ಶುಕ್ರವಾರ, ಜೂನ್ 18, 2021
28 °C

ಒಂಬತ್ತು ಮಂದಿ ವಕೀಲರ ಬಂಧನ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಧರಣಿ ನಡೆಸುತ್ತಿದ್ದ ವಕೀಲರಲ್ಲಿ ಒಂಬತ್ತು ಮಂದಿಯನ್ನು ಹಲಸೂರುಗೇಟ್ ಪೊಲೀಸರು ಬುಧವಾರ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಬಿಡುಗಡೆಗೊಳಿಸಿದರು.ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಮಾ.2ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಕೀಲರು ಬುಧವಾರವೂ ಕಲಾಪ ಬಹಿಷ್ಕರಿಸಿ ಧರಣಿ ನಡೆಸಿದರು. ಆದರೆ, ನ್ಯಾಯಾಲಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಪೊಲೀಸರು ಬೆಳಿಗ್ಗೆಯೇ ನ್ಯಾಯಾಲಯದ ಆವರಣವನ್ನು ಪ್ರವೇಶಿಸಿ ಧರಣಿ ನಿಲ್ಲಿಸುವಂತೆ ವಕೀಲರಿಗೆ ಮನವಿ ಮಾಡಿದರು.ಪೊಲೀಸರ ಮನವಿಗೆ ಸ್ಪಂದಿಸದ ವಕೀಲರು ಧರಣಿಯನ್ನು ಮುಂದುವರೆಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಧರಣಿನಿರತರಲ್ಲಿ ಕೆಲ ವಕೀಲರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಕರೆದೊಯ್ದರು.ಅಲ್ಲದೇ ವಕೀಲರು ಸ್ಥಳದಲ್ಲಿ ಹಾಕಿದ್ದ ಶಾಮಿಯಾನ, ಕುರ್ಚಿಗಳು, ಧ್ವನಿವರ್ಧಕ, ಮೈಕ್‌ಗಳು ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.`ಸಿಟಿ ಸಿವಿಲ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಆರ್.ಬಿ.ಬೂದಿಹಾಳ್ ಅವರ ಸೂಚನೆ ಮೇರೆಗೆ ಮತ್ತು ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಧರಣಿನಿರತರಲ್ಲಿ ಹಿರೇಮಠ್, ವಿನಯ್‌ಗಾಂಧಿ, ಹರೀಶ್, ಪ್ರಧಾನ್, ರಾಜು, ಯೋಗೇಶ್, ಹರೀಶ್‌ಕುಮಾರ್, ನಾಚೇಗೌಡ ಹಾಗೂ ಯದುಕುಮಾರ್ ಎಂಬ ವಕೀಲರನ್ನು ಬಂಧಿಸಲಾಯಿತು. ಅಲ್ಲದೇ ನ್ಯಾಯಾಲಯದ ಕಟ್ಟಡವನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪೊಲೀಸ್ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು~ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದರು.`ನ್ಯಾಯಾಲಯ ಕಟ್ಟಡದಲ್ಲಿ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಬೂದಿಹಾಳ್ ಅವರು ಮಧ್ಯಾಹ್ನ 1.30ರ ಸುಮಾರಿಗೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಕಟ್ಟಡದಿಂದ ಹೊರಗೆ ಕರೆಸಿಕೊಳ್ಳಲಾಯಿತು~ ಎಂದು ಹೇಳಿದರು.ಬಿಗಿ ಬಂದೋಬಸ್ತ್: ನ್ಯಾಯಾಲಯದ ಕಟ್ಟಡವನ್ನು ಬೆಳಿಗ್ಗೆಯೇ ತಮ್ಮ ಸುಪರ್ದಿಗೆ ತೆಗೆದುಕೊಂಡ ಪೊಲೀಸರು ಪ್ರತಿ ಕೊಠಡಿಯ ಬಳಿ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಭದ್ರತೆಗೆ ನಿಯೋಜಿಸಿದ್ದರು. ಅಲ್ಲದೇ ನಾಲ್ಕು ಮಂದಿ ಡಿಸಿಪಿಗಳು, 12 ಎಸಿಪಿಗಳು, 36 ಇನ್‌ಸ್ಪೆಕ್ಟರ್‌ಗಳು, 48 ಎಸ್‌ಐ, 150 ಹೆಡ್ ಕಾನ್‌ಸ್ಟೇಬಲ್, 150 ಮಂದಿ ಕಾನ್‌ಸ್ಟೇಬಲ್‌ಗಳು ಮತ್ತು ಆರ್‌ಎಎಫ್ ಸಿಬ್ಬಂದಿಯನ್ನು ನ್ಯಾಯಾಲಯದ ಆವರಣದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ರಾಜ್ಯ ಮೀಸಲು ಪೊಲೀಸ್ ಪಡೆಯನ್ನು (ಕೆಎಸ್‌ಆರ್‌ಪಿ) ನ್ಯಾಯಾಲಯದ ಸುತ್ತಮುತ್ತ ನಿಯೋಜಿಸಲಾಗಿತ್ತು.ಸಿಟಿ ಸಿವಿಲ್ ನ್ಯಾಯಾಲಯ ಕಾರ್ಯಾರಂಭ ಮಾಡಿದ ನಂತರ ಇದೇ ಮೊದಲ ಬಾರಿಗೆ ಆರ್‌ಎಎಫ್ ಸಿಬ್ಬಂದಿ ನ್ಯಾಯಾಲಯದ ಆವರಣವನ್ನು ಪ್ರವೇಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.