ಒಂದು ಕ್ಷಣ... ತಲ್ಲಣ!

7

ಒಂದು ಕ್ಷಣ... ತಲ್ಲಣ!

Published:
Updated:
ಒಂದು ಕ್ಷಣ... ತಲ್ಲಣ!

`ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು...~ -ಹೀಗೆ ಮಾತು ಆರಂಭಿಸಿದರು ನಟ, ನಿರ್ಮಾಪಕ ಜೈ ಜಗದೀಶ್. ಅವರು ಹೇಳುತ್ತಿದ್ದದ್ದು ತಮ್ಮ ನಿರ್ಮಾಣದ `ಒಂದು ಕ್ಷಣದಲ್ಲಿ~ ಚಿತ್ರದ ಬಗ್ಗೆ.ಇತ್ತೀಚಿನ `ಈ ಬಂಧನ~ ಮತ್ತು `ವಾರೆವ್ಹಾ~ ಚಿತ್ರಗಳ ಸೋಲಿನಿಂದ ಕೈ ಸುಟ್ಟುಕೊಂಡಿರುವ ಜೈ ಜಗದೀಶ್ `ಒಂದು ಕ್ಷಣದಲ್ಲಿ~ ಮೂಲಕ ಮತ್ತೊಂದು ಅದೃಷ್ಟ ಪರೀಕ್ಷೆಯ ಕ್ಷಣಗಣನೆಯಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದ ಸಂತೋಷವನ್ನು ಅವರು ಔತಣಕೂಟದಲ್ಲಿ ಹಂಚಿಕೊಂಡರು.ಡಬ್ಬಿಂಗ್ ಮುಗಿದಿದ್ದು ಚಿತ್ರ ತೆರೆಗೆ ಸಿದ್ಧಗೊಂಡಿದೆಯಂತೆ. ಆದರೆ ಅದನ್ನು ಬಿಡುಗಡೆ ಮಾಡುವ ಸೂಕ್ತ ಕ್ಷಣಕ್ಕಾಗಿ ಅವರು ಎದುರು ನೋಡುತ್ತಿದ್ದಾರೆ. ದೊಡ್ಡವರ ಚಿತ್ರಗಳು ಬಿಡುಗಡೆಗೆ ನಿಂತಿವೆ. ಇಂತಹ ಸಮಯದಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡಿದರೆ ಪೈಪೋಟಿ ಎದುರಿಸಲಾರದು ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಆಗಸ್ಟ್ ತಿಂಗಳ ಕೊನೆಯವರೆಗೂ ಕಾಯಲು ಅವರು ತೀರ್ಮಾನಿಸಿದ್ದಾರೆ.ಜೈಜಗದೀಶ್ ಅವರ ಗೆಳೆಯನ ಮಗ ತರುಣ್ ಚಿತ್ರದ ನಾಯಕ. ಸಂಜನಾ ಮತ್ತು ಮಲೆಯಾಳದ ನಟಿ ಭಾಮಾ ನಾಯಕಿಯರು. ಮೂರು ಹಾಡು ಮತ್ತು ಒಂದು ಶ್ಲೋಕವಿದ್ದು ಇವುಗಳಿಗೆ ಯುವ ನಿರ್ದೇಶಕ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. ಮೈಸೂರು ಸುತ್ತಮುತ್ತ 18 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎರಡು ಕ್ಯಾಮೆರಾಗಳನ್ನು ಒಟ್ಟಿಗೆ ಬಳಸಿರುವುದರಿಂದ ವೇಗವಾಗಿ ಚಿತ್ರೀಕರಣ ಮುಗಿದಿದೆಯಂತೆ.ಹೆಸರು ಕೇಳಿದೊಡನೆ ಇದು ಸಸ್ಪೆನ್ಸ್ ಚಿತ್ರ ಎಂದು ಅನಿಸುತ್ತದೆ. ಆದರೆ ಇದು ನವಿರು ಹಾಸ್ಯ ಮತ್ತು ಪ್ರೇಮಕಥೆಯನ್ನು ಒಳಗೊಂಡ ವಿಭಿನ್ನ ಬಗೆಯ ಚಿತ್ರ. ಒಂದು ಕ್ಷಣದಲ್ಲಿ ಪ್ರೇಕ್ಷಕನ ಊಹೆಗಳೆಲ್ಲವೂ ಬದಲಾಗುವುದೇ ಚಿತ್ರದಲ್ಲಿನ ಸಸ್ಪೆನ್ಸ್ ಎಂದ ಜೈ ಜಗದೀಶ್ ಇದು ಸಂಪೂರ್ಣ ಸ್ವಮೇಕ್ ಎಂದು ಒತ್ತಿಹೇಳಿದರು.ಕಥೆ ಸುಂದರವಾಗಿದೆ. ಚಿತ್ರವೂ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ನನ್ನದು ಹಾಸ್ಯ ಪ್ರಜ್ಞೆಯುಳ್ಳ ಮುಗ್ಧ ಹುಡುಗನ ಪಾತ್ರ. ಚಿತ್ರದ ಕೊನೆಯಲ್ಲಷ್ಟೇ ನನಗೆ ಪ್ರೇಮಾಂಕುರವಾಗುತ್ತದೆ ಎಂದು ತರುಣ್ ಹೇಳಿಕೊಂಡರು.ವೇದಿಕೆ ಮೇಲೆ ಹೆಚ್ಚೇನು ಮಾತನಾಡದ ನಿರ್ದೇಶಕ ದಿನೇಶ್ ಬಾಬು ಪತ್ರಿಕಾಮಿತ್ರರೊಂದಿಗೆ ಲೋಕಾಭಿರಾಮ ಹರಟೆಗೆ ಕುಳಿತರು. ಕನ್ನಡ ಚಿತ್ರರಂಗದ ಹಿಂದಿನ ಸ್ಥಿತಿ - ಈಗಿನ ಗತಿ, ತಮ್ಮ ಅನುಭವಗಳು ಹೀಗೆ ಬಾಬು ಫ್ಲ್ಯಾಶ್‌ಬ್ಯಾಕ್‌ಗೆ ಹೋದರು.ಅತ್ತ ನಟಿ ಭಾಮಾ ಅನುಪಸ್ಥಿತಿಯಲ್ಲಿ ಮಿಂಚುತ್ತಿದ್ದ ಚಿತ್ರದ ಮತ್ತೊಬ್ಬ ನಾಯಕಿ ನಟಿ ಸಂಜನಾ ವಿವಿಧ ಭಂಗಿಗಳಲ್ಲಿ ಛಾಯಾಗ್ರಾಹಕರಿಗೆ ಪೋಸು ನೀಡುವುದಕ್ಕೆ ಸಂಜೆಯನ್ನು ಮೀಸಲಾಗಿರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry