ಐಸಿಸಿ ಆಡಳಿತದಲ್ಲಿ ಬದಲಾವಣೆಗೆ ಒಪ್ಪಿಗೆ

ಸಿಂಗಪುರ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಆಡಳಿತ ಹಾಗೂ ಅಧಿಕಾರ ಸ್ವರೂಪದಲ್ಲಿ ಸಮಗ್ರ ಬದಲಾವಣೆಗೆ ಸಂಬಂಧಿಸಿದ ವಿವಾದಾತ್ಮಕ ಶಿಫಾರಸಿಗೆ ಕೊನೆಗೂ ಒಪ್ಪಿಗೆ ಲಭಿಸಿದೆ. ಇನ್ನು ಮುಂದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಐಸಿಸಿ ಆಡಳಿತದ ಮೇಲೆ ಹಿಡಿತ ಸಾಧಿಸಲಿದೆ.
ಸಿಂಗಪುರದಲ್ಲಿ ಶನಿವಾರ ನಡೆದ ಐಸಿಸಿಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಶಿಫಾರಸಿಗೆ ಅನುಮೋದನೆ ಲಭಿಸಿತು. ಪಾಕಿಸ್ತಾನ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗಳ ಪ್ರಬಲ ವಿರೋಧವಿದ್ದರೂ ಶಿಫಾರಸು ಜಾರಿಯಾಗಿದೆ. ಶಿಫಾರಸು ಜಾರಿಯಾಗಲು ಐಸಿಸಿಯ 10 ಸದಸ್ಯ ರಾಷ್ಟ್ರಗಳಲ್ಲಿ ಏಳು ಸದಸ್ಯರ ಬೆಂಬಲ ಅಗತ್ಯವಿತ್ತು. ಮತದಾನದ ವೇಳೆ ಎಂಟು ಸದಸ್ಯರು ಶಿಫಾರಸಿನ ಪರವಾಗಿ ನಿಂತರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ಮತದಾನದಿಂದ ದೂರ ಉಳಿದವು.
ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಕೊನೆಯ ಕ್ಷಣದಲ್ಲಿ ತನ್ನ ನಿಲುವು ಬದಲಿಸಿ ಶಿಫಾರಸಿಗೆ ಒಪ್ಪಿಗೆ ಸೂಚಿಸಿದೆ. ಸಿಎಸ್ಎ ಅಧ್ಯಕ್ಷ ಕ್ರಿಸ್ ನೆಂಜಾನಿ ಮತ್ತು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ನಡುವೆ ಸುದೀರ್ಘ ಮಾತುಕತೆ ನಡೆದಿತ್ತು. ಆ ಬಳಿಕ ನೆಂಜಾನಿ ತಮ್ಮ ನಿರ್ಧಾರ ಬದಲಿಸಿದರು ಎನ್ನಲಾಗಿದೆ.
ಇನ್ನು ಮುಂದೆ ಐಸಿಸಿಯ ಆಡಳಿತ ಹೊಸ ರೂಪ ಪಡೆದುಕೊಳ್ಳಲಿದೆ. ನೂತನ ಕಾರ್ಯಕಾರಿ ಸಮಿತಿ, ಹಣಕಾಸು ಹಾಗೂ ವಾಣಿಜ್ಯ ವ್ಯವಹಾರಗಳ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಡಳಿಯು ಜಾಗತಿಕ ಕ್ರಿಕೆಟ್ನ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಿದೆ.
ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಜುಲೈನಲ್ಲಿ ಐಸಿಸಿ ಮಂಡಳಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ವಾಲ್ಲಿ ಎಡ್ವರ್ಡ್ಸ್ ಕಾರ್ಯಕಾರಿ ಸಮಿತಿಗೆ, ಇಸಿಬಿಯ ಜೈಲ್ಸ್ ಕ್ಲಾರ್ಕ್ ಅವರು ಹಣಕಾಸು ಹಾಗೂ ವಾಣಿಜ್ಯ ವ್ಯವಹಾರಗಳ ಸಮಿತಿಗೆ ಮುಖ್ಯಸ್ಥರಾಗಲಿದ್ದಾರೆ. ಇವರ ಅಧಿಕಾರದ ಅವಧಿ 2016ರ ವರೆಗೆ ಇರಲಿದೆ.
ಬಿಸಿಸಿಐ ಸ್ವಾಗತ: ಐಸಿಸಿಯ ಆಡಳಿತದಲ್ಲಿ ಬದಲಾವಣೆಗೆ ಒಪ್ಪಿಗೆ ದೊರೆತಿರುವುದನ್ನು ಬಿಸಿಸಿಐ ಸ್ವಾಗತಿಸಿದೆ. ‘ಹೋದ ಮೂರು ವಾರಗಳ ಅವಧಿಯಲ್ಲಿ ನಡೆದ ಹಲವು ಸುತ್ತುಗಳ ಚರ್ಚೆಯ ಬಳಿಕ ಶಿಫಾರಸಿಗೆ ಅನುಮೋದನೆ ಲಭಿಸಿದೆ’ ಎಂದು ಮಂಡಳಿಯ ಕಾರ್ಯದರ್ಶಿ ಸಂಜಯ್ ಪಟೇಲ್ ಹೇಳಿದ್ದಾರೆ.
‘ಶಿಫಾರಸಿನ ಬಗ್ಗೆ ಇನ್ನಷ್ಟು ಚರ್ಚೆ ನಡೆಸುವ ಉದ್ದೇಶದಿಂದ ಎರಡು ಕ್ರಿಕೆಟ್ ಮಂಡಳಿಗಳು ಮತದಾನದಿಂದ ದೂರ ಉಳಿದವು’ ಎಂದು ನುಡಿದಿದ್ದಾರೆ.
ಶಿಫಾರಸಿನಲ್ಲಿ ಸಾಕಷ್ಟು ಬದಲಾವಣೆ: ಈ ಮೊದಲು ಮುಂದಿಟ್ಟ ಶಿಫಾರಸಿನಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಹೇಳಿದೆ.
‘ಜೀವನದಲ್ಲಿ ಯಾವುದೂ ಪರಿಪೂರ್ಣವಲ್ಲ. ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಒಳಗೊಂಡಂತೆ ಎಲ್ಲ ದೇಶಗಳು ಈ ಶಿಫಾರಸಿನ ಕುರಿತು ಮರುಚಿಂತನೆ ನಡೆಸಿವೆ. ಮೂಲ ಶಿಫಾರಸಿಗೆ ಸಾಕಷ್ಟು ಬದಲಾವಣೆ ತಂದ ಬಳಿಕ ನಾವು ಇದಕ್ಕೆ ಒಪ್ಪಿಗೆ ಸೂಚಿಸಿದ್ದೇವೆ’ ಎಂದು ಸಿಎಸ್ಎ ಅಧ್ಯಕ್ಷ ಕ್ರಿಸ್ ನೆಂಜಾನಿ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತಾವಿತ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಷಿಪ್ಅನ್ನು ಕೈಬಿಡಲು ಶನಿವಾರ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು. ಅದೆ ರೀತಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಮತ್ತೆ ಆರಂಭಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.