ಮಂಗಳವಾರ, ಆಗಸ್ಟ್ 20, 2019
21 °C

ಒಂದೇ ಕುಟುಂಬದ ಐವರ ಸಾವು

Published:
Updated:

ಅರಸೀಕೆರೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ಅರಸೀಕೆರೆ- ಬಾಣಾವರ ನಡುವಿನ ಬೆಂಡೇಕೆರೆ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ಮೃತಪಟ್ಟವರೆಲ್ಲರೂ ಬೆಂಗಳೂರಿನ ಕೆಂಗೇರಿ ನಿವಾಸಿಗಳು. ಕೆಪಿಟಿಸಿಎಲ್‌ನ ನಿವೃತ್ತ ಅಧೀಕ್ಷಕ ಬೆಟ್ಟೇಗೌಡ (60), ಅವರ ಪುತ್ರ ಜಗದೀಶ್ (35), ಜಗದೀಶ್ ಪತ್ನಿ ಕುಮುದಾ (28) ಜಗದೀಶ್- ಕುಮುದಾ ಅವರ ಒಂದೂವರೆ ವರ್ಷದ ಮಗು ಧನುಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಟ್ಟೇಗೌಡರ ಪತ್ನಿ ನಾಗಮ್ಮ (55) ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರು.ಎರಡು ದಿನಗಳ ರಜೆ ಕಾರಣ ಜೋಗ ಜಲಪಾತ ನೋಡಲು ಬೆಟ್ಟೇಗೌಡ ಕುಟುಂಬದ 10 ಮಂದಿ ಎರಡು ಕಾರುಗಳಲ್ಲಿ  ಶನಿವಾರ ಹೊರಟಿದ್ದರು. ಭಾನುವಾರ ಜಲಪಾತವನ್ನು ವೀಕ್ಷಿಸಿ ಕಾರ್ಗಲ್‌ನಲ್ಲಿರುವ ತಮ್ಮ ಬಂಧುಗಳ ಮನೆಯಲ್ಲಿ ತಂಗಿದ್ದರು.ಅಲ್ಲಿಂದ ಸೋಮವಾರ ನಸುಕಿನಲ್ಲಿ ಹೊರಟು ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಬೆಂಡೇಕೆರೆಯಲ್ಲಿ ಮುಂದೆ ಚಲಿಸುತ್ತಿದ್ದ ಆಟೊರಿಕ್ಷಾ ಹಿಂದಿಕ್ಕಲು ಯತ್ನಿಸಿದಾಗ ಹಾಸನದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಅಪಘಾತದ ರಭಸಕ್ಕೆ ಬಸ್ಸಿನ ಟೈರ್ ಸಿಡಿದಿದೆ, ಕಾರು ಗುರುತು ಸಿಗದಂತೆ ನಜ್ಜುಗುಜ್ಜಾಗಿದೆ.

Post Comments (+)