ಐ-ಲೀಗ್ ಫುಟ್‌ಬಾಲ್: ಲಜಾಂಗ್‌ಗೆ ಸೋತ ಎಚ್‌ಎಎಲ್

7

ಐ-ಲೀಗ್ ಫುಟ್‌ಬಾಲ್: ಲಜಾಂಗ್‌ಗೆ ಸೋತ ಎಚ್‌ಎಎಲ್

Published:
Updated:
ಐ-ಲೀಗ್ ಫುಟ್‌ಬಾಲ್: ಲಜಾಂಗ್‌ಗೆ ಸೋತ ಎಚ್‌ಎಎಲ್

ಬೆಂಗಳೂರು: ಕಳೆದ ವಾರ ಐ- ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಆಚರಿಸಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡ ಮತ್ತೆ ಸೋಲಿನ ಹಾದಿಗೆ ಮರಳಿದೆ.ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶಿಲ್ಲಾಂಗ್ ಲಜಾಂಗ್ ಏಕೈಕ ಗೋಲಿನಿಂದ ಎಚ್‌ಎಎಲ್ ತಂಡವನ್ನು ಮಣಿಸಿತು. ಯೂಗೆನ್ಸನ್ ಲಿಂಗ್ಡೊ 38ನೇ ನಿಮಿಷದಲ್ಲಿ ಲಜಾಂಗ್ ತಂಡದ ಗೆಲುವಿನ ಗೋಲು ತಂದಿತ್ತರು.ಈ ಗೆಲುವಿನ ಮೂಲಕ ಲಜಾಂಗ್ ಆಡಿದ 18 ಪಂದ್ಯಗಳಿಂದ ತನ್ನ ಒಟ್ಟು ಪಾಯಿಂಟ್‌ಗಳನ್ನು 21ಕ್ಕೆ ಹೆಚ್ಚಿಸಿಕೊಂಡಿದೆ. ಇಷ್ಟೇ ಪಂದ್ಯಗಳನ್ನಾಡಿರುವ ಎಚ್‌ಎಎಲ್ ಆರು ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರಿನ ತಂಡ ಕಳೆದ ಶನಿವಾರ ಕೊಚ್ಚಿಯಲ್ಲಿ ನಡೆದ ಪಂದ್ಯದಲ್ಲಿ ಚಿರಾಗ್ ಕೇರಳ ತಂಡವನ್ನು ಮಣಿಸಿ ಋತುವಿನ ಮೊದಲ ಗೆಲುವು ದಾಖಲಿಸಿತ್ತು. ಈ ಜಯದ ಕಾರಣ ಆಟಗಾರರ ಆತ್ಮವಿಶ್ವಾಸ ಹೆಚ್ಚಿತ್ತು. ಮಾತ್ರವಲ್ಲ ತವರು ನೆಲದಲ್ಲಿ ಮೊದಲ ಗೆಲುವಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಹೊಂದಾಣಿಕೆಯ ಪ್ರದರ್ಶನ ನೀಡುವಲ್ಲಿ ತಂಡ ವಿಫಲವಾಯಿತು.ಜೋಸೆಫ್ ಫೆಮಿ ಅನುಪಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಗೋಲ್ ಕೀಪರ್ ಪಿ. ಪ್ರಮೋದ್ ಎಚ್‌ಎಎಲ್ ತಂಡದ ನೇತೃತ್ವ ವಹಿಸಿದ್ದರು. ಶಿಲ್ಲಾಂಗ್ ತಂಡದ ಮುನ್ನಡೆ ಆಟಗಾರರಾದ ಸುಶೀಲ್ ಕುಮಾರ್ ಮತ್ತು ಓಸ್ವಾಲ್ಡೊ ಮಯೋರಾ ಆಗಿಂದಾಗ್ಗೆ ಎಚ್‌ಎಎಲ್ ಗೋಲು ಪೆಟ್ಟಿಗೆ ಗುರಿಯಾಗಿಸಿ ಚೆಂಡಿನೊಂದಿಗೆ ಮುನ್ನುಗ್ಗುತ್ತಿದ್ದರು.ಸುಶೀಲ್ ಮತ್ತು ಜಾನ್ ಮೆನ್ಯಾಂಗರ್ ಆರಂಭದಲ್ಲೇ ಗೋಲು ಗಳಿಸಲು ನಡೆಸಿದ ಪ್ರಯತ್ನವನ್ನು ಪ್ರಮೋದ್ ಸಮರ್ಥವಾಗಿ ತಡೆದರು. ಆದರೆ 38ನೇ ನಿಮಿಷದಲ್ಲಿ ತಂಡ ಚೆಂಡನ್ನು ಗುರಿ ಸೇರಿಸಲು ಯಶಸ್ವಿಯಾಯಿತು. ಮಯೋರಾ ನೀಡಿದ ಪಾಸ್‌ನಲ್ಲಿ ಚೆಂಡನ್ನು ಪಡೆದ ಲಿಂಗ್ಡೊ ಎಚ್‌ಎಎಲ್ ಗೋಲ್‌ಕೀಪರ್‌ನ್ನು ತಪ್ಪಿಸುವಲ್ಲಿ ಸಮರ್ಥರಾದರು.ಎರಡನೇ ಅವಧಿಯಲ್ಲಿ ಎಚ್‌ಎಎಲ್ ಸಮಬಲದ ಗೋಲು ಗಳಿಸಲು ತಕ್ಕಮಟ್ಟಿನ ಪ್ರಯತ್ನ ನಡೆಸಿತಾದರೂ ಯಶ ಕಾಣಲಿಲ್ಲ. ಮತ್ತೊಂದೆಡೆ ಶಿಲ್ಲಾಂಗ್ ಕೂಡಾ ಗೆಲುವಿನ ಅಂತರ ಹೆಚ್ಚಿಸಲು ದೊರೆತ ಹಲವು ಅವಕಾಶಗಳನ್ನು ಹಾಳುಮಾಡಿಕೊಂಡಿತು. ಎಚ್‌ಎಎಲ್ ತವರು ನೆಲದಲ್ಲಿ ಆಡಿದ 10ನೇ ಪಂದ್ಯ ಇದಾಗಿದ್ದು, ಒಂಬತ್ತರಲ್ಲೂ ಸೋಲು ಎದುರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry