ಒಎಂಸಿ: ರೂ. 15,000 ಕೋಟಿ ಅವ್ಯವಹಾರ

7

ಒಎಂಸಿ: ರೂ. 15,000 ಕೋಟಿ ಅವ್ಯವಹಾರ

Published:
Updated:

ಹೈದರಾಬಾದ್: ಗಣಿ ಅಕ್ರಮ ಆರೋಪಕ್ಕೆ ಸಿಲುಕಿ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಳ್ಳಾರಿ ಮತ್ತು ಅನಂತಪುರ ಗಡಿಗಳಲ್ಲಿ 15,000 ಕೋಟಿ ರೂಪಾಯಿಗಳ  ಗಣಿ ಅವ್ಯವಹಾರ ನಡೆಸಿದ್ದು, 90 ಲಕ್ಷ ಟನ್‌ಗಳಷ್ಟು ಭಾರಿ ಪ್ರಮಾಣದ ಕಬ್ಬಿಣದ ಅದಿರು ರಫ್ತು ಮಾಡಿದ್ದಾರೆ ಎಂದು ಸಿಬಿಐ ಪರಿಷ್ಕೃತ ಅಂದಾಜಿನ ನಂತರ ಹೇಳಿದೆ.

ಸುಪ್ರೀಂಕೋರ್ಟಿನ ಕೇಂದ್ರ ಉನ್ನತಾಧಿಕಾರ ಸಮಿತಿ ವರದಿ ಸಲ್ಲಿಸಿದ ನಂತರ ಓಬಳಾಪುರಂ ಕಂಪೆನಿಯ ಗಣಿ ಚಟುವಟಿಕೆಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ತಂಡ ಇದನ್ನು ಬಹಿರಂಗಪಡಿಸಿದೆ.

ಜನಾರ್ದನ ರೆಡ್ಡಿ ಮತ್ತು ಅವರ ಸಹವರ್ತಿಗಳು 60 ಗಣಿ ಗುತ್ತಿಗೆ ಪ್ರದೇಶಗಳ ಮಾಲೀಕರನ್ನು ಬೆದರಿಸಿ, ಅಲ್ಲಿನ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಿದ್ದರು. ಆ ಗಣಿಗಳ ಮೂಲ ಮಾಲೀಕರಿಗೆ ಕೇವಲ ಶೇ 25ರಷ್ಟು ಪಾಲು ನೀಡುತ್ತಿದ್ದ ಇವರು ಉಳಿದ ಶೇ 75ರಷ್ಟನ್ನು ತಾವು ಪಡೆಯುತ್ತಿದ್ದರು ಎಂದು ಸಿಬಿಐ ವಿವರಿಸಿದೆ.

ಕರ್ನಾಟಕದ ಇನ್ನಿತರ ಗಣಿ ಗುತ್ತಿಗೆ ಪ್ರದೇಶಗಳ ಮಾಲೀಕರ ಜತೆ ಚರ್ಚಿಸಿ ಈ ವಿಷಯ ಖಚಿತಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರೆಡ್ಡಿ ಬಂಧನದ ನಂತರ, ಅವರ ಸಂಪೂರ್ಣ ವಿಶ್ವಾಸಕ್ಕೆ ಪಾತ್ರರಾಗಿದ್ದ ಲೆಕ್ಕ ಪರಿಶೋಧಕಿ ಜಿ.ರೇಣುಕಾ ಆಚಾರ್ಯ ದುಬೈಗೆ ಪಲಾಯನ ಮಾಡಿದ್ದರು. ಇದೀಗ ಆಕೆ ಹೈದರಾಬಾದ್‌ಗೆ ಬಂದು ಸಿಬಿಐ ಮುಂದೆ ಹಾಜರಾಗಿದ್ದು, ಎರಡು ದಿನಗಳಿಂದ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಬಿಜೆಪಿ ನಾಯಕರ ಗಣಿ ವ್ಯವಹಾರದಲ್ಲಿ ಅಲ್ಪಮೊತ್ತದ ಪಾಲನ್ನೂ ಹೊಂದಿರುವ ರೇಣುಕಾ, ರೆಡ್ಡಿ ಅಕ್ರಮದ ಬಗ್ಗೆ ತನಿಖಾ ಸಿಬ್ಬಂದಿ ಮಾಡಿರುವ ಪರಿಷ್ಕೃತ ಅಂದಾಜನ್ನು ಒಪ್ಪಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

ರೆಡ್ಡಿ 1980ರಲ್ಲಿ ಬಳ್ಳಾರಿಯಲ್ಲಿ ಖಾಸಗಿ ಫೈನಾನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಆಗಿನಿಂದಲೂ ರೆಡ್ಡಿ ಅವರೊಂದಿಗೆ ರೇಣುಕಾ ಇದ್ದಾರೆ.  ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದ ರೇಣುಕಾ, ಅಲ್ಲಿಂದಲೇ ರೆಡ್ಡಿ  ಹಣಕಾಸು ವಹಿವಾಟು ನಿರ್ವಹಿಸುತ್ತಿದ್ದರು.

ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಸಲ್ಲಿಸಿದ ವರದಿಯಲ್ಲೂ ರೇಣುಕಾ ಹೆಸರು ಪ್ರಮುಖವಾಗಿ ಪ್ರಸ್ತಾಪಗೊಂಡಿದೆ ಎನ್ನಲಾಗಿದೆ.

ಅನುಷ್ಠಾನಗೊಳ್ಳದ, ವಿವಾದಾತ್ಮಕ ಬ್ರಹ್ಮಣಿ ಸ್ಟೀಲ್ಸ್ ಸೇರಿದಂತೆ ರೆಡ್ಡಿ ಅವರ ಕೆಲವಾರು ಯೋಜನೆಗಳಲ್ಲಿ ರೇಣುಕಾ ಪಾಲುದಾರರಾಗಿದ್ದರು.

ರೆಡ್ಡಿ ಸಹೋದರರು ಭಾರತ ಹಾಗೂ ವಿದೇಶಗಳಲ್ಲಿ ವಿವಿಧ ಹೆಸರುಗಳಲ್ಲಿ ಹೊಂದಿರುವ 30ಕ್ಕೂ ಹೆಚ್ಚು ಕಂಪೆನಿಗಳ ಬಗ್ಗೆ ರೆಡ್ಡಿ ಹೊರತುಪಡಿಸಿದರೆ ನಿಖರವಾಗಿ ಮಾಹಿತಿ ಹೊಂದಿರುವವರು ರೇಣುಕಾ ಮಾತ್ರ ಎಂದೂ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry