ಮಂಗಳವಾರ, ಜೂನ್ 15, 2021
27 °C

ಒಂದೇ ಬೆರಳು ಹಿಡಿದ ಕಂದಮ್ಮಗಳು!

–ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಮಗುವನ್ನು ಮುದ್ದಾಡದವರು ಯಾರಿದ್ದಾರೆ?

ತಂದೆ–ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿ ಪ್ರೀತಿಯ ಸವಿ ಉಣ್ಣಬೇಕಾದ ಕೆಲವು ಚಿಣ್ಣರು ಒಂಟಿಯಾಗಿ ಪರಿತಪಿಸಿದರೆ, ಇನ್ನು ಕೆಲವರು ತಂದೆ ಅಥವಾ ತಾಯಿ ಪ್ರೀತಿಯಿಂದ ವಂಚಿತರಾಗುತ್ತಾರೆ.ಕೆಲವು ಸಂಗಾತಿಗಳಲ್ಲಿ ಬಿರುಕು ಮೂಡಿ, ದೂರವಾಗಬೇಕಾದ ಸನ್ನಿವೇಶ ಎದುರಾಗುತ್ತದೆ. ಆಗ ಒಬ್ಬರೇ ಮಗುವಿನ ಲಾಲನೆ, ಪಾಲನೆ ಮಾಡಬೇಕು. ಪುರಾಣ ಕಾಲದಲ್ಲಿ ಸೀತೆ, ಕುಂತಿ, ಶಕುಂತಲೆಯರೆಲ್ಲ ಅನಿವಾರ್ಯವಾಗಿ ಈ ಜವಾಬ್ದಾರಿಯನ್ನು ನಿಭಾಯಿಸಿದವರು. ಆದರೆ ಇಂದಿಗೆ ಬಯಸಿಯೋ, ಅನಿವಾರ್ಯ ಕಾರಣಗಳಿಂದಲೋ ಅಂಥದ್ದೊಂದು ಪೋಷಣೆಯ ಜವಾಬ್ದಾರಿಗೆ ಹೆಗಲು ಕೊಡುತ್ತಿದ್ದಾರೆ. ‘ಮದುವೆ ಬೇಡ ಮಗು ಬೇಕು’ ಎನ್ನುವವರೂ ಇದ್ದಾರೆ. ಮಗುವನ್ನು ದತ್ತು ಪಡೆದು ಆ ಬಯಕೆ ಈಡೇರಿಸಿಕೊಂಡು, ಹೊಸ ಸವಾಲುಗಳಿಗೆ ಎದೆಕೊಡುವ ಅಂಥವರದ್ದು ಭಿನ್ನ ಬದುಕು.ಮಗು ಸಾಕುವ ಜವಾಬ್ದಾರಿಯನ್ನು ಒಬ್ಬರೇ ನಿಭಾಯಿಸುವುದು ಕಷ್ಟ. ಅಪ್ಪ ಜತೆಗಿಲ್ಲದಿದ್ದರೆ ತಾಯಿಯೇ ತಂದೆಯ ಸ್ಥಾನದಲ್ಲಿ ನಿಂತು ಮಗುವನ್ನು ನೋಡಿಕೊಳ್ಳಬೇಕಾಗುತ್ತದೆ. ಅಮ್ಮನಿಲ್ಲದಿದ್ದರೆ ಅಪ್ಪನಿಗೆ ಅಮ್ಮನೂ ಆಗಬೇಕಾದ ಸವಾಲು. ನನಗ್ಯಾಕೆ ಅಪ್ಪನಿಲ್ಲ, ಅಮ್ಮನಿಲ್ಲ ಎಂದು ಮಗು ಕೇಳುವ ಪ್ರಶ್ನೆಗೆ ಉತ್ತರ ಕೊಡಲೇಬೇಕಾಗುತ್ತದೆ.ಅಂದಿನಿಂದ ನಾನೇ ತಾಯಿ

ಎರಡು ಮಕ್ಕಳನ್ನು ಹೆತ್ತು, ಮೂರನೇ ಹೆರಿಗೆಯ ಸಮಯದಲ್ಲಿ ಹೆಂಡತಿ ನನ್ನನ್ನು ಅಗಲಿದಳು. ವೈದ್ಯರ ನಿರ್ಲಕ್ಷ್ಯದಿಂದ ತಾಯಿ–ಮಗು ಇಬ್ಬರೂ ಸತ್ತುಹೋದರು. ನನ್ನ ಪಾಲಿಗೆ ಉಳಿದದ್ದು ಎರಡು ಹೆಣ್ಣುಮಕ್ಕಳು ಮಾತ್ರ. ಒಬ್ಬಳು ಒಂದನೇ ಕ್ಲಾಸ್‌, ಇನ್ನೊಬ್ಬಳು ಎಲ್‌.ಕೆ.ಜಿ. ಬೇರೆ ಮದುವೆಯಾಗು ಎಂದು ತುಂಬಾ ಜನ ಸಲಹೆ ನೀಡಿದರು. ನನ್ನ ಮಕ್ಕಳು ತಂದೆ ಇದ್ದೂ ಅನಾಥರಾಗುವುದು ಬೇಡ ಎಂದು ನಾನೇ ತಾಯಿ ಸ್ಥಾನದಲ್ಲಿ ನಿಂತು ಬೆಳೆಸಿದೆ.

ಅಪ್ಪ ಯಾವತ್ತೂ ಅಮ್ಮನಾಗುವುದಕ್ಕೆ ಆಗುವುದಿಲ್ಲ ಎನ್ನುತ್ತಾರೆ. ಆದರೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯನ್ನು ನನ್ನ ಮಕ್ಕಳಿಗೆ ನೀಡಿದ್ದೇನೆ. ವಾಸ್ತುಶಿಲ್ಪಿಯಾಗಿ ನಾನು ಕೆಲಸ ಮಾಡುತ್ತಿದ್ದೆ. ತುಂಬಾ ಕೆಲಸ ಇದ್ದಾಗ ಕಾರಿನಲ್ಲಿಯೇ ಊಟ ಮಾಡಿಸಿ, ಮಕ್ಕಳನ್ನು ಮಲಗಿಸಿದ್ದೂ ಇದೆ. ಶಿಕ್ಷಣದ ಜತೆಗೆ ಅವರಲ್ಲಿ ಕಲೆ–ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದೆ. ಇಂದು ನನ್ನ ಒಬ್ಬ ಮಗಳು ಪ್ರಥಮ ಪಿಯುಸಿಯಲ್ಲಿ, ಇನ್ನೊಬ್ಬಳು ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿದ್ದಾಳೆ. ಮಕ್ಕಳಿಂದ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಹಾಗಂತ ಅವರ ನಿರೀಕ್ಷೆಯನ್ನು ನಾನ್ಯಾವತ್ತೂ ಕಡೆಗಣಿಸಿಲ್ಲ.

ನಾನು ಕಾರು ತೆಗೆದುಕೊಂಡಾಗ ನನ್ನ ಮಗಳು ಅಮ್ಮ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಲ್ವಾ ಎಂದು ಕೇಳಿದ್ದಳು. ಆ ಕ್ಷಣ ಅವಳಿದ್ದಿದ್ದರೆ ಬದುಕು ಮತ್ತಷ್ಟೂ ಖುಷಿಯ ಆಗರವಾಗುತ್ತಿತ್ತು ಎನಿಸಿತ್ತು. ಆದರೆ ಮಕ್ಕಳಿಗೆ ಸಮಾಧಾನ ನೀಡುವುದು ನನ್ನ ಕರ್ತವ್ಯವಾಗಿತ್ತು. ಇವತ್ತಿಗೂ ಅಮ್ಮನಾಗಿ, ಅಪ್ಪನಾಗಿ ಅವರ ಬದುಕನ್ನು ರೂಪಿಸುತ್ತಿರುವುದಕ್ಕೆ ನನಗೆ ಖುಷಿ ಇದೆ. ಕಷ್ಟವಾದರೂ ಅದು ಕೊಡುವ ಸುಖ ಅಷ್ಟಿಷ್ಟಲ್ಲ.

–ನರೇಂದ್ರ ಶರ್ಮಾಕರುಳಬಳ್ಳಿಯೇ ಆಗಬೇಕಿಲ್ಲ

ನನಗೆ ಹಲವು ಹುಡುಗರನ್ನು ನೋಡಿದರು. ಆದರೆ ಋಣಾನುಬಂಧ ಕೂಡಿ ಬರಲಿಲ್ಲ. ಕೊನೆಗೆ ಮದುವೆ ಆಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದೆ. ಮಗು ಬೇಕು ಎಂಬ ಆಸೆ ಇತ್ತು. ನನ್ನದೇ ಮಗು ಆಗದಿದ್ದರೇನು, ದತ್ತು ತೆಗೆದುಕೊಳ್ಳೋಣ ಎಂದು ನಿರ್ಧಾರ ಮಾಡಿದೆ. ‘ಮಾತೃಛಾಯಾ’ ಆನಾಥಾಶ್ರಮಕ್ಕೆ ಹೋಗಿ ವಿಚಾರಿಸಿದೆ. ಮಗು ನೋಡಲು ಸುಂದರವಾಗಿರದಿದ್ದರೂ ಪರವಾಗಿಲ್ಲ, ಆರೋಗ್ಯವಂತ ಮಗುವನ್ನು ಕೊಡಿ ಎಂದು ಕೇಳಿದೆ. ಒಂಬತ್ತು ತಿಂಗಳು ಕಾದ  ಬಳಿಕ ‘ಮಾತೃಛಾಯಾ’ದಿಂದ ಪೋನ್‌ ಬಂತು. ಆ ಕ್ಷಣ ನಾನು ತುಂಬಾ ಖುಷಿಪಟ್ಟೆ. ಹೆರಿಗೆ ನೋವು ಅನುಭವಿಸಲಿಲ್ಲ. ಆದರೆ ಆ ತಳಮಳ, ಗಾಬರಿ ಎಲ್ಲವನ್ನೂ ನಾನು ನನ್ನ ಮಗಳನ್ನು ಮನೆಗೆ ಕರೆದುಕೊಂಡು ಬರುವಾಗ ಅನುಭವಿಸಿದೆ. ಆಗ ಅವಳಿಗೆ ಒಂದು ವರ್ಷ 8 ತಿಂಗಳಾಗಿತ್ತು. ಅಮ್ಮಾ ಎಂದು ತೊದಲುತ್ತ ಅವಳು ಮನೆ ತುಂಬಾ ಓಡಾಡುವುದನ್ನು ನೋಡುವುದೇ ನನಗೆ ಖುಷಿ. ಈಗ ಅವಳಿಗೆ ಒಂಬತ್ತು ವರ್ಷ.ಅವಳು ನಮ್ಮ ಮನೆಯಲ್ಲಿ ಮೊದಲು ಹೆಜ್ಜೆ ಊರಿದಾಗ ನಾನೂ ಅಮ್ಮನಾದೆ ಎಂದು ಖುಷಿಯಿಂದ ಬೀಗಿದ್ದೆ. ಇದರ ಜತೆಗೆ ಸಾಕಷ್ಟು ಕುಹಕಗಳನ್ನು ಎದುರಿಸಿದ್ದೆ. ಮಗು ಸಾಕುವುದು ಅಷ್ಟು ಸುಲಭವಲ್ಲ, ಒಂದು ವಾರದಲ್ಲಿ ಮಗುವನ್ನು ಬಿಟ್ಟು ಬರುತ್ತಾಳೆ, ಸಾಕಿ ಸಲಹುವ ತಾಳ್ಮೆ ಇವಳಿಗೆಲ್ಲಿದೆ? ಎಂಬಿತ್ಯಾದಿ ಮಾತುಗಳನ್ನು ಕೇಳಿಸಿಕೊಂಡಿದ್ದೆ. ಇವೆಲ್ಲದರ ಮಧ್ಯೆ ನಾನು ನನ್ನ ಮಗಳನ್ನು ಸಾಕಿದೆ.‘ಅಮ್ಮ ಶಾಲೆಯಲ್ಲಿ ನನ್ನ ಸ್ನೇಹಿತರಿಗೆಲ್ಲ ಅವರಪ್ಪ ಗಾಡಿಯಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ನನ್ನ ಅಪ್ಪ ಎಲ್ಲಿ’ ಎಂದು ಮಗಳು ಒಮ್ಮೆ ಕೇಳಿದ್ದಳು. ಅವರು ಇಲ್ಲ, ಇನ್ಯಾವತ್ತೂ ಕೇಳಬೇಡ ಎಂದು ಹೇಳಿದ್ದೆ. ಮರುದಿನವೇ ಮನೆ ಮುಂದೆ ಸ್ಕೂಟಿ ಇತ್ತು. ಅವಳಿಗಾಗಿ ಸ್ಕೂಟಿ ಕಲಿತು ಶಾಲೆಗೆ ಬಿಟ್ಟುಬಂದೆ. ಮತ್ತೆ ಯಾವತ್ತೂ ಅವಳು ನನ್ನ ಬಳಿ ಅಪ್ಪನ ಬಗ್ಗೆ ಕೇಳಲಿಲ್ಲ. ಅವಳಿಗಾಗಿ ಒಂದು ಡೈರಿ ಬರೆದಿಟ್ಟುಕೊಂಡಿದ್ದೇನೆ. ಅವಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಹಂತಕ್ಕೆ ಬಂದಾಗ ವಾಸ್ತವಾಂಶ ಹೇಳುತ್ತೇನೆ. ನನ್ನದೊಂದು ಚಿಕ್ಕ ಕಚೇರಿ ಇದೆ. ಅದರಲ್ಲಿ ಬರುವ ಹಣ ನಮ್ಮಿಬ್ಬರ ಬದುಕಿಗೆ ಸಾಕು. ಅವಳ ಪಾಲಿಗೆ ತಂದೆಯೂ ನಾನೇ, ತಾಯಿನೂ ನಾನೇ.

–ಜಯಂತಿಇಬ್ಬರ ಪ್ರೀತಿಯೂ ಬೇಕು

ಮಕ್ಕಳಿಗೆ ತಂದೆ, ತಾಯಿ ಇಬ್ಬರ ಪ್ರೀತಿಯೂ ಸಿಗಬೇಕು ಎಂಬುದು ನಮ್ಮ ಸಂಸ್ಥೆಯ ಆಶಯ. ತಂದೆ–ತಾಯಿ ಮಧ್ಯೆ ಏನೋ ಜಗಳವಾಗಿ ವಿಚ್ಛೇದನ ಪಡೆಯುತ್ತಾರೆ. ಮಕ್ಕಳು ಇದರಿಂದ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಬೆಳೆಯುವ ಮಕ್ಕಳಿಗೆ ಅಪ್ಪ–ಅಮ್ಮ ಇಬ್ಬರ ಅವಶ್ಯಕತೆಯೂ ಇದೆ. ನಾವು ತಂದೆ–ತಾಯಿ ಇಬ್ಬರಿಗೂ ಆಪ್ತಸಮಾಲೋಚನೆ ನಡೆಸುತ್ತೇವೆ. ಮಕ್ಕಳು ಸೋಮವಾರದಿಂದ ಶುಕ್ರವಾರದವರೆಗೆ ತಾಯಿಯ ಜತೆಗೆ, ವಾರಾಂತ್ಯದಲ್ಲಿ ತಂದೆ ಜತೆಗೆ ಇರುವುದಕ್ಕೆ ಅನುಮತಿ ನೀಡುತ್ತೇವೆ. ರಜಾದಿನಗಳಲ್ಲಿ ಇಬ್ಬರ ಜತೆಯೂ ಇರುವುದಕ್ಕೆ ಅವಕಾಶ ಮಾಡಿಕೊಡುವುದು ನಮ್ಮ ಸಂಸ್ಥೆಯ ಉದ್ದೇಶ.

–ಕುಮಾರ್ ಜಾಗೀರ್‌ದಾರ್, ಕ್ರಿಸ್ಪ್‌ (CRISP) ಸಂಸ್ಥೆಯ ಸಂಸ್ಥಾಪಕಮಕ್ಕಳ ನಂಬಿಕೆ ಉಳಿಸಿಕೊಳ್ಳಬೇಕು

ನನ್ನ ಮತ್ತು ಹೆಂಡತಿಯ ಮಧ್ಯೆ ಯಾವುದೋ ಕಾರಣಕ್ಕೆ ವಿರಸ ಬಂದು ಇಬ್ಬರೂ ಬೇರೆಯಾದೆವು. ಮಕ್ಕಳು ಯಾರ ಜತೆ ಇರಬೇಕು ಎಂಬ ಸಮಸ್ಯೆ ಉದ್ಭವಿಸಿದಾಗ ನಾವಿಬ್ಬರೂ ಕುಳಿತು ಚರ್ಚಿಸಿದೆವು. ಕೊನೆಗೆ ನಾನೇ ಜವಾಬ್ದಾರಿಯನ್ನು ವಹಿಸಿಕೊಂಡೆ. ನನಗಿಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. 

ಮಕ್ಕಳಿಗೆ ತಂದೆ–ತಾಯಿಯ ಮೇಲೆ ಹೆಚ್ಚು ನಂಬಿಕೆ ಇರುತ್ತದೆ. ನಮ್ಮಿಬ್ಬರ ವಿವಾಹ ವಿಚ್ಛೇದನದಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾಳಜಿ ನನ್ನದು. ಅವರ ನಂಬಿಕೆ ಉಳಿಸಲು ನಾನು ಎರಡನೇ ಮದುವೆ ಮಾಡಿಕೊಳ್ಳಲಿಲ್ಲ. ಅವರ ಜತೆ ನಾನು ಯಾವಾಗಲೂ ಇರುತ್ತೇನೆ ಎಂಬ ಭಾವ ಮೂಡಿಸುವುದು, ಅವರ ಕೈ ಹಿಡಿದು ನಡೆಸುವುದು ನನ್ನ ಕರ್ತವ್ಯವಾಗಿತ್ತು.ಇಬ್ಬರ ಹೊಣೆಯನ್ನು ನಾನೊಬ್ಬನೇ ಹೊತ್ತುಕೊಳ್ಳುವುದು ನನಗೆ ಸ್ವಲ್ಪ ಕಷ್ಟವಾಗಿತ್ತು. ನಾಲ್ಕು ವರ್ಷ ಕಷ್ಟಪಟ್ಟೆ. ಮಗ ದೊಡ್ಡವನು. ಮಗಳಿಗೆ ಹತ್ತು ವರ್ಷವಾಗಿತ್ತು. ತಂದೆಯಾಗಿ ತಾಯಿ ಪಾತ್ರ ನಿರ್ವಹಿಸುವುದು ತುಸು ಕಷ್ಟವಾದರೂ ಖುಷಿ ಇತ್ತು.ಮಕ್ಕಳಿಗೆ ಯಾವತ್ತೂ ತಾವು ಒಂಟಿ ಎಂಬ ಭಾವ ಮೂಡಿಸಬಾರದು. ಅವರ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅವರ ಪ್ರತಿಯೊಂದು ಮಾತನ್ನು ಪ್ರೀತಿಯಿಂದ ಕೇಳಿಸಿಕೊಳ್ಳಿ. ನಿನ್ನ ಜತೆ ನಾನು ಸದಾ ಇದ್ದೇನೆ ಎಂಬ ಭಾವವನ್ನು ಅವರಲ್ಲಿ ಮೂಡಿಸಬೇಕು. ಇದರಿಂದ ಮಕ್ಕಳು ಸರಿ ದಾರಿಯಲ್ಲಿ ಸಾಗಲು  ಸಾಧ್ಯ.

–ಡಾ. ಹರಿ ಪರಮೇಶ್ವರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.