ಐ-ಲೀಗ್ ಫುಟ್‌ಬಾಲ್: ಮೊದಲ ಗೆಲುವಿಗಾಗಿ ಕಸರತ್ತು

7

ಐ-ಲೀಗ್ ಫುಟ್‌ಬಾಲ್: ಮೊದಲ ಗೆಲುವಿಗಾಗಿ ಕಸರತ್ತು

Published:
Updated:
ಐ-ಲೀಗ್ ಫುಟ್‌ಬಾಲ್: ಮೊದಲ ಗೆಲುವಿಗಾಗಿ ಕಸರತ್ತು

ಬೆಂಗಳೂರು: ಆತಿಥೇಯ ಹಿಂದುಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡದವರಿಗೆ ಈ ಸಲದ ಐ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. `ಈ ಸಲ ಖಂಡಿತಾ ಗೆಲ್ಲುತ್ತೇವೆ~ ಎನ್ನುವ ಭರವಸೆ ಹೊತ್ತು ಬುಧವಾರ ಈಸ್ಟ್ ಬೆಂಗಾಲ್ ಎದುರು ಕಣಕ್ಕಿಳಿಯಲಿದ್ದಾರೆ.ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಪಡೆಗೆ ಗೆಲುವು ಸಾಧ್ಯವೇ ಎನ್ನುವ ಪ್ರಶ್ನೆ ಮಾತ್ರ ಕುತೂಹಲ ಮೂಡಿಸಿದೆ. ಏಕೆಂದರೆ, ಇದುವರೆಗೆ ಆಡಿರುವ ಒಟ್ಟು ಆರು ಪಂದ್ಯಗಳಲ್ಲಿ ಎಚ್‌ಎಎಲ್ ಒಂದೂ ಗೆಲುವು ಪಡೆದಿಲ್ಲ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದಷ್ಟೇ ಈ ತಂಡದ ಸಾಧನೆ.ತವರು ನೆಲದಲ್ಲಿ ಆಡಿದ ಪಂದ್ಯದಲ್ಲಿ ಎಚ್‌ಎಎಲ್ ಗೆಲುವು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಎದುರಾಳಿ ತಂಡಕ್ಕೆ ತಕ್ಕ ಪೈಪೋಟಿ ನೀಡುವಲ್ಲಿಯೂ ವಿಫಲವಾಗಿದೆ. ಆಟಗಾರರಿಗೆ ಕಾಡಿರುವ ಗಾಯದ ಸಮಸ್ಯೆ ಸಹ ಇದಕ್ಕೆ ಕಾರಣ. ಎದುರಾಳಿ ಈಸ್ಟ್ ಬೆಂಗಾಲ್ ಉತ್ತಮ ಪ್ರದರ್ಶನ ನೀಡುತ್ತದೆ.

 

ಈ ಸಲದ ಐ-ಲೀಗ್‌ನಲ್ಲಿ ಆ ತಂಡ ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಆರು ಪಂದ್ಯಗಳನ್ನಾಡಿರುವ ಬೆಂಗಾಲ್ ಮೂರು ಪಂದ್ಯಗಳಲ್ಲಿ ಗೆಲುವು ಪಡೆದು, ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ. ಹೀಗಾಗಿ 10 ಪಾಯಿಂಟ್‌ಗಳು ತಂಡದ ಖಾತೆಯಲ್ಲಿ ಭದ್ರವಾಗಿವೆ.ಎಚ್‌ಎಎಲ್ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಜೋಸೆಫ್ ಸೆಮಿ ಹಾಗೂ ಕೋಚ್ ತ್ಯಾಗರಾಜನ್ ಇಂದಿನ ಪಂದ್ಯದಲ್ಲಾದರೂ ಗೆಲುವು ಪಡೆಯಬೇಕು ಎನ್ನುವ ಉದ್ದೇಶದಿಂದ ರಣತಂತ್ರ ರೂಪಿಸಿದ್ದಾರೆ. ತಂಡದ ಬಲ ಎನ್ನಿಸಿದ್ದ ಕ್ಸೇವಿಯರ್ ವಿಜಯ್ ಕುಮಾರ್, ಕಳೆದ ಸಲದ ನಾಯಕ ಜೆ. ಮುರುಳಿ ಈಗ ತಂಡದಲ್ಲಿಲ್ಲ. ಕೆಲ ಹೊಸ ಮುಖಗಳನ್ನು ಕಟ್ಟಿಕೊಂಡ ಸೆಮಿ ಪಡೆ ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ಅಗತ್ಯವಿದೆ.

ಇಲ್ಲವಾದರೆ ಈಗಿರುವಂತೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕಾಯಂ ಆಗಿ ಉಳಿಯಬೇಕಾಗುತ್ತದೆ.`ಎದುರಾಳಿ ಈಸ್ಟ್ ಬೆಂಗಾಲ್ ತಂಡ ಬಲಿಷ್ಠವಾಗಿದೆ. ಆದರೆ, ಕೊನೆಯ ಪಂದ್ಯದಲ್ಲಿ ಅದು ಸೋಲು ಕಂಡಿದೆ. ಅದರ ಲಾಭವನ್ನು ಪಡೆಯಲು ನಾವು ಯತ್ನಿಸುತ್ತೇವೆ. ಸಾಧ್ಯವಾದಷ್ಟು ಪೈಪೋಟಿ ನೀಡುತ್ತೇವೆ~ ಎಂದು ತ್ಯಾಗರಾಜನ್ ತಿಳಿಸಿದರು. ಮಂಗಳವಾರ ಉಭಯ ತಂಡಗಳ ಆಟಗಾರರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry