ಐ ಲೀಗ್ ಫುಟ್‌ಬಾಲ್:ಇಂಡಿಯನ್ ಆರೋಸ್‌ಗೆ ವಿಜಯ

7

ಐ ಲೀಗ್ ಫುಟ್‌ಬಾಲ್:ಇಂಡಿಯನ್ ಆರೋಸ್‌ಗೆ ವಿಜಯ

Published:
Updated:
ಐ ಲೀಗ್ ಫುಟ್‌ಬಾಲ್:ಇಂಡಿಯನ್ ಆರೋಸ್‌ಗೆ ವಿಜಯ

ಬೆಂಗಳೂರು: ಗೋಲಿನ ಸುರಿಮಳೆಯನ್ನೇ ಸುರಿಸಿದ ಇಂಡಿಯನ್ ಆ್ಯರೋಸ್ ತಂಡದವರು ಐ-ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಆತಿಥೇಯ ಹಿಂದೂಸ್ಥಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಭರ್ಜರಿಯಾಗಿಯೇ ಮಣಿಸಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಇಂಡಿಯನ್ ಆ್ಯರೋಸ್ 4-0ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಮಣಿಸಿ ಪಾಯಿಂಟುಗಳನ್ನು ಹೆಚ್ಚಿಸಿಕೊಂಡಿತು.ಪಂದ್ಯದ ಆರಂಭದಿಂದಲೂ ಪ್ರಭಾವಿ ಆಟಕ್ಕಿಳಿದ ಇಂಡಿಯನ್ ಆ್ಯರೋಸ್ ಕೊನೆಯವರೆಗೂ ಚುರುಕಾದ ಆಟವನ್ನೇ ಆಡಿತು. ತವರು ನೆಲದ ಪ್ರೇಕ್ಷಕರ ಬೆಂಬಲವನ್ನು ಹೊಂದಿದ್ದ ಆತಿಥೇಯ ಎಚ್‌ಎಎಲ್ ತಂಡ ಆ್ಯರೋಸ್‌ಗೆ ಯಾವುದೇ ಹಂತದಲ್ಲಿ ಪೈಪೋಟಿ ಒಡ್ಡಲು ಆಗಲಿಲ್ಲ. ಇದೇ ಟೂರ್ನಿಯ ಕಳೆದ ಪಂದ್ಯದಲ್ಲಿ ಚಿರಾಗ್ ಯುನೈಟೆಡ್ ಹಾಗೂ ಅದಕ್ಕೂ ಮುನ್ನ ವಿವಾ ಕೇರಳ ಎದುರು ಸೋಲು ಕಂಡಿರುವ ಆತಿಥೇಯ ತಂಡಕ್ಕೆ ಪದೇ ಪದೇ ಸೋಲಿನ ನಿರಾಸೆ ಕಾಡುತ್ತಿದೆ. ಈ ಸೋಲು ಕೂಡಾ ತಂಡಕ್ಕೆ ಆಘಾತ ನೀಡಿದೆ.ಉತ್ತಮ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದ ಇಂಡಿಯನ್ ಆ್ಯರೋಸ್ ತಂಡದ ಆಟಗಾರರು ಪಂದ್ಯದ ಕೊನೆಯ ತನಕವು ರಕ್ಷಣಾತ್ಮಕತೆ ಕಡೆಗೆ ಗಮನ ನೀಡಿದರು. ಇದು ಅವರಿಗೆ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ನೆರವಾಯಿತು.  ಆತಿಥೇಯ ಎಚ್‌ಎಎಲ್ ತಂಡದವರು ಗೋಲು ಗಳಿಸುವ ಹಲವು ಅವಕಾಶಗಳನ್ನು ತಪ್ಪಿಸಿಕೊಂಡರು. ಆದರೆ ಆ್ಯರೋಸ್ ತಂಡ ಒಂದಾದ ಮೇಲೊಂದರಂತೆ ಗೋಲು ಗಳಿಸಿದ್ದರಿಂದ ತೀವ್ರ ಒತ್ತಡಕ್ಕೆ ಒಳಗಾದ ತವರು ನೆಲದ ಆಟಗಾರರು ಇಕ್ಕಟ್ಟಿನಲ್ಲಿ ಸಿಲುಕಿದರು. ನಿರಂತರವಾಗಿ ಗೋಲುಗಳು ತಂಡದ ಖಾತೆ ಸೇರುತ್ತಿದ್ದರಿಂದ ಆತ್ಮ ವಿಶ್ವಾಸದಿಂದಲೇ ಆಡಿದ ಆ್ಯರೋಸ್‌ನ ಆಟಗಾರರು ಸುಲಭ ಗೆಲುವು ಪಡೆದರು.ಇಂಡಿಯನ್ ಆ್ಯರೋಸ್ ತಂಡದ ಮನ್ಸಾಮಮ್ ಸಲಾ (18) ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಖಾತೆ ತೆರೆದರು. ನಂತರ ಚುರುಕಿನ ಆಟವಾಡಿದ ಇತರ ಆಟಗಾರರು ಗೆಲುವಿನ ಅಂತರವನ್ನು ಹೆಚ್ಚಿಸಿದರು. ಜೆ.ಇ. ರಾಜ್ (38), ಜಿವಲ್ ರಾಜ ಶೇಖ್ (50) ಶಿಲ್ಪಾನ್ ಡಿಸಿಲ್ವಾ (66) ಗೋಲು ಗಳಿಸಿ ಆ್ಯರೋಸ್ ತಂಡ ಗೆಲುವಿನ ಅಂತರ ಹೆಚ್ಚಿಸಿದರು.ಐ ಲೀಗ್ ಟೂರ್ನಿಯಲ್ಲಿ ಇದುವರೆಗೂ ಆಡಿರುವ ಒಟ್ಟು 20 ಪಂದ್ಯಗಳಲ್ಲಿ ಕೇವಲ ಐದರಲ್ಲಿ ಮಾತ್ರ ಆತಿಥೇಯ ತಂಡದವರು ಗೆಲುವು ಪಡೆದಿದ್ದಾರೆ. ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ, ಹತ್ತು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಇದರಿಂದ ಒಟ್ಟು 20 ಪಾಯಿಂಟುಗಳನ್ನು ಹೊಂದಿ,10 ಸ್ಥಾನದಲ್ಲಿದ್ದಾರೆ. ಭಾನುವಾರದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಇಂಡಿಯನ್ ಆ್ಯರೋಸ್ 19 ಪಂದ್ಯಗಳನ್ನಾಡಿದ್ದು, ಐದರಲ್ಲಿ ಗೆಲುವು ಪಡೆದಿದೆ. ಏಳು ಡ್ರಾ ಹಾಗೂ ಏಳು  ಪಂದ್ಯಗಳಲ್ಲಿ ಸೋಲು ಕಂಡಿದೆ. ಒಟ್ಟು 22 ಪಾಯಿಂಟ್‌ಗಳನ್ನು  ಗಳಿಸಿದೆ.  ಈ ತಂಡ ಈಗ 8ನೇ ಸ್ಥಾನದಲ್ಲಿದೆ. ಈ ಪಂದ್ಯಕ್ಕೂ ಮುನ್ನ ಆ್ಯರೋಸ್ 19 ಪಾಯಿಂಟ್ ಹೊಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry