ಒಂದು ನೇಣಿನ ಪ್ರಸಂಗ

7

ಒಂದು ನೇಣಿನ ಪ್ರಸಂಗ

Published:
Updated:
ಒಂದು ನೇಣಿನ ಪ್ರಸಂಗ

ಪ್ರಬಂಧ

ಅಂದು ಬುರ್ಮಾದಲ್ಲಿ ಮಳೆಯಿಂದ ಪೂರ್ತಿ ತೋಯ್ದ ಮುಂಜಾವು. ತೀಕ್ಷ್ಣ ಬೆಳಕು ಹಳದಿ ತಗಡಿನಂತೆ ಸೆರೆಮನೆಯ ಎತ್ತರದ ಗೋಡೆಯ ಮೇಲಿಂದ ಅಂಗಳಕ್ಕೆ ಬಾಗಿತ್ತು. ಸಣ್ಣ ಪ್ರಾಣಿಯ ಪಂಜರಗಳ ಹಾಗಿದ್ದ, ಮುಂಭಾಗದಲ್ಲಿ ಜೋಡಿ ಸರಳುಗಳಿದ್ದ, ಶಿಕ್ಷೆಗೊಳಗಾದವರ ಬಂದೀಖಾನೆಗಳ ಸಾಲಿನ ಎದುರು ನಾವು ಕಾಯುತ್ತಿದ್ದೆವು.

 

ಪ್ರತಿ ಬಂದೀಖಾನೆಯು ಸುಮಾರು ಹತ್ತು ಅಡಿ ಅಗಲ ಮತ್ತು ಉದ್ದವಿದ್ದು, ಒಂದು ಮಂಚದ ಹಲಗೆ ಮತ್ತು ಕುಡಿಯುವ ನೀರಿನ ಮಡಕೆಯನ್ನು ಹೊರತುಪಡಿಸಿ ಒಳಗೆ ಮಿಕ್ಕೆಲ್ಲ ಖಾಲಿಯಿತ್ತು. ಕೆಲವು ಖಾನೆಯ ಒಳಗೆ, ಸರಳುಗಳ ಬಳಿ, ಕಂದು ಬಣ್ಣದ ಗಂಡಸರು ಹೊದಿಕೆಗಳನ್ನು ಹೊದ್ದು, ಮೌನವಾಗಿ ಕುಳಿತಿದ್ದರು. ಇವರೆಲ್ಲ ಶಿಕ್ಷೆಗೊಳಗಾದವರು, ಒಂದೆರಡು ವಾರಗಳೊಳಗೆ ನೇಣುಗಂಬ ಏರುವವರು.ಒಬ್ಬ ಕೈದಿಯನ್ನು ಬಂದೀಖಾನೆಯ ಹೊರ ತರಲಾಗಿತ್ತು. ಆತ ಒಬ್ಬ ಹಿಂದೂ. ಬೋಳಿಸಿದ ತಲೆಯ, ಅಸ್ಪಷ್ಟ ತಿಳಿಗಣ್ಣುಗಳ ಮನುಷ್ಯ. ಆತನ ಬೆಳೆಯುತ್ತಿದ್ದ ದಪ್ಪ ಮೀಸೆ, ಆ ದೇಹಕ್ಕೆ ಬಲು ದೊಡ್ಡದಾಗಿ, ಅಸಂಗತವಾಗಿದ್ದು, ಸಿನಿಮಾದ ಹಾಸ್ಯನಟನ ಮೀಸೆಯಂತಿತ್ತು. ಆರು ಜನ ಎತ್ತರದ ಭಾರತೀಯ ಜೈಲು ಸಿಬ್ಬಂದಿ ಆತನನ್ನು ಕಾಯುತ್ತಲೂ ನೇಣುಗಂಬಕ್ಕೆ ತಯಾರಿ ಮಾಡುತ್ತಲೂ ಇದ್ದರು.

 

ಅವರಲ್ಲಿಬ್ಬರು ಕೋವಿ ಮತ್ತು ಕತ್ತಿ ಹಿಡಿದು ಆತನ ಪಕ್ಕದಲ್ಲಿ ನಿಂತು, ಮಿಕ್ಕವರು ಆತನಿಗೆ ಕೋಳ ತೊಡಿಸಿ, ಅದರ ಮೂಲಕ ಸರಪಳಿ ತೂರಿಸಿ ಅದನ್ನು ತಮ್ಮ ಸೊಂಟಪಟ್ಟಿಗೆ ಬಿಗಿದು, ಆತನ ತೋಳುಗಳನ್ನು ಬಿಗಿಯಾಗಿ ಪಕ್ಕಕ್ಕೆ ಹಿಡಿದಿಟ್ಟರು.ಅವರೆಲ್ಲ ಆತನಿಗೆ ಬಹು ಹತ್ತಿರವಾಗಿ ಗುಂಪು ಕೂಡಿ, ಆತನ ಅಲ್ಲಿಯ ಇರುವನ್ನು ಖಚಿತಪಡಿಸಲೆಂಬಂತೆ ಜಾಗರೂಕತೆಯಿಂದ ಆತನನ್ನು ಹಿಡಿದಿದ್ದರು. ಅದು ಯಾವ ಕ್ಷಣಕ್ಕಾದರೂ ನೀರಿಗೆ ಹಾರುವ, ಇನ್ನೂ ಬದುಕಿರುವ ಮೀನನ್ನು ಹಿಡಿದಿಟ್ಟಂತೆ ಇತ್ತು. ಆದರೆ ಆತ ಯಾವ ವಿರೋಧವನ್ನೂ ತೋರದೆ, ಸರಪಳಿಗೆ ನಿರ್ಬಲ ತೋಳೊಡ್ಡಿ, ಅಲ್ಲಿ ನಡೆಯುತ್ತಿರುವುದರ ಪರಿವೆಯೇ ಇಲ್ಲದವನಂತಿದ್ದ. ಎಂಟು ಗಂಟೆ ಹೊಡೆಯಿತು. ಆರ್ದ್ರ ಗಾಳಿಯಲ್ಲಿ ಕ್ಷೀಣವಾದ ಕಹಳೆಯ ಸದ್ದು ದೂರದ ಸೇನಾಪಾಳ್ಯದಿಂದ ತೇಲಿ ಬಂತು. ನಮ್ಮೆಲ್ಲರಿಂದ ಬೇರೆ ನಿಂತು ಯಾವುದೋ ಯೋಚನೆಯಲ್ಲಿ ತನ್ನ ಕೋಲಿನಿಂದ ಜಲ್ಲಿಕಲ್ಲನ್ನು ಮೆಲ್ಲನೆ ಕುಟ್ಟುತ್ತಿದ್ದ ಜೈಲಿನ ಮೇಲ್ವಿಚಾರಕ ಆ ಸದ್ದಿಗೆ ತನ್ನ ತಲೆಯೆತ್ತಿದ. ಆತ ಸೇನೆಯಲ್ಲಿ ವೈದ್ಯನಾಗಿದ್ದವನು. ದಪ್ಪ ಬಿಳಿ ಮೀಸೆಯ ಸಿಡುಕು ಧ್ವನಿಯವನು. `ಫಾರ್ ಗಾಡ್ಸ್ ಸೇಕ್ ಬೇಗ ಮಾಡು ಫ್ರಾನ್ಸಿಸ್~ ಎಂದು ಸಿಡುಕಿದನು. `ಇಷ್ಟು ಹೊತ್ತಿಗೆ ಈತ ಸತ್ತಿರಬೇಕಿತ್ತು. ನೀನು ಇನ್ನೂ ತಯಾರಿಲ್ಲವೆ?~ಜೈಲಿನ ಮೇಲಧಿಕಾರಿ ಫ್ರಾನ್ಸಿಸ್, ದ್ರಾವಿಡ ಮೂಲದ ದಢೂತಿ ವ್ಯಕ್ತಿ. ಬಿಳಿ ಕವಾಯಿತಿನ ಉಡುಪು, ಚಿನ್ನದ ಕಟ್ಟಿನ ಕನ್ನಡಕ ಧರಿಸಿದ್ದವ ತನ್ನ ಕಪ್ಪು ಕೈ ಬೀಸಿದ. `ಹೌದು ಸರ್, ಹೌದು ಸರ್~, ತೊದಲಿದ. `ಎಲ್ಲಾ ಸರಿಯಾಗಿ ತಯಾರಿದೆ. ಹ್ಯಾಂಗ್ಮನ್ (ವಧಾಕಾರ) ಕಾಯುತ್ತಿದ್ದಾನೆ. ನಾವು ಹೊರಡೋಣ~.`ಸರಿ, ಹಾಗಾದರೆ ಬೇಗ ನಡೆಯಿರಿ. ಈ ಕೆಲಸ ಮುಗಿಯುವವರೆಗೂ ಕೈದಿಗಳಿಗೆ ಉಪಾಹಾರ ಸಿಗುವುದಿಲ್ಲ~. ನಾವು ನೇಣುಗಂಬದ ಕಡೆಗೆ ಹೊರಟೆವು. ಇಬ್ಬರು ಸಿಬ್ಬಂದಿಗಳು ತಮ್ಮ ಕೋವಿಯನ್ನು ಪಕ್ಕಕ್ಕೆ ವಾಲಿಸಿ ಹಿಡಿದು ಕೈದಿಯ ಎರಡೂ ಕಡೆ ಹೆಜ್ಜೆ ಹಾಕಿದರು. ಮತ್ತಿಬ್ಬರು ಆತನ ತೋಳು ಮತ್ತು ಭುಜ ಬಲವಾಗಿ ಒಂದೇ ಹಿಡಿತದಲ್ಲಿ ಆತನನ್ನು ನೂಕುವಂತೆ ಹಾಗೂ ಆಸರೆಯಂತೆ ಹಿಡಿದು ಅವನಿಗೆ ಬಹು ಹತ್ತಿರವಾಗಿ ನಡೆದರು. ಮಿಕ್ಕ ನಾವು ಮತ್ತು ನ್ಯಾಯಾಧೀಶರು ಹಿಂಬಾಲಿಸಿದೆವು.

 

ನಾವು ಹತ್ತು ಗಜ ಹೋಗಿದ್ದಾಗ, ಇದ್ದಕ್ಕಿದ್ದಂತೆ ಯಾವುದೇ ಆದೇಶ ಅಥವಾ ಎಚ್ಚರಿಕೆ ಇಲ್ಲದೆ ನಮ್ಮ ಮೆರವಣಿಗೆ ಹಠಾತ್ತನೆ ನಿಂತಿತು. ಒಂದು ಭಯಾನಕ ಸಂಗತಿ ಘಟಿಸಿತ್ತು. ಒಂದು ನಾಯಿ ಎಲ್ಲಿಂದಲೋ ಬಂದು ಅಂಗಳದಲ್ಲಿ ಅವತರಿಸಿತ್ತು. ಅದು ಎಗರಾಡುತ್ತ ನಮ್ಮ ನಡುವೆ ಬಂದು, ಜೋರಾಗಿ ಒಂದೇ ಸಮನೇ ಬೊಗಳುತ್ತಾ ತನ್ನ ಇಡೀ ದೇಹವನ್ನು ಅಲ್ಲಾಡಿಸುತ್ತಾ ಅಷ್ಟೊಂದು ಮನುಷ್ಯರನ್ನು ನೋಡಿದ ಘೋರ ಸಂತೋಷದಿಂದ ನಮ್ಮ ಹಿಂದೆ ಮುಂದೆ ಸುತ್ತತೊಡಗಿತು.ಅದೊಂದು ದೊಡ್ಡದಾದ, ತುಂಬಾ ಕೂದಲಿದ್ದ, ಅರ್ಧ ಐರೆಡೇಲ್ ಹಾಗು ಅರ್ಧ ಬೀದಿ ನಾಯಿ. ಒಂದು ಘಳಿಗೆ ಅದು ನಮ್ಮೆಲ್ಲರ ಸುತ್ತ ಎಗರಾಡಿ, ನಂತರ, ಯಾರಾದರೂ ಅದನ್ನು ನಿಲ್ಲಿಸುವ ಮೊದಲೇ ಕೈದಿಯೆಡೆಗೆ ಚಿಮ್ಮಿ ಆತನ ಮುಖವನ್ನು ನೆಕ್ಕಲು ಹವಣಿಸಿ ಕುಣಿಯತೊಡಗಿತು. ಎಲ್ಲರೂ ಗಾಬರಿಗೊಂಡು ನಾಯಿಯನ್ನು ಹಿಡಿಯಲೂ ತೋಚದೆ ನಿಂತೆವು.`ಯಾರು ಈ ಮೃಗವನ್ನು ಇಲ್ಲಿ ಬಿಟ್ಟಿದ್ದು?~ ಜೈಲಿನ ಮೇಲ್ವಿಚಾರಕ ಕೋಪದಿಂದ ಹೇಳಿದ. `ಯಾರಾದರೂ ಹಿಡಿಯಿರಿ ಅದನ್ನು!~.ಒಬ್ಬ ಸಿಬ್ಬಂದಿ, ಕಾವಲು ಬಿಟ್ಟು ನಾಯಿಯೆಡೆಗೆ ಅಡ್ಡಾದಿಡ್ಡಿಯಾಗಿ ಗಡಬಡಿಸಿ ಧಾವಿಸಿದ. ಆದರೆ ಅದು ಕುಣಿಯುತ್ತ ಅವನ ಹಿಡಿತದಿಂದ ನುಸುಳಿ ಅದೊಂದು ಆಟದಂತೆ ಆಡತೊಡಗಿತು. ಒಬ್ಬ ಯುರೇಷಿಯಾದ ಯುವ ಸೆರೆಮನೆ ಅಧಿಕಾರಿ ಒಂದು ಹಿಡಿ ಜಲ್ಲಿಕಲ್ಲನ್ನು ಎತ್ತಿ ನಾಯಿಗೆ ಬೀಸಿ ಓಡಿಸಲು ಪ್ರಯತ್ನಿಸಿದ.ಆದರೆ ಅದು ಕಲ್ಲೇಟನ್ನು ತಪ್ಪಿಸಿಕೊಂಡು ಮತ್ತೆ ನಮ್ಮ ಮೇಲೆ ಬಂದಿತು. ಅದರ ಕಿರಿಚಾಟ ಜೈಲಿನ ಗೋಡೆಗಳಿಂದ ಪ್ರತಿಧ್ವನಿಸಿತು. ಇಬ್ಬರು ಸಿಬ್ಬಂದಿಗಳ ಹಿಡಿತದಲ್ಲಿದ್ದ ಕೈದಿ, ನಿರುತ್ಸಾಹದಿಂದ ಇದೂ ಒಂದು ಗಲ್ಲಿಗೇರಿಸುವ ಮುಂಚಿನ ಕ್ರಮವೇನೋ ಎಂಬಂತೆ ನೋಡುತ್ತಿದ್ದ. ನಾಯಿಯನ್ನು ಹಿಡಿಯಲು ಕೆಲವು ಕ್ಷಣಗಳೇ ಆದುವು. ನಂತರ ನನ್ನ ಕರವಸ್ತ್ರವನ್ನು ಅದರ ಕೊರಳ ಪಟ್ಟಿಗೆ ಹಾಕಿ, ಅದು ಇನ್ನೂ ಕಿರಿಚಾಡಿ, ಎಳೆದಾಡುತ್ತಿರುವಂತೆ ನಾವು ಮತ್ತೆ ಮುಂದುವರೆದೆವು. ನೇಣುಗಂಬ ಸುಮಾರು ನಲವತ್ತು ಗಜಗಳಷ್ಟು ದೂರವಿತ್ತು. ನನ್ನ ಮುಂದೆ ನಡೆಯುತ್ತಿದ್ದ ಕೈದಿಯ ಕಂದು ಬಣ್ಣದ ಬೆತ್ತಲೆ ಬೆನ್ನನ್ನು ಗಮನಿಸಿದೆ. ಆತ ಹಿಡಿದಿಟ್ಟ ತೋಳಿನೊಂದಿಗೆ ಅಡ್ಡಾದಿಡ್ಡಿಯಾಗಿ ಆದರೆ ಕೊಂಚ ದೃಢವಾಗಿಯೇ ಹೆಜ್ಜೆ ಹಾಕುತ್ತಾ, ಮಂಡಿಯನ್ನು ಯಾವತ್ತೂ ನೆಟ್ಟಗೆ ಮಾಡದ ಕೆಲ ಭಾರತೀಯರಂತೆ ತಗ್ಗಿದ ನಡಿಗೆಯಲ್ಲಿದ್ದನು. ಆತನ ಪ್ರತೀ ಹೆಜ್ಜೆಗೆ ಸ್ನಾಯುಗಳು ಸ್ವಸ್ಥಾನ ಸೇರುತ್ತಿದ್ದವು.

 

ತಲೆಯ ಮೇಲಿನ ಕೂದಲ ಗುಚ್ಛ ಮೇಲೆ, ಕೆಳಗೆ ಕುಣಿಯುತಿತ್ತು. ಪಾದಗಳು ಒದ್ದೆ ನೆಲದ ಮೇಲೆ ತಮ್ಮ ಗುರುತೊತ್ತುತ್ತಿದ್ದವು. ಆಗ ಒಮ್ಮೆ, ಸಿಬ್ಬಂದಿಗಳು ಎರಡೂ ಭುಜ ಹಿಡಿದಿದ್ದರೂ, ಮಾರ್ಗದ ಒಂದು ಕೊಚ್ಚೆ ಗುಂಡಿ ತಪ್ಪಿಸಲು ಸ್ವಲ್ಪ ಪಕ್ಕಕ್ಕೆ ಹೆಜ್ಜೆ ಹಾಕಿದನು.ಇದು ಕುತೂಹಲಕಾರಿಯಾಗಿದ್ದರೂ, ಆ ಕ್ಷಣದ ತನಕ, ಒಬ್ಬ ಆರೋಗ್ಯಪೂರ್ಣ, ಪ್ರಜ್ಞಾಪೂರ್ವಕ ವ್ಯಕ್ತಿಯನ್ನು ನಾಶ ಮಾಡುವುದೆಂದೀನೆಂದು ನನ್ನ ಪ್ರಜ್ಞೆಗೆ ಬಂದಿರಲಿಲ್ಲ. ನಾನು ಆ ಕೈದಿಯು ಕೊಚ್ಚೆಗುಂಡಿ ತಪ್ಪಿಸಲು ಪಕ್ಕಕ್ಕೆ ಹೆಜ್ಜೆ ಹಾಕಿದ್ದನ್ನು ಕಂಡಾಗ ನನಗೆ ಒಂದು ಬದುಕುತ್ತಿರುವ ಜೀವವನ್ನು ಕೊನೆಗಾಣಿಸುವುದರ ರಹಸ್ಯ, ಅನಿರ್ವಚನೀಯ ಪ್ರಮಾದ ಗೋಚರಿಸಿತು. ಈ ಮನುಷ್ಯನ ಜೀವ ಸ್ವಾಭಾವಿಕವಾಗಿ ಸಾಯುತ್ತಿರಲಿಲ್ಲ.ನಾವೆಲ್ಲರೂ ಬದುಕಿದ್ದಂತೆ ಈ ಮನುಷ್ಯನೂ ಬದುಕಿದ್ದ. ಅವನ ದೇಹದ ಎಲ್ಲಾ ಅಂಗಾಂಗಗಳೂ ಯಾವುದರ ಪರಿವೆಯೂ ಇಲ್ಲದೆ ಗಂಭೀರವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದವು- ಕರುಳು ಆಹಾರ ಜೀರ್ಣಿಸುತ್ತಿತ್ತು, ಗಾಯವಾದಾಗ ಹೊಸ ಚರ್ಮ ಬೆಳೆಯುತ್ತಿತ್ತು, ಉಗುರುಗಳು ಬೆಳೆಯುತ್ತಿದ್ದವು, ಅಂಗಾಂಶಗಳು ಮೊಳೆಯುತ್ತಿದ್ದವು. ಅವನು ನೇಣುಗಂಬದ ಮೇಲೆ ನಿಂತಾಗಲೂ, ಗಾಳಿಯಲ್ಲಿ ಜಾರುವಾಗಲೂ, ಸಾವಿನ ಕೊನೆ ಕ್ಷಣದಲ್ಲೂ ಅವನ ಉಗುರುಗಳು ಇನ್ನೂ ಬೆಳೆಯುತ್ತಿರುತ್ತವೆ.ಅವನ ಕಣ್ಣುಗಳು ಜಲ್ಲಿಕಲ್ಲನ್ನೂ ಬಿಳಿ ಗೋಡೆಗಳನ್ನೂ ನೋಡುತ್ತಿವೆ, ಅವನ ಮೆದುಳು ಇನ್ನೂ ನೆನಪಿಡುತ್ತದೆ, ಮುನ್ನೋಡುತ್ತದೆ, ವಿಶ್ಲೇಷಿಸುತ್ತದೆ- ಕೊಚ್ಚೆಗುಂಡಿಯ ಬಗ್ಗೆಯೂ ವಿಶ್ಲೇಷಿಸುತ್ತದೆ. ಅವನು ಮತ್ತು ನಾವೆಲ್ಲರೂ ಒಂದು ತಂಡವಾಗಿ ಒಟ್ಟಿಗೆ ನಡೆಯುತ್ತಿದ್ದೆವು, ನೋಡುತ್ತಿದ್ದೆವು, ಕೇಳುತ್ತಿದ್ದೆವು, ಅನುಭವಿಸುತ್ತಿದ್ದೆವು, ಒಂದೇ ಪ್ರಪಂಚವನ್ನು ಅರ್ಥೈಸಿಕೊಳ್ಳುತ್ತಿದ್ದೆವು. ಇನ್ನೆರಡು ನಿಮಿಷಗಳಲ್ಲಿ, ಒಂದು ಚಿಟಿಕೆಯಲ್ಲಿ, ನಮ್ಮಲ್ಲೊಬ್ಬ ಇನ್ನಿರುವುದಿಲ್ಲ- ಒಂದು ಮನಸ್ಸು ಕಡಿಮೆ, ಒಂದು ಜಗತ್ತು ಕಡಿಮೆ. ನೇಣುಗಂಬವು ಸೆರೆಮನೆಯ ಮುಖ್ಯ ಮೈದಾನದಿಂದ ಬೇರೆಯಾಗಿ, ಎತ್ತರವಾದ ಗಿಡಗಂಟೆಗಳಿದ್ದ ಸಣ್ಣ ಅಂಗಳದಲ್ಲಿತ್ತು. ಕೊಠಡಿಯ ಮೂರು ಗೋಡೆಗಳಂತೆ ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಮೇಲೆ ಒಂದು ಹಲಗೆ, ಅದರ ಮೇಲೆ ಎರಡು ತೊಲೆ, ಅಡ್ಡಪಟ್ಟಿಯ ಮೇಲೆ ನೇತಾಡುವ ಹಗ್ಗ. ವಧಕಾರ, ಬಿಳಿ ಕೂದಲಿನ, ಜೈಲಿನ ಬಿಳಿ ಸಮವಸ್ತ್ರ ಧರಿಸಿದ ಮತ್ತೊಬ್ಬ ಅಪರಾಧಿ, ತನ್ನ ಯಂತ್ರದ ಪಕ್ಕದಲ್ಲಿ ಕಾಯುತ್ತಿದ್ದ.ನಾವು ಅಲ್ಲಿ ತಲುಪಿದಾಗ ಗುಲಾಮನಂತೆ ಬಗ್ಗಿ ನಮಗೆ ವಂದಿಸಿದ. ಫ್ರಾನ್ಸಿಸನ ಹೇಳಿಕೆಯ ಮೇರೆಗೆ ಕೈದಿಯನ್ನು ಹಿಡಿದಿದ್ದ ಇಬ್ಬರು ಸಿಬ್ಬಂದಿಗಳು ಅವನನ್ನು ಹಿಂದಿಗಿಂತಲೂ ಬಿಗಿಯಾಗಿ ಹಿಡಿದು, ಅರ್ಧ ಮುನ್ನೆಡೆಸಿ, ಅರ್ಧ ತಳ್ಳಿ, ಅಡ್ಡಾದಿಡ್ಡಿಯಾಗಿ ಏಣಿಯ ಮೇಲೆ ತಲುಪಿಸಿದರು. ನಂತರ ವಧಕಾರ ಮೇಲೆ ಹತ್ತಿ ಹಗ್ಗವನ್ನು ಕೈದಿಯ ಕೊರಳಿನ ಸುತ್ತ ಸಿಗಿಸಿದ.ನಾವು ಐದು ಗಜ ದೂರದಲ್ಲಿ ಕಾಯುತ್ತ ನಿಂತೆವು. ಸಿಬ್ಬಂದಿಗಳು ನೇಣುಗಂಬದ ಸುತ್ತ ವರ್ತುಲಾಕಾರದಲ್ಲಿ ನಿಂತಿದ್ದರು. ಆಗ ಕೊರಳಿನ ಕುಣಿಕೆ ಸಿಗಿಸಿದಾಗ ಕೈದಿಯು ತನ್ನ ದೇವರನ್ನು ನೆನೆಯಲಾರಂಭಿಸಿದ. ಅದು ಉನ್ನತ ಸ್ವರದ `ರಾಮ್! ರಾಮ್! ರಾಮ್! ರಾಮ್!~ ಎಂಬ ಪುನರುಚ್ಚರಣೆಯಾಗಿತ್ತು, ಗಾಬರಿಯ, ಭಯದ, ಪ್ರಾರ್ಥನೆ ಅಥವಾ ಸಹಾಯದ ಕರೆಯಾಗಿರಲಿಲ್ಲ. ಆದರೆ ಸ್ಥಿರವಾಗಿ, ಲಯಬದ್ಧವಾಗಿ, ಗಂಟೆ ಬಾರಿಸಿದಂತಿತ್ತು. ನಾಯಿ ಆ ಶಬ್ದಕ್ಕೆ ಕುಯಿಗುಟ್ಟಿತು.

 

ಇನ್ನೂ ನೇಣುಗಂಬದ ಮೇಲೆ ನಿಂತಿದ್ದ ವಧಕಾರ ಹಿಟ್ಟಿನ ಚೀಲದಂತಿದ್ದ ಒಂದು ಸಣ್ಣ ಹತ್ತಿಯ ಚೀಲವನ್ನು ಕೈದಿಯ ಮುಖದ ಮೇಲೆ ಮುಚ್ಚಿದನು. ಆದರೂ, ಬಟ್ಟೆಯಿಂದ ಕ್ಷೀಣವಾದ `ರಾಮ್! ರಾಮ್! ರಾಮ್! ರಾಮ್!~ ಧ್ವನಿ ಮುಂದುವರೆಯಿತು.ವಧಕಾರ ಕೆಳಗಿಳಿದು ಮೀಟುಗೋಲು ಹಿಡಿದು ಸಿದ್ಧನಾದ. ನಿಮಿಷಗಳು ಕಳೆದಂತಾಯಿತು. ಕೈದಿಯ ಸ್ಥಿರವಾದ, ಕ್ಷೀಣವಾದ `ರಾಮ್! ರಾಮ್! ರಾಮ್! ರಾಮ್!~ ಕೂಗು ಒಂದು ಕ್ಷಣವೂ ಬಿಡದೆ ಮುಂದುವರೆದೇ ಇತ್ತು. ಜೈಲಿನ ಮೇಲ್ವಿಚಾರಕ ತನ್ನ ತಲೆಯನ್ನು ಎದೆಯ ಮೇಲೆ ಬಗ್ಗಿಸಿ ನಿಧಾನವಾಗಿ ತನ್ನ ಕೋಲಿನಿಂದ ನೆಲವನ್ನು ಮೆಲ್ಲನೆ ಕುಟ್ಟುತ್ತಿದ್ದ.ಬಹುಶಃ ಆತನಿಗೆ ಒಂದು ನಿಶ್ಚಿತ ಸಮಯದ ಅವಕಾಶ ಕೊಡಲು ಕೈದಿಯ ಕೂಗನ್ನು ಎಣಿಸುತ್ತಿದ್ದ - ಐವತ್ತು ಅಥವಾ ನೂರು. ಪ್ರತಿಯೊಬ್ಬರ ಮುಖದ ಬಣ್ಣವೂ ಬದಲಿಸಿತ್ತು. ಭಾರತೀಯರು ಕೆಟ್ಟ ಕಾಫಿಯಂತೆ ಬಿಳಿಚಿಕೊಂಡಿದ್ದರು. ಒಂದೆರಡು ಕೋವಿಯ ತುದಿಗಳು ನಡುಗುತ್ತಿದ್ದವು.ನಾವೆಲ್ಲರೂ ಕಟ್ಟಿಹಾಕಿದ್ದ, ಮುಸುಕು ಹಾಕಿದ್ದ, ಗಲ್ಲಿನ ಮೇಲಿದ್ದ ವ್ಯಕ್ತಿಯನ್ನು ನೋಡುತ್ತಾ ಆತನ ಕೂಗನ್ನು ಕೇಳುತ್ತಿದ್ದೆವು. ಪ್ರತೀ ಕೂಗು ಜೀವದ ಮತ್ತೊಂದು ಕ್ಷಣವಾಗಿತ್ತು. ನಮ್ಮೆಲ್ಲರ ಮನದಲ್ಲೂ ಒಂದೇ ಯೋಚನೆ: ಓಹ್, ಆತನನ್ನು ಬೇಗ ಕೊಲ್ಲಿ, ಈ ಕಾರ್ಯ ಬೇಗ ಮುಗಿಸಿ, ಆ ಅಸಹನೀಯ ಸದ್ದು ನಿಲ್ಲಿಸಿ!ಇದ್ದಕ್ಕಿದ್ದಂತೆ ಮೇಲ್ವಿಚಾರಕ ಗಟ್ಟಿ ನಿರ್ಧಾರ ಮಾಡಿದನು. ತಲೆಯನ್ನು ಮೇಲಕ್ಕೊಗೆಯುತ್ತ ತನ್ನ ಕೋಲಿನಿಂದ ತ್ವರಿತವಾದ ಸಂಜ್ಞೆ ಮಾಡಿದನು. `ಚಲೋ!~ ಬಹುಮಟ್ಟಿಗೆ ಉಗ್ರವಾಗಿ ಕೂಗಿದನು.  ಒಂದು ಜೋರಾದ ಸದ್ದು, ನಂತರ ಸ್ಮಶಾನ ಮೌನ. ಕೈದಿಯು ಅದೃಶ್ಯನಾಗಿದ್ದನು. ಹಗ್ಗ ತಾನಾಗೆ ತಿರುಗುತ್ತಿತ್ತು. ನಾನು ನಾಯಿಯನ್ನು ಬಿಟ್ಟೆನು. ಅದು ಕೂಡಲೇ ನೇಣುಗಂಬದ ಹಿಂಭಾಗಕ್ಕೆ ಓಡಿತು. ಆದರೆ ಅಲ್ಲಿ ತಲುಪಿದ ತಕ್ಷಣ ಹಠಾತ್ತನೆ ನಿಂತು ಬೊಗಳಿತು ಮತ್ತು ಅಂಗಳದ ಒಂದು ಮೂಲೆಗೆ ಪೊದೆಗಳ ಹಿಂದೆ ಸರಿದು ಗಾಬರಿಯಿಂದ ನಮ್ಮ ಕಡೆ ನೋಡತೊಡಗಿತು.

 

ನಾವು ಗಲ್ಲಿನ ಹಿಂಭಾಗಕ್ಕೆ ಕೈದಿಯ ದೇಹವನ್ನು ಪರೀಕ್ಷಿಸಲು ಹೋದೆವು. ಆತನ ಕಾಲ್ಬೆರಳುಗಳು ಪೂರ್ಣ ಕೆಳಮುಖವಾಗಿ ಆತ ಬಹಳ ನಿಧಾನವಾಗಿ ಸುತ್ತುತ್ತಾ ತೂಗಾಡುತ್ತಿದ್ದ, ಕಲ್ಲಿನಷ್ಟೇ ನಿರ್ಜೀವವಾಗಿ. ಮೇಲ್ವಿಚಾರಕ ತನ್ನ ಕೋಲಿನಿಂದ ಬರಿ ಮೈಯನ್ನು ತಿವಿದನು. ಅದು ಸ್ವಲ್ಪ ತೊಯ್ದೊಡಿತು. `ಹಿ ಇಸ್ ಆಲ್ರೈಟ್~ (ಇವ ಸರಿಯಾಗಿದ್ದಾನೆ)~ ಎಂದ ಮೇಲ್ವಿಚಾರಕ. ಆತ ನೇಣುಗಂಬದ ಕೆಳಗಿಂದ ಹಿಂದೆ ಸರಿದು ನೀಳ ನಿಟ್ಟುಸಿರು ಬಿಟ್ಟನು. ಆತನ ಮುಖದಿಂದ ಚಿಂತೆಯ ಲಕ್ಷಣಗಳು ಇದ್ದಕ್ಕಿದ್ದಂತೆ ಇಲ್ಲವಾಗಿದ್ದವು.ತನ್ನ ಕೈಗಡಿಯಾರ ನೋಡಿಕೊಂಡನು. `ಎಂಟು ಗಂಟೆ ಎಂಟು ನಿಮಿಷ. ಇಂದಿನ ಬೆಳಿಗ್ಗೆಗೆ ಇಷ್ಟೇ, ಸದ್ಯ~.ಸಿಬ್ಬಂದಿಗಳು ಕೋವಿಯನ್ನು ಕೆಳಗಿಳಿಸಿ ಹೊರಟರು. ನಾಯಿಯು ತಾನು ಅನುಚಿತವಾಗಿ ವರ್ತಿಸಿದರ ಅರಿವಾಗಿ ಗಂಭೀರವಾಗಿ ಅವರ ಹಿಂದೆ ಹೆಜ್ಜೆ ಹಾಕಿತು. ನಾವು ನೇಣುಗಂಬದ ಅಂಗಳದ ಹೊರ ನಡೆದೆವು. ಬಂದೀಖಾನೆಗಳ ದಾಟಿ ಸೆರೆಮನೆಯ ಮಧ್ಯದ ದೊಡ್ಡ ಅಂಗಳಕ್ಕೆ ಬಂದೆವು. ಲಾಠಿಗಳನ್ನು ಹಿಡಿದ ಸಿಬ್ಬಂದಿಗಳ ನೇತೃತ್ವದಲ್ಲಿ ಕೈದಿಗಳು ಆಗಲೇ ಉಪಾಹಾರ ಪಡೆಯುತ್ತಿದ್ದರು.

 

ಅವರೆಲ್ಲ ಉದ್ದವಾದ ಸಾಲಿನಲ್ಲಿ ಕುಳಿತು, ಅಲ್ಯೂಮಿನಿಯಂ ತಟ್ಟೆ ಹಿಡಿದಿದ್ದರು. ಇಬ್ಬರು ಸಿಬ್ಬಂದಿಗಳು ಬಕೆಟ್‌ನಿಂದ ಅನ್ನ ನೀಡುತ್ತಾ ನಡೆದಿದ್ದರು. ಗಲ್ಲಿನ ಪ್ರಸಂಗದ ನಂತರ, ಇದೊಂದು ಮನೆಯ ಸಂತೋಷಕರ ವಾತಾವರಣದಂತೆ ಕಾಣುತ್ತಿತ್ತು. ಆ ಕೆಲಸ ಮುಗಿದಿದ್ದರಿಂದ ನಮ್ಮೆಲ್ಲರಿಗೂ ಬಹು ದೊಡ್ಡ ನೆಮ್ಮದಿ ಉಂಟಾಗಿತ್ತು. ಹಾಡಬಯಸುವ, ಓಡಬಯಸುವ, ನಗೆದಾಡುವ ಕಾತುರವಿತ್ತು. ಎಲ್ಲರೂ ಒಟ್ಟಿಗೆ ಉಲ್ಲಾಸದಿಂದ ಹರಟಲು ಆರಂಭಿಸಿದರು.  ನನ್ನ ಪಕ್ಕದಲ್ಲೇ ನಡೆಯುತ್ತಿದ್ದ ಯುರೇಷಿಯಾದ ಯುವಕ ನಾವು ಬಂದ ದಾರಿಯ ಕಡೆ ತಲೆಯಾಡಿಸಿ, ತಿಳಿವಳಿಕೆಯ ಮುಗುಳ್ನಗೆಯೊಂದಿಗೆ `ನಿಮಗೆ ಗೊತ್ತಾ ಸರ್, ನಮ್ಮ ಗೆಳೆಯ (ಸತ್ತ ಮನುಷ್ಯನನ್ನು ಅರ್ಥೈಸುತ್ತ) ತನ್ನ ಮನವಿಯನ್ನು ತಳ್ಳಿಹಾಕಿದ್ದು ಕೇಳಿ ತನ್ನ ಬಂದೀಖಾನೆಯೊಳಗೆ ನೆಲದಮೇಲೆ ಭಯದಿಂದ ಮೂತ್ರ ಮಾಡಿಕೊಂಡ - ದಯವಿಟ್ಟು ಒಂದು ಸಿಗರೇಟ್ ತೆಗೆದುಕೊಳ್ಳಿ ಸರ್. ನನ್ನ ಹೊಸ ಬೆಳ್ಳಿಯ ಕೇಸ್ ನಿಮಗೆ ಇಷ್ಟವಾಗಲಿಲ್ಲವಾ ಸರ್? ಬಾಕ್ಸ್‌ವಾಲಾನಿಂದ, ಎರಡು ರೂಪಾಯಿ ಎಂಟು ಆಣೆ, ಕ್ಲಾಸಿ ಯುರೋಪಿಯನ್ ಶೈಲಿ~.   ಹಲವರು ನಕ್ಕರು. ಯಾತಕ್ಕಾಗಿ ಎಂದು ಯಾರಿಗೂ ತಿಳಿದಂತೆ ತೋರಲಿಲ್ಲ.   

ಫ್ರಾನ್ಸಿಸ್ ಮೇಲ್ವಿಚಾರಕನ ಜೊತೆಯಲ್ಲಿ ಬಹಳ ಉತ್ಸಾಹದಿಂದ ಮಾತನಾಡುತ್ತಾ ನಡೆಯುತ್ತಿದ್ದ. `ಸರ್, ಎಲ್ಲಾ ಅತ್ಯಂತ ತೃಪ್ತಿಕರವಾಗಿ ನಡೆಯಿತು. ಚಕ್ ಅಂತ ಎಲ್ಲಾ ಮುಗೀತು. ಯಾವಾಗಲೂ ಹೀಗೇ ಆಗಲ್ಲ. ಓಹ್, ನೋ! ಕೆಲವು ಬಾರಿ ವೈದ್ಯರು ಗಲ್ಲಿನ ಕೆಳಗೆ ಹೋಗಿ ಸಾವನ್ನು ಖಚಿತಪಡಿಸಲು ಕೈದಿಯ ಕಾಲುಗಳನ್ನು ಎಳೆದಿರುವ ಸಂದರ್ಭಗಳು ನನಗೆ ಗೊತ್ತು. ಹಾಗೆ ಆಗಬಾರದು!~   `ಎಳೆದಾಡೋದಾ? ಛೆ, ಅದು ಕೆಟ್ಟದ್ದು~ ಎಂದ ಮೇಲ್ವಿಚಾರಕ. 

`ಆಹ್! ಸರ್, ಅವರು ಮೊಂಡಾಟ ಮಾಡಿದರೆ ಅತೀ ಕಷ್ಟ! ನನಗೆ ನೆನಪಿದೆ ಸರ್, ನಾವು ಒಬ್ಬ ಮನುಷ್ಯನನ್ನು ಕರೆತರಲು ಹೋದಾಗ ಸೆರೆಮನೆಯ ಕಂಬಿಯನ್ನು ಬಿಗಿಯಾಗಿ ಹಿಡಿದುಬಿಟ್ಟಿದ್ದ. ನೀವು ಸುಲಭವಾಗಿ ನಂಬುವುದಿಲ್ಲ ಸರ್, ಅವನನ್ನು ಅಲ್ಲಿಂದ ಕದಲಿಸಲು ಆರು ಮಂದಿ ಸಿಬ್ಬಂದಿಗಳು ಬೇಕಾದರು.ಮೂರು ಮೂರು ಮಂದಿ ಒಂದೊಂದು ಕಾಲನ್ನು ಹಿಡಿದು ಜಗ್ಗಿದರು. ನಾವು ಅವನಿಗೆ ತಿಳಿಹೇಳಿದೆವು. `ನೋಡಯ್ಯ, ನಿನ್ನಿಂದ ನಮಗೆಲ್ಲ ಎಷ್ಟು ನೋವು ಹಾಗು ತೊಂದರೆ ಆಗುತ್ತಿದೆ, ಯೋಚಿಸು!~ ಆದರೆ ಇಲ್ಲ, ಅವನು ಕೇಳಲೇ ಇಲ್ಲ. ಆಹ್, ವಿಪರೀತ ತೊಂದರೆ ಕೊಟ್ಟ!~ನಾನು ಸ್ವಲ್ಪ ಜೋರಾಗಿಯೇ ನಗುತ್ತಿದ್ದರ ಅರಿವು ನನಗಾಯಿತು. ಅಲ್ಲಿದ್ದ ಪ್ರತಿಯೊಬ್ಬರೂ ನಗುತ್ತಿದ್ದರು. ಮೇಲ್ವಿಚಾರಕ ಕೂಡ ಒಂದು ರೀತಿಯ ತಾಳ್ಮೆಯಿಂದ ನಗುತ್ತ, `ನೀವೆಲ್ಲ ಹೊರ ಬಂದು ಒಂದು ಪಾನೀಯ ಕುಡಿದರೆ ಒಳ್ಳೆಯದೇನೋ~ ಎಂದು ಆತ್ಮೀಯವಾಗಿ ಹೇಳಿದನು. `ನನ್ನ ಕಾರಿನಲ್ಲಿ ಒಂದು ವಿಸ್ಕಿ ಬಾಟಲಿ ಇಟ್ಟಿದ್ದೇನೆ. ಅದು ನಮಗೆ ಬೇಕಾಗಬಹುದು~.ನಾವು ಸೆರೆಮನೆಯ ದೊಡ್ಡ ಜೋಡಿ ದ್ವಾರದ ಮೂಲಕ ಹಾದು ಹೊರಗಿನ ರಸ್ತೆಗೆ ಬಂದೆವು. `ಕಾಲನ್ನು ಹಿಡಿದು ಜಗ್ಗಿದರು!~- ಇದ್ದಕ್ಕಿದ್ದಂತೆ ಬರ್ಮೀಯ ನ್ಯಾಯಾಧೀಶ ಉದ್ಗರಿಸಿದ ಮತ್ತು ದೊಡ್ಡದಾಗಿ ಗಹಗಹಿಸಿದ.ನಾವೆಲ್ಲ ಮತ್ತೆ ನಗಲಾರಂಭಿಸಿದೆವು. ಆ ಕ್ಷಣದಲ್ಲಿ ಫ್ರಾನ್ಸಿಸ್ ಉಲ್ಲೇಖಿಸಿದ ಪ್ರಹಸನ ಅಸಾಧಾರಣ ತಮಾಷೆಯಾಗಿ ಕಾಣುತ್ತಿತ್ತು. ನಾವೆಲ್ಲ ಯುರೋಪಿಯನ್‌ಗಳು ಮತ್ತು ಸ್ಥಳೀಯರು ಬಹಳ ಸ್ನೇಹದಿಂದ ಒಟ್ಟಿಗೆ ಜೊತೆಯಾಗಿ ಪಾನೀಯ ಸೇವಿಸಿದೆವು. ಸತ್ತ ವ್ಯಕ್ತಿ ಒಂದು ನೂರು ಗಜಗಳಷ್ಟು ದೂರದಲ್ಲಿದ್ದ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry