ಒಂದೇ ಹುದ್ದೆಗೆ ಇಬ್ಬರ ನೇಮಕ: ಆಕ್ರೋಶ

7

ಒಂದೇ ಹುದ್ದೆಗೆ ಇಬ್ಬರ ನೇಮಕ: ಆಕ್ರೋಶ

Published:
Updated:

ಯಾದಗಿರಿ: ಜಿಲ್ಲೆಯಲ್ಲಿ ಮೊದಲೇ ಶಿಕ್ಷಕರು, ವೈದ್ಯರ ಕೊರತೆ ಇದೆ. ಈಚೆಗೆ  ಹೊಮಿಯೋಪಥಿ ವೈದ್ಯರೊಬ್ಬರನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರ ಹುದ್ದೆಗೆ ನೇಮಕ ಮಾಡಿರುವ ಬೆನ್ನಲ್ಲೇ, ಇಂತಹುದೇ ಮತ್ತೊಂದು ಆದೇಶ ಹೊರಬಿದ್ದಿದೆ. ಮೊದಲೇ ಖಾಲಿ ಇರುವ ಶಿಕ್ಷಕರು, ವೈದ್ಯರ ಸ್ಥಾನಗಳೂ ಮತ್ತಷ್ಟು ಖಾಲಿ ಆಗುತ್ತಿವೆ.ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಕೊರತೆಯೇ ಬಹುದೊಡ್ಡ ಸಮಸ್ಯೆಯಾಗಿದೆ. ಶಾಲೆಯಲ್ಲಿ ಕಲಿಸಬೇಕಾದ ಶಿಕ್ಷಕರೂ, ಬೇರೆ ಇಲಾಖೆಗಳತ್ತ ಹೆಚ್ಚು ಆಸಕ್ತಿ ತೋರುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಇದಕ್ಕೊಂದು ನಿದರ್ಶನ ಎನ್ನುವಂತಿದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಡಿಸಿರುವ ಆದೇಶ.ಲೋಕ ಶಿಕ್ಷಣ ಸಮಿತಿಯ ಯಾದಗಿರಿ ತಾಲ್ಲೂಕು ಸಂಯೋಜಕರ ಒಂದೇ ಹುದ್ದೆಗೆ ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಜನರಲ್ಲಿ ಆಕ್ರೋಶ ಮೂಡಿಸಿದೆ. ವಿಶೇಷವೆಂದರೆ ಈ ಒಂದೇ ಹುದ್ದೆಗಾಗಿ ದೊಡ್ಡ ಲಾಬಿಯೇ ನಡೆದಿರುವುದು ಬೆಳಕಿಗೆ ಬಂದಿದೆ.

ಸದ್ಯಕ್ಕೆ ಲೋಕ ಶಿಕ್ಷಣ ಸಮಿತಿಯ ಯಾದಗಿರಿ ತಾಲ್ಲೂಕು ಸಂಯೋಜಕರ ಹುದ್ದೆಗೆ ಮಹಾನಂದಸ್ವಾಮಿ ಹಾಗೂ ಆಶಪ್ಪ ಎಂಬುವವರನ್ನು ನೇಮಕ ಮಾಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಮಹಾನಂದಸ್ವಾಮಿ ಹಾಗೂ ಆಶಪ್ಪ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು. ಕಳೆದ ಕೆಲ ವರ್ಷಗಳಿಂದ ಈ ಸಮಿತಿಯ ತಾಲ್ಲೂಕು ಸಂಯೋಜಕರಾಗಿ ಮಹಾನಂದಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈ ವರ್ಷ ಅವರನ್ನು ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿ, ಸರ್ಕಾರ ಆದೇಶ ಹೊರಡಿಸಿತ್ತು. ಅವರ ಸ್ಥಾನದಲ್ಲಿ ಮತ್ತೊಬ್ಬ ಶಿಕ್ಷಕ ಆಶಪ್ಪ ಅವರನ್ನು ನೇಮಕ ಮಾಡಲಾಗಿತ್ತು.ಆದರೆ ಮಹಾನಂದ ಸ್ವಾಮಿ ಅನುಭವ ಹೊಂದಿದ್ದು, ಅವರನ್ನೇ ತಾಲ್ಲೂಕು ಸಂಯೋಜಕರಾಗಿ ಮುಂದುವರಿಸುವಂತೆ ಶಾಸಕ ಡಾ.ಎ.ಬಿ. ಮಾಲಕರಡ್ಡಿ ಪತ್ರ ಬರೆದಿದ್ದಾರೆ.ಹೀಗಾಗಿ ಆಶಪ್ಪ ಹಾಗೂ ಮಹಾನಂದಸ್ವಾಮಿ ಮಧ್ಯೆ ಒಂದೇ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ. ಮೇಲಾಗಿ ಶಾಸಕರ ಪತ್ರ ಬಂದಿರುವುದರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಒಂದೇ ಹುದ್ದೆಗೆ ಇಬ್ಬರನ್ನು ನೇಮಕ ಮಾಡಿ ಆಗಸ್ಟ್ 3ರಂದು ಆದೇಶ ಹೊರಡಿಸಿದ್ದಾರೆ.ವಿಚಿತ್ರವೆಂದರೆ, ಯಾದಗಿರಿ ತಾಲ್ಲೂಕಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿದ್ದು, ಆಡಳಿತದ ಹಿತದೃಷ್ಟಿಯಿಂದ ಇಬ್ಬರನ್ನು ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಮೂರು ವರ್ಷಗಳವರೆಗೆ ಇಲ್ಲದ ಆಡಳಿತ ಹಿತದೃಷ್ಟಿ, ಈಗೇಕೆ ಎಂಬ ಪ್ರಶ್ನೆ ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಮರೆಪ್ಪ ನಾಯಕ ಮಗದಂಪೂರ ಅವರದ್ದು.ಹೆಚ್ಚುವರಿ ಹುದ್ದೆ: ಲೋಕ ಶಿಕ್ಷಣ ಸಮಿತಿಯ ತಾಲ್ಲೂಕು ಸಂಯೋಜಕರ ಒಂದೇ ಹುದ್ದೆಗೆ ಇಬ್ಬರನ್ನು ನೇಮಕ ಮಾಡಲಾಗಿದ್ದು, ಅವರಿಗೆ ವಹಿಸಿರುವ ವ್ಯಾಪ್ತಿಯೂ ಅಚ್ಚರಿ ಮೂಡಿಸುತ್ತದೆ.ಆಶಪ್ಪ ಅವರಿಗೆ ಲೋಕ ಶಿಕ್ಷಣ ಸಮಿತಿಯ ಗುರುಮಠಕಲ್ ವಿಧಾನ ಕ್ಷೇತ್ರ ವ್ಯಾಪ್ತಿ ನೀಡಲಾಗಿದೆ. ಮಹಾನಂದಸ್ವಾಮಿ ಅವರಿಗೆ ಯಾದಗಿರಿ ತಾಲ್ಲೂಕಿನ ಯಾದಗಿರಿ ಮತಕ್ಷೇತ್ರಕ್ಕೆ ಸೀಮಿತಗೊಳಿಸಲಾಗಿದೆ. ಇದರ ಜೊತೆಗೆ ಮಹಾನಂದ ಸ್ವಾಮಿ ಅವರಿಗೆ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಎಸ್‌ಜಿಎಸ್‌ವೈ ವಿಷಯ ನಿರ್ವಾಹಕರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.ಆದರೆ ಯಾದಗಿರಿ ಕ್ಷೇತ್ರದಲ್ಲಿ ಕೇವಲ 20 ಗ್ರಾಮಗಳು ಬರುತ್ತಿದ್ದು, ಉಳಿದ ಗ್ರಾಮಗಳು ಶಹಾಪುರ ತಾಲ್ಲೂಕಿಗೆ ಒಳಪಡುತ್ತವೆ. 20 ಗ್ರಾಮಗಳಿಗೆ ಒಬ್ಬ ತಾಲ್ಲೂಕು ಸಂಯೋಜನಾಧಿಕಾರಿ ಹುದ್ದೆ ಅವಶ್ಯಕವಾಗಿತ್ತೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ. ಆದರೆ ಕೆಲ ಶಿಕ್ಷಕರು ಜನಪ್ರತಿನಿಧಿಗಳ ಶಿಫಾರಸು ಪತ್ರ ಪಡೆದು,  ಬೇರೆ ಇಲಾಖೆಯತ್ತ ಗಮನ ನೀಡುತ್ತಿರುವುದು  ನುಂಗಲಾರದ  ತುತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry