ಶುಕ್ರವಾರ, ಜುಲೈ 30, 2021
20 °C

ಒಂದು ಲಕ್ಷ ರೂ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಸ್ಥಳೀಯ ಬ್ಯಾಂಕಿನಿಂದ ರೂ.ಲಕ್ಷಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಯುವತಿಯ ಬೆನ್ನಿಗೆ ತುರಿಕೆ ಪುಡಿ ಎರಚಿ ಹಣ ಯಾಮಾರಿಸಿದ ಘಟನೆಯು ಪಟ್ಟಣದ ಪೊಲೀಸ್ ಠಾಣೆಯಿಂದ ವರದಿಯಾಗಿದೆ.ಇಲ್ಲಿಗೆ ಸಮೀಪದ ಮಾರಪ್ಪನ ಪಾಳ್ಯದ ಗೃಹಿಣಿ ಚೆನ್ನಮ್ಮ (30) ವಂಚನೆಗೊಳಗಾದ ಯುವತಿ, ಸಂಬಂಧಿಕರ ಶುಭಕಾರ್ಯಕ್ಕೆ ಸಹಾಯ ಮಾಡಲು ಬೇರೆ ಬೇರೆ ಖಾತೆಗಳಲ್ಲಿರುವ ಹಣ ತೆಗೆದು ರೂ.1ಲಕ್ಷ ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದಾಗ ಅವರ ಅರಿವಿಗೆ ಬಾರದಂತೆ ಬೆನ್ನಮೇಲೆ ತುರಿಕೆ ಪುಡಿ ಎರಚಿ ತುರಿಸಿಕೊಳ್ಳುತ್ತಿದ್ದಾಗ ಹಣ ದೋಚಲಾಗಿದೆ.ಬಸ್ ನಿಲ್ದಾಣದ ಬಳಿಯ ಎಟಿಎಂ ನಿಂದ ರೂ 20 ಸಾವಿರ ಹಣ ಪಡೆಯುವುದನ್ನು ಗಮನಿಸಿದ 40ವರ್ಷದ ಅಪರಿಚಿತ ಮಹಿಳೆಯೊಬ್ಬಳು ಚೆನ್ನಮ್ಮಳೊಂದಿಗೆ ಅತ್ಯಂತ ಸಲುಗೆ ಬೆಳೆಸಿಕೊಂಡಳು.ಎಟಿಎಂನ ಮತ್ತೊಂದು ಖಾತೆಯಲ್ಲಿದ್ದ ರೂ.10 ಸಾವಿರಗಳನ್ನು ಜಮ್ಮು ಗಡಿ ರಕ್ಷಣಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತಿ ವೆಂಕಟೇಶ್ ಅವರು ಕಳಿಸಿದ ಕೆನರಾ ಬ್ಯಾಂಕಿನ ಉಳಿತಾಯ ಖಾತೆಯೊಂದ ರೂ.70 ಸಾವಿರಗಳನ್ನು ಪಡೆಯುವಾಗ ಬೆನ್ನಮೇಲೆ ಏನೋ ಬಿದ್ದಂತಾಗಿ ತುರಿಕೆ ಪ್ರಾರಂಭವಾಯಿತು.ಅಸಾಧ್ಯವಾದ ತುರಿಕೆಯನ್ನು ಸಹಿಸಿಕೊಳ್ಳದಿದ್ದಾಗ ವೈದ್ಯರ ಬಳಿ ಹೋದ ಮಹಿಳೆ ಹಣದ ಚೀಲವನ್ನಿಟ್ಟು ಕುಳಿತುಕೊಳ್ಳುತ್ತಿದ್ದಂತೆ ಜೊತೆಯಿದ್ದ ಮಹಿಳೆ ಅಪಹರಿಸಿಕೊಂಡು ಪರಾರಿಯಾದಳು. ಮರುಕ್ಷಣದಲ್ಲಿಯೇ ಚೀಲ ಮಾಯವಾಗಿರುವುದನ್ನು ಅರಿತ ಚೆನ್ನಮ್ಮ ಕೂಗಿಕೊಂಡು ಹಿಡಿಯಲು ಪ್ರಯತ್ನಿಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ಹಣದ ಚೀಲ ಅಪಹರಿಸಿದ ಮಹಿಳೆ ಯಶವಂತಪುರದ ನಗರ ಸಾರಿಗೆಯ ಬಸ್ಸಿನಲ್ಲಿ ಪ್ರಯಾಣಿಸಿ ಹಣ ತೆಗೆದುಕೊಂಡು ಖಾಲಿ ಚೀಲವನ್ನು ಬಸ್ಸಿನಲ್ಲಿ ಬಿಟ್ಟುಹೋಗಿದ್ದಾಳೆ, ಚೀಲವನ್ನು ಗಮನಿಸಿದ ನಿರ್ವಾಹಕ ಗಂಗಾಧರ್ ಚೀಲದಲ್ಲಿದ್ದ, ಪಾಸ್‌ಬುಕ್, ಎಟಿಎಂ ಕಾರ್ಡ್ ಇತರೆ ಕಾಗದ ಪತ್ರಗಳನ್ನು ಚೆನ್ನಮ್ಮಳಿಗೆ ಮರಳಿಸಿದ್ದಾರೆ. ಹಣ ಕಳೆದುಕೊಂಡ ದುಃಖದಲ್ಲಿಯೂ ಬ್ಯಾಂಕ್‌ಗೆ ಸಂಬಂಧಿಸಿದ ಕಾಗದ ಪತ್ರಗಳು ಮರಳಿ ಸಿಕ್ಕಿರುವುದಕ್ಕೆ ನಿರ್ವಾಹಕಗಂಗಾಧರ್ ಅವರನ್ನು ಚೆನ್ನಮ್ಮ ಅಭಿನಂದಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪ್ರತ್ಯೇಕ ಅಪಘಾತ; ಇಬ್ಬರ ಸಾವು

ಬೆಂಗಳೂರು: ನಗರದ ಮಡಿವಾಳ ಮತ್ತು ವಿಜಯನಗರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.ಎಚ್‌ಎಸ್‌ಆರ್ ಲೇಔಟ್ ಸಮೀಪದ ಬೊಮ್ಮನಹಳ್ಳಿಯ ರಾಜೀವ್‌ಗಾಂಧಿನಗರದಲ್ಲಿ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಒಂದು ವರ್ಷ ನಾಲ್ಕು ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ರಾಜೀವ್‌ಗಾಂಧಿನಗರದಲ್ಲಿ ನೆಲೆಸಿರುವ ವಿಷ್ಣು ಕೇಸರ್ವಾನಿ ಮತ್ತು ಸುಮನ್ ಕೇಸರ್ವಾನಿ ದಂಪತಿಯ ಶಿವಾನ್ಸ್ ಕೇಸರ್ವಾನಿ ಎಂಬ ಮಗು ಸಾವನ್ನಪ್ಪಿದೆ.ವಿಷ್ಣು ಅವರ ಸಂಬಂಧಿಕರ ಮಗಳಾದ ಶಿವಾನಿ ಎಂಬ ಬಾಲಕಿ ಶಿವಾನ್ಸ್‌ನನ್ನು ಎತ್ತಿಕೊಂಡು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದಳು. ಆ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಟ್ರಾಕ್ಟರ್ ಶಿವಾನಿ ಮತ್ತು ಮಗುವಿಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಸಾವನ್ನಪ್ಪಿತು.ಟ್ರಾಕ್ಟರ್‌ನ ಚಕ್ರ ಶಿವಾನಿಯ ಬಲಗಾಲಿನ ಮೇಲೆ ಹರಿದಿದ್ದು, ಆಕೆಯೂ ತೀವ್ರವಾಗಿ ಗಾಯಗೊಂಡಿದ್ದಾಳೆ. ಚಾಲಕನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಘಟನೆ: ವಿಜಯನಗರ ಸಮೀಪದ ಮಂಜುನಾಥನಗರ ಜಂಕ್ಷನ್‌ನಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ ಮೃತಪಟ್ಟು ಮಗಳು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.ರಾಜಾಜಿನಗರ ನಾಲ್ಕನೇ ಬ್ಲಾಕ್ ನಿವಾಸಿ ಕುಮಾರ್ (52) ಮೃತಪಟ್ಟವರು. ಅವರ ಮಗಳು ಐಶ್ವರ್ಯ ಅವರಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕುಮಾರ್ ಅವರು ಮಗಳನ್ನು ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ರಾಜಾಜಿನಗರದ ಕಡೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಐಶ್ವರ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಸೇಂಟ್‌ಜಾನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕುಮಾರ್ ಅವರು ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಪಿಯುಸಿ ಪೂರೈಸಿದ್ದ ಐಶ್ವರ್ಯ ಅವರು ಸಿಇಟಿ ಪರೀಕ್ಷೆ ಬರೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸ್ ಮಗುಚಿ ಬಿದ್ದು ಐವರಿಗೆ ಗಾಯ

ಶಿವಮೊಗ್ಗದಿಂದ ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಐದು ಮಂದಿ ಗಾಯಗೊಂಡ ಘಟನೆ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯ ತೆರೇಸಾ ಆಸ್ಪತ್ರೆ ಬಳಿ ಸೋಮವಾರ ನಡೆದಿದೆ.ಸುಷ್ಮಾ (11), ಬಿಂದು (11), ಗೀತಾ (24), ವನಜಾಕ್ಷಮ್ಮ (53) ಮತ್ತು ಪ್ರಶಾಂತ್ (18) ಗಾಯಗೊಂಡವರು. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕ ರಸ್ತೆ ವಿಭಜಕವನ್ನು ಗಮನಿಸದೆ ಡಿಕ್ಕಿ ಹೊಡೆದಾಗ ಬಸ್ ಮಗುಚಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.