ಸೋಮವಾರ, ಮೇ 10, 2021
26 °C

ಒಂದೇ ಕುಟುಂಬದ 16 ಮಂದಿ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಉತ್ತರ ಭಾರತದ ಕೇದಾರನಾಥ ಹಾಗೂ ಬದರಿನಾಥ ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಿದ್ದ ಮದ್ದೂರು ಪಟ್ಟಣದ ಒಂದೇ ಕುಟುಂಬದ 17 ಮಂದಿಯಲ್ಲಿ 16 ಮಂದಿ ಜಲಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಪಟ್ಟಣದ ಕೋಟೆಬೀದಿ ನಿವಾಸಿ, ಹಿರಿಯ ಪತ್ರಕರ್ತ ಎಂ.ಜಿ. ಸೀತಾರಾಮು ಕುಟುಂಬದವರೇ ಸಂಕಷ್ಟಕ್ಕೆ ಸಿಲುಕಿದವರು. ಸೀತಾರಾಮು ಅವರನ್ನು ಹೊರತುಪಡಿಸಿ ಅವರ ಕುಟುಂಬದ ಉಳಿದ ಸದಸ್ಯರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದೀಗ ಸೀತಾರಾಮು ಅವರು ಕೇದರನಾಥದಲ್ಲಿ ತೆರೆಯಲಾದ ಗಂಜಿ ಕೇಂದ್ರದಲ್ಲಿದ್ದಾರೆ.ವಿವರ: ಜೂನ್ 12ರಂದು ಉತ್ತರ ಭಾರತ ಪ್ರವಾಸಕ್ಕೆಂದು ಸೀತಾರಾಮು, ಅವರ ಪತ್ನಿ ನೀಲಾ, ಅವರ ಹಿರಿಯ ಪುತ್ರ ಮತ್ತು ಸೀತಾರಾಮು ಅವರ ಹಿರಿಯ ಸಹೋದರ ಎಂ.ಜಿ. ನಾಗರಾಜರಾವ್, ಅವರ ಪತ್ನಿ ಸುಮಾ, ಪುತ್ರ ಅನಂತ, ಪುತ್ರಿ ನಾಗಶ್ರೀ ಹಾಗೂ ಅಳಿಯ ಮತ್ತು ನಾಗರಾಜರಾವ್ ಅವರ ನಾಲ್ವರು ಮೊಮ್ಮಕ್ಕಳು, ಸೀತಾರಾಮು ಅವರ ಕಿರಿಯ ಸಹೋದರರಾದ ಎಂ.ಜಿ. ಗುರುರಾಜ್, ಅವರ ಪತ್ನಿ ಸುನಂದಾ, ಮತ್ತೊಬ್ಬ ಸಹೋದರ ಎಂ.ಜಿ. ರಮೇಶ್ ಹಾಗೂ ಅವರ ಪತ್ನಿ ಲಕ್ಷ್ಮೀ ಮತ್ತು ಮತ್ತೊಬ್ಬರು ಸೇರಿದಂತೆ ಒಟ್ಟು 17 ಮಂದಿ ತೆರಳಿದ್ದರು.ಜೂನ್ 12ರಂದು ಬೆಂಗಳೂರಿನಿಂದ ವಿಮಾನದ ಮೂಲಕ  ದೆಹಲಿಗೆ ಸಂಜೆ ತಲುಪಿದ ಅವರು, ಅಲ್ಲಿಂದ ರಾತ್ರಿ ಖಾಸಗಿ ಟ್ರಾವೆಲ್ಸ್‌ನ ಬಸ್ಸೊಂದರಲ್ಲಿ  ಕೇದಾರನಾಥಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಪ್ರವಾಹಕ್ಕೆ ಸಿಲುಕಿ ಚೆಲ್ಲಾಪಿಲ್ಲಿಯಾಗಿದ್ದಾರೆ. ಇದಾದ ಬಳಿಕ ಎರಡು ದಿನಗಳ ನಂತರ ಸೀತಾರಾಮು ಅವರನ್ನು ಅರೆ ಸೇನಾಪಡೆ ಯೀಧರು ರಕ್ಷಣೆ ಮಾಡಿದ್ದಾರೆ.ಪುತ್ರನ ಮೊರೆ: ಪ್ರವಾಸಕ್ಕೆ ತೆರಳದೇ ಇದ್ದ ಅವರ ಕಿರಿಯ ಪುತ್ರ ರಾಘವೇಂದ್ರ ಅವರು ಕೇದಾರನಾಥಕ್ಕೆ ತೆರಳಿದ್ದಾರೆ. ನಾಪತ್ತೆಯಾಗಿರುವ ಕುಟುಂಬದ ಸದಸ್ಯರನ್ನು ಕೂಡಲೇ ಹುಡುಕಿಕೊಡುವಂತೆ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದಾರೆ.

ಸಂತ್ರಸ್ತರಿಗೆ ಪೇಜಾವರ ಮಠದಿಂದ ವ್ಯವಸ್ಥೆ

ಉಡುಪಿ: ಉತ್ತರ ಭಾರತದಲ್ಲಿ ಪ್ರವಾಹಕ್ಕೆ ಸಿಲುಕಿರುವ ರಾಜ್ಯದ ಯಾತ್ರಾರ್ಥಿಗಳಿಗೆ  ಉಡುಪಿ ಪೇಜಾವರ ಮಠದ ಬದರಿನಾಥ, ಹರಿದ್ವಾರ ಮತ್ತು ದೆಹಲಿಯ ಶಾಖಾ ಮಠ ಹಾಗೂ ಆಶ್ರಮಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.ರಾಜ್ಯದ ಯಾತ್ರಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಔಷಧಿ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಶಾಖಾ ಮಠಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ.ಬದರಿನಾಥದಲ್ಲಿರುವ ಶಾಖಾ ಮಠವಾದ ಅನಂತ ಮಠದಲ್ಲಿ ಸುಮಾರು 500 ಮಂದಿ ಉಳಿದುಕೊಂಡಿದ್ದಾರೆ. ಅಲ್ಲಿರುವ ಇತರ ಮಠಗಳಲ್ಲಿ ತಂಗಿದ್ದವರನ್ನು, ವಾಸ್ತವ್ಯ ಹೂಡಿದ್ದವರನ್ನು ಬಲವಂತವಾಗಿ ಹೊರದೂಡುತ್ತಿರುವ ಪರಿಣಾಮ ಆಶ್ರಯ ಕೋರಿ ಅನಂತ ಮಠಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಲವು ದಿನಗಳಿಂದ ಮಠದಲ್ಲಿ ಉಳಿದುಕೊಂಡಿರುವ ಯಾತ್ರಾರ್ಥಿಗಳ ಔಷಧ ಖಾಲಿಯಾಗಿರುವುದರಿಂದ ಔಷಧಿಯನ್ನು ತುರ್ತಾಗಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.ದೆಹಲಿಯ ವಸಂತ ಕುಂಜದಲ್ಲಿನ ಶಾಖಾ ಮಠ ಮತ್ತು ಹರಿದ್ವಾರದ ಮಾಧ್ವ ಆಶ್ರಮದಲ್ಲೂ ನೂರಾರು ಮಂದಿ ಯಾತ್ರಾರ್ಥಿಗಳು ಉಳಿದುಕೊಂಡಿದ್ದಾರೆ. ಎಲ್ಲರಿಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.