ಬುಧವಾರ, ನವೆಂಬರ್ 20, 2019
22 °C
ಯಾದಗಿರಿ ಮತಕ್ಷೇತ್ರ: ಬಿಜೆಪಿಯಲ್ಲಿ ಬಂಡಾಯದ ರಣಕಹಳೆ

ಒಂದೇ ಪಕ್ಷದಿಂದ ಮೂವರ ನಾಮಪತ್ರ!

Published:
Updated:

ಯಾದಗಿರಿ:  ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಯಾದಗಿರಿ ಮತಕ್ಷೇತ್ರದ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ತಾರಕಕ್ಕೇರಿದ್ದು, ಕ್ಷೇತ್ರದ ಮೂವರು ಸ್ಥಳೀಯ ಆಕಾಂಕ್ಷಿಗಳು ಬಿಜೆಪಿ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳಾಗಿದ್ದ ತೊಗರಿ ಅಭಿವೃದ್ಧಿ ಮಂಡಳಿ ಡಾ. ವೆಂಕಟೇಶ ಗಡ್ಡಿಮನಿ, ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ಧಾರಡ್ಡಿ ಬಲಕಲ್ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದರು. ಇದರಲ್ಲಿ ಡಾ. ವೆಂಕಟೇಶ ಗಡ್ಡಿಮನಿ ಎರಡು ನಾಮಪತ್ರ ಸಲ್ಲಿಸಿರುವುದು ವಿಶೇಷವಾಗಿದೆ.ಈಗಾಗಲೇ ಯಾದಗಿರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸುರಪುರ ತಾಲ್ಲೂಕಿನ ಚಂದ್ರಶೇಖರ ಮಾಗನೂರ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಆದರೆ ಸ್ಥಳೀಯವಾಗಿ ಆಕಾಂಕ್ಷಿಗಳಿದ್ದರೂ, ಹೊರಗಿನವರಿಗೆ ಟಿಕೆಟ್ ನೀಡಿರುವುದು ಸ್ಥಳೀಯ ಮುಖಂಡರಲ್ಲಿ ಆಕ್ರೋಶ ಮೂಡಿಸಿದೆ.ಕಳೆದ ಒಂದು ವಾರದಿಂದ ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಧರಣಿ ನಡೆಸಿದ ಆಕಾಂಕ್ಷಿಗಳು, ಮಂಗಳವಾರ ಹಠಾತ್ತಾಗಿ ಮೂವರೂ ನಾಮಪತ್ರ ಸಲ್ಲಿಸಿರುವುದರಿಂದ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಭುಗಿಲೇಳುವಂತಾಗಿದೆ.2004 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಯು ಜೊತೆ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾದಗಿರಿ ಮತಕ್ಷೇತ್ರವನ್ನು ಜೆಡಿಯುಗೆ ಬಿಟ್ಟು ಕೊಡಲಾಯಿತು. 2008 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಅಭ್ಯರ್ಥಿಗೆ ಟಿಕೆಟ್ ನೀಡಲಾಯಿತು. ಈ ಬಾರಿಯೂ ಸುರಪುರ ತಾಲ್ಲೂಕಿನ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇದರಿಂದ ಪಕ್ಷದಲ್ಲಿ ನಿಷ್ಠೆಯಿಂದ ದುಡಿದವರಿಗೆ ತೀವ್ರ ಅನ್ಯಾಯವಾಗಿದೆ ಎಂದು ನಾಮಪತ್ರ ಸಲ್ಲಿಸಿದ ಮೂವರು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ಮತಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾಗ್ಯೂ ಹೊರಗಿನವರಿಗೆ ಮಣೆ ಹಾಕಿರುವುದು ಸರಿಯಲ್ಲ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಗಳಾಗಿಯೇ ತಾವು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಸೇರಿದಂತೆ ಪಕ್ಷದ ಪ್ರಮುಖರು ಬಿಜೆಪಿ ತ್ಯಜಿಸಿದ್ದು, ಇದೀಗ ವಿಧಾನಸಭೆ ಚುನಾವಣೆಯಲ್ಲಿ ಭುಗಿಲೆದ್ದಿರುವ ಆಕ್ರೋಶ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಗಳತ್ತ ಮುಖ ಮಾಡುವಂತಾಗಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಅಲವತ್ತಿಕೊಂಡರು.ಮಂಗಳವಾರ ಬೆಂಬಲಿಗರ ಜೊತೆ ಇಲ್ಲಿಯ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಮೂವರು ಅಭ್ಯರ್ಥಿಗಳು, ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)