ಒಂದೇ ಸಿಇಟಿ ಈ ಬಾರಿಯೂ ಇಲ್ಲ

7

ಒಂದೇ ಸಿಇಟಿ ಈ ಬಾರಿಯೂ ಇಲ್ಲ

Published:
Updated:

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕವನ್ನು ಮಾತುಕತೆ ಮೂಲಕವೇ ಇತ್ಯರ್ಥಪಡಿಸಲಾಗುವುದು. ನ್ಯಾಯಮೂರ್ತಿ ಪದ್ಮರಾಜ ಸಮಿತಿ ಶಿಫಾರಸು ಪ್ರಕಾರ ಶುಲ್ಕ ನಿಗದಿ ಮಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಬುಧವಾರ ಇಲ್ಲಿ ತಿಳಿಸಿದರು.ಈ ಸಂಬಂಧ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಣ್ಣ ತಿದ್ದುಪಡಿಯೊಂದನ್ನು ಮಾಡಲಾಗುವುದು. ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವಾದ ಕಾಮೆಡ್-ಕೆ ಪದಾಧಿಕಾರಿಗಳೊಂದಿಗೆ ಆದಷ್ಟು ಬೇಗ ಸೀಟು ಹಂಚಿಕೆ, ಶುಲ್ಕ ನಿಗದಿ ಬಗ್ಗೆ ಚರ್ಚಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.ಕಳೆದ ಸಾಲಿನಲ್ಲಿ ಕಾಮೆಡ್- ಕೆ ಜೊತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್ ಇನ್ನೂ ಅಧಿಕೃತ ಮುದ್ರೆ ಒತ್ತಿಲ್ಲ. ಅದಾದ ಕೂಡಲೇ ಈ ಸಾಲಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು ಈ ತಿಂಗಳ ಅಂತ್ಯದ ಒಳಗೆ ಇತ್ಯರ್ಥವಾಗುವ ವಿಶ್ವಾಸವಿದೆ. ಒಂದೇ ಸಿಇಟಿ ನಡೆಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದರು.ರಾಜ್ಯದ 45 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ತಲಾ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು. ಇದರಿಂದ ವಿದ್ಯಾರ್ಥಿನಿಯರ ಸೇರ್ಪಡೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ವಿಶ್ವಾಸವಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಬಾಕಿ ಇರುವ 8 ತಿಂಗಳ ವೇತನಕ್ಕಾಗಿ 75 ಕೋಟಿ ರೂಪಾಯಿ ಬೇಡಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣಕಾಸು ಇಲಾಖೆಒಪ್ಪಿಗೆ ದೊರೆತ ಕೂಡಲೇ ವೇತನ ನೀಡಲಾಗುವುದು ಎಂದು ತಿಳಿಸಿದರು. ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಧಾರವಾಡ ವಿಶ್ವವಿದ್ಯಾಲಯ ಮಾನ್ಯತೆ ಕಳೆದುಕೊಳ್ಳುವುದಿಲ್ಲ. ಇದೆಲ್ಲ ಕೇವಲ ಊಹಾಪೋಹ ಅಷ್ಟೇ ಎಂದು ಸ್ಪಷ್ಟಪಡಿಸಿದರು.ಜಾನಪದ ವಿಶ್ವವಿದ್ಯಾಲಯ: ಮಧ್ಯ ಕರ್ನಾಟಕ ಭಾಗದಲ್ಲಿ ಉದ್ದೇಶಿತ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ವಿ.ವಿ. ವಿಶೇಷಾಧಿಕಾರಿ ಅಂಬಳಿಕೆ ಹಿರಿಯಣ್ಣ ವಿಶ್ವವಿದ್ಯಾಲಯದ ಸ್ವರೂಪದ ಬಗ್ಗೆ ವರದಿ ನೀಡಿದ್ದಾರೆ.ಹುಬ್ಬಳ್ಳಿ- ಹಾವೇರಿ ಮಾರ್ಗದಲ್ಲಿ 500 ಎಕರೆ ಜಾಗವನ್ನು ಗುರುತಿಸಿ ವಿಶ್ವವಿದ್ಯಾಲಯ ಆರಂಭಿಸುವ ಯೋಚನೆ ಇದೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಸೌಲಭ್ಯ ಇರುವುದನ್ನು ಗಣನೆಗೆ ತೆಗೆದುಕೊಂಡು ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದರು. ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ 12 ಅರ್ಜಿಗಳು ಬಂದಿವೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000ಕ್ಕೆ ತಿದ್ದುಪಡಿ ತರುವಾಗ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕವಾದ ಅಧ್ಯಾಯವೊಂದನ್ನು ಸೇರ್ಪಡೆ ಮಾಡಲಾಗುವುದು.

ಸಂಸ್ಕೃತ ನಿರ್ದೇಶನಾಲಯ ಆರಂಭಿಸಿ, 350ಶಾಲೆಗಳನ್ನು ಅದರ ವ್ಯಾಪ್ತಿಗೆಸೇರಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry