ಮಂಗಳವಾರ, ನವೆಂಬರ್ 12, 2019
28 °C
ನಾಗಮಂಗಲ ಬಳಿ ರಸ್ತೆ ಅಪಘಾತ

ಒಂದೇ ಕುಟುಂಬದ 13 ಮಂದಿಗೆ ಗಾಯ

Published:
Updated:

ಬೆಂಗಳೂರು: ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಸಮೀಪದ ದೇವಿಹಳ್ಳಿ ಬಳಿ ಶನಿವಾರ ರಾತ್ರಿ ಟೆಂಪೊ ಟ್ರಾವೆಲರ್ (ಟಿಟಿ) ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಒಂದೇ ಕುಟುಂಬದ 13 ಮಂದಿ ಗಾಯಗೊಂಡಿದ್ದಾರೆ.ಇಂದಿರಾ (45), ಮಮತಾ (20), ಪ್ರದೀಪ್ (29), ಲತಾ (45), ನಾಗರಾಜ್ (55), ಶೃತಿ (26), ಭುವನೇಶ್ವರಿ (45), ಪ್ರಸನ್ನ (18), ಮಂಜುನಾಥ್ (59), ಸುವರ್ಣ (38), ರೇಣುಕಾ (50), ಕಮಲಮ್ಮ (60) ಮತ್ತು ವೇಣುಗೋಪಾಲ್ (29) ಗಾಯಗೊಂಡವರು. ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.`ಪ್ರತಿ ವರ್ಷದಂತೆ ಈ ಬಾರಿಯೂ ಸಂಬಂಧಿಕರೆಲ್ಲಾ ಧರ್ಮಸ್ಥಳಕ್ಕೆ ಹೋಗಲು ನಿರ್ಧರಿಸಿದ್ದೆವು. ಹೀಗಾಗಿ ನಗರದ ವಿವಿಧೆಡೆ ವಾಸವಿರುವ ಸಂಬಂಧಿಕರು ಸಂಜೆ ವೇಳೆಗೆ ಮೂಡಲಪಾಳ್ಯದಲ್ಲಿ ಸೇರಿದ್ದರು. ಅಲ್ಲಿಂದ ರಾತ್ರಿ ಹತ್ತು ಗಂಟೆ ಸುಮಾರಿಗೆ ಟಿ.ಟಿಯಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದೆವು. ಆದರೆ, 12.30ರ ಸುಮಾರಿಗೆ ದೇವಿಹಳ್ಳಿ ಬಳಿ ಬಂದಾಗ ಹಿಂದಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಬಲಬದಿಯಿಂದ ನಮ್ಮ ವಾಹನವನ್ನು ಹಿಂದಿಕ್ಕಲು ಮುಂದಾಯಿತು. ಆಗ ನಮ್ಮ ಚಾಲಕ ವಾಹನವನ್ನು ಎಡಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ. ಇದರಿಂದಾಗಿ ಟಿ.ಟಿ ಪಕ್ಕದ ರಸ್ತೆಗೆ ಉರುಳಿತು' ಎಂದು ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರದೀಪ್ ಘಟನೆಯನ್ನು ವಿವರಿಸಿದರು.ಕೂಡಲೇ ಸ್ಥಳೀಯರು ಹಾಗೂ ಆ ಮಾರ್ಗದಲ್ಲಿ ಚಲಿಸುತ್ತಿದ್ದ ವಾಹನಗಳ ಸವಾರರು ನಮ್ಮನ್ನು ಟಿ.ಟಿಯಿಂದ ಹೊರಗೆ ತೆಗೆದು, ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಗುರುವಾರ ಬೆಳಗಿನ ಜಾವ ಗಾಯಾಳುಗಳನ್ನು ನಗರದ ಆಸ್ಪತ್ರೆಗಳಿಗೆ ವರ್ಗಾಯಿಸಿದರು ಎಂದು ಅವರು ಮಾಹಿತಿ ನೀಡಿದರು.ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಟಿ.ಟಿಯಲ್ಲಿ ಚಾಲಕ ಸೇರಿ 15 ಮಂದಿ ಇದ್ದರು. ಅದೃಷ್ಟವಶಾತ್ ಮೂರು ವರ್ಷದ ಯಶಸ್ ಹಾಗೂ ಚಾಲಕ ಮಹೇಶ್‌ಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಘಟನೆ ನಂತರ ಬಸ್ ಚಾಲಕ ವಾಹನವನ್ನು ನಿಲ್ಲಿಸದೆ ಹೋಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೆಳ್ಳೂರು ಪೊಲೀಸರು ಹೇಳಿದ್ದಾರೆ.`ಅಪಘಾತದಲ್ಲಿ ಬಹುತೇಕ ಮಂದಿಗೆ ಹೊಟ್ಟೆ ಭಾಗಕ್ಕೆ ಪೆಟ್ಟು ಬಿದ್ದಿದೆ. ಆದರೆ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಾಸ್ಮಾಟ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)