ಗುರುವಾರ , ಏಪ್ರಿಲ್ 15, 2021
24 °C

ಒಂದೇ ಹುದ್ದೆ: ಇಬ್ಬರು ಕಾರ್ಯದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ತಾಲ್ಲೂಕಿನ ದೊಡ್ಡದಾದ ಮುಧೋಳ ಗ್ರಾಮ ಪಂಚಾಯಿತಿಯಲ್ಲಿ ಇತರೆ ಸಿಬ್ಬಂದಿ ಇಲ್ಲದೆ ಇಬ್ಬರು ಕಾರ್ಯದರ್ಶಿಗಳು, ಒಬ್ಬ ಪಿಡಿಒ ಇದ್ದು ಆಡಳಿತ ಸಂಪೂರ್ಣ ವಿಫಲವಾಗಿದೆ.ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನಂತರಾವ್ ದೇಸಾಯಿ ಅವರಿಗೆ ಮೂಲ ಸ್ಥಳ ಬಳೂಟಗಿ ಗ್ರಾಮ ಪಂಚಾಯಿತಿಗೆ ಹೋಗುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ 27/12/10ರಂದು ಆದೇಶ ನೀಡಿದ್ದರೂ ಈವರೆಗೂ ಪರಿಪಾಲನೆಯಾಗಿಲ್ಲ.ಚಾರ್ಜ್ ಕೊಡಲು ಪ್ರಭಾರ ಕಾರ್ಯದರ್ಶಿ ಅನಂತರಾವ್ ದೇಸಾಯಿ ಹಿಂದೇಟು ಹಾಕುತ್ತಿದ್ದರೆ, ಚಾರ್ಜ್ ಪಡೆಯುವಲ್ಲಿ ವಿಫಲರಾಗಿರುವ ಮತ್ತೊಬ್ಬ ಕಾರ್ಯದರ್ಶಿ ಎಸ್.ಎಸ್.ಸಾರಂಗಮಠ ಕಚೇರಿಯಲ್ಲಿ ಕುಳಿತು ಹೊತ್ತುಕಳೆಯುತ್ತಿದ್ದಾರೆ. ಈ ನಡುವೆ ಪಿಡಿಇ ಶಶಿಧರ ಸಕ್ರಿ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಿದ್ದು ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ.ಚಾರ್ಜ್ ಕೊಡಲು ನಿರಾಕರಿಸಿದಾಗಲೇ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಅನಂತರಾವ್ ಅವರನ್ನು ವರ್ಗಾಯಿಸುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಫೆ.7ರಂದು ಪತ್ರ ಬರೆದಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯಿತಿಯ ಮುಧೋಳ ಕ್ಷೇತ್ರದ  ಸದಸ್ಯೆ ಹೇಮಲತಾ ಕೂಡಾ ದೇಸಾಯಿಯವರು ಬೇಡ ಎಂದು ಫೆ.10ರಂದು ಸಿಇಒ ಅವರಿಗೆ ಪತ್ರ ಬರೆದಿದ್ದಾರೆ, ಆದರೂ ಸಿಇಒ ಪ್ರಭಾರ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನ ತೋರಿದ್ದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ತಾಲ್ಲೂಕು ಪಂಚಾಯಿತಿ ಇಒ ಅವರ ಕಣ್ಮುಂದೆ ಇಷ್ಟೆಲ್ಲ ನಡೆದರೂ ಯಾವುದೇ ತೀರ್ಮಾನಕ್ಕೆ ಬರದಿರುವುದು  ಅವರ ಕಾರ್ಯವೈಖರಿಯನ್ನು ತೋರಿಸುತ್ತಿದೆ.ಅಸಮಾಧಾನ: ಕಾರ್ಯದರ್ಶಿಗಳ ಜಗಳದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಯಾವ ಓಣಿಯಲ್ಲಿಯೂ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಎಲ್ಲಿ ನೋಡಿದರಲ್ಲಿ ಬರೀ ತಗ್ಗು ದಿನ್ನೆಗಳ ರಸ್ತೆಮೇಲೆ ಕೊಳಚೆ ನೀರು ಹರಿಯುತ್ತಿದೆ. ವಿದ್ಯುತ್ ಪರಿವರ್ತಕ ಸುಟ್ಟು ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಅಧಿಕಾರಿಗಳ ಧೋರಣೆಯಿಂದಾಗಿ ಗ್ರಾಮಸ್ಥರಿಗೆ ಸಾಕು ಬೇಕಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ಹುಂಬಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.