ಒಂದೇ ಎಕರೆಯಲ್ಲಿ 120 ತಳಿ ಭತ್ತ!

7
ಅಮೃತ ಭೂಮಿ 58

ಒಂದೇ ಎಕರೆಯಲ್ಲಿ 120 ತಳಿ ಭತ್ತ!

Published:
Updated:

‘ನಂಗೊಂಥರಾ ಹುಚ್ಚು ಸಾರ್, ಭತ್ತದ ತಳಿ ಹುಡುಕ್ಕೊಂಡು ಉತ್ತರಾಂಚಲ, ಒಡಿಶಾ, ಬಿಹಾರ ಎಲ್ಲಾ ಅಲೆದಿದ್ದೀನಿ. ಎದುರಿಗೆ ಸಿಕ್ಕ ರೈತರನ್ನು ನಾಟಿ ತಳಿ ಬಿತ್ತನೆ ಬೀಜದ ಭಿಕ್ಷೆ ಬೇಡಿದ್ದೀನಿ. ಈಗ ನೋಡಿ ಒಟ್ಟು 120 ತಳಿ ಭತ್ತ ಸಂಗ್ರಹವಾಗಿದೆ. ಇನ್ನಷ್ಟು ಸಂಗ್ರಹಿಸಿ– ಉಳಿಸಿ ಬೆಳೆಸೋದು ನನ್ನ ಧ್ಯೇಯ’

–ಇದು ತುಮಕೂರು ತಾಲ್ಲೂಕಿನ ಭೈರಸಂದ್ರ ಗ್ರಾಮದ ರೈತ ಚಿದಂಬರಯ್ಯ ಅವರ ಮಾತು.ಕಳೆದ ವರ್ಷ 60ಕ್ಕೂ ಹೆಚ್ಚು ತಳಿ ಭತ್ತ ಬೆಳೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಚಿದಂಬರಯ್ಯ ಈ ಬಾರಿ ತಮ್ಮ ಸಂಗ್ರಹದಲ್ಲಿರುವ ತಳಿಗಳ ಸಂಖ್ಯೆಯನ್ನು ಮೂರಂಕಿ ದಾಟಿಸಿದ್ದಾರೆ.‘ಮಧ್ಯ ಪ್ರದೇಶದ ಜೆ.ಪಿ.ಸಿಂಗ್ 550 ತಳಿ ಭತ್ತ ಇಟ್ಟಿದ್ದಾರೆ. ಒಡಿಶಾದ ಸಬರಮತಿ ಎಂಬಾಕೆಯ ಬಳಿಯೂ 500ಕ್ಕೂ ಹೆಚ್ಚು ತಳಿಯ ಭತ್ತವಿದೆ. ರಾಯಗಢದ ರೈತರೊಬ್ಬರು 900 ತಳಿ ಭತ್ತ ರಕ್ಷಿಸಿದ್ದಾರೆ’ ಎಂದು ಚಿದಂಬರಯ್ಯ ವಿನಯವಾಗಿ ಮುಂದಿನ ಹಾದಿ ಬಿಚ್ಚಿಡುತ್ತಾರೆ.ಸಂಶೋಧನೆ

ಕಲಿತು ವಿಜ್ಞಾನಿಯಾಗದಿದ್ದರೂ ಅನುಭವದಿಂದ ಇವರು ಸಸ್ಯಶಾಸ್ತ್ರ ಅರಿಯುವ ಯತ್ನ ಮಾಡಿದ್ದಾರೆ. ಇದೀಗ ತಮ್ಮ ಸಂಗ್ರಹದಲ್ಲಿರುವ ಭತ್ತದ ತಳಿಗಳಲ್ಲಿ ಸ್ಥಳೀಯ ಪ್ರದೇಶಕ್ಕೆ ಹೊಂದಿಕೊಳ್ಳುವ ಪ್ರಭೇದ, ಹಿಂಗಾರು ಭತ್ತ, ಅತ್ಯುತ್ತಮ ಅಲ್ಪಾವಧಿ ಭತ್ತದ ಪ್ರಭೇದ ಗುರುತಿಸುವ ಪ್ರಯತ್ನ ಆರಂಭಿಸಿದ್ದಾರೆ.‘ಮಳೆ ಸುರಿಯುವ ಕಾಲಮಾನ ಬದಲಾಗುತ್ತಿದೆ. ಹಲವು ಬಾರಿ ಮುಂಗಾರು ಕೈಕೊಟ್ಟು ಹಿಂಗಾರು ಚೆನ್ನಾಗಿ ಬಿದ್ದಿದೆ. ಇಂಥ ವೇಳೆ ಬಿತ್ತಬಹುದಾದ ಅಲ್ಪಾವಧಿ ಭತ್ತಕ್ಕೆ ಹುಡುಕಾಟ ನಡೆಸಿದ್ದೇನೆ. ಈ ವರ್ಷ ನಾನು ಬಿತ್ತಿರುವ ‘ವಸುಂಧರ’ ಹೊಸ ಭರವಸೆ ಮೂಡಿಸಿದೆ. ಇದು ಚಳಿಗಾಲದ ಅಲ್ಪಾವಧಿ ಬೆಳೆ. ಉತ್ತರಾಖಂಡದ ರೈತರೊಬ್ಬರು ಇದನ್ನು ಕೊಟ್ಟರು’ ಎಂದು ವಿವರಿಸುತ್ತಾರೆ.ಹೈಬ್ರಿಡ್ ತಳಿಯಾದ ಐ.ಆರ್‌.64 ಭತ್ತಕ್ಕೂ– ದೇಸಿ ತಳಿಯಾದ ರಾಜಮುಡಿಯ ತೌಲನಿಕ ಅಧ್ಯಯನ ನಡೆಸಿದ್ದಾರೆ. ಐ.ಆರ್.64ರಲ್ಲಿ 1 ಎಕರೆಗೆ 60 ಹೊರೆ ಹುಲ್ಲು, 38 ಚೀಲ ಭತ್ತ (ಶೇ 40 ಜೊಳ್ಳು) ಸಿಗುತ್ತದೆ, ಒಂದು ತೆನೆ ಭತ್ತದಲ್ಲಿ 160 ಕಾಳು ಇರುತ್ತದೆ. ರಾಜಮುಡಿಯಲ್ಲಿ 175 ಹೊರೆ ಹುಲ್ಲು, 30 ಚೀಲ ಭತ್ತ (ಶೇ 10 ಜೊಳ್ಳು) ಸಿಗುತ್ತದೆ. ಒಂದು ತೆನೆ ಭತ್ತದಲ್ಲಿ 300 ಕಾಳು ಇರುತ್ತದೆ. ಇದೇ ರೀತಿ ಹಲವು ತಳಿಗಳ ಇಳುವರಿ, ಹುಲ್ಲಿನ ಒದಗುವಿಕೆ, ಖರ್ಚುವೆಚ್ಚದ ಲೆಕ್ಕಾಚಾರದ ಬಗ್ಗೆಯೂ ಚಿದಂಬರಯ್ಯ ಬಳಿ ಮಾಹಿತಿ ಇದೆ.ಔಷಧೀಯ ಗುಣಗಳು

‘ಉತ್ತಮ ಗುಣಮಟ್ಟದ ಆಹಾರ ಸೇವಿಸಿದರೆ ಔಷಧಿಯ ಅಗತ್ಯವೇ ಬೀಳುವುದಿಲ್ಲ’ ಎನ್ನುವ ಮಾತನ್ನು ಪದೇಪದೇ ಹೇಳುತ್ತಾರೆ. ಇವರ ಸಂಗ್ರಹದಲ್ಲಿರುವ ದೊಡ್ಡಬೈರನೆಲ್ಲು, ನವರ, ಜೋಳಗ, ಕರಿಕಳವೆ, ಬಿಳಿನೆಲ್ಲು, ಕರಿಜಡ್ಡು ಸೇರಿದಂತೆ ಸುಮಾರು 32 ತಳಿಗಳ ಭತ್ತ ಔಷಧೀಯ ಗುಣಗಳನ್ನು ಹೊಂದಿದೆ. ದೊಡ್ಡಬೈರನೆಲ್ಲು ಮತ್ತು ಜೋಳಗ ಭತ್ತ ಬಳಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು. ಕರಿಕಳವೆ ಭತ್ತದ ಅಕ್ಕಿ ತಿಂದರೆ ಭೇದಿ ನಿಲ್ಲುತ್ತದೆ. ನವರದ ಅನ್ನ ಸಂಧಿವಾತಕ್ಕೆ ಔಷಧಿ ಎಂದು ಜನಪದ ವೈದ್ಯ ವಿಜ್ಞಾನವನ್ನು ತೆರೆದಿಡುತ್ತಾರೆ.ನೈಸರ್ಗಿಕ ಕೃಷಿ

ಸುಭಾಷ್ ಪಾಳೇಕರ್ ಪ್ರತಿಪಾದಿಸಿದ ನೈಸರ್ಗಿಕ ಕೃಷಿಯಲ್ಲಿ ವಿಶ್ವಾಸವಿರಿಸಿರುವ ಚಿದಂಬರಯ್ಯ, ಗದ್ದೆಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿಲ್ಲ. ‘ಸೆಗಣಿ– ಗಂಜಲ– ಮಜ್ಜಿಗೆ– ಜೀವಾಮೃತ– ಘನಾಮೃತವೇ ಸಾಕು’ ಎನ್ನುತ್ತಾರೆ. ಕೀಟ ಬಾಧೆ ಕಾಣಿಸಿಕೊಂಡಾಗ ಗಂಜಲಕ್ಕೆ ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ ಹತೋಟಿಗೆ ತಂದಿದ್ದಾರೆ.ರಾಗಿ ಬೆಳೆಯ ಸುಮಾರು 48 ತಳಿ ಸಂಗ್ರಹ ಚಿದಂಬರಯ್ಯ ಅವರ ಬಳಿ ಇದೆ. ತಮ್ಮ ಸಂಗ್ರಹದಲ್ಲಿರುವ ಕರ್ನಾಟಕದ ಬಹುಮುಖ್ಯ ಆಹಾರದ ಬೆಳೆಯಾದ ರಾಗಿ ಮತ್ತು ಭತ್ತದ ನಾಟಿ ತಳಿಗಳ ವೈವಿಧ್ಯ ಹೆಚ್ಚಿಸುವುದು ಮತ್ತು ಪ್ರತಿ ತಳಿಯ ಗುಣಧರ್ಮದ ಸಮಗ್ರ ದಾಖಲಾತಿ ಮಾಡುವುದು ಚಿದಂಬರಯ್ಯ ಅವರ ಜೀವಮಾನದ ಕನಸು. ಈ ಕನಸು ಸಾಕಾರಗೊಳ್ಳಲು ಅವರಿಗೆ ಯುವ ರೈತರು ಮತ್ತು ಸಮಾನ ಮನಸ್ಕರ ನೆರವು ಬೇಕಿದೆ. ಚಿದಂಬರಯ್ಯ ಅವರ ಮೊಬೈಲ್ ಸಂಖ್ಯೆ 9342259434.ಭತ್ತದ ಬಹುವಿಧ

ಚಿದಂಬರಯ್ಯ ಸಂಗ್ರಹದಲ್ಲಿರುವ ಭತ್ತದ ಮುಖ್ಯ ತಳಿಗಳು ದೇವಮಲ್ಲಿಗೆ, ಸೇಲಂಸಣ್ಣ, ಒಂದೂವರೆ, ಮಳ್ಳಕಾಂತಿ, ಜೀರಿಗೆ ಸಣ್ಣ, ದೊಡ್ಡಭೈರನೆಲ್ಲು, ಕೆಂಪದೊಡ್ಡಿ, ಮಾಲ್ಗೂಡಿಸಣ್ಣ, ಕರಿಗೆಜವಲ್ಲಿ, ಬರ್ಮಾಬ್ಲಾಕ್, ಹುಣೆಹೂವಿನಭತ್ತ, ಪರಿಮಳಸಣ್ಣ, ಕಾಗಿಸಾಳಿ (ಬಾಣಂತಿ ಭತ್ತ), ಘಂಸಾಲೆ, ಬಂಗಾರಸಣ್ಣ, ಭಾಸುಮತಿ, ಕಿಚಡಿಸಾಂಬ, ನಾಗಭತ್ತ, ರಾಜಭೋಗ, ಕಣದತುಂಬ, ನಾರಿಕೇಳ, ಮುಕ್ಕಣಸಣ್ಣ, ಶಂಕರ, ಕುಮಡುಗ, ಗರ್ಮಾನಂದ, ಜವಗು, ಮೈಸೂರು ಮಲ್ಲಿಗೆ, ಜೇನುಗೂಡು, ರತ್ನಚೂಡಿ, ಕಾಲಜೀರ, ಅತಿಕಾಯ, ಅಬೆಮೊಹರ್, ಗುಜಗುಂಡ, ಕಾಲಕೊಲ್ಲಿ, ಲಾಲ್‌ಕಡ್‌, ಬಾದಷಬೋಗ, ನೆಟ್ಟಿಭತ್ತ, ಪೂಸ ಭಾಸುಮತಿ, ಮೆಹದಿ, ಮುದದದೊಡ್ಡಿಗ್ಯಾ, ಹಳಗ, ಪತ್ತೇರ, ರಾಜಕಮಲ್, ಕಹೆಗ್ಗ, ಸಕುವ, ಮಟಳಗ, ಸಿದ್ದಸಣ್ಣ, ಕವಿರಾಜಷಾ, ಮೀಸೆಭತ್ತ, ಮರಭತ್ತ ಇತ್ಯಾದಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry