ಒಂದು ರೂಪಾಯಿಗೆ ಬಂಪರ್ ಬೆಳೆ!

7

ಒಂದು ರೂಪಾಯಿಗೆ ಬಂಪರ್ ಬೆಳೆ!

Published:
Updated:

ತರಕಾರಿ ಬೆಳೆಯುವ ರೈತರು ಸೂಕ್ತ ಮಾರ್ಗದರ್ಶನವಿಲ್ಲದೆ ಇಳುವರಿ ಹೆಚ್ಚಳಕ್ಕಾಗಿ ಸಿಕ್ಕ ಸಿಕ್ಕ ದುಬಾರಿ ರಾಸಾಯನಿಕಗಳನ್ನು ಸಿಂಪರಣೆ ಮಾಡಿ ನಿರೀಕ್ಷಿತ ಇಳುವರಿ ಪಡೆಯದೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಾರೆ.

ಅದಕ್ಕೆ ಬದಲು ಸುಲಭವಾಗಿ ದೊರೆಯುವ ಕಡಿಮೆ ವೆಚ್ಚದ ಬೋರಾನ್ ಪೋಷಕಾಂಶ (ಬೋರಿಕ್ ಆಸಿಡ್) ಸಿಂಪರಣೆ ಮಾಡುವ ಮೂಲಕ ರೈತರು ಖಂಡಿತ ಅಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಮಣ್ಣು ವಿಜ್ಞಾನ ವಿಭಾಗದ ಹಿರಿಯ ವಿಜ್ಞಾನಿ ಡಾ. ಶಿವಪುತ್ರ ಕೋಟೂರು.ಡಾ.ಕೋಟೂರು ಹೇಳುವ ಪ್ರಕಾರ ಬೆಳೆಗಳ ಪೋಷಣೆಗೆ ಅಗತ್ಯವಾದ ಬೋರಾನ್ ಕುರಿತು ನಮ್ಮ ರೈತರು ಅಷ್ಟಾಗಿ ತಿಳಿವಳಿಕೆ ಹೊಂದಿಲ್ಲ. ಹೀಗಾಗಿಯೇ ನಮ್ಮ ದೇಶದ ಬಹುತೇಕ ಬೆಳೆಗಳಲ್ಲಿ ಬೋರಾನ್ ಪೋಷಕಾಂಶದ ಕೊರತೆ ಉಂಟಾಗಿ, ಅವುಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತಿದೆ.

ವಿಶೇಷವಾಗಿ ಕೆಂಪು ಮಣ್ಣು ಪ್ರದೇಶದಲ್ಲಿ ಇದರ ಕೊರತೆ ಇನ್ನೂ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸುಮಾರು 18 ವರ್ಷಗಳ ಹಿಂದೆ ಜಾರ್ಖಂಡ್‌ನಲ್ಲಿ ನಡೆಸಿದ ಬೋರಾನ್ ಪೋಷಕಾಂಶದ ಪ್ರಯೋಗ ಯಶಸ್ವಿಯಾಗಿ ಇಂದಿಗೂ ಉತ್ತಮ ಫಲಿತಾಂಶ ನೀಡುತ್ತಿದೆ.1994ರಲ್ಲಿ ಮೊದಲ ಬಾರಿಗೆ ಜಾರ್ಖಂಡ್‌ನ ರಾಂಚಿ ಪ್ರದೇಶದಲ್ಲಿ ವಿಜ್ಞಾನಿಗಳು ಸೌತೆ ಬೆಳೆಯ ಮೇಲೆ ಬೋರಾನ್ ಪೋಷಕಾಂಶದ ಪ್ರಯೋಗ ನಡೆಸಿದರು. ಆಗ ಸಿಂಪರಣೆ ಮಾಡದ ಬಳ್ಳಿಗಳಲ್ಲಿ ಶೇ.10.5ರಷ್ಟು ಕಾಯಿ ಕಚ್ಚಿದರೆ ಸಿಂಪರಣೆ ಮಾಡಿದ ಬಳ್ಳಿಗಳಲ್ಲಿ ಶೇ 12.2ರಷ್ಟು ಕಾಯಿ ಕಚ್ಚಿದ್ದವು.

ಅಲ್ಲದೇ ಸಾಮಾನ್ಯ ಬಳ್ಳಿಯ ಪ್ರತಿ ಕಾಯಿಯ ತೂಕ 368ಗ್ರಾಂ ಇದ್ದರೆ ಸಿಂಪರಣೆ ಮಾಡಿದ ಬಳ್ಳಿಯ ಕಾಯಿ ತೂಕ  412ಗ್ರಾಂ ರಷ್ಟಿತ್ತು. ಪರಿಣಾಮ ಅಂತಿಮ ಫಲಿತಾಂಶದಲ್ಲಿ ಸಿಂಪರಣೆ ಪಡೆಯದ ಹೆಕ್ಟೇರ್ ಪ್ರದೇಶದ ಬಳ್ಳಿಗಳಲ್ಲಿ 48.6 ಟನ್ ಸೌತೆ ಇಳುವರಿ ಬಂದರೆ, ಸಿಂಪರಣೆ ಮಾಡಿದ ಹೆಕ್ಟೇರ್ ಪ್ರದೇಶದ ಬಳ್ಳಿಗಳಲ್ಲಿ 62.5ಟನ್ ಸೌತೆ ಇಳುವರಿ ದೊರೆತಿರುವ ದಾಖಲೆಗಳಿವೆ ಎನ್ನುತ್ತಾರೆ ಡಾ.ಕೋಟೂರು.ಅಧಿಕ ಇಳುವರಿ

ವಿವಿಧ ರೈತರ ಜಮೀನುಗಳಲ್ಲಿ ತಾವು ಕೂಡ ಈವರೆಗೆ ಬೋರಾನ್ ಪೋಷಕಾಂಶ ಬಳಕೆ ಕುರಿತಂತೆ ನಡೆಸಿದ ಪ್ರಯೋಗಗಳಲ್ಲಿ ಕುಂಬಳ ಜಾತಿಯ ವಿವಿಧ ತರಕಾರಿ ಬೆಳೆಗಳಾದ ಸೌತೆ, ಹೀರೆಕಾಯಿ, ಹಾಗಲಕಾಯಿ, ಬೂದುಗುಂಬಳ, ಸೋರೆಕಾಯಿ, ಸೀಮೆ ಬದನೆ (ಚೌಚೌ) ಸೇರಿದಂತೆ ಕಲ್ಲಂಗಡಿ ಮುಂತಾದ ಬೆಳೆಗಳ ಎಲೆಗಳ ಮೇಲೆ ಬೋರಾನ್ ಪೋಷಕಾಂಶ ಸಿಂಪರಣೆ ಮಾಡಿದ ನಂತರ ಈ ತರಕಾರಿ ಬೆಳೆಗಳ ಬಳ್ಳಿಗಳ ಬೆಳವಣಿಗೆ, ಕಾಯಿ ಕಚ್ಚುವಿಕೆ, ಕಾಯಿ ಸಂಖ್ಯೆ ಹಾಗೂ ಗಾತ್ರಗಳಲ್ಲಿ  ಒಟ್ಟಾರೆ ಹೆಚ್ಚಳವಾಗಿ ಅಧಿಕ ಇಳುವರಿ ದೊರೆತಿದೆ ಎನ್ನುತ್ತಾರೆ.

ಅಲ್ಲದೇ ಇದರ ವೆಚ್ಚ ಕೂಡ ನಂಬಲಸಾಧ್ಯ. ಏಕೆಂದರೆ ತರಕಾರಿ ಬೆಳೆಯೊಂದು ಅಧಿಕ ಇಳುವರಿ ನೀಡಬೇಕಾದರೆ ಅದಕ್ಕೆ ಒಟ್ಟು ಮೂರು ಬಾರಿ ಬೋರಾನ್ ಪೋಷಕಾಂಶ ದ್ರಾವಣ ಸಿಂಪರಣೆ ಮಾಡಬೇಕು. ನಲವತ್ತು ಲೀಟರ್ ನೀರಿಗೆ 1ಗ್ರಾಂ ಬೋರಾನ್ ಪುಡಿಯಂತೆ ಬೆರೆಸಿ ದ್ರಾವಣ ತಯಾರಿಸಿಕೊಳ್ಳಬೇಕು.

ಹೀಗೆ ತಯಾರಿಸಿದ ದ್ರಾವಣವನ್ನು ಒಂದು ಹೆಕ್ಟೇರ್ ಪ್ರದೇಶದ ಬೆಳೆಗೆ ಒಂದು ಬಾರಿಗೆ 165 ಲೀಟರ್‌ನಂತೆ ಮೂರು ಬಾರಿ ಸಿಂಪರಣೆ ಮಾಡಬೇಕು. ಇದರಿಂದ ಹೆಕ್ಟೇರ್‌ವೊಂದಕ್ಕೆ  13 ಗ್ರಾಂ ಬೋರಿಕ್ ಪೌಡರ್‌ನಿಂದ ತಯಾರಿಸುವ ಸುಮಾರು 500 ಲೀಟರ್ ದ್ರಾವಣ ಬೇಕಾಗುತ್ತದೆ. ಆದ್ದರಿಂದ ಇದಕ್ಕೆ ತಗಲುವ ವೆಚ್ಚ ಬರೀ 1 ರೂಪಾಯಿ 25 ಪೈಸೆ ಮಾತ್ರ !ಕಳೆದ ಐದು ವರ್ಷಗಳಿಂದ ಹೆಸರಘಟ್ಟದ ಬಳಿಯ ಗೋಪಾಲಪುರ ಗ್ರಾಮದ ರೈತರಾದ ಉಮೇಶ್ ಅವರು ತಮ್ಮ ಜಮೀನಿನಲ್ಲಿ ಬೋರಾನ್ ಪೋಷಕಾಂಶ ಬಳಕೆ ಮಾಡುತ್ತಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಅವರು ಬೂದುಗುಂಬಳ ನಂತರ 2009ರಲ್ಲಿ ಕುಂಬಳ ಹಾಗೂ 2010ರಲ್ಲಿ ಹಾಗಲಕಾಯಿ ಸೇರಿದಂತೆ ಸೀಮೆ ಬದನೆಕಾಯಿ ಮುಂತಾದ ತರಕಾರಿ ಬೆಳೆಗಳ ಮೇಲೆ ಬೋರಾನ್ ಸಿಂಪರಣೆ ಮಾಡುತ್ತ ಬರುತ್ತಿರುವ ಉಮೇಶ್ ಗುಣಮಟ್ಟದ ತರಕಾರಿ ಜತೆಗೆ ಇಳುವರಿ ಕೂಡಾ ಸರಾಸರಿ ಶೇ.28 ರಿಂದ 36ರಷ್ಟು ಹೆಚ್ಚಾಗಿದೆ ಎಂದು ಹೇಳುತ್ತಾರೆ.ಬೋರಾನ್ ಬಳಕೆಯ ಪ್ರಯೋಗ ಮಾಡಿರುವ ಮತ್ತೋರ್ವ ರೈತರಾದ ಹೆಸರಘಟ್ಟದ ಸಮೀಪದ ಮತ್ಕೂರಿನ ಭದ್ರದೇವ ಕುಮಾರ್ ಅವರೇ ಹೇಳುವಂತೆ `ಬೂದುಕುಂಬಳ ಬಳ್ಳಿಯಲ್ಲಿ 8 ಎಲೆಗಳು ಮೂಡಿದಾಗ (ನಾಟಿ ಮಾಡಿದ 25ದಿನಗಳಿಗೆ) ಒಮ್ಮೆ ಹಾಗೂ ಹೂ ಬೀಡುವ ಪೂರ್ವದಲ್ಲಿ (ನಾಟಿ ಮಾಡಿದ 35ರಿಂದ 45 ದಿನಗಳು) ಇನ್ನೆರಡು ಬಾರಿ 25 ಪಿಪಿಎಮ್ ಬೋರಿಕ್ ಆಸಿಡ್ ದ್ರಾವಣಕ್ಕೆ ಶೇಕಡಾ 1 ರಷ್ಟು ಯೂರಿಯಾ ಕರಿಗಿಸಿ ಎಲೆಗಳಿಗೆ ಸಿಂಪಡಿಸಿದೆ.ಇದರಿಂದ ಪ್ರತಿ ಬಳ್ಳಿಯು ಸರಾಸರಿ ಶೇ.2.9ರಷ್ಟು ಸಂಖ್ಯೆಯಲ್ಲಿ ಕಾಯಿ ಕಚ್ಚಿ 5.8ಕೆ.ಜಿ ತೂಕದ ಕಾಯಿಗಳನ್ನು ಬಿಟ್ಟಿತು. ಅದೇ ರೀತಿ ಸಿಂಪರಣೆ ಮಾಡದ ಬಳ್ಳಿಗಳು ಶೇ. 1.8 ರಷ್ಟು ಕಾಯಿ ಕಚ್ಚಿ ತಲಾ 3.9 ಕೆ.ಜಿ ಕಾಯಿಗಳನ್ನು ಬಿಟ್ಟಿತು. ಇದರಿಂದಾಗಿ ನಾನು ಹೆಕ್ಟೇರುವಾರು 56ಟನ್‌ನಷ್ಟು ಹೆಚ್ಚಿನ ಇಳುವರಿ ಪಡೆದೆ' ಎನ್ನುತ್ತಾರೆ.

ಬೋರಾನ್ ಬಳಕೆಯಿಂದ ತರಕಾರಿ ಬೆಳೆಗಳಲ್ಲಿ ಇಳುವರಿ ಹೆಚ್ಚಲು ಕಾರಣವೇನೆಂದರೆ ಬೋರಾನ್ ಪೋಷಕಾಂಶ ಬಳ್ಳಿಗೆ ದೊರೆತಾಗ ಬಳ್ಳಿಯಲ್ಲಿನ ಹೂವುಗಳ ಪರಾಗಕಣಗಳು ಆರೋಗ್ಯಯುತವಾಗುತ್ತವೆ. ಜತೆಗೆ ಪರಾಗ ಸ್ಪರ್ಶದ ನಂತರ ಈ ಪರಾಗ ಕಣಗಳು ಫಲಬೀಡುವ ಹೂವಿನ ಸ್ತ್ರೀ ಕೇಸರದಲ್ಲಿ ಸಫಲವಾಗಿ ಮೊಳೆತು ಅಂಡಾಶಯವನ್ನು ಸೇರಿ ಗುಣಮಟ್ಟದ ಬೀಜೋತ್ಪತ್ತಿಯನ್ನು ಉಂಟುಮಾಡುತ್ತದೆ.

ಅಲ್ಲದೇ  ಪ್ರತಿಯೊಂದು ಸಫಲ ಬೀಜವು ಕಾಯಿಗಳು ಬೆಳೆಯಬಲ್ಲ ಪ್ರಚೋದಕಗಳನ್ನು ಉತ್ಪಾದಿಸಿ ಒಟ್ಟಾರೆ ಕಾಯಿ ಕಚ್ಚುವಿಕೆ ಹಾಗೂ ಗಾತ್ರ ಹೆಚ್ಚಿಸುತ್ತವೆ ಎನ್ನುತ್ತಾರೆ ಡಾ.ಕೋಟೂರು.ಇತರೆ ದುಬಾರಿ ರಾಸಾಯನಿಕಗಳ ಬಳಕೆಗೆ ಹೊಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಬೋರಿಕ್ ಆಸಿಡ್ ಖರೀದಿಸುವುದು ಕೂಡಾ ರೈತರಿಗೆ ಇತರೆ ರಾಸಾಯನಿಕಗಳ ಖರೀದಿಗಿಂತ ಸುಲಭ.

ಏಕೆಂದರೆ ಇದರ ಪುಡಿಯನ್ನು ಕೇರಂ ಆಟದ ಬೋರ್ಡ್‌ಗೆ ಬಳಸುವುದರಿಂದ ಇದು ಕ್ರೀಡಾ ಸಾಮಗ್ರಿಗಳ ಮಳಿಗೆ ಸೇರಿದಂತೆ ಸ್ಥಳೀಯ ಔಷಧಿ ಅಂಗಡಿಗಳಲ್ಲಿ ಕೂಡಾ ಲಭ್ಯವಿರುತ್ತದೆ. ಅಲ್ಲದೇ ಬೆಲೆ ಕೂಡಾ ದುಬಾರಿಯಲ್ಲ! ಡಾ.ಕೋಟೂರು ಅವರನ್ನು ಆಸಕ್ತ ರೈತರು ಬೋರಾನ್ ಕುರಿತ ಹೆಚ್ಚಿನ ಮಾಹಿತಿಗಾಗಿ 94490 86595 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry