ಒಂದೇ ಕೊಠಡಿ ಮೇಲೆ ಮಂತ್ರಿಗಳಿಬ್ಬರ ಕಣ್ಣು

7
ತರಾತುರಿಯಲ್ಲಿ ಕಚೇರಿ ಬದಲಾಯಿಸಿದ ಸಚಿವ ಆಂಜನೇಯ

ಒಂದೇ ಕೊಠಡಿ ಮೇಲೆ ಮಂತ್ರಿಗಳಿಬ್ಬರ ಕಣ್ಣು

Published:
Updated:

ಬೆಂಗಳೂರು: ವಿಧಾನಸೌಧದ ಮೂರ­ನೇ ಮಹಡಿಯಲ್ಲಿನ ಒಂದು ಕೊಠಡಿ,   ಸಮಾಜ ಕಲ್ಯಾಣ ಸಚಿವ ಎಚ್‌.­ಆಂಜನೇಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ನಡುವೆ ಪೈಪೋಟಿ­ಗೆ ಕಾರಣವಾಗಿದೆ.ಆಂಜನೇಯ ಅವರಿಗೆ ಹೊಸದಾಗಿ ಹಂಚಿಕೆಯಾದ ಕೊಠಡಿಯ ಮೇಲೆ  ಶಿವಕುಮಾರ್‌ ಕಣ್ಣು ಹಾಕಿದ್ದಾರೆ. ಇದು ಗೊತ್ತಾದ ಕೂಡಲೆ ನವೀಕ­ರಣಕ್ಕೂ ಕಾಯದೇ ಆಂಜನೇಯ ತರಾ­ತುರಿಯಲ್ಲಿ ಶುಕ್ರವಾರ ಹೊಸ ಕೊಠ­ಡಿಗೆ ತಮ್ಮ ಕಚೇರಿ ಸ್ಥಳಾಂತರಿಸಿದ್ದಾರೆ.ಆಂಜನೇಯ ಈವರೆಗೂ ವಿಧಾನ­ಸೌಧದ ಮೂರನೇ ಮಹಡಿಯಲ್ಲಿ­ರುವ 336ನೇ ಸಂಖ್ಯೆಯ ಕೊಠಡಿ ಹೊಂದಿ­ದ್ದರು. ಕೊಠಡಿ ಸಂಖ್ಯೆ 335­ರಲ್ಲಿ ಅವರ ಸಿಬ್ಬಂದಿಯ ಕಚೇರಿ ಇತ್ತು. ಆದರೆ, ಇದು ಚಿಕ್ಕದಾಗಿದ್ದ ಕಾರಣ ಬೇರೆ ಕೊಠಡಿ ಹಂಚಿಕೆ ಮಾಡುವಂತೆ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದರು.ಅದರಂತೆ ಡಿ. 17ರಂದು ಅವರಿಗೆ ಕೊಠಡಿ ಸಂಖ್ಯೆ 340, 340–ಎ ಮತ್ತು 341ನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ಅಲ್ಲದೆ 340 ಮತ್ತು 340–ಎ ಕೊಠಡಿಗಳ ನಡುವೆ ಇದ್ದ ಅಡ್ಡಗೋಡೆಯನ್ನು ಒಡೆದು ವಿಸ್ತಾರವಾದ ಒಂದೇ ಕೊಠಡಿ­ಯನ್ನು ರೂಪಿಸಲು, ನೆಲಹಾಸು, ಒಳಾಂಗಣ ವಿನ್ಯಾಸ ಮತ್ತು ಪೀಠೋಪ­ಕರಣ­ಗಳನ್ನು ಬದಲಾಯಿಸಲು ರೂ. 18 ಲಕ್ಷ ವೆಚ್ಚದ ಕಾಮಗಾರಿಗೂ ಅಂದೇ ಅನುಮತಿ ನೀಡ­ಲಾಗಿತ್ತು. ಆದರೂ ಅಲ್ಲಿ ಕಾಮಗಾರಿ ಆರಂಭವೇ ಆಗಿರ­ಲಿಲ್ಲ. ಕೊಠಡಿಯನ್ನು ಸಚಿವರಿಗೆ ಹಸ್ತಾಂ­­ತ­ರಿಸುವುದಕ್ಕೆ ಅಧಿಕಾರಿಗಳು ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ.ಡಿಕೆಶಿ ವಾಸ್ತು ಪರಿಶೀಲನೆ: ಈ ಮಧ್ಯೆ ಗುರುವಾರ ರಾತ್ರಿ ವಾಸ್ತುತಜ್ಞರ ಜೊತೆ ಬಂದ ಸಚಿವ ಡಿ.ಕೆ.­ಶಿವಕುಮಾರ್‌ ಅವರು ವಿಧಾನಸೌಧ ಮತ್ತು ವಿಕಾಸ­ಸೌಧ ಎರಡೂ ಕಟ್ಟಡ­ಗಳಲ್ಲೂ ಸೂಕ್ತ ಕೊಠಡಿಗಾಗಿ ಪರಿಶೀಲನೆ ನಡೆಸಿದ್ದರು. ವಿಧಾನಸೌಧ­ದಲ್ಲಿ ಈಗಾಗಲೇ ಆಂಜ­ನೇಯ ಅವರಿಗೆ ಹಂಚಿಕೆಯಾಗಿರುವ (340, 340–ಎ ಮತ್ತು341) ಕೊಠಡಿಗಳೇ ಶಿವ­ಕುಮಾರ್‌ ಅವರಿಗೆ ವಾಸ್ತು ಪ್ರಕಾರ ಹೊಂದಿಕೆ ಆಗುತ್ತವೆ ಎಂದು ವಾಸ್ತು­ತಜ್ಞರು ಸಲಹೆ ನೀಡಿ­ದ್ದರು. ಅದೇ ಕೊಠಡಿಗಳನ್ನು ತಮಗೆ ಹಂಚಿಕೆ ಮಾಡುವಂತೆ ಡಿಪಿಎ­ಆರ್‌ ಅಧಿಕಾರಿ­ಗಳಿಗೆ ಮನವಿ ಮಾಡಿದ್ದರು.ಆಂಜನೇಯ ಕೆಂಡಾಮಂಡಲ: ಶುಕ್ರ­ವಾರ ಬೆಳಿಗ್ಗೆ ಸಮಾಜ ಕಲ್ಯಾಣ ಸಚಿ­ವರ ಹಳೆಯ ಕಚೇರಿಯಲ್ಲಿ (ಕೊಠಡಿ ಸಂಖ್ಯೆ 336) ರಾಜ್ಯ ಗಿರಿಜನ ಸಂಶೋ­ಧನಾ ಸಂಸ್ಥೆಯ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ ಇತ್ತು. ಕೇಂದ್ರ ಸಚಿವ ಎಚ್‌.ಕೆ.­ಮುನಿಯಪ್ಪ ಕೂಡ ಈ ಕಾರ್ಯ­ಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಹೊರಬರುತ್ತಿ­ದ್ದಂತೆ ಡಿಪಿಎಆರ್‌ ಅಧಿಕಾರಿಯೊಬ್ಬರು ಸಚಿವರಿಗೆ ಎದುರಾದರು.ಆ ಅಧಿಕಾರಿಯನ್ನು ಕಾಣುತ್ತಿದ್ದಂತೆ ಆಂಜನೇಯ ಕೆಂಡಾಮಂಡಲ ಆದರು. ‘ನಾನು ಅರ್ಜಿ ಕೊಟ್ಟು ಎಷ್ಟು ದಿನ ಆಯಿತು? ಕೊಠಡಿ ನವೀಕರಣ ಕಾಮ­ಗಾರಿ ಏಕೆ ಇನ್ನೂ ಮುಗಿದಿಲ್ಲ? ನನಗೆ ಏಕೆ ಕೊಠಡಿ ಹಸ್ತಾಂತರ ಮಾಡಿಲ್ಲ?’ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.‘340 ಮತ್ತು 340–ಎ ಕೊಠಡಿಗಳ ನಡುವಿನ ಅಡ್ಡಗೋಡೆ ಒಡೆಯುವ ಪ್ರಸ್ತಾವ ಇರುವುದರಿಂದ ತಡವಾ­ಗು­ತ್ತಿದೆ. ಹಿಂದೆ ಈ ರೀತಿ ಗೋಡೆ ತೆರವು ಮಾಡಿದ ಪ್ರಕರಣಗಳಲ್ಲಿ ಅಧಿಕಾರಿ­ಗಳಿಗೆ ನೋಟಿಸ್‌ ನೀಡಲಾಗಿದೆ’ ಎಂದು ಅಧಿಕಾರಿ ಸಮಜಾಯಿಷಿ ನೀಡಲು ಮುಂದಾದರು. ಆದರೆ, ಸಚಿವರು ಅಧಿಕಾರಿಯ ಮಾತನ್ನು ಕೇಳಲಿಲ್ಲ.‘ಗೋಡೆ ಒಡೆಯಲು ನಿಮಗೆ ಆಗದಿ­ದ್ದರೆ ನಾನೇ ಒಡೆಯುತ್ತೇನೆ. ಕೊಠಡಿ ನೀಡದಿದ್ದರೆ ಧರಣಿ ಮಾಡುತ್ತೇನೆ. ನಿಮ್ಮ ಮೇಲೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ದೂರು ಕೊಡುತ್ತೇನೆ’ ಎಂದು ಗದರಿದರು.ತರಾತುರಿಯಲ್ಲಿ ಸ್ಥಳಾಂತರ: ಅದರ ನಡುವೆಯೇ, ತಕ್ಷಣ ಆ ಕೊಠಡಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಆಂಜ­ನೇಯ  ತಮ್ಮ ಸಿಬ್ಬಂದಿಗೆ ಆದೇಶಿಸಿ­ದರು. ಹಳೆಯ ಕಚೇರಿಯಲ್ಲಿದ್ದ ಪೀಠೋ­ಪಕರಣ, ಕಡತಗಳು ಎಲ್ಲ­ವನ್ನೂ ಸ್ಥಳಾಂತರ ಮಾಡಿಸಿದರು. ಅಲ್ಲಿದ್ದ ನಾಮಫಲಕವನ್ನು ಹೊಸ ಕೊಠಡಿಗಳಿಗೆ ಬದಲಾವಣೆ ಮಾಡಿಸಿ­ದರು. ನವೀಕರಣ ಕಾಮಗಾರಿಗೂ ಕಾಯದೇ ಒಂದೇ ತಾಸಿನಲ್ಲಿ ಕಚೇರಿ ಬದಲಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry