ಒಂದು ಮುತ್ತಿನ ಕಥೆ...

7

ಒಂದು ಮುತ್ತಿನ ಕಥೆ...

Published:
Updated:

ತಮಿಳು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ನಿರ್ದೇಶಕ, ನಟ ಸಮುದ್ರ ಖಣಿ. ಕಮರ್ಷಿಯಲ್ ಅಂಶಗಳೇ ತುಂಬಿದ್ದ ಅಲ್ಲಿನ ಚಿತ್ರರಂಗದಲ್ಲಿ ವಿಭಿನ್ನ ಹಾದಿ ತುಳಿದು ಸಮಾಜಕ್ಕೆ ಹತ್ತಿರವಿರುವ ಅಂಶಗಳನ್ನು ಬಳಸಿಕೊಂಡು ಸಿನಿಮಾ ಮಾಡಿದರು.ಯಶಸ್ವಿಯೂ ಆದರು. `ನಾಡೋಡಿಗಳ್~, `ಪೊರಾಲಿ~, `ಸುಬ್ರಮಣ್ಯಪುರಂ~ನಂಥ ಚಿತ್ರಗಳು ಸಮುದ್ರ ಖಣಿ ಭಿನ್ನ ಹಾದಿಯ ಪಥಿಕ ಎನ್ನುವುದಕ್ಕೆ ಸಾಕ್ಷಿ. ಅವರ  ಗೆಲುವುಗಳಲ್ಲಿ ಭಾಗಿಯಾದವರು ಮತ್ತೊಬ್ಬ ನಟ, ನಿರ್ದೇಶಕ ಶಶಿಕುಮಾರ್.

 

ತಮಿಳಿಗೆ ಸೀಮಿತವಾಗಿರದೆ ಎಲ್ಲಾ ಭಾಷೆಗಳಿಗೂ ಅವರ ಚಿತ್ರಗಳು ಹರಡುತ್ತಿವೆ. ಒಂದು ಬಗೆಯಲ್ಲಿ ಅವರು `ಚಿತ್ರರಂಗದ ಮುತ್ತು~ (ಸಮುದ್ರ ಖಣಿ- ಮುತ್ತು).ಪುನೀತ್‌ರಾಜ್‌ಕುಮಾರ್ ನಾಯಕರಾಗಿ ನಟಿಸಿರುವ `ಯಾರೇ ಕೂಗಾಡಲಿ~ ಚಿತ್ರದ ಮೂಲಕ ಕನ್ನಡಕ್ಕೂ ಅವರು ಪದಾರ್ಪಣೆ ಮಾಡಿದ್ದಾರೆ. ಈ `ತಮಿಳು ಮುತ್ತು~ ಬೆಳೆದುಬಂದ ಹಾದಿ, ವರ್ತಮಾನದ ಖುಷಿ, ಭವಿಷ್ಯದ ಕನಸುಗಳು ಇಲ್ಲಿವೆ. ಈ ಸಂದರ್ಶನ `ಸಿನಿಮಾ ರಂಜನೆ~ ವಿಶೇಷ.ನಿಮ್ಮ ಸಿನಿಮಾಗಳು ಕಮರ್ಷಿಯಲ್ ಅಂಶಗಳಿಗಿಂತ ಸಮಾಜಕ್ಕೆ ಹತ್ತಿರವಾದ ಅಂಶಗಳನ್ನೇ ಹೆಚ್ಚು ಒಳಗೊಂಡಿರುತ್ತವೆಯಲ್ಲ?

 

ಸಮುದ್ರ ಖಣಿ

ನಿಜ. ನಾನು ಸಾಮಾಜಿಕ ವ್ಯವಸ್ಥೆಯ ಸಂಕಷ್ಟಗಳ ನಡುವೆಯೇ ಬೆಳೆದವನು. ಸಣ್ಣ ಕುಗ್ರಾಮದಲ್ಲಿ ಹುಟ್ಟಿದವನಾದ್ದರಿಂದ ಸಾಮಾಜಿಕ ಕ್ರಾಂತಿ ಎಂಬುದು ತಲೆಯಲ್ಲಿ ಮೊಳಕೆಯೊಡೆದಿತ್ತು. ಕಾಲೇಜು ದಿನಗಳಲ್ಲಿ ಊರೂರು ಸುತ್ತಿ ಜನಜಾಗೃತಿಯ ಬೀದಿನಾಟಕಗಳನ್ನು ಮಾಡುತ್ತಿದ್ದೆ.

 

ನಾವು ಬದುಕುತ್ತಿರುವುದು ವಿಚಿತ್ರ ಸಮಾಜದಲ್ಲಿ. ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಸ್ಪರ್ಧಿಸುತ್ತಿದ್ದೇವೆ. ಅತಿ ದೊಡ್ಡ ಜೈಲುಗಳು ನಮ್ಮಲ್ಲಿವೆ. ಆಂತರಿಕ ಬೆದರಿಕೆಗಳು, ಹೊಟ್ಟೆಕಿಚ್ಚು, ದ್ವೇಷ ಇಂಥದ್ದೇ ಸಮಾಜದಲ್ಲಿದೆ. ಸಿನಿಮಾರಂಗಕ್ಕೆ ಬಂದಾಗಲೂ ವಾಸ್ತವ ಜೀವನಕ್ಕೆ ಹತ್ತಿರವಿರುವ ಇಂಥ ಅಂಶಗಳೇ ಮುಖ್ಯ ಎನಿಸಿತು. ಅದರಲ್ಲಿ ಸಂದೇಶವೂ ಇರಬೇಕು. ಚಿತ್ರ ಗೆಲ್ಲಲು ಕಮರ್ಷಿಯಲ್ ಅಂಶಗಳೂ ಬೇಕು. ಎರಡೂವರೆ ತಾಸಿನ `ನಾಡೋಡಿಗಳ್~ನಲ್ಲಿ ಕಮರ್ಷಿಯಲ್ ಅಂಶಗಳು ಇರುವುದು 45 ನಿಮಿಷ ಮಾತ್ರ.ಅದನ್ನು ಬಿಟ್ಟರೆ ಉಳಿದ್ದು ತೀರಾ ಕಚ್ಚಾ ಸರಕು. ಬೇರೆ ಸಿನಿಮಾಗಳಲ್ಲಿ 30-45 ನಿಮಿಷ ಕಚ್ಚಾ ಕಥೆಯಿರುತ್ತದಷ್ಟೆ. ನನ್ನ ಸಿನಿಮಾಗಳಲ್ಲಿ ಇದು ಉಲ್ಟಾ. ಹೀಗೆ ಸಮಾಜದಲ್ಲಿ ಕಾಣಿಸುವ ವಿಷಯಗಳನ್ನೇ ಹೆಕ್ಕಿಕೊಳ್ಳುತ್ತೇನೆ. ಪತ್ರಿಕೆ ಸುದ್ದಿಗಳೇ ನನಗೆ ಸಿನಿಮಾದ ಮೂಲಗಳು.

ಸಿನಿಪಯಣದ ಹಾದಿ ಹೇಗಿತ್ತು?

ನನಗೆ ಹುಚ್ಚು ಇದ್ದದ್ದು ನಟನಾಗಬೇಕೆಂದು. ಗಣಿತದಲ್ಲಿ ಬಿ.ಎಸ್ಸಿ ಮಾಡಿದ್ದೆ. ಬಳಿಕ ಬಿ.ಎಲ್ (ಬ್ಯಾಚುಲರ್ ಆಫ್ ಲಾ) ಮಾಡಿದೆ. ನಾನು ನಡೆಯಬೇಕಾದ ಹಾದಿ ಇದಲ್ಲ ಎನಿಸಿತು. ದೊಡ್ಡದೊಂದು ಆಲ್ಬಮ್ ಮಾಡಿಕೊಂಡು ಎಲ್ಲಾ ನಿರ್ದೇಶಕರಿಗೂ ಫೋಟೋ ಕೊಟ್ಟು ಬರುತ್ತಿದ್ದೆ. ಗುಂಪುಗಳಲ್ಲಿ ಕಾಣಿಸಿಕೊಳ್ಳುವ, ಆಗೊಮ್ಮೆ ಈಗೊಮ್ಮೆ ಸ್ವತಂತ್ರ ಸಂಭಾಷಣೆ ಇರುವ ಪಾತ್ರಗಳಷ್ಟೇ ಸಿಕ್ಕವು. ಎರಡು ವರ್ಷ ಇದನ್ನೇ ಮುಂದುವರಿಸಿದ್ದೆ.1994ರಲ್ಲಿ ನಿರ್ದೇಶಕ ಸುಂದರ್ ವಿಜಯನ್ ಫೋಟೋ ಹಿಂದೆ ಬರೆದಿದ್ದ ವಿಳಾಸ ನೋಡಿ ನನ್ನ ಕೈಬರಹ ಮೆಚ್ಚಿಕೊಂಡು ಕಾಪಿ ರೈಟಿಂಗ್‌ಗೆ ತಮ್ಮ ಬಳಿ ಸೇರಿಸಿಕೊಂಡರು. ಹೀಗೆ ಶುರುವಾಗಿದ್ದು ಕಿರುತೆರೆ ನಂಟು. 1998ರಲ್ಲಿ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಬಳಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಶಿಸ್ತು, ಶ್ರಮ ಅವರಿಂದ ಕಲಿತೆ. ನನ್ನ ಸಿನಿಮಾಗಳಿಗೆ ಅವರೇ ಸ್ಫೂರ್ತಿ. ನೈಜ ಜೀವನಕ್ಕೆ ಹತ್ತಿರವಾದ ಸಿನಿಮಾಗಳನ್ನು ಮಾಡಿದವರು ಅವರು.ನಿರ್ದೇಶನ ಶುರುಮಾಡಿದ್ದು 2000ರಲ್ಲಿ, ಧಾರಾವಾಹಿ ಮೂಲಕ. 2003ರಲ್ಲಿ ಮೊದಲ ಸಿನಿಮಾ `ಉನ್ನೈ ಚರನಾಂದೈಂದೆನ್~ ಮಾಡಿದೆ. ಉತ್ತಮ ಕಥೆ ಜೊತೆಗೆ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಅದು ಬಾಚಿಕೊಂಡಿತು. 2004ರಲ್ಲಿ ವಿಜಯಕಾಂತ್ ನಟಿಸಿದ `ನೆರಂಜ ಮನಸ್ಸು~ ಫ್ಲಾಪ್ ಆಯಿತು. ಸಿನಿಮಾ ಬದುಕೇ ಮುಗಿದು ಹೋದಂತಾಯಿತು.ಮತ್ತೆ ಒಂದನೇ ತರಗತಿಯಿಂದ ಕಲಿಕೆ ಶುರುಮಾಡುವಂತೆ ಕಿರುತೆರೆಗೆ ಮರಳಿದೆ. `ಅನ್ನಿ~, `ಅರಸಿ~ ಧಾರಾವಾಹಿಗಳು, `ತಂಗವೆಟ್ಟಿ~ ಎಂಬ ಗೇಮ್‌ಶೋ ಮಾಡಿದೆ. ಅದರ ನಡುವೆ ಎರಡು ಚಿತ್ರಗಳ ಸಣ್ಣಪಾತ್ರಗಳಲ್ಲಿ ನಟಿಸಿದೆ. 2006ರಲ್ಲಿ ಶಶಿಕುಮಾರ್ ಫೋನ್ ಮಾಡಿ ಒಂದು ಪಾತ್ರವಿದೆ ನಟಿಸು ಎಂದು ಕರೆದರು. `ಸುಬ್ರಮಣ್ಯಪುರಂ~ ಚಿತ್ರವದು. ಬದುಕಿನ ಗತಿ ಬದಲಾಯಿತು.

ನಿಮ್ಮ ಹಾಗೂ ಶಶಿಕುಮಾರ್‌ರದ್ದು ಯಶಸ್ವಿ ಜೋಡಿ...

ಶಶಿಕುಮಾರ್ ನನಗೆ ಗಾಡ್ ಗಿಫ್ಟ್. ನನಗೆ ಸ್ನೇಹಿತರು ಹೆಚ್ಚು. ಅವರ ನಡುವೆ ಶಶಿಕುಮಾರ್ ವಿಭಿನ್ನ. ನನ್ನ ಮುಖ ಪರಿಚಿತವಾಗಲು ಆತನೇ ಕಾರಣ. 12 ವರ್ಷದ ಬಳಿಕ ಮತ್ತೆ ಬಣ್ಣಹಚ್ಚುವಂತೆ ಮಾತ್ರವಲ್ಲ, ಚಿತ್ರರಂಗ ಗುರುತಿಸುವಂತೆ ಮಾಡಿದರು.ಬಳಿಕ ನಾಡೋಡಿಗಳ್, ಪೊರಾಲಿ... ಹೀಗೆ ಸಣ್ಣ ಪ್ರಯತ್ನಗಳು, ಜನರಿಗೆ ಇಷ್ಟವಾದವು. ತಮಿಳು ಮಾತ್ರವಲ್ಲ, ಕನ್ನಡ, ತೆಲುಗು, ಮಲಯಾಳಂ ಹೀಗೆ ಎಲ್ಲಾ ಭಾಷೆಗೂ ಚಿತ್ರಗಳು ರೀಮೇಕ್ ಆಗುತ್ತಿವೆ.

ಕನ್ನಡಕ್ಕೆ ತರುತ್ತಿರುವ `ಪೊರಾಲಿ~ಯಲ್ಲಿ ಏನೇನು ಬದಲಾವಣೆಗಳನ್ನು ಮಾಡಿದ್ದೀರಾ?

ಮಾನವ ಒಂದು ಸಾಮಾಜಿಕ ಪ್ರಾಣಿ. ಪ್ರತಿ ಪ್ರಾಣಿಯೂ ಒಂದೊಂದು ಗುಣ ಹೊಂದಿರುತ್ತದೆ. ಅದೆಲ್ಲವೂ ಮನುಷ್ಯನಲ್ಲಿವೆ. ಸಂದರ್ಭ ಬಂದಾಗ ಅವುಗಳನ್ನು ಪ್ರಕಟಪಡಿಸುತ್ತಾನೆ. `ಪೊರಾಲಿ~ ಸಿನಿಮಾ ಇದನ್ನೇ ಆಧರಿಸಿದ್ದು. ಮಾನವ `ಅಂತರರಾಷ್ಟ್ರೀಯ ಪ್ರಾಣಿ~ ಆಗಿರುವುದರಿಂದ `ಯಾರೇ ಕೂಗಾಡಲಿ~ ಚಿತ್ರಕ್ಕೆ ಅಂಥ ಬದಲಾವಣೆಗಳನ್ನು ಮಾಡಿಲ್ಲ. ಅದರಲ್ಲಿ ಬರುವ ಹಳ್ಳಿಯ ಬದುಕು ಮಾತ್ರ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾಗಿದೆ.ಮೂಲ ಚಿತ್ರದಲ್ಲಿ ಕಲಾವಿದರು, ತಂತ್ರಜ್ಞರು ಎಲ್ಲರೂ ಹೊಸಬರಾಗಿದ್ದರು. ಇಲ್ಲಿ ಎಲ್ಲರೂ ಪರಿಣತರಿದ್ದಾರೆ. ಹೊಸ ವಿಷಯಗಳ ಅಳವಡಿಕೆ ತುಂಬಾ ಸುಲಭ. ಸಿನಿಮಾ ಶೈಲಿಗಿಂತ ವಿಭಿನ್ನವಾಗಿ, ಸಹಜ ಶೈಲಿಯ ಹೊಡೆದಾಟ ದೃಶ್ಯಗಳಿವೆ.

ಪುನೀತ್ ರಾಜ್‌ಕುಮಾರ್ ಕುರಿತು...?

ಪುನೀತ್ ನಿಜವಾದ ಹೀರೋ. ಅವರ ಎನರ್ಜಿ, ಸಿನಿಮಾ ಪ್ರೀತಿ, ಪ್ರಾಮಾಣಿಕತೆ ಎಲ್ಲವೂ ಅದ್ಭುತ. ಇಷ್ಟಿದ್ದರೆ ಸಾಕು ಸಿನಿಮಾ ಯಶಸ್ಸು ಕಾಣಲು. ಒಂದು ದಿನ ಅವರು ರಾಷ್ಟ್ರಮಟ್ಟದಲ್ಲಿ ಮಿನುಗುವುದರಲ್ಲಿ ಅನುಮಾನವೇ ಇಲ್ಲ. ಚಿತ್ರದಲ್ಲಿ ಮೂರು ಗೆಟಪ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ಅವರಿಗೊಂದು ಕಥೆ ಹೇಳಿದ್ದೇನೆ. ಕೇಳಿದ ಕೂಡಲೇ ಮೆಚ್ಚಿಕೊಂಡ ಅವರು ಈಗಲೇ ಸಿನಿಮಾ ಮಾಡೋಣ ಎಂದಿದ್ದಾರೆ. ಅದು ಶೀಘ್ರವೇ ನೆರವೇರಲಿದೆ.

 

 ಪ್ರಶಸ್ತಿಗಳಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿರುವಂತಿದೆ?

ನಿಜಕ್ಕೂ ಒಮ್ಮೆಯೂ ಪ್ರಶಸ್ತಿಗಳ ಬಗ್ಗೆ ಯೋಚಿಸಿದವನಲ್ಲ. ಜನರಿಗೆ ಇಷ್ಟವಾಗುವ, ಸಮಾಜಕ್ಕೆ ಸಂದೇಶ ನೀಡುವ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಗುರಿ. ಜನ ಮೆಚ್ಚಿಕೊಂಡರೆ ಅದೇ ನಿಜವಾದ ಪ್ರಶಸ್ತಿ.

 

ನಾನು ಶಿಕ್ಷಕನಾಗಿ ನಟಿಸಿರುವ ಉತ್ತಮ ಸಂದೇಶವುಳ್ಳ ಚಿತ್ರ `ಸಟ್ಟಾಯ~ ಹಾಗೂ ಶಶಿಕುಮಾರ್‌ನ `ಸುಂದರಪಾಂಡಿಯನ್~ ಬಿಡುಗಡೆಯಾದದ್ದು ಒಂದೇ ವಾರದ ಅಂತರದಲ್ಲಿ. ಎರಡಕ್ಕೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮಿಬ್ಬರಿಗೂ ಒಟ್ಟಿಗೆ ಸಿಕ್ಕ ಪ್ರಶಸ್ತಿಯಿದು. ಕೋಟಿಗಟ್ಟಲೆ ಜನರ ಪ್ರತಿನಿಧಿಯಾಗಿ ಒಬ್ಬ ನಿರ್ದೇಶಕನಿರುತ್ತಾನೆ.ನನ್ನಂತೆ ನಿರ್ದೇಶಕನಾಗುವ ಹಂಬಲ ಸಾವಿರಾರು ಜನರಿಗೆ ಇದೆ. ನನಗಿಂತಲೂ ಪ್ರತಿಭಾವಂತರಿದ್ದಾರೆ. ಆದರೆ ನನಗೆ ಅವಕಾಶ ಸಿಕ್ಕಿದೆ. ಅವರಿಗೆ ಸಿಕ್ಕಿಲ್ಲ. ಅವರೆಲ್ಲರ ಪ್ರತಿನಿಧಿಯಾಗಿ ನಾನು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲೇ ಬೇಕಲ್ಲವೇ?

ಹಾಗಾದರೆ ನಿಮ್ಮ ಸಿನಿಮಾದ ವಸ್ತುಗಳು ಬದಲಾಗುವುದಿಲ್ಲವೇ?

ಖಂಡಿತಾ ಇಲ್ಲ. ಇದುವರೆಗೆ ಯಾವ ಬಗೆಯ ಸಿನಿಮಾ ಮಾಡಿದ್ದೇನೋ ಅದೇ ರೀತಿಯ ವಸ್ತುಗಳನ್ನಿಟ್ಟುಕೊಂಡೇ ಮಾಡುತ್ತೇನೆ. ಯಾವ ಭಾಷೆಯಾದರೂ ಅದರಲ್ಲಿ ರಾಜಿಯಾಗುವುದಿಲ್ಲ. ಯಾವತ್ತೂ ಯೋಜನೆ ಹಾಕಿಕೊಂಡು ಸಿನಿಮಾ ಮಾಡುವುದಿಲ್ಲ. ಎಲ್ಲಾ ಸಿನಿಮಾಗಳೂ ತಾನಾಗಿಯೇ ಸಂಭವಿಸಿದಂತೆ ಆ ಕ್ಷಣದಲ್ಲಿ ಹುಟ್ಟಿಕೊಂಡಂಥವು. ಅದೇ ಚೆನ್ನ.

ನಟನೆ, ನಿರ್ದೇಶನ- ಎರಡರಲ್ಲಿ ಯಾವುದರತ್ತ ಒಲವು ಹೆಚ್ಚು?

ನಿರ್ದೇಶನ. ಏಕೆಂದರೆ ನಿರ್ದೇಶಕನಲ್ಲೂ ನಟನಿರುತ್ತಾನೆ. ತೆರೆ ಹಿಂದೆ ನಟಿಸುತ್ತಲೂ ಇರುತ್ತಾನೆ. ಹಾಗಂತ ನಟನೆಯನ್ನೇನೂ ಬಿಡುವುದಿಲ್ಲ. ತಮಿಳಿಗಿಂತಲೂ ಮಲಯಾಳಂನಲ್ಲಿ ನಟನಾಗಿ ಅವಕಾಶಗಳು ಹೆಚ್ಚು ಸಿಗುತ್ತಿವೆ. ಕನ್ನಡದಲ್ಲೂ `ಹಿಟ್‌ಲಿಸ್ಟ್~ ಚಿತ್ರದ ಪಾತ್ರವೊಂದಕ್ಕೆ ಬಣ್ಣಹಚ್ಚುತ್ತಿದ್ದೇನೆ.

ಹಿಂದಿ ಭಾಷೆಗೂ `ನಾಡೋಡಿಗಳ್~ ರೀಮೇಕ್ ಆಗುತ್ತಿದೆ. ಮುಂದೆ ನೀವೂ ಹಿಂದಿಯಲ್ಲಿ ನಿರ್ದೇಶನ ಮಾಡುವ ಆಸೆ ಇದೆಯೇ?

ಈಗಾಗಲೇ ಹಿಂದಿಯಲ್ಲಿ ಆಫರ್ ಬಂದಿದೆ. ಅದಕ್ಕೆ ಸಿದ್ಧತೆಯನ್ನೂ ನಟಿಸಿದ್ದೇನೆ. ಹಿಂದಿ ಮಾತ್ರವಲ್ಲ, ಭಾರತದ ಎಲ್ಲಾ ಭಾಷೆಗಳಲ್ಲೂ ಸಿನಿಮಾ ಮಾಡಬೇಕು ಎಂಬುದು ನನ್ನ ಕನಸು. ಇದು ಸುಮ್ಮನೆ ಹೇಳುವ ಮಾತೂ ಅಲ್ಲ. ನಟನೆ ಅಥವಾ ನಿರ್ದೇಶನ- 22 ಭಾಷೆಗಳಲ್ಲಿ ಸಿನಿಮಾ ಮಾಡುವ ಬಯಕೆ ಇದೆ. ಅದನ್ನು ಖಂಡಿತಾ ಮಾಡುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry