ಒಂದೂವರೆ ತಿಂಗಳ ಬಾಣಂತಿ ಕವಿತಾ ಕೂಲಿ ಕೆಲಸಕ್ಕೆ!

ಬುಧವಾರ, ಜೂಲೈ 17, 2019
30 °C

ಒಂದೂವರೆ ತಿಂಗಳ ಬಾಣಂತಿ ಕವಿತಾ ಕೂಲಿ ಕೆಲಸಕ್ಕೆ!

Published:
Updated:

ಚಿಂಚೋಳಿ: ಇಲ್ಲಿನ ಚಿಕ್ಕ ಚಿಕ್ಕ ಮನೆಗಳಲ್ಲಿ ದೊಡ್ಡ ದೊಡ್ಡ ಕುಟುಂಬಗಳು ಬಡತನದ ಜತೆಗೆ ಜೀವನ ನಡೆಸುತ್ತಿವೆ. ಅವರಿಗೆ ಸ್ವಂತ ಬೇಸಾಯ ಮಾಡಲು ಜಮೀನು ಇಲ್ಲ. ಹೀಗಾಗಿ ಕೂಲಿ ಕೆಲಸವೇ ಇವರ ಜೀವನಕ್ಕೆ ಆಧಾರವಾಗಿದೆ.ಹೆಣ್ಣು, ಗಂಡು ಅಥವಾ ಬಾಣಂತಿ ಎಂಬ ಬೇಧವಿಲ್ಲದೇ ಎಲ್ಲರೂ ಕೂಲಿಗೆ ತೆರಳುವುದು ಚಿಂಚೋಳಿ ತಾಲ್ಲೂಕಿನ ಕೊಂಚಾವರಂ ತಾಂಡಾಗಳಲ್ಲಿ ಅನಿವಾರ್ಯ.ಇಲ್ಲಿನ ಒಂಟಿಚಿಂತಾ ತಾಂಡಾದ ಶಿವರಾಮ ರೇಕು ದಂಪತಿಯ ಸೊಸೆ ಕವಿತಾ ತಾರಾಸಿಂಗ್ ಕೇವಲ 45 ದಿನಗಳ ಹಿಂದೆ ಹೆಣ್ಣು ಶಿಶುವಿಗೆ ಜನ್ಮ ನೀಡಿದ ಬಾಣಂತಿ. ಮಗುವಿಗೆ ಹಾಲು ಕುಡಿಸುತ್ತ ಹೊರಸಿನ ಮೇಲೆ ಮಲಗಿ ಬೆಂಕಿಯ ಕಿಚ್ಚಿನ ಕಾವಿಗೆ ಮೈಯೊಡ್ಡುತ್ತ ಬೆಚ್ಚಗೆ ಇರುವ ಸಮಯ.ಆದರೆ ಕುಟುಂಬದ ತುತ್ತಿನ ಚೀಲ ತುಂಬಲು ಹಸಿ ಮೈಯಲ್ಲಿಯೇ ದಿನಕ್ಕೆ ರೂ. 50ರಂತೆ ಬೆಳೆಯಲ್ಲಿ ಕಳೆ ಕೀಳಲು ಕೂಲಿಗೆ ತೆರಳುತ್ತಿದ್ದಾಳೆ.ಬಾಣಂತಿಯರು ಬೆಚ್ಚಗಿರಬೇಕೆಂದು ಮನೆಯ ಹೊರಗೆ ಬರುವುದಿಲ್ಲ. ಜತೆಗೆ ಮುಖಕ್ಕೆ ಕಿವಿ ಮುಚ್ಚಲು ಉಣ್ಣೆಯ ಬಟ್ಟೆ ಕಟ್ಟಿಕೊಂಡಿರುತ್ತಾರೆ. ಆದರೆ ಇವಳು ಬಡತನದ ಬಾಧೆಯಿಂದ ಖುರುಪಿ ಹಿಡಿದು ಕಳೆ ಕೀಳಲು ಒಂದುವರೆ ತಿಂಗಳ ಮಗುವಿನೊಂದಿಗೆ ಹೊಲಕ್ಕೆ ತೆರಳುತ್ತಿದ್ದಾಳೆ. ಜು.20 ಹಾಗೂ 21ರಂದು ಮಾಧ್ಯಮದವರು ಆ ತಾಂಡಾಕ್ಕೆ ಭೇಟಿ ನೀಡಿದಾಗ ಕವಿತಾ ತಾಂರಾಸಿಂಗ್ ಮನೆಯಲ್ಲಿರಲಿಲ್ಲ. ಅಕ್ಕಪಕ್ಕದವರಿಗೆ ವಿಚಾರಿಸಿದಾಗ ಅವಳು, ಕೂಲಿ ಕೆಲಸ ಮಾಡಲು ಹೊಲಕ್ಕೆ ಹೋಗಿದ್ದಾಳೆ ಎಂದರು.ಅಲ್ಲಿನ ಒಬ್ಬ ನಿವಾಸಿಯನ್ನು ಕಳುಹಿಸಿ ಹೊಲದಿಂದ ಕವಿತಾ ಅವಳನ್ನು ಕರೆದುಕೊಂಡು ಬಂದ ಮೇಲೆ ಮಾತನಾಡಿಸಿದಾಗ ತನ್ನ ಕುಟುಂಬದ ಬಡತನದಿಂದ ತಾನು ಮನೆಯಲ್ಲಿರಲು ಆಗದು ಎಂದಳು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರತ್ನಾ ಕಲಂದಾನಿ ಆ ಮನೆಗೆ ಭೇಟಿ ನೀಡಿದಾಗಲೂ ಅವಳು ಆಗ ತಾನೆ ಹೊಲದಿಂದ ಬಂದಿದ್ದಳು.ತಮ್ಮ ಕುಟುಂಬಕ್ಕೆ ಒಂದುವರೆ ಎಕರೆ ಪಟ್ಟಾ ಜಮೀನಿದೆ ಇಲ್ಲಿ ಒಣ ಬೇಸಾಯ ಮಾಡುತ್ತೇವೆ. ಜತೆಗೆ 2 ಎಕರೆ ಅರಣ್ಯ ಜಮೀನು ಸಾಗುವಳಿ ಮಾಡುತ್ತಿದ್ದೇವು. ಆದರೆ ಈಗ ಅರಣ್ಯ ಜಮೀನು ಸಾಗುವಳಿ ಮಾಡುತ್ತಿದ್ದ 2 ಎಕರೆಯಲ್ಲಿ ಒಂದು ಎಕರೆ ಕಸಿದು ಕೊಂಡಿದ್ದಾರೆ.ಈಗ ನಾನು, ನನ್ನ ಪತ್ನಿ, ಸೊಸೆ, ಮಗ ಎಲ್ಲರೂ ಕೂಲಿಗೆ ತೆರಳುತ್ತೇವೆ. ಇಲ್ಲಿ ಕೂಲಿ ಕೆಲಸ ಸಿಗದಿದ್ದರೇ ಮುಂಬಯಿಗೆ ತೆರಳುತ್ತೇವೆ ಎನ್ನುತ್ತಾರೆ, ಶಿವರಾಮ ರೇಕು ರಾಠೋಡ್.ತನಗೆ ಹಾಗೂ ತನ್ನ ಪತ್ನಿಗೆ 65 ವರ್ಷ ವಯಸ್ಸಾಗಿದೆ. ಆದರೆ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಮಾಸಾಶನ ಮಂಜೂರಾಗಿಲ್ಲ ಎಂದರು.ಹೈನುಗಾರಿಕೆ, ಕುರಿ ಸಾಕಾಣಿಕೆಯ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಿದರೆ ಅನುಕೂಲವಾಗುತ್ತದೆ. ಆದರೆ ಸರ್ಕಾರಕ್ಕೆ ಬಡವರ ಕೂಗು ಕೇಳಿಸುವುದಿಲ್ಲ ಎಂದು ಅಸಮಾಧಾನದಿಂದ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry