸಾಧ್ಯವಿಲ್ಲ. ಈ ವಿಚಾರಗಳನ್ನು ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿಕೊಡುವ ಅಗತ್ಯವಿದೆ' ಎಂದೂ ಅವರು ಹೇಳಿದ್ದಾರೆ.ಐರ್ಲೆಂಡ್‌ನಲ್ಲಿ ಪತಿಯೊಂದಿಗೆ ನೆಲೆಸಿದ್ದ ಕರ್ನಾಟಕ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ ಗರ್ಭಿಣಿಯಾಗಿದ್ದರು. ಆರೋಗ್ಯ ಬಿಗಡಾಯಿಸಿದ ಕಾರಣ ಗರ್ಭಪಾತ ಮಾಡುವಂತೆ ಅವರು ಚಿಕಿತ್ಸೆಗಾಗಿ ಸೇರಿದ್ದ ಗಾಲ್‌ವೆ ವಿಶ್ವವಿದ್ಯಾಲಯ ಆಸ್ಪತ್ರೆ ವೈದ್ಯರನ್ನು ಕೋರಿದ್ದರು. ಆದರೆ, ಕಟ್ಟಾಸಂಪ್ರದಾಯವಾದಿಯಾದ ಐರ‌್ಲೆಂಡಿನ ಕಾನೂನಿನಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲ ಎಂದು ಅವರ ಕೋರಿಕೆಯನ್ನು ತಳ್ಳಿಹಾಕಲಾಗಿತ್ತು. ಇದರಿಂದ ರಕ್ತಸೋಂಕು ಉಂಟಾಗಿ ಸವಿತಾ ಅವರು ಸಾವನ್ನಪ್ಪಿದ್ದರು. ಈ ಬಗ್ಗೆ ಭಾರತ, ಐರ್ಲೆಂಡ್ ಸೇರಿದಂತೆ ಜಾಗತಿಕವಾಗಿ ಮಟ್ಟದಲ್ಲಿ ಪ್ರತಿಭಟನೆಗಳು ನಡೆದವು. ತೀವ್ರ ಒತ್ತಡಕ್ಕೆ ಸಿಲುಕಿದ ಐರ್ಲೆಂಡ್ ಸರ್ಕಾರ ಗರ್ಭಿಣಿಯ ಜೀವ ಅಪಾಯದಲ್ಲಿದ್ದಾಗ ವೈದ್ಯರ ಸಲಹೆ ಮೇರೆಗೆ ಗರ್ಭಪಾತಕ್ಕೆ ಅವಕಾಶ ಇರುವಂತಹ ಶಾಸನ ರೂಪಿಸುವುದಾಗಿ ಘೋಷಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry