ಬುಧವಾರ, ನವೆಂಬರ್ 20, 2019
26 °C

`ಒಂದು ಮತ ಲಕ್ಷ ಮತಕ್ಕೆ ಸಮ'

Published:
Updated:

ವಿಜಾಪುರ: `ನನ್ನ ಬಳಿ ಇರುವುದು ಕೇವಲ ರೂ.500 ನಗದು. ಇದನ್ನು ಹೊರತು ಪಡಿಸಿ ಯಾವುದೇ ಆಸ್ತಿ ಇಲ್ಲ' ಎಂದು ಈ ಅಭ್ಯರ್ಥಿ ಚುನಾವಣಾ ಅಧಿಕಾರಿಗಳಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.ಇವರ ಹೆಸರು ಮಲ್ಲಿಕಾರ್ಜುನ ಎಚ್.ಟಿ., ಎಂ.ಎ. ಪದವೀಧರ. ವಿಜಾಪುರ ನಗರ ಕ್ಷೇತ್ರದಿಂದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್‌ಯುಸಿಐ-ಸಿ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮೂಲತಃ ಸಿಂದಗಿ ತಾಲ್ಲೂಕು ಹಂಚಲಿ ಗ್ರಾಮದವರು. ಅವರೊಂದಿಗೆ ನಡೆಸಿದ ಸಂದರ್ಶನದ ಸಾರ.`ಜನಪರ ಹೋರಾಟವೇ ನಮ್ಮ ಸಂಘಟನೆಗಳ ಮೂಲಮಂತ್ರ. ಸೋಲು-ಗೆಲುವು ಮುಖ್ಯವಲ್ಲ. ಚುನಾವಣೆಗೆ ಸ್ಪರ್ಧಿಸುವುದು ನಮ್ಮ ಹೋರಾಟದ ಒಂದು ಭಾಗ. ಜನರೇ ತಮ್ಮ ಸ್ವಂತ ಖರ್ಚಿನಲ್ಲಿ ನಾಯಕನನ್ನು ಆಯ್ಕೆ ಮಾಡಿಕೊಂಡಾಗ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ. ಅಂತಹ ಕಾಲ ಬಂದೇ ಬರುತ್ತದೆ ಎಂಬ ನಂಬಿಕೆಯೊಂದಿಗೆ ನಾವು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ'.`11 ವರ್ಷಗಳಿಂದ ಸಂಘಟನೆಗೆ ನನ್ನನ್ನೇ ನಾನು ಸಮರ್ಪಿಸಿಕೊಂಡಿದ್ದೇನೆ. ನನ್ನ ಬಳಿ ಹಣವಿಲ್ಲ. ಓಟು ಕೊಡಿ-ಜೊತೆಗೆ ನೋಟೂ ಕೊಡಿ ಎಂದು ಮತದಾರರನ್ನು ಕೇಳುತ್ತಿದ್ದೇವೆ. ನಮ್ಮ ಸಹೋದರ ಸಂಘಟನೆಗಳ ಕಾರ್ಯಕರ್ತರು ಚುನಾವಣೆಯ ಠೇವಣಿ (ರೂ.10,000) ಕಟ್ಟಿದ್ದಾರೆ. ನನ್ನ ಸ್ವಂತ ಬ್ಯಾಂಕ್ ಖಾತೆ ಇರಲಿಲ್ಲ.

ಚುನಾವಣಾ ಆಯೋಗದ ನಿಯಮದಂತೆ ಖಾತೆ ತೆರೆರಿದ್ದು, ಕಾರ್ಯಕರ್ತರು ಹಣ ಸಂಗ್ರಹಿಸಿ ಆ ಖಾತೆಯಲ್ಲಿ ಈ ವರೆಗೆ ರೂ.10,500 ಜಮೆ ಮಾಡಿದ್ದಾರೆ. ನಾವು ನಡೆಸಿದ ಹೋರಾಟವೇ ಬಲ ತಂದು ಕೊಟ್ಟಿದೆ. ಆಕೃತಿ ಕಾಲೊನಿಯಲ್ಲಿ ಚರಂಡಿಗಾಗಿ ಹೋರಾಟ ನಡೆಸಿದ್ದೆವು. ಅಲ್ಲಿಯ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರೂ.3000 ಹಣ ತಂದು ಕೊಟ್ಟರು. ಅಂತಹ ಜನರೂ ಇದ್ದಾರೆ'.`ಈ ಚುನಾವಣೆಗೆ ಒಟ್ಟಾರೆ ರೂ.50ರಿಂದ 55 ಸಾವಿರ ಖರ್ಚಾಗುವ ನಿರೀಕ್ಷೆ ಇದೆ. ಪ್ರಚಾರಕ್ಕೆ ಕೇವಲ ಒಂದು ಆಟೊ ಬಳಸಿಕೊಳ್ಳುತ್ತಿದ್ದೇವೆ. ನಮ್ಮ ಕಾರ್ಯಕರ್ತರು ಮನೆಯಲ್ಲಿ ಊಟ ಮಾಡಿ ಬಂದು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ'.`ಈ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ನಾನು ಹೇಳುವುದಿಲ್ಲ. ಜನ ಪರಿವರ್ತನೆ ಬಯಸುತ್ತಿದ್ದು, ನಾವು ಗೆಲ್ಲುವ ಕಾಲ ಬಂದೇ ಬರುತ್ತದೆ ಎಂಬುದು ನಮ್ಮ ಬಲವಾದ ನಂಬಿಕೆ. 2008ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಭಗವಾನ್ ರೆಡ್ಡಿ 171 ಮತ ಪಡೆದಿದ್ದರು. ಅತಿ ಕಡಿಮೆ ಮತ ಲಭಿಸಿದವು ಎಂಬ ಬೇಸರ ನಮಗಿಲ್ಲ.

ನಮಗೆ ದೊರೆತ ಒಂದು ಮತ ಒಂದು ಲಕ್ಷ ಮತಕ್ಕೆ ಸಮ ಎಂಬುದು ನಮ್ಮ ಭಾವನೆ. ಜಾತಿ-ಹಣ, ಆಸೆ-ಆಮಿಷಗಳಿಗೆ ಬಲಿಯಾಗದೆ ಅಷ್ಟೊಂದು ಜನ ನಮ್ಮನ್ನು ಗುರುತಿಸಿದ್ದಾರಲ್ಲ ಎಂಬ ಸಂತಸ ನಮಗಿದೆ. ಆ ವರ್ಗದ ಮತದಾರರನ್ನು ಗಟ್ಟಿಗೊಳಿಸುವುದೇ ನಮ್ಮ ಉದ್ದೇಶ' ಎನ್ನುತ್ತಾರೆ ಮಲ್ಲಿಕಾರ್ಜುನ.

ಪ್ರತಿಕ್ರಿಯಿಸಿ (+)