ಸೋಮವಾರ, ಸೆಪ್ಟೆಂಬರ್ 16, 2019
21 °C

ಒಂದೇ ಸೂರಿನಡಿ ಅಗತ್ಯವಸ್ತು ಮಾರಾಟಕ್ಕೆ ವ್ಯವಸ್ಥೆ

Published:
Updated:

ಹೊಳಲ್ಕೆರೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರಿನಲ್ಲಿ ರೂ 1.07 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ಸಂಕೀರ್ಣ ನಿರ್ಮಿಸುತ್ತಿದ್ದು, ಒಂದೇ ಕಟ್ಟಡದಲ್ಲಿ ನಾಗರಿಕರಿಗೆ ಅಗತ್ಯ ವಸ್ತುಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ಸೋಮವಾರ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಟ್ಟಡದ ನೆಲ ಮಹಡಿಯಲ್ಲಿ 24, ಮೊದಲ ಅಂತಸ್ತಿನಲ್ಲಿ 24 ಸೇರಿದಂತೆ, ಒಟ್ಟು 48 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಎರಡನೇ ಅಂತಸ್ತಿನಲ್ಲಿ ಸುಸಜ್ಜಿತ ಹೊಟೇಲ್ ನಡೆಸಲು ಅನುಕೂಲ ಮಾಡಿಕೊಡಲಾಗುವುದು.ಕಟ್ಟಡ ನಿರ್ಮಾಣದ ನಂತರ ಮುಖ್ಯ ರಸ್ತೆಯಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ, ಅಲ್ಲಿನ ವ್ಯಾಪಾರಿಗಳಿಗೆ ಈ ಮಳಿಗೆಗಳನ್ನು ನೀಡಲಾಗುವುದು. ಜನರಿಗೆ ಅಗತ್ಯವಾದ ಹಣ್ಣು, ತರಕಾರಿ, ದಿನಬಳಕೆಯ ವಸ್ತುಗಳು ಒಂದೇ ಕಡೆ ದೊರೆಯುವಂತೆ ಮಾಡಲಾಗುವುದು ಎಂದರು.ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಶಾಲಾ ಸಂಕೀರ್ಣ ಕಟ್ಟಡಕ್ಕೆ ಭೇಟಿ ನೀಡಿದ ಅವರು, ರೂ 30 ಲಕ್ಷ ವೆಚ್ಚದಲ್ಲಿ 10 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಪ್ರಾಥಮಿಕ ಶಾಲೆಯಾದರೂ, ಕಾಲೇಜು ಕಟ್ಟಡದಂತೆ ನಿರ್ಮಿಸಲಾಗುತ್ತಿದ್ದು, ಈಗಾಗಲೇ 5 ವಿಶಾಲ ಕೊಠಡಿ ನಿರ್ಮಿಸಲಾಗಿದೆ. ಮೊದಲ ಅಂತಸ್ತಿನಲ್ಲಿ ಇನ್ನೂ 5 ಕೊಠಡಿ ನಿರ್ಮಿಸಿ, ಈಗ ಬಿಇಒ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಶಾಲೆಯನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು.ಶಿಥಿಲಗೊಂಡಿರುವ ಬಿಇಒ ಕಚೇರಿ ಕಟ್ಟಡವನ್ನು ನೆಲಸಮಗೊಳಿಸಿ, ರೂ 10 ಕೋಟಿ ವೆಚ್ಚದಲ್ಲಿ ಸರ್ಕಾರಿ ಕಚೇರಿ ಸಂಕೀರ್ಣ ನಿರ್ಮಿಸಲಾಗುವುದು. ಪಟ್ಟಣದ ಎಲ್ಲಾ ಕಚೇರಿಗಳೂ, ಒಂದೇ ಕಟ್ಟಡದಲ್ಲಿ ನಡೆಯುವುದರಿಂದ ಜನರು ಅತ್ತಿಂದಿತ್ತ ಅಲೆಯುವುದು ತಪ್ಪುತ್ತದೆ ಎಂದು ತಿಳಿಸಿದರು.ತಾಲ್ಲೂಕು ಕಚೇರಿ ಆವರಣದಲ್ಲಿರುವ ಹಳೆಯ ಕಟ್ಟಡವನ್ನು ತಕ್ಷಣವೇ ತೆರವುಗೊಳಿಸಲು ತಹಶೀಲ್ದಾರ್ ಸರೋಜಾ ಅವರಿಗೆ ಸೂಚನೆ ನೀಡಿದ ಶಾಸಕರು, ಈ ಜಾಗದಲ್ಲಿರೂ 28 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು ಎಂದರು.ಪ.ಪಂ. ಸದಸ್ಯ ಕೆ.ಸಿ. ರಮೇಶ್, ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ. ರವಿ ಇದ್ದರು.

 

Post Comments (+)