ಬುಧವಾರ, ಏಪ್ರಿಲ್ 14, 2021
31 °C
ಮಧುಸೂದನ್ ವಿರುದ್ಧ ಲಕ್ಷ್ಮಣ್ ಆರೋಪ

ಒಂಬತ್ತು ನಿವೇಶನಗಳ ಅಕ್ರಮ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಚಾಮುಂಡಿಬೆಟ್ಟದ ತಪ್ಪಲಿನ 2 ಸಾವಿರ ಎಕರೆ ಜಮೀನಿನ ಖಾತೆ ಬದಲಾವಣೆ ಹಗರಣವನ್ನು ಬಯಲಿಗೆಳೆದಿದ್ದ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವ್ಯಾಪ್ತಿಯ ವಿಜಯನಗರದ ಎರಡನೇ ಹಂತದಲ್ಲಿನ 9 ನಾಗರಿಕ ಸೌಕರ್ಯ (ಸಿಎ) ನಿವೇಶನಗಳನ್ನು ಕಾನೂನು ಬಾಹಿರವಾಗಿ ವಿದ್ಯಾಶ್ರಮ ಎಜುಕೇಷನ್ ಫೌಂಡೇಷನ್ ಹಾಗೂ ಇಮ್ಯಾಕುಲೇಟ್ ಹಾರ್ಟ್ ಕಾನ್ವೆಂಟ್‌ಗೆ ನೀಡಲು ಪ್ರಭಾವ ಬೀರಿದ್ದಾರೆ ಎಂದು ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ದೂರಿದ್ದಾರೆ.



`ಹಿನಕಲ್‌ನ ಸರ್ವೆ ನಂಬರ್ 181, 186ರ 36/1, 36/2, 37, 38ರ (1.30 ಎಕರೆ) ಸಿ.ಎ. ನಿವೇಶನವನ್ನು ಜೂನ್ 22 ರಂದು ವಿದ್ಯಾಶ್ರಮಕ್ಕೆ ನೀಡಲಾಗಿದೆ. ಅದೇ ಸರ್ವೆ ನಂಬರ್‌ನ 34ರ ಸಿ.ಎ ನಿವೇಶನವನ್ನು ಇಮ್ಯಾಕುಲೇಟ್ ಹಾರ್ಟ್ ಕಾನ್ವೆಂಟ್‌ಗೆ ಮಂಜೂರು ಮಾಡುವಂತೆ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾರ್ಚ್ 21ರಂದು ಆದೇಶ ನೀಡಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ನಿವೇಶನ ನೀಡುವಂತೆ ಗೋ.ಮಧುಸೂದನ್ ಸಿಎಂ ಮೇಲೆ ಪ್ರಭಾವ ಬೀರಲು ಬರೆದ ಪತ್ರ ಮಾಹಿತಿ ಹಕ್ಕಿನಡಿ ಲಭಿಸಿದೆ' ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.



`ಕ್ರೀಡಾಂಗಣ, ಸಮುದಾಯ ಭವನ, ಗ್ರಂಥಾಲಯ, ಆಸ್ಪತ್ರೆ ನಿರ್ಮಿಸಲು ಸಿಎ ನಿವೇಶನ ನೀಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಎಂದು ನಮೂದಿಸಲಾಗಿದೆ. ಸಿಎ ನಿವೇಶನಕ್ಕಾಗಿ ಮುಡಾ ಅರ್ಜಿ ಆಹ್ವಾನಿಸಿ, ಹಿರಿತನದ ಆಧಾರದ ಮೇಲೆ ವಿತರಿಸಬೇಕು. ಈ ನಿಯಮವನ್ನೂ ಉಲ್ಲಂಘಿಸಿ 2 ಸಂಸ್ಥೆಗಳಿಗೆ ನಿವೇಶನ ಮಂಜೂರು ಮಾಡಲಾಗಿದೆ. ಮೇ 5 ರಂದು ವಿದ್ಯಾಶ್ರಮ ಎಂಜುಕೇಷನ್ ಫೌಂಡೇಷನ್ ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಅದೇ ದಿನ ಮುಡಾ ಆಯುಕ್ತರಿಗೆ ಸೂಚಿಸಿದ್ದಾರೆ. ಕಾನೂನು ಇಲಾಖೆ ಇದು ನಿಯಮ ಬಾಹಿರ ಎಂಬ ಎಚ್ಚರಿಕೆ ಕೂಡ ನೀಡಿದೆ.



ಬಳಿಕ ಜೂನ್ 22 ರಂದು ಡಿ.ವಿ.ಸದಾನಂದಗೌಡ ಅವರು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ರೂ.45 ಕೋಟಿ ಮೌಲ್ಯದ ನಿವೇಶನವನ್ನು ಮುಡಾ ಆಯುಕ್ತರು ಕೇವಲ ರೂ.7 ಲಕ್ಷಕ್ಕೆ 10 ವರ್ಷದ ಗುತ್ತಿಗೆ ಆಧಾರದ ಮೇಲೆ ನೀಡಿದ್ದಾರೆ.  ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ವಿದ್ಯಾಶ್ರಮಕ್ಕೆ ಅದೇ ಸರ್ವೆನಂಬರ್‌ನಲ್ಲಿ ಮತ್ತೆ 3 ನಿವೇಶನ ನೀಡಲಾಗಿದೆ. ಹೀಗಾಗಿ ಮುಡಾ ಆಯುಕ್ತರ ಮೇಲೆ ಶಿಸ್ತಿನ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದರು.



`ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಡೊನೇಷನ್ ವಸೂಲಿ ಮಾಡುವ ಕಾಲೇಜಿಗೆ ನಿವೇಶನ ನೀಡಿರುವುದು ಖಂಡನೀಯ. ಮುಡಾ ಸದಸ್ಯರಾಗಿರುವ ಗೋ.ಮಧುಸೂದನ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇದರಲ್ಲಿ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಅವರ ಪಾತ್ರವೂ ಇದೆ. ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಮುಂದಿನ ವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು' ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.