ಶುಕ್ರವಾರ, ಏಪ್ರಿಲ್ 23, 2021
22 °C

ಒಂದೂವರೆ ತಿಂಗಳ ಬಳಿಕ ಹೋರಾಟಕ್ಕೆ ದನಿ

ಕೆ.ಎನ್. ಶ್ರೀಹರ್ಷ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: `ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ~ ಎಂಬ ಗಾದೆ ರೀತಿ ವಿವಿ ನಕಲಿ ಅಂಕಪಟ್ಟಿ ಹಗರಣ ಜಾಲ ಬೆಳಕಿಗೆ ಬಂದ ಒಂದೂವರೆ ತಿಂಗಳ ನಂತರ ವಿದ್ಯಾರ್ಥಿ ಸಂಘಟನೆಗಳು ಪೈಪೋಟಿ ರೀತಿಯಲ್ಲಿ ಜಿಲ್ಲೆಯಲ್ಲಿ ದನಿ ಎತ್ತರಿಸಿವೆ.ಪ್ರಮುಖ ವಿದ್ಯಾರ್ಥಿ ಸಂಘಟನೆಗಳಾದ ಎಬಿವಿಪಿ, ಎನ್‌ಎಸ್‌ಯುಐ ಕಳೆದ ವಾರ ಕುಲಪತಿ ವಿರುದ್ಧ ದನಿ ಎತ್ತಿ ಮಾತನಾಡಿ, ಅವರ ರಾಜೀನಾಮೆಗೆ ಆಗ್ರಹಿಸಿವೆ. ಎನ್‌ಎಸ್‌ಯುಐ ಮುಖಂಡರು ಪತ್ರಿಕಾಗೋಷ್ಠಿ ವೇಳೆಯಲ್ಲೇ ಕುಲಪತಿಗೆ ಘೇರಾವ್ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಷ್ಟೆಲ್ಲಾ ಚಟುವಟಿಕೆ ಆರಂಭವಾಗಲು ಸುಮಾರು ಒಂದೂವರೆ ತಿಂಗಳ ಕಾಲ ಹಿಡಿಯಲು ಕಾರಣವೇನು ಎಂಬುದು ಈ ಭಾಗದ ವಿದ್ಯಾರ್ಥಿಗಳಲ್ಲಿ ಈಗ ಚರ್ಚೆಯ ಸಂಗತಿ. ಈ ಎರಡು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಮಂದಿ ಈಗ ವಿವಿಯ ಸಿಂಡಿಕೇಟ್ ಸದಸ್ಯರು. ಅಲ್ಲಿನ ಸಭೆಯಲ್ಲಿ ಮಾತ್ರ ಇವರ ಪಾತ್ರ ಮೌನ. ಅಲ್ಲಿಂದ ಹೊರಬಂದ ನಂತರ ಕುಲಪತಿ ಜತೆಯಲ್ಲೇ ಇದ್ದು, ನಂತರ ಪ್ರತಿಭಟನೆ ಮಂತ್ರ ಜಪಿಸುತ್ತಾರೆ ಎಂಬುದು ವಿವಿಯ ವಿದ್ಯಾರ್ಥಿಗಳ ಆರೋಪ.ತನಿಖೆಗೆ ಎರಡು ಸಮಿತಿ: ಸಿಂಡಿಕೇಟ್ ಸಭೆಯಲ್ಲಿ ತನಿಖೆಗೆ ನಿವೃತ್ತ ನ್ಯಾಯಾಧೀಶ ತೋಟದ್ ನೇತೃತ್ವ ಸಮಿತಿ ರಚಿಸಲಾಯಿತು. ಇದರಲ್ಲಿ ಸಿಂಡಿಕೇಟ್ ಕಡೆಯಿಂದ ನೇಮಕವಾದ ಇಬ್ಬರು ಸದಸ್ಯರು, ಎರಡೂ ಸಂಘಟನೆಯ ಮುಖಂಡರು ಹಾಗೂ ಪ್ರೊಫೆಸರ್‌ಗಳು ಕೂಡಾ ಸದಸ್ಯರಾಗಿದ್ದಾರೆ.ಈ ನೇಮಕಾತಿ ಮುನ್ನವೇ ಕುಲಪತಿ ಪ್ರೊ.ಬಾರಿ ಅವರು,  ಪ್ರೊ.ಜೆ. ಸದಾನಂದ ಅವರ ನೇತೃತ್ವದಲ್ಲಿ ನಕಲಿ ಜಾಲದಲ್ಲಿ ಸಿಕ್ಕುಬಿದ್ದಿರುವ ಸಿಬ್ಬಂದಿ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದರು. ಪುನಃ ದಿಢೀರ್ ಎಂದು ಸಿಂಡಿಕೇಟ್ ಸಭೆಯಲ್ಲಿ ಮತ್ತೊಂದು ಸಮಿತಿ ನೇಮಿಸ್ದ್ದಿದಾರೆ.ಈ ಹಿಂದೆ ಹಲವು ಹಗರಣಗಳ ವಿಷಯಕ್ಕೆ ಸಂಬಂಧಿಸಿದಂತೆ ನೇಮಿಸಿದ್ದ ಸಮಿತಿಗಳು ನೀಡಿದ್ದ ವರದಿ ಕಥೆ ಏನಾಯಿತು ಎಂಬುದನ್ನು ಬಹಿರಂಗ ಮಾಡದ ವಿವಿ, ಹೊರ ಜಗತ್ತಿಗೆ ವಾಸ್ತವತೆ ತಿಳಿಸುತ್ತೇವೆ ಎಂಬ ಭರದಲ್ಲಿ ಸ್ಥಾಪಿಸುವ ಇಂತಹ ಸಮಿತಿಗಳ ಶಿಫಾರಸುಗಳನ್ನು ಮಾತ್ರ ಬಹಿರಂಗ ಮಾಡದಿರುವುದು ಎಷ್ಟು ಸರಿ ಎಂಬುದು ಉಪನ್ಯಾಸಕರು, ಸಿಬ್ಬಂದಿ ಹಾಗೂ ಹಲವು ಶಿಕ್ಷಣ ತಜ್ಞರ ಪ್ರಶ್ನೆ.ಸಾವಿರಾರು ರೂಪಾಯಿ ವೆಚ್ಚದ ಇಂತಹ ಸಮಿತಿಗಳು ನೀಡಿದ ವರದಿ ಸಿಂಡಿಕೇಟ್ ಸಭೆಯಲ್ಲೇ ಮುಕ್ತಾಯವಾದ ಘಟನೆಗಳು ವಿವಿ ವ್ಯಾಪ್ತಿಯಲ್ಲಿ ನಡೆದಿದೆ. ಅದಕ್ಕೆ ಹಲವು ಒತ್ತಡ, ಗಣ್ಯರ ಫೋನ್‌ಗಳ ಕಾಟ ಬೇರೆ ಎಂದು ನುಡಿಯುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.ಇವರ ಮೌನವೇಕೆ?

ವಿವಿ ಸೆನೆಟ್, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಮಾಡಿದ ಹಲವು ಮಂದಿಯಲ್ಲಿ ಈಗ ವಿಧಾನ ಪರಿಷತ್ ಸದಸ್ಯರು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಅವರಲ್ಲಿ ಪ್ರಮುಖರಾದ ಪಿ.ವಿ. ಕೃಷ್ಣಭಟ್, ಆರ್.ಕೆ. ಸಿದ್ದರಾಮಣ್ಣ, ಜಲಜಾ ನಾಯ್ಕ, ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ... ಹೀಗೆ ಹಲವು ಮಂದಿ ಹಗರಣ ಬೆಳಕಿಗೆ ಬಂದು ಇಷ್ಟು ದಿನ ಕಳೆದರೂ ಇದರ ಕುರಿತಾಗಿ ತುಟಿ ಬಿಚ್ಚದಿರುವುದು ಶಿಕ್ಷಣಪ್ರೇಮಿಗಳಲ್ಲಿ ಚರ್ಚೆಯ ವಸ್ತುವಾಗಿದೆ.ಈ ಕುರಿತು ಯಾರೊಬ್ಬರೂ ದನಿ ಎತ್ತದಿರುವುದರ ಹಿಂದೆ ಸಿಂಡಿಕೇಟ್ ಸಭೆಯಲ್ಲಿ ಇವರ ಬೆಂಬಲಿತರೇ ಸದಸ್ಯರಾಗಿದ್ದಾರೆ ಎಂಬ ಕಾರಣವೇ ಅಥವಾ ಹಗರಣ ಕುರಿತಾಗಿ ಮಾಹಿತಿ ಕೆದಕಿದರೆ ದೂರ ಶಿಕ್ಷಣ ವ್ಯವಸ್ಥೆಯಲ್ಲಿ ನಡೆದಿರುವ ಹಲವು ಹಗರಣಗಳ ಸರಮಾಲೆಯಲ್ಲಿ ತಮ್ಮ ಬೆಂಬಲಿಗರು ಎಲ್ಲಿ ಸಿಕ್ಕಿ ಬೀಳುತ್ತಾರೋ ಎಂಬ ಭಯವೇ ಎಂಬುದು ವಿವಿ ಸಿಬ್ಬಂದಿ ಪ್ರಶ್ನೆ.ಈಗಿನ ಕುಲಪತಿ ಪ್ರೊ.ಬಾರಿ, ಹಿಂದೆ ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ, ದೂರ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಹಲವು ಮಹತ್ತರದ ಸ್ಥಾನ ಅಲಂಕರಿಸಿದ್ದವರು. ಪೊಲೀಸ್ ತನಿಖೆಯಿಂದ ಹೊರ ಬರುತ್ತಿರುವ ಸಂಗತಿಗಳು ಅವರು ಜವಾಬ್ದಾರಿ ಸ್ಥಾನ ನಿರ್ವಹಿಸಿದ್ದ ಸಂದರ್ಭದಲ್ಲೇ ನಡೆದಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ.ಇದರಿಂದಾಗಿ ಪೊಲೀಸ್ ತನಿಖಾಧಿಕಾರಿ ಕೇಳಿದ ಮಾಹಿತಿಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ವಿಫಲವಾಗಿರುವ ವಿವಿ ಆಡಳಿತ ವರ್ಗ, ಹಲವು ವಿಷಯಕ್ಕೆ ಸ್ಪಷ್ಟ ಉತ್ತರ ನೀಡದೇ, ಪೊಲೀಸರು ದೋಷಾರೋಪಪಟ್ಟಿ ಹಾಕಿದರೆ ಸತ್ಯ ಹೊರಬರುತ್ತದೆ ಎಂದು ಹೇಳುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.