ಮಂಗಳವಾರ, ಡಿಸೆಂಬರ್ 10, 2019
20 °C

ಐ- ಲೀಗ್ ಫುಟ್‌ಬಾಲ್: ಮಾರ್ಟಿನ್ಸ್ ಮಿಂಚಿನ ಪ್ರದರ್ಶನ

Published:
Updated:
ಐ- ಲೀಗ್ ಫುಟ್‌ಬಾಲ್: ಮಾರ್ಟಿನ್ಸ್ ಮಿಂಚಿನ ಪ್ರದರ್ಶನ

ಬೆಂಗಳೂರು: ರಾಂತಿ ಮಾರ್ಟಿನ್ಸ್ ತಂದಿತ್ತ ಎರಡು ಗೋಲುಗಳ ನೆರವಿನಿಂದ ಗೋವಾದ ಡೆಂಪೋ ಕ್ಲಬ್ ತಂಡ ಭಾನುವಾರ ನಡೆದ ಐ- ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 3-0 ಗೋಲುಗಳಿಂದ ಎಚ್‌ಎಎಲ್ ವಿರುದ್ಧ ಜಯ ಸಾಧಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಲೀಗ್‌ನ 12ನೇ ಸುತ್ತಿನ ಪಂದ್ಯದಲ್ಲಿ ಮಾರ್ಟಿನ್ಸ್ ಅವರು 7 ಮತ್ತು 68ನೇ ನಿಮಿಷದಲ್ಲಿ ಗೋಲು ಗಳಿಸಿ ಡೆಂಪೋ ತಂಡದ ಗೆಲುವಿನ ರೂವಾರಿ ಎನಿಸಿದರು. ತಂಡದ ಮತ್ತೊಂದು ಗೋಲನ್ನು ರಾಬರ್ಟೊ ಮೆಂಡೆಸ್ ಡಾ ಸಿಲ್ವಾ 50ನೇ ನಿಮಿಷದಲ್ಲಿ ತಂದಿತ್ತರು.ಈ ಗೆಲುವಿನ ಮೂಲಕ ಡೆಂಪೋ ತಂಡ ತನ್ನ ಪಾಯಿಂಟ್‌ಗಳನ್ನು 19ಕ್ಕೆ ಹೆಚ್ಚಿಸಿಕೊಂಡಿದ್ದು, ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಎಚ್‌ಎಎಲ್‌ಗೆ ಲೀಗ್ ನಲ್ಲಿ ಎದುರಾದ ಏಳನೇ ಸೋಲು ಇದು. ಬೆಂಗಳೂರಿನ ತಂಡ ಇದೀಗ ಒಟ್ಟು 11 ಪಾಯಿಂಟ್‌ಗಳೊಂದಿಗೆ 10ನೇ ಸ್ಥಾನದಲ್ಲಿದೆ.ತವರು ನೆಲದಲ್ಲಿ ಎಚ್‌ಎಎಲ್ ಸತತ ಎರಡನೇ ಸೋಲು ಅನುಭವಿಸಿದೆ. ಈ ಮೊದಲು ಇದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಲಗಾಂವ್‌ಕರ್ ಎದುರು ಪರಾಭವಗೊಂಡಿತ್ತು.ಎಚ್‌ಎಎಲ್ ತಂಡ ಪಂದ್ಯದ ಯಾವುದೇ ಹಂತದಲ್ಲೂ ಎದುರಾಳಿ ತಂಡಕ್ಕೆ ಬೆದರಿಕೆಯಾಗಿ ಪರಿಣಮಿಸಲಿಲ್ಲ. ತವರಿನ ಪ್ರೇಕ್ಷಕರ ಮುಂದೆ ಆಟಗಾರರು ಹೊಂದಾಣಿಕೆಯ ಪ್ರದರ್ಶನ ನೀಡಲು ವಿಫಲರಾದರು.ಸ್ಟ್ರೈಕರ್ ಹಮ್ಜಾ ಅವರಿಗೆ ನಿಖರ ಪಾಸ್ ನೀಡಲು ಇತರ ಆಟಗಾರರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ತಂಡದ ಗೋಲು ಗಳಿಸುವ ಪ್ರಯತ್ನಕ್ಕೆ ಯಶ ಲಭಿಸಲಿಲ್ಲ. ಕ್ಸೇವಿಯರ್ ವಿಜಯ ಕುಮಾರ್ ಅವರ ಅನುಪಸ್ಥಿತಿ ಕಾಡಿತು.ಮತ್ತೊಂದೆಡೆ ಡೆಂಪೋ ತಂಡ ಶಿಸ್ತಿನ ಆಟವಾಡಿತು. ರಾಷ್ಟ್ರೀಯ ತಂಡದ ಆಟಗಾರರಾದ ಮಹೇಶ್ ಗಾವ್ಳಿ, ಕ್ಲೈಮ್ಯಾಕ್ಸ್ ಲಾರೆನ್ಸ್, ಕ್ಲಿಫರ್ಡ್ ಮಿರಾಂಡ ಮತ್ತು ಸುಭಾಶಿಶ್ ರಾಯ್ ಚೌಧರಿ ಅವರ ಆಗಮನದಿಂದ ಡೆಂಪೋ ಹೆಚ್ಚಿನ ಬಲ ಪಡೆದುಕೊಂಡಿತು. ಗಾವ್ಳಿ ಅವರು ರಕ್ಷಣಾ ವಿಭಾಗದಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)