ಒಂದು ಜೋಡಿ ಕಂಬಳ ಕೋಣ ವಾರ್ಷಿಕ ವೆಚ್ಚ ರೂ 3 ಲಕ್ಷ!

7

ಒಂದು ಜೋಡಿ ಕಂಬಳ ಕೋಣ ವಾರ್ಷಿಕ ವೆಚ್ಚ ರೂ 3 ಲಕ್ಷ!

Published:
Updated:

ಮಂಗಳೂರು: ಒಂದು ಜೋಡಿ ಕಂಬಳ ಕೋಣಗಳನ್ನು ಸಾಕುವ ವೆಚ್ಚವೇ ವರ್ಷಕ್ಕೆ ರೂ. 3ರಿಂದ 3.5 ಲಕ್ಷ! ಕರಾವಳಿಯಲ್ಲಿ ಈಗ ಕಂಬಳಗಳ ಭರಾಟೆ. ಕಂಬಳ ಕೋಣ ಸಾಕುವವರಿಗೂ ಗೌರವ, ಸನ್ಮಾನ, ಮರ್ಯಾದೆ. ಕಂಬಳಪ್ರಿಯರಿಗೆ ಕಂಬಳದಲ್ಲಿ ಯಾರ ಕೋಣ ಗೆಲ್ಲುತ್ತದೆ ಎಂದು ಹಣ ಕಟ್ಟುವ ಉತ್ಸಾಹ. ಇದು ಒಂದು ಮುಖ.ಕಂಬಳದ ಕೋಣಗಳನ್ನು ಸಾಮಾನ್ಯ ಕೋಣಗಳಂತೆ ಸಾಕಿದರೆ ಆಗುವುದಿಲ್ಲ. ಅದಕ್ಕೆ ವಿಶೇಷ ಗಮನ ಹರಿಸಬೇಕು. ಸಾಕಣೆಯ ವೆಚ್ಚವೂ ಅಧಿಕ. ಅದು ಕೋಣ ಕಟ್ಟಿದವರಿಗೇ ಗೊತ್ತು ಇದು ಇನ್ನೊಂದು ಮುಖ.ಈ ಹಿಂದೆ ಕೃಷಿಕರಿಗೆ ಕೋಣ ಸಾಕುವುದು ದೊಡ್ಡ ತಲೆನೋವಿನ ಸಂಗತಿ ಆಗಿರಲಿಲ್ಲ. ಟಿಲ್ಲರ್, ಟ್ರ್ಯಾಕ್ಟರ್‌ಗಳ ಭರಾಟೆಯಿಂದ ಈಗ ಕರಾವಳಿಯಲ್ಲಿ ಕೋಣ ಸಾಕುವವರು ವಿರಳ ಆಗುತ್ತಿದ್ದಾರೆ. ಈಗ ಹೆಚ್ಚಿನ ಕೃಷಿಕರು ಕೃಷಿ ಸಮಯದಲ್ಲಿ ಕೋಣ ಖರೀದಿ ಮಾಡಿ ಸಾಗುವಳಿ ಮುಗಿದ ಮೇಲೆ ಮಾರಾಟ ಮಾಡಿ ಬಿಡುತ್ತಾರೆ. ಆದರೆ ಕಂಬಳದಲ್ಲಿ ಭಾಗವಹಿಸುವವರಿಗೆ ಹೆಚ್ಚಾಗಿ ವರ್ಷಪೂರ್ತಿ ಕೋಣ ಸಾಕುತ್ತಾರೆ. ಕಂಬಳ ಸ್ಪರ್ಧೆಯಲ್ಲಿ ಗೆಲುವು ಪಡೆಯಲು ಅವುಗಳನ್ನು ಸಮರ್ಥವಾಗಿ ಸಜ್ಜುಗೊಳಿಸುವುದು ಮುಖ್ಯ.ಕಂಬಳದಲ್ಲಿ ವಿಜೇತರಿಗೆ ಸಿಗುವುದು ಒಂದು ಪವನ್, ಅರ್ಧ ಪವನ್, ಕಾಲು ಪವನ್ ಚಿನ್ನ. ಅಬ್ಬಬ್ಬಾ ಎಂದರೆ ಒಂದು ಕಂಬಳದಲ್ಲಿ ವಿಜೇತರಿಗೆ ಸಿಗುವುದು ರೂ. 15 ಸಾವಿರ ಮೌಲ್ಯದ ಬಹುಮಾನ. ಇಲ್ಲಿ ‘ಲಾಭ- ನಷ್ಟ’ದ ಪ್ರಶ್ನೆಗಿಂತ ಕರಾವಳಿಯ ಸಾಂಸ್ಕೃತಿಕ ಅನನ್ಯತೆ ಆಗಿರುವ ಕಂಬಳದಲ್ಲಿ ವಿಜೇತರಾಗುವುದು ‘ಪ್ರತಿಷ್ಠೆ’ಯ ಪ್ರಶ್ನೆ ಎಂದು ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮೂರು ಜತೆ ಕೋಣಗಳ ಮಾಲೀಕ ಬಾರ್ಕೂರು ಶಾಂತಾರಾಮ ಶೆಟ್ಟಿ ಅವರು. ಕಂಬಳ ಕೋಣ ಆಹಾರ: ಕಂಬಳದಲ್ಲಿ ಭಾಗವಹಿಸುವ ಕೋಣಗಳ ಆಹಾರ ಪೂರೈಕೆ ಇತರ ಕೋಣಗಳಿಗಿಂತ ಭಿನ್ನ. ಮಾಮೂಲಿ ಕೋಣಗಳಿಗೆ ವರ್ಷಪೂರ್ತಿ ಒಂದೇ ರೀತಿಯ ಆಹಾರ ಕೊಟ್ಟರೂ ಏನೂ ಸಮಸ್ಯೆಯಾಗುವುದಿಲ್ಲ. ಕಂಬಳದಲ್ಲಿ ಕೋಣಗಳು ಉಮೇದಿನಿಂದ ಓಡಬೇಕಾದರೆ ಆಯಾ ಕಾಲಕ್ಕೆ ತಕ್ಕ ಆಹಾರ ಪೂರೈಸುವುದು ಮುಖ್ಯ ಎಂದು ಅವರು ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.ಕಂಬಳದ ಸಮಯದಲ್ಲಿ: ಒಂದು ಕೋಣಕ್ಕೆ ಆಗಸ್ಟ್‌ನಿಂದ ಮಾರ್ಚ್ ತಿಂಗಳ ತನಕ (ಕಂಬಳ ಸೀಸನ್ ಈ ತಿಂಗಳಲ್ಲಿ ಮುಗಿಯುತ್ತದೆ) ಪ್ರತಿದಿನ ಮೂರರಿಂದ ನಾಲ್ಕು ಕೆ.ಜಿ.ಹುರುಳಿಯನ್ನು ಚೆನ್ನಾಗಿ ಬೇಯಿಸಿ ಪುಡಿ ಮಾಡಿ ಹಾಕಬೇಕು. ಕೋಣಗಳ ಮೈ ಸಡಿಲ ಆಗುತ್ತದೆ ಎಂಬ ಕಾರಣಕ್ಕೆ ಈ ಸಮಯದಲ್ಲಿ ಹಸಿ ಹುಲ್ಲು ಹಾಕುವಂತಿಲ್ಲ. ದಿನಕ್ಕೆ ಕನಿಷ್ಠ 15 ಸೂಡಿ ಒಣ ಹುಲ್ಲು ಹಾಕಬೇಕು. ಜತೆಗೆ ಕುಡಿಯಲು ನೀರು. ವಾರಕ್ಕೆ ಎರಡು ಬಾರಿ 100 ಗ್ರಾಂ ಎಳ್ಳೆಣ್ಣೆ ಹಾಗೂ 100 ಗ್ರಾಂ ತೆಂಗಿನೆಣ್ಣೆಯನ್ನು ಹುರುಳಿಗೆ ಮಿಶ್ರ ಮಾಡಿ ಕೋಣಕ್ಕೆ ಹಾಕಬೇಕು. ಪ್ರತಿದಿನ ಕಡ್ಡಾಯವಾಗಿ ಸ್ನಾನ ಮಾಡಿಸಿ ಎಣ್ಣೆ ಹಚ್ಚಬೇಕು ಎಂದು ಅವರು ಹೇಳುತ್ತಾರೆ.‘ಕುಂಬಳಕಾಯಿ ಸೇವೆ’: ಕಂಬಳ ಸೀಸನ್ ಮುಗಿದ ಬಳಿಕ ಕೋಣಗಳ ಆಹಾರ ಬದಲಾಗುತ್ತದೆ. ಹುರುಳಿ ಪ್ರಮಾಣ ಕಡಿಮೆಯಾಗುತ್ತದೆ. ಸೆಖೆ ಜಾಸ್ತಿ ಆಗುವುದರಿಂದ ದಿನಕ್ಕೆ 3-4 ಕೆ.ಜಿ. ಕುಂಬಳಕಾಯಿ ತಿನ್ನಲು ಹಾಕುತ್ತೇವೆ. ಕುಂಬಳಕಾಯಿ ತಂಪು ಹಾಗೂ ಅದರಲ್ಲಿ ವಿಟಮಿನ್ ಪ್ರಮಾಣ ಜಾಸ್ತಿ ಇರುವುದರಿಂದ ಮಳೆ ಶುರುವಾಗುವ ತನಕ ಹಾಕುತ್ತೇವೆ ಎಂದು ಅವರು ವಿವರಿಸಿದರು.ಜುಲೈಯಿಂದ ಆಗಸ್ಟ್ ತನಕ ಗಂಜಿಗೆ ಸ್ವಲ್ಪ ಗೋಟು ತೆಂಗಿನಕಾಯಿ ಪುಡಿ ಮಾಡಿ ಮಿಶ್ರ ಮಾಡಿ ಕೊಡುತ್ತೇವೆ. ಹುರುಳಿ ಸ್ವಲ್ಪ ಜಾಸ್ತಿ ಹಾಕುತ್ತೇವೆ. ಕೆಲವೊಮ್ಮೆ ಗಂಜಿಗೆ ಹಸಿ ತೆಂಗಿನಕಾಯಿ ಒಟ್ಟು ಮಾಡಿ ಕೊಡುತ್ತೇವೆ. ಈ ಸಮಯದಲ್ಲಿ ಹಸಿ ಹುಲ್ಲು ಹಾಕುತ್ತೇವೆ. ಆಗಸ್ಟ್‌ನಲ್ಲಿ ಮತ್ತೆ ಆಹಾರ ಪದ್ಧತಿ ಬದಲಾಗುತ್ತದೆ ಎಂದರು. ಮಾಸಿಕ ರೂ. 9 ಸಾವಿರ: ಒಂದು ಕೋಣಕ್ಕೆ ದಿನಕ್ಕೆ 60 ರೂಪಾಯಿಯ ಹುರುಳಿ, ತೆಂಗಿನಕಾಯಿ ತಿನ್ನಿಸಬೇಕು. ಅದರ ಕೆಲಸಕ್ಕೆಂದೇ ಪ್ರತ್ಯೇಕವಾಗಿ ಒಬ್ಬ ಆಳು ಬೇಕು. ಒಂದು ಜೋಡಿ ಕೋಣಕ್ಕೆ ಆಹಾರಕ್ಕೆ ತಿಂಗಳಿಗೆ ಕನಿಷ್ಠ ರೂ. 9 ಸಾವಿರ ಮೀಸಲಿಡಬೇಕು.ಹೆಚ್ಚಾಗಿ ಕಂಬಳ ಶನಿವಾರ, ಭಾನುವಾರ ನಡೆಯುತ್ತದೆ. ಕಂಬಳದ ದಿನ ಕೋಣದ ಜತೆ 15 ಆಳು ಬೇಕು. ಒಂದು ರಾತ್ರಿ ಹಾಗೂ ಎರಡು ಹಗಲು ಕೆಲಸಕ್ಕೆ ಒಬ್ಬನಿಗೆ ಕಡಿಮೆ ಎಂದರೂ ರೂ. 600 ಕೊಡಬೇಕು. ಎರಡು ದಿನಕ್ಕೆ ಟೆಂಪೋ ಬಾಡಿಗೆ ರೂ. 2 ಸಾವಿರ. ಮತ್ತೆ ಕಂಬಳದ ಸಮಯದಲ್ಲಿ ಇತರೆ ಖರ್ಚು.ಕಂಬಳ ಮುಗಿದ ಬಳಿಕ ಸೋಮವಾರ ಮತ್ತು ಮಂಗಳವಾರ ಕೋಣಗಳಿಗೆ ರಜಾ ದಿನ. ಬುಧವಾರ ಕೋಣಗಳಿಗೆ ಹುಡಿ ಗದ್ದೆಯಲ್ಲಿ ಸುಮಾರು ಅರ್ಧ ತಾಸು ‘ವ್ಯಾಯಾಮ’ ಮಾಡಿಸಲಾಗುತ್ತದೆ! ಆಗ ಅವುಗಳ ನಿರ್ವಹಣೆಗೆ ಮೂವರು ಬೇಕು ಎಂದು ಮಾಹಿತಿ ನೀಡಿದರು ವೇಣೂರಿನ ಗೋಪಿನಾಥ.ಕಂಬಳದ ಕೋಣ ಉಳುಮೆಗೆ ಕಡಿಮೆ! ಕಂಬಳದ ಕೋಣಗಳನ್ನು ಉಳುಮೆಗೆ ಬಳಸುವವರು ಕಡಿಮೆ. ಮಳೆಗಾಲದಲ್ಲಿ ಉಳುಮೆ ಮಾಡುವಾಗ ಕೋಣ ಕೆಸರು ಕಂಡು ‘ತುಂಟಾಟಿಕೆ’ ಮಾಡಿದರೆ ಎಂಬ ಭಯ ಇದಕ್ಕೆ ಒಂದು ಕಾರಣ. ಕೃಷಿ ಕೆಲಸ ಆದ ಮೇಲೆ ನವೆಂಬರ್‌ನಲ್ಲಿ 15ದಿನ 2 ಗಂಟೆ ಕಾಲ ಉಳುಮೆ ಮಾಡಲಾಗುತ್ತದೆ. ಇದರಿಂದ ಬೊಜ್ಜು ಕರಗುತ್ತದೆ ಎನ್ನುತ್ತಾರೆ ಅವರು.ಚಿನ್ನದ ಕೋಣಕ್ಕೆ ಭಾರಿ ಡಿಮ್ಯಾಂಡ್

ಕಂಬಳದಲ್ಲಿ ಚಿನ್ನ ಗೆದ್ದ ಕೋಣಕ್ಕೆ ಭಾರಿ ಡಿಮ್ಯಾಂಡ್. ಸಾಮಾನ್ಯವಾಗಿ ಪೈರಿನಲ್ಲಿ ಒಂದು ಕೋಣಕ್ಕೆ ರೂ. 15,000-20,000 ತನಕ ಬೆಲೆ ಇರುತ್ತದೆ. ಕಂಬಳದಲ್ಲಿ ಒಂದೆರಡು ಪದಕ ಗೆದ್ದ ತಕ್ಷಣ ಆ ಕೋಣದ ಬೆಲೆ ರೂ 50 ಸಾವಿರದಿಂದ 1.5 ಲಕ್ಷ ತನಕ ಏರಿ ಬಿಡುತ್ತದೆ. ಕೆಲವರು ‘ಪ್ರತಿಷ್ಠೆ’ ಪ್ರಶ್ನೆಯೆಂದು ಜಾಸ್ತಿ ಬೆಲೆಗೆ ಕೊಂಡು ಕೊಳ್ಳುತ್ತಾರೆ. ಒಂದು ಬಾರಿ ಪದಕ ಗೆದ್ದ ಕೋಣ ಮತ್ತೆ ಚಿನ್ನ ಗೆಲ್ಲಬೇಕೆಂದೇನು ಇಲ್ಲ. ಅದರ ಜೋಡಿ ಹಾಗೂ ಓಡಿಸುವವನು ಹೊಂದಾಣಿಕೆಯಾಗಬೇಕು. ಪದಕ ಗೆಲ್ಲುವುದು ಅದೃಷ್ಟ ಎನ್ನುತ್ತಾರೆ ಕೋಣದ ಮಾಲೀಕರೊಬ್ಬರು.ಕೋಣ ಓಡಿಸುವವನಿಗೆ 1.5 ಲಕ್ಷ!

ಕಂಬಳದಲ್ಲಿ ಕೋಣ ಓಡಿಸುವವನ ಪಾತ್ರ ಮಹತ್ವದ್ದು. ಆತನ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕೋಣ ಓಡಿಸುವ ತಜ್ಞರ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಡಿಕೆ ಹೆಚ್ಚಲು ಕಾರಣ ಎನ್ನುತ್ತಾರೆ ಕೋಣದ ಮಾಲೀಕರು.ಕರಾವಳಿಯಲ್ಲಿ ವರ್ಷಕ್ಕೆ 16-17 ಕಂಬಳ ನಡೆಯುತ್ತದೆ. ಕೋಣಗಳು ಸಜ್ಜಾಗಲು ಕಂಬಳದಲ್ಲಿ ಭಾಗವಹಿಸುವ ಮುನ್ನ 5-6 ಟ್ರಯಲ್ಸ್ ನಡೆಸಲಾಗುತ್ತದೆ. ಮಾಲೀಕರು ಕೋಣ ಓಡಿಸುವವನನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆಯುತ್ತಾರೆ. ಜೂನಿಯರ್ ವಿಭಾಗದಲ್ಲಿ ಕೋಣ ಓಡಿಸುವವನಿಗೆ ವರ್ಷಕ್ಕೆ ರೂ. 30,000ರಿಂದ 75,000 ವೇತನ ನೀಡಲಾಗುತ್ತದೆ. ಜತೆಗೆ ಆತನಿಗೆ ಕಂಬಳದ ದಿನ ಭತ್ಯೆಯಾಗಿ ರೂ. 1,000ದಿಂದ 1.500.ಸೀನಿಯರ್ ವಿಭಾಗದಲ್ಲಿ ಕೋಣ ಓಡಿಸುವವನಿಗೆ ವರ್ಷಕ್ಕೆ ರೂ. 50,000ದಿಂದ 1.5 ಲಕ್ಷ ತನಕ ವೇತನ ನೀಡಲಾಗುತ್ತದೆ. ಆತನಿಗೆ ಒಂದು ಕಂಬಳಕ್ಕೆ ಭತ್ಯೆಯಾಗಿ ರೂ. 2 ಸಾವಿರ ಭತ್ಯೆ ನೀಡಲಾಗುತ್ತದೆ. ಆತನ ‘ಕೋಣ ನಿರ್ವಹಣೆ ಕ್ಷಮತೆ’ ಮೇಲೆ ಆತನ ಬೆಲೆ ಏರುತ್ತಾ ಹೋಗುತ್ತದೆ. ಮೊದಲೆಲ್ಲಾ ಊರಲ್ಲಿ ಗುತ್ತಿನ ಮನೆಗಳು, ಪ್ರತಿಷ್ಠೆಯ ಕಾರಣದಿಂದ ಧನಿಗಳ ಕೋಣಗಳು ಕಂಬಳಕ್ಕೆ ಹೋಗುತ್ತವೆ ಎಂಬ ಕಾರಣಕ್ಕಾಗಿ ಒಕ್ಕಲಿನವರು ಉಚಿತವಾಗಿ ಕೆಲಸಕ್ಕೆ ಬರುತ್ತಿದ್ದರು. ಈಗ ಅಂತಹ ಮಂದಿ ಶೇ 10 ಮಾತ್ರ. ಈಗ ದುಡ್ಡು ಕೊಟ್ಟರೆ ಮಾತ್ರ ಬರುತ್ತಾರೆ ಎಂದು ತಿಳಿಸುತ್ತಾರೆ ಕೋಣದ ಮಾಲೀಕರೊಬ್ಬರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry