ಗುರುವಾರ , ಮೇ 19, 2022
24 °C

ಒಂದೂವರೆ ಶತಕದ ಟೆಲಿಗ್ರಾಂ ಸೇವೆಗೆ ಭಾರತ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚಾರಿತ್ರಿಕ 163 ವರ್ಷಗಳ ಸೇವೆಯ ಬಳಿಕ ಭಾರತದಲ್ಲಿನ ಟೆಲಿಗ್ರಾಂ ಸೇವೆ ಭಾನುವಾರ ಅಂತ್ಯಗೊಳ್ಳುತ್ತಿದೆ. ಈ ಸೇವೆಯ ಬೆನ್ನೆಲುಬುಗಳಾಗಿ ಕೆಲಸ ಮಾಡಿದ ಟೆಲಿಗ್ರಾಫಿಸ್ಟರಿಗೆ ಟೆಲಿಗ್ರಾಮು ಇನ್ನು ಮುಂದೆ ನೆನಪು ಮಾತ್ರ.ಆದಾಯದ ಕೊರತೆ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ತನ್ನ ಟೆಲಿಗ್ರಾಂ ಸೇವೆಯನ್ನು ರದ್ದು ಪಡಿಸಲು ತೀರ್ಮಾನಿಸಿದೆ.'ಭಾನುವಾರ ಟೆಲಿಗ್ರಾಂ ಸೇವೆಗಳಿಗೆ ಕೊನೆಯ ದಿನ. ಮುಂಜಾನೆ 8 ಗಂಟೆಗೆ ಆರಂಭವಾಗಿ 9 ಗಂಟೆಗೆ ಮುಕ್ತಾಯವಾಗುವುದು' ಎಂದು ಬಿಎಸ್ಎನ್ ಎಲ್ ಸಿಎಂಡಿ ಆರ್.ಕೆ. ಉಪಾಧ್ಯಾಯ ಹೇಳಿದರು.'ಸೋಮವಾರದಿಂದ ಈ ಸೇವೆ ಲಭ್ಯವಿರುವುದಿಲ್ಲ' ಎಂದು 1997ರಲ್ಲಿ ಹಿರಿಯ ಟೆಲಿಗ್ರಾಫಿಸ್ಟ್ ಆಗಿ ನಿವೃತ್ತಿ ಹೊಂದಿದ ಗುಲ್ಶನ್ ರೈ ವಿಜ್ ನುಡಿದರು. ಸರ್ಕಾರಿ ಹುದ್ದೆಯಲ್ಲಿ ನಾಲ್ಕು ದಶಕಗಳ ಕಾಲ ತಾವು ಸಲ್ಲಿಸಿದ್ದ ಈ ಸೇವೆಯ ಕಾಲಾವಧಿ 'ಟೆಲಿಗ್ರಾಂ ನ ಸ್ವರ್ಣಯುಗವಾಗಿತ್ತು' ಎಂದು ಅವರು ನೆನಪಿಸಿಕೊಂಡರು.'ಟೆಲಿಗ್ರಾಂಗಳು ಕೆಟ್ಟ ಸುದ್ದಿ ತರುತ್ತವೆ' ಎಂಬುದೇ ಬಹುಜನರ ನಂಬಿಕೆಯಾಗಿತ್ತು. ಯುದ್ದದ ಸಾವು ನೋವು, ಅಪಘಾತದ ಸಾವುಗಳ ಸುದ್ದಿಗಳನ್ನು ತರುತ್ತಿದ್ದುದೇ ಟೆಲಿಗ್ರಾಮುಗಳು. ಆದರೆ ಈಗ ಅದು ತನ್ನದೇ ಸಾವಿನ ಸುದ್ದಿಯನ್ನು ಹೊತ್ತುತಂದಿದೆ. ಈ ಸೇವೆಯ ಸ್ವರ್ಣಯುಗದ  ಉತ್ತುಂಗ ಕಾಲವನ್ನು ನಾವು ಸೇವೆಯಲ್ಲಿದ್ದಾಗ ಕಂಡಿದ್ದೆವು. ಹೊತ ತಂತ್ರಜ್ಞಾನ ಹಳೆ ತಂತ್ರಜ್ಞಾನದ ಸ್ಥಳಕ್ಕೆ ಬರುತ್ತದೆ. ಆದರೆ ಟೆಲಿಗ್ರಾಮುಗಳು ನಮಗೆ ಅನ್ನ ನೀಡಿದ್ದಲ್ಲದೆ ವ್ಯಕ್ತಿತ್ತವನ್ನೂ ನೀಡಿದ್ದವು. ಹೀಗಾಗಿ ಟೆಲಿಗ್ರಾಂ ಸೇವೆಯ ವಿದಾಯ ನಮಗೆ ಬೇಸರದ ಭಾವನೆಯನ್ನು ಉಂಟು ಮಾಡುತ್ತಿದೆ'  ಎಂದು ವಿಜ್ ಪಿಟಿ ಐಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.