ಐವರು ಚುನಾಯಿತರ ಕಲಿಕೆಮಟ್ಟ ಅ ಆ ಇ ಈ..!!

7

ಐವರು ಚುನಾಯಿತರ ಕಲಿಕೆಮಟ್ಟ ಅ ಆ ಇ ಈ..!!

Published:
Updated:

ಚಾಮರಾಜನಗರ: ಉನ್ನತ ಶಿಕ್ಷಣ ಪಡೆದವರು ರಾಜಕೀಯಕ್ಕೆ ಬರಬೇಕೆಂಬ ಕೂಗು ಈಗ ಸವಕಲಾಗಿದೆ. ಪ್ರಸ್ತುತ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ವಿದ್ಯಾರ್ಹತೆಯೇ ಇದಕ್ಕೊಂದು ಸ್ಪಷ್ಟ ನಿದರ್ಶನ. ಮತದಾರ ಹಲವು ವೇಳೆ ಶೈಕ್ಷಣಿಕ ಮಾನದಂಡ ಪರಿಗಣಿಸುವುದು ಕಡಿಮೆ. ವರ್ಚಸ್ಸು, ಅನುಕಂಪ ಹಾಗೂ ರಾಜಕೀಯ ಪಕ್ಷ ಪರಿಗಣಿಸಿ ಓಟಿನ ಮುದ್ರೆ ಒತ್ತುತ್ತಾನೆ. ಇದರ ಪರಿಣಾಮ ಕನಿಷ್ಠ ಪ್ರೌಢಶಿಕ್ಷಣ ಪಡೆಯದ ಮಂದಿಯೂ ಜನಪ್ರತಿನಿಧಿಯಾಗುತ್ತಾರೆ ಎಂಬುದು ಈ ಬಾರಿಯ ಚುನಾವಣೆಯಲ್ಲಿ ಸಾಬೀತಾಗಿದೆ.ಜಿಲ್ಲೆಯ 21 ಜಿ.ಪಂ. ಕ್ಷೇತ್ರಗಳಿಗೆ ಆಯ್ಕೆಯಾಗಿರುವ ಐವರು ಸದಸ್ಯರ ಶಿಕ್ಷಣ ಏಳನೇ ತರಗತಿ ದಾಟಿಲ್ಲ. ಎಸ್‌ಎಸ್‌ಎಲ್‌ಸಿ ಪಾಸು ಮಾಡಿರುವವರ ಸಂಖ್ಯೆ ಆರು. ನಾಲ್ವರು ಪದವೀಧರ ಸದಸ್ಯರಿದ್ದು, ಅವರಲ್ಲಿ ಇಬ್ಬರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಬ್ಬರು ಸದಸ್ಯರ ಪದವಿ ಪೂರ್ಣಗೊಂಡಿಲ್ಲ. ಉಳಿದ ನಾಲ್ವರ ಶಿಕ್ಷಣ ಪದವಿಪೂರ್ವಮಟ್ಟ ದಾಟಿಲ್ಲ. ಎಂಟು ಮಂದಿ ಸದಸ್ಯರಿಗೆ 50 ವರ್ಷ ಭರ್ತಿಯಾಗಿದೆ. 30ವರ್ಷದೊಳಗಿನ ಸದಸ್ಯರು ಮೂವರಿದ್ದಾರೆ. ಎಲ್ಲರೂ ಮಹಿಳೆಯರೆಂಬುದು ವಿಶೇಷ. ಸದ್ಯದ ಮಟ್ಟಿಗೆ ಅವರೇ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಯುವ ಜನಪ್ರತಿನಿಧಿಗಳು!ಮಾದಾಪುರ ಕ್ಷೇತ್ರದ ಜಿ. ನಾಗಶ್ರೀ ಕಾನೂನು ವಿಷಯ ದಲ್ಲಿ ಅಂಚೆ ಮೂಲಕ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ವಯಸ್ಸು 28. ರಾಮಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಲ್. ಚಂದ್ರಕಲಾಬಾಯಿ ಅತಿಹೆಚ್ಚಿನ ಶಿಕ್ಷಣ ಪಡೆದಿರುವ ಕೀರ್ತಿಗೆ ಭಾಜನರಾಗಿದ್ದಾರೆ. 32ವರ್ಷ ವಯೋಮಾನದ ಅವರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜತೆಗೆ, ಸಾಮಾಜಿಕ ವಿಷಯದಲ್ಲಿ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿಯ ಗೌರವಕ್ಕಾಗಿ ಕಾಯುತ್ತಿದ್ದಾರೆ.ಆಯ್ಕೆಯಾಗಿರುವ ಸದಸ್ಯರಲ್ಲಿ ಹರದನಹಳ್ಳಿ ಕ್ಷೇತ್ರದ ಸದಸ್ಯೆ ಆರ್. ಕಾವೇರಿ ಅವರ ವಯಸ್ಸು 26. ಇವರೇ ಅತಿ ಕಿರಿಯ ಸದಸ್ಯೆ. ಆದರೆ, ಅವರ ವಿದ್ಯಾರ್ಹತೆ ಮಾತ್ರ ಎಸ್‌ಎಸ್‌ಎಲ್‌ಸಿಗೆ ಸ್ಥಗಿತಗೊಂಡಿದೆ. ಕಬ್ಬಹಳ್ಳಿ ಕ್ಷೇತ್ರದ ದೇವಮ್ಮಣ್ಣಿ ಕಡಿಮೆ ಶಿಕ್ಷಣ ಪಡೆದಿದ್ದಾರೆ. 55 ವರ್ಷ ವಾಗಿರುವ ಅವರ ವಿದ್ಯಾರ್ಹತೆ ಕೇವಲ 6ನೇ ತರಗತಿ. ಸತ್ತೇಗಾಲ ಕ್ಷೇತ್ರದ ಶಿವಮ್ಮ(ವಯಸ್ಸು 38) ಅತಿ ಕಡಿಮೆ ಶಿಕ್ಷಣ ಪಡೆದಿದ್ದಾರೆ. ಅವರ ಶೈಕ್ಷಣಿಕಮಟ್ಟ 5ನೇ ತರಗತಿ!ಉಳಿದಂತೆ ಯಳಂದೂರು ಕಸಬಾ ಕ್ಷೇತ್ರದ ಕೇತಮ್ಮ (ವಯಸ್ಸು 37), ಹರವೆ ಕ್ಷೇತ್ರದ ಸರಸಮ್ಮ(ವಯಸ್ಸು 49), ಲೊಕ್ಕನಹಳ್ಳಿ ಕ್ಷೇತ್ರದ ಕೊಪ್ಪಾಳಿ ಮಹದೇವ ನಾಯಕ(ವಯಸ್ಸು 37) ಓದಿರುವುದು 7ನೇ ತರಗತಿವರೆಗೆ ಮಾತ್ರ. ಆಲೂರು ಕ್ಷೇತ್ರದ ಲಕ್ಷ್ಮೀ(ವಯಸ್ಸು 47), ಬಂಡಳ್ಳಿ ಕ್ಷೇತ್ರದ ಎ. ನಾಗೇಂದ್ರಮೂರ್ತಿ(ವಯಸ್ಸು 50),  ಕುಂತೂರು ಕ್ಷೇತ್ರದ ಯಶೋದಮ್ಮ(ವಯಸ್ಸು 50), ಮಾರ್ಟಳ್ಳಿ ಕ್ಷೇತ್ರದ ಕೆ. ಈಶ್ವರ್(ವಯಸ್ಸು 46) ಹಾಗೂ ಬರಗಿ ಕ್ಷೇತ್ರದ ಕೆ. ರಾಜೇಶ್ವರಿ(ವಯಸ್ಸು 30) ಎಸ್‌ಎಸ್‌ಎಲ್‌ಸಿ ಶಿಕ್ಷಣ ಪಡೆದಿದ್ದಾರೆ.ಸಂತೇಮರಹಳ್ಳಿ ಕ್ಷೇತ್ರದ ಬಿ.ಪಿ. ಪುಟ್ಟಬುದ್ಧಿ(ವಯಸ್ಸು 49) ಹಾಗೂ ಪಾಳ್ಯ ಕ್ಷೇತ್ರದ ಡಿ. ದೇವರಾಜು(ವಯಸ್ಸು 57) ಪದವಿ ಶಿಕ್ಷಣ ಪಡೆದಿದ್ದಾರೆ. ಉಡಿಗಾಲ ಕ್ಷೇತ್ರದ ಎ.ಸಿ. ರಾಜಶೇಖರಪ್ಪ(ವಯಸ್ಸು 50) ಹಾಗೂ ಚಂದಕವಾಡಿ ಕ್ಷೇತ್ರದ ಜಿ.ಎಸ್. ನಿತ್ಯಾ ಪ್ರವೀಣ್(ವಯಸ್ಸು 29) ಅವರ ಪದವಿ ಶಿಕ್ಷಣ ಪೂರ್ಣಗೊಂಡಿಲ್ಲ. ಉಳಿದಂತೆ ಅಗರ ಕ್ಷೇತ್ರದ ಎಂ. ಸಿದ್ದರಾಜು(ವಯಸ್ಸು 50), ತೆರಕಣಾಂಬಿ ಕ್ಷೇತ್ರದ ಪಿ. ಮಹದೇವಪ್ಪ ಮತ್ತು ಹಂಗಳ ಕ್ಷೇತ್ರದ ಆರ್. ಅಂಬಿಕಾ ಪದವಿಪೂರ್ವ ಶಿಕ್ಷಣ ಪಡೆ ದಿದ್ದಾರೆ. ಬೇಗೂರು ಕ್ಷೇತ್ರದ ಡಿ.ಸಿ. ನಾಗೇಂದ್ರ ಪಿಯು ನಂತರ ಡಿ.ಫಾರ್ಮ್ ಕೋರ್ಸ್ ಮುಗಿಸಿದ್ದಾರೆ.ಆಯ್ಕೆಯಾಗಿರುವ ಸದಸ್ಯರ ಶೈಕ್ಷಣಿಕ ಮಾನದಂಡ ಅವಲೋಕಿಸಿದರೆ ಮತದಾರರಲ್ಲಿ ಉನ್ನತ ಶಿಕ್ಷಣ ಪಡೆದವರನ್ನು ಚುನಾಯಿಸಬೇಕೆಂಬ ಅರಿವಿನ ಪ್ರಮಾಣ ಕಡಿಮೆ ಇರುವುದು ಗೋಚರಿಸುತ್ತದೆ. ಜತೆಗೆ, ಅರ್ಧದಷ್ಟು ಮಂದಿಗೆ ಗ್ರಾಮ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಆಡಳಿತ ನಡೆಸಿದಿರುವ ಅನುಭವ ಉಂಟು. ಉಳಿದವರು ಪ್ರಥಮ ಬಾರಿಗೆ ಜಿ.ಪಂ. ಮೆಟ್ಟಿಲು ತುಳಿಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry