ಒಂದೇ ಕೂರಿಗೆಯಲ್ಲಿ ಹಲವು ಬಿತ್ತನೆ

7

ಒಂದೇ ಕೂರಿಗೆಯಲ್ಲಿ ಹಲವು ಬಿತ್ತನೆ

Published:
Updated:
ಒಂದೇ ಕೂರಿಗೆಯಲ್ಲಿ ಹಲವು ಬಿತ್ತನೆ

 ಪ್ರತಿಯೊಂದು ಬೆಳೆಯ ಬಿತ್ತನೆಗೆ ಪ್ರತ್ಯೇಕವಾದ ಬಿತ್ತನೆ ಕೂರಿಗೆಗಳಿವೆ. ಸಣ್ಣ ರೈತರು ಮೂರ್ನಾಲ್ಕು ಬಿತ್ತನೆ ಕೂರಿಗೆಗಳನ್ನು ಬಳಸುತ್ತಾರೆ.ಅದರ ಬದಲು ಒಂದೇ ಕುರಿಗೆ ಬಳಸಿ ಬಿತ್ತನೆ ಮಾಡಲು ಸಾಧ್ಯವಿದೆ. ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಷಣ್ಮುಖಪ್ಪ ಕಂಬಾರ ಎಂಬ ವೃತ್ತಿಪರ ಕಮ್ಮಾರರು `ಗಜೇಂದ್ರ~ ಹೆಸರಿನ ಕೂರಿಗೆಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಕೂರಿಗೆ ಬಳಸಿ ಹಲವು ಬೆಳೆಗಳ ಬಿತ್ತನೆ ಮಾಡಬಹುದು.ಷಣ್ಮುಖಪ್ಪ ಕುಂಬಾರ ರೈತರು ಬಿತ್ತನೆ ಮಾಡುವಾಗ ಹಲವು ಕೂರಿಗೆಗಳನ್ನು ಬಳಸುವುದನ್ನು  ನೋಡಿದ್ದರು. ಹಲವು ಕೂರಿಗೆ ಬದಲು ಒಂದೇ ಕೂರಿಗೆ ಬಳಸಲು ಸಾಧ್ಯವಿಲ್ಲವೇ ಎಂಬ ಆಲೋಚನೆ ಬಂತು.ಅದರ ಫಲವೇ `ಗಜೇಂದ್ರ~ ಬಿತ್ತನೆ ಕೂರಿಗೆ.ಸಣ್ಣ ರೈತರು ಪ್ರತಿ ವರ್ಷ ಕೂರಿಗೆ ಕುಂಟೆ, ನೇಗಿಲುಗಳಿಗೆ ಹಾಗೂ ಎಡೆಕುಂಟಿ ಇತ್ಯಾದಿಗಳಿಗೆ ಹಣ ಖರ್ಚು ಮಾಡುತ್ತಾರೆ.

 

ಇನ್ನು ಕೆಲವರು ಬೇರೆಯವ ಕೂರಿಗೆಯನ್ನು ಕಡ ತಂದು ಬಿತ್ತನೆ ಮಾಡುತ್ತಾರೆ. ಎಲ್ಲ ರೈತರೂ ಏಕ ಕಾಲದಲ್ಲಿ ಬಿತ್ತನೆ ಮಾಡುವುದರಿಂದ ಬಿತ್ತನೆ ಉಪಕರಣಗಳು ಕೆಲವೊಮ್ಮೆ ಹಣ ಕೊಟ್ಟರೂ ಸಿಗುವುದಿಲ್ಲ.ಹೀಗಾಗಿ ಬಹುತೇಕ ರೈತರು ತಮ್ಮದೇ ಆದ ಬಿತ್ತನೆ ಉಪಕರಣಗಳನ್ನು ಇಟ್ಟುಕೊಳ್ಳುವುದು ಅನಿವಾರ್ಯ.ಗಜೇಂದ್ರ ಬಿತ್ತನೆ ಕೂರಿಗೆಯನ್ನು ಬಳಸಿ ಭೂಮಿಯನ್ನು ಸುಮಾರು ಒಂದು ಅಡಿ ಆಳದವರೆಗೆ ಉಳಬಹುದು. ಅದು ನೇಗಿಲಿನಂತೆ ಭೂಮಿಯನ್ನು ಎರಡೂ ಬದಿಗೆ ಸೀಳಿ ಉಳುತ್ತದೆ. ಮೂರು ಅಳತೆಯ ಕುಂಟೆಯಾಗಿ ಪರಿವರ್ತನೆಗೊಂಡು ಹತ್ತಿ ಬಿತ್ತಬಹುದು.ಕಬ್ಬಿನ ಹೊಲದಲ್ಲಿ ಹರಗಬಹುದು. ಎರಡು ಅಡಿಗಳ ಅಂತರದಲ್ಲಿ ಮಾಗಿ ಉಳುಮೆ ಮಾಡಿ ಭೂಮಿ ಹದಗೊಳಿಸಬಹುದು. ಬಿತ್ತುವಾಗ ಭೂಮಿಯನ್ನು  ಸಮತಟ್ಟಾಗಿಸಲು ಹಾಗೂ ಕಸವನ್ನು ಒಂದೆಡೆ  ಕೂಡಿ ಹಾಕಲೂ ಬಳಸಬಹುದು. ಗಜೇಂದ್ರ ಕೂರಿಗೆಯಲ್ಲಿ ಜೋಳ, ಗೋಧಿ,ಕಡಲೆ, ಹೆಸರು ಹಾಗೂ ಶೇಂಗಾ ಬಿತ್ತಲು ಬಳಸಬಹುದು.ವಿಶೇಷವೆಂದರೆ ಬೀಜ ಹಾಗೂ ಗೊಬ್ಬರವನ್ನು ಏಕ ಕಾಲಕ್ಕೆ ಈ ಕೂರಿಗೆಯಲ್ಲಿ ಬಿತ್ತಬಹುದು. ಬಿತ್ತಿದ ತಕ್ಷಣ ಸಾಲು ಮುಚ್ಚುವ  ಪ್ರಕ್ರಿಯೆಗೂ ಇದರಲ್ಲಿ ಅವಕಾಶವಿದೆ. ಬೇರೆ ಕೂರಿಗೆಯಲ್ಲಿ ಬಿತ್ತಿದ ನಂತರ ಹರಗಬೇಕಾಗುತ್ತದೆ. ಗಜೇಂದ್ರ ಕೂರಿಗೆಯನ್ನು ಯಾವುದೇ ಅಳತೆಗೆ ತಕ್ಕಂತೆ ಹಿಗ್ಗಿಸುವ ಮತ್ತು ಕುಗ್ಗಿಸಲು ಅನುಕೂಲವಾಗುವ  ಸಂಯೋಜನೆಗಳನ್ನು ಒಳಗೊಂಡಿದೆ. 

 

ರೈತರು ಗಜೇಂದ್ರ ಕೂರಿಗೆಯನ್ನು ಬಳಸುವುದರಿಂದ ಬಿತ್ತುವ ಮತ್ತು ಹರಗುವ ಕೆಲಸಗಳು ಹಗುರವಾಗುತ್ತವೆ. ರೈತರು ಈ ಕೂರಿಗೆಯನ್ನು ಬಳಸಿದರೆ ಷಣ್ಮುಖ ಕಂಬಾರ ಅವರ ಶ್ರಮ ಸಾರ್ಥಕವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಷಣ್ಮುಖ ಕಂಬಾರ  ಅವರನ್ನು ಸಂಪರ್ಕಿಸಬಹುದು.ಅವರ ಮೊಬೈಲ್ ನಂಬರ್ 9880372237.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry