ಗುರುವಾರ , ಏಪ್ರಿಲ್ 22, 2021
29 °C

ಒಂದೇ ಕೋಣೆಯಲ್ಲಿ ಎರಡು ವಸತಿ ನಿಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಡಾ. ನಂಜುಂಡಪ್ಪ ವರದಿ ಆಧಾರದ ಮೇಲೆ ಗ್ರಾಮೀಣ ಮಟ್ಟದ ಬಾಲಕಿಯರು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಕಾರಣದಿಂದ ರಾಜ್ಯ ಸರ್ಕಾರ ಕಳೆದ ಆರು ತಿಂಗಳ  ಹಿಂದೆ ತಾಲ್ಲೂಕಿನಲ್ಲಿ ಕರ್ನಾಟಕ ಕಸ್ತೂರಿಬಾ ಗಾಂಧಿ ಮತ್ತು ಕೇಂದ್ರ ಪುರಸ್ಕೃತ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ)ಎಂಬ ಹೆಸರಿನಲ್ಲಿ ವಸತಿ ನಿಲಯ ಆರಂಭಿಸಲಾಗಿದ್ದರೂ ಈಗ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮಕ್ಕಳ ಸ್ಥಿತಿ ಹೇಳತೀರದಾಗಿದೆ.ಆರಂಭದಿಂದಲೇ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎರಡು ವಸತಿ ನಿಲಯ ಅಗತ್ಯ ಮೂಲ ಸೌಕರ್ಯ ನೀಡಲು ಇಲಾಖೆಗೆ ಸಾಧ್ಯವಾಗಿಲ್ಲ. ತರಾತುರಿಯಲ್ಲಿ ನವೆಂಬರ್ 2010ರಲ್ಲಿ ಆರಂಭಿಸಲಾದ ವಸತಿ ನಿಲಯ ಮಕ್ಕಳ ಆಯ್ಕೆಯಲ್ಲಿ ಯಾವುದೇ ಮಾನದಂಡಗಳನ್ನು ಅನುಸರಿಸದೇ ಸರ್ಕಾರದ ಸುತ್ತೋಲೆಗಳನ್ನು ರಾಜಾರೋಷವಾಗಿ ಉಲ್ಲಂಘಿಸಿ ಕಾಟಾಚಾರಕ್ಕೆ ಎಂಬುವಂತೆ ವಸತಿ ನಿಲಯ ಆರಂಭಿಸಲಾಗಿದ್ದರೂ ಮಕ್ಕಳಿಗೆ ಬೇಕಾಗುವ ಶಿಕ್ಷಣ ಸೌಲಭ್ಯಗಳನ್ನು ದೊರಕಿಸಿಕೊಡಲು ಹಿಂದೇಟು ಹಾಕಿದ ಕಾರಣ ಬೆಳಗಾದರೆ ಸಾಕು ಮಕ್ಕಳ ಪರಿಸ್ಥಿತಿ ಯಾರು ಕೇಳದಂತಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲಾಗುವ ಕರ್ನಾಟಕ ಕಸ್ತೂರಿಬಾ ವಸತಿ ನಿಲಯಕ್ಕೆ ಆರಂಭದಲ್ಲಿಯೇ ಸುಮಾರು 22.43 ಲಕ್ಷ ರೂಪಾಯಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಮುಂಗಡವಾಗಿ ಜಮಾ ಮಾಡಿರುವುದು ದಾಖಲೆ ಹೇಳುತ್ತದೆ. ಆರ್‌ಎಂಎಸ್‌ಎ ವಸತಿ ನಿಲಯಕ್ಕೆ ಮುಂಗಡವಾಗಿ ಒಂದು ಲಕ್ಷ ರೂಪಾಯಿಯನ್ನು ವಸತಿ ನಿಲಯ ಮೇಲ್ವಿಚಾರಕರ ಖಾತೆಗೆ ಜಮಾ ಮಾಡಿರುವುದು ಕಂಡು ಬಂದಿದೆ.ಈ ಎರಡು ವಸತಿ ನಿಲಯಗಳನ್ನು ಪಟ್ಟಣದ ಸರ್ಕಾರಿ ಮಾದರಿಯ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದ್ದು, ವ್ಯವಸ್ಥೆ ಮಾತ್ರ ತೀರ ಹದಗೆಟ್ಟಿದೆ. ಈ ಮೊದಲೇ ಸದ್ರಿ ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಸ್ಥಳ ಇಲ್ಲ. ಅದರಲ್ಲಿ ಈಗ ವಸತಿ ನಿಲಯ ಆರಂಭಿಸಿರುವುದರಿಂದ ಮಕ್ಕಳು ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಸ್ತೂರಿಬಾ ವಸತಿ ನಿಲಯಕ್ಕೆ 6ರಿಂದ 10ನೇ ತರಗತಿ ಬಾಲಕಿಯರನ್ನು ಮತ್ತು ಆರ್‌ಎಂಎಸ್‌ಎ ವಸತಿ ನಿಲಯಕ್ಕೆ 9ನೇ ತರಗತಿ ಬಾಲಕಿಯರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿದ್ದರೂ ಈ ಯಾವ ಮಾನದಂಡವನ್ನು ಅನುಸರಿಸದೆ ಕಾಟಾಚಾರಕ್ಕೆ ಎಂಬುವಂತೆ ಆಯ್ಕೆ ಮಾಡಿಕೊಂಡಿರುವುದು ಕಂಡು ಬಂದಿದೆ.ಕಸ್ತೂರಿಬಾ ವಸತಿ ನಿಲಯಕ್ಕೆ ಸುಮಾರು 100ಜನ ಬಾಲಕಿಯರನ್ನು ಮತ್ತು ಆರ್‌ಎಂಎಸ್‌ಎ ವಸತಿ ನಿಲಯಕ್ಕೆ 50 ಜನ ಬಾಲಕಿಯರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದರೂ ಈಗ ದಾಖಲಾತಿ ಮಾತ್ರ 20ರ ಸಂಖ್ಯೆ ದಾಟಿಲ್ಲ. ಆದರೆ ಖರ್ಚು ಮಾತ್ರ ಎರಡು ಲಕ್ಷ ರೂಪಾಯಿ ದಾಟಿರುವುದು ಕಂಡು ಬಂದಿದೆ. ಕಸ್ತೂರಿಬಾ ವಸತಿ ನಿಲಯಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಯಲ್ಲಿ ಇದ್ದ 22.43 ಲಕ್ಷ ಹಣದಲ್ಲಿ ಎರಡು ಲಕ್ಷ ರೂಪಾಯಿ ಖರ್ಚಾ ಬಿದ್ದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.ವಸತಿ ನಿಲಯ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಮಕ್ಕಳಿಗೆ ಬ್ರಷ್ ನೀಡಿಲ್ಲ. ಎಣ್ಣೆ, ಸಾಬೂನು ನೀಡಿದರೂ 15 ದಿನ ಬರದೇ ಇರುವುದರಿಂದ ಅನಿವಾರ್ಯವಾಗಿ ಮಕ್ಕಳು ಸ್ವಂತ ಹಣದಿಂದ ಖರೀದಿಸುವ ಪರಿಸ್ಥಿತಿ ಇದೆ. ಮೇಲ್ವಿಚಾರಕರು ಅಪರೂಪಕ್ಕೆ ಎಂಬುವಂತೆ ಬರುವುದರಿಂದ ಮಕ್ಕಳ ತೊಂದರೆ ಕೇಳವರು ಇಲ್ಲದಂತಾಗಿದೆ.ಸುಳ್ಳು ದಾಖಲೆ ಸೃಷ್ಟಿ: ಯೋಜನೆ ಪ್ರಕಾರ ಒಬ್ಬ ಬಾಲಕಿಗೆ ಎಲ್ಲ ಸೌಲಭ್ಯ ಸೇರಿ ತಿಂಗಳಿಗೆ ರೂ. 600 ರಿಂದ ರೂ.900 ಖರ್ಚು ಮಾಡಬೇಕಾಗಿರುವುರಿಂದ ಈ ಖರ್ಚನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಮಕ್ಕಳಿಗೆ ಹಾಲು ನೀಡದಿದ್ದರೂ ಹಾಲು ಖರೀದಿಸಲಾಗಿದೆ ಎಂದು ದಾಖಲಾತಿ ಹೇಳುತ್ತದೆ.ಒಂದೇ ಕೋಣೆಗೆ ಬಲ್ಪ ಖರೀದಿಗಾಗಿ 1521ರೂಪಾಯಿ ಖರ್ಚು ಮತ್ತು ಎಲೆಕ್ಟ್ರಿಕಲ್ ಸಾಮಾನು ಖರೀದಿಗಾಗಿ 995 ರೂಪಾಯಿ ಸೇರಿದಂತೆ ಇತರ ಅನೇಕ ನಂಬಲಾರದಂತಹ ಖರ್ಚುಗಳನ್ನು ಹಾಕಿರುವುದು ದಾಖಲಾತಿಯಿಂದ ಕಾಣಬಹುದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.