ಒಎನ್‌ಜಿಸಿಗೆ ಶರಣಾದ ಬಿಪಿಸಿಎಲ್

7

ಒಎನ್‌ಜಿಸಿಗೆ ಶರಣಾದ ಬಿಪಿಸಿಎಲ್

Published:
Updated:
ಒಎನ್‌ಜಿಸಿಗೆ ಶರಣಾದ ಬಿಪಿಸಿಎಲ್

ಮಂಗಳೂರು: ಭಾನುವಾರ ಮಧ್ಯರಾತ್ರಿ ಆರಂಭವಾದ ಪಂದ್ಯ ಪ್ರೇಕ್ಷಕರಿಗೆ ಕಾದುಕುಳಿತಿದ್ದಕ್ಕೆ ತಕ್ಕ `ರಸದೌತಣ~ ಉಣಿಸಲಿಲ್ಲ.

ಯೋಜಿತ ತಂತ್ರದ ಪ್ರಕಾರ ಆಟವಾಡಿದ ಡೆಹ್ರಾಡೂನಿನ ಒಎನ್‌ಜಿಸಿ ತಂಡ 3-0 ನೇರ ಸೆಟ್‌ಗಳಿಂದ ಕೊಚ್ಚಿಯ ಬಿಪಿಸಿಎಲ್ ತಂಡವನ್ನು ಸದೆಬಡಿದು, 5ನೇ ಅಖಿಲ ಭಾರತ ಆಹ್ವಾನ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶಿವಪ್ರಸಾದ್ ಬಾಳಿಗಾ ಸ್ಮರಣಾರ್ಥ ನಡೆದ ಹೊನಲು ಬೆಳಕಿನ ಟೂರ್ನಿಯ ಫೈನಲ್ ಪಂದ್ಯ ಆರಂಭವಾದಾಗ ಭಾನುವಾರ ಮಧ್ಯರಾತ್ರಿ ದಾಟಿತ್ತು. ಸಾವಿರಕ್ಕೂ ಅಧಿಕ ಪ್ರೇಕ್ಷಕರೆದುರು ಒಎನ್‌ಜಿಸಿ 25-20, 25-18, 25-23 ರಲ್ಲಿ  ಜಯಗಳಿಸಲು 70 ನಿಮಿಷ ತೆಗೆದುಕೊಂಡಿತು.

ಆ ಗೆಲುವಿನಿಂದ ಕಳೆದ ತಿಂಗಳು ತಮಿಳು ನಾಡಿನ ಬರಗೂರಿನಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಎದುರು ಅನುಭವಿಸಿದ ಸೋಲಿಗೆ ಸೇಡನ್ನೂ ತೀರಿಸಿಕೊಂಡಿತು,

ನಾಯಕ ರತೀಶ್ ನಾಯರ್, ಲವ ಮೀತ್ ಕಠಾರಿಯಾ ಮತ್ತು ಮನದೀಪ್ ಅವರ ಬ್ಲಾಕ್ ಮತ್ತು ಸ್ಮ್ಯಾಶ್, ಡ್ರಾಪ್‌ಗಳ ಎದುರು ಕೊಚ್ಚಿಯ ತಂಡದ ಆಟ ಹೆಚ್ಚುಕಮ್ಮಿ ಕೊಚ್ಚಿಹೋಯಿತು.

`ಎದುರಾಳಿ ತಂಡದ ಪ್ರಮುಖ ಆಟಗಾರರಾದ ಟಾಮ್ ಜೋಸೆಫ್ ಮತ್ತು ಕಿಶೋರ್ ಅವರತ್ತ ಚೆಂಡು ಹೆಚ್ಚು ಹೋಗದಂತೆ ನೋಡಿಕೊಳ್ಳು ವುದು ನಮ್ಮ ತಂತ್ರವಾಗಿತ್ತು. ಅದರಲ್ಲಿ ಯಶಸ್ಸು ಸಾಧಿಸಿದೆವು. ನಮ್ಮೆಲ್ಲ ಆಟಗಾರರು, `ಸೆಟ್ಟರ್~ ರಣಜಿತ್, ರತೀಶ್, ಮನದೀಪ್, ಲವಮೀತ್ ಅಮೋಘ ಆಟವಾಡಿದರು~ ಎಂದು ತಂಡದ ಕೋಚ್ ಬಿ.ಎಲ್.ಯಾದವ್ ಪ್ರತಿಕ್ರಿಯಿಸಿದರು.

ಬಿಪಿಸಿಎಲ್‌ನ ಕಿಶೋರ್ ಮತ್ತು ರಾಜೀವ್ ಅವರ `ರಕ್ಷಣಾ ಗೋಡೆ~ ದುರ್ಬಲವಾಗಿದ್ದು ಸೋಲಿಗೆ ಪ್ರಮುಖ ಕಾರಣ.

ಇದಕ್ಕೆ ಮೊದಲು ಚೆನ್ನೈನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ) ತಂಡ, 25-15, 25-20, 21-25, 22-25, 15-10 ರಲ್ಲಿ ತಮ್ಮೂರಿನ ಇನ್ನೊಂದು ತಂಡ ಕಸ್ಟಮ್ಸ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಪಡೆಯಿತು. 1 ಗಂಟೆ 37 ನಿಮಿಷ ನಡೆದ ಈ ಪಂದ್ಯ ಫೈನಲ್‌ಗಿಂತ ಹೆಚ್ಚು ಹೋರಾಟ ಕಂಡಿತ್ತು.

ಮೊದಲ ಬಹುಮಾನ ಪಡೆದ ತಂಡ 1 ಲಕ್ಷ ರೂಪಾಯಿ, ಎರಡನೇ ಸ್ಥಾನ ಪಡೆದ ತಂಡ 60 ಸಾವಿರ ಪಡೆದವು. ಐಒಬಿ 40 ಸಾವಿರ ಜೇಬಿಗಿಳಿಸಿದರೆ, ಕಸ್ಟಮ್ಸ 20 ಸಾವಿರಕ್ಕೆ ತೃಪ್ತಿಪಟ್ಟರು.

ಬಿಪಿಸಿಎಲ್‌ನ ವಿಬಿನ್ ಜಾರ್ಜ್ ಉತ್ತಮ ದಾಳಿಗಾರ, ಐಒಬಿಯ ಉಕ್ರಪಾಂಡ್ಯನ್ ಉತ್ತಮ ಸೆಟ್ಟರ್,     ಕಸ್ಟಮ್ಸ ತಂಡದ ಕನಗರಾಜ್ `ಉತ್ತಮ ಲಿಬೆರೊ~ ಮತ್ತು ಒಎನ್‌ಜಿಸಿಯ ಮನದೀಪ್ ಸಿಂಗ್ `ಉತ್ತಮ ಯೂನಿವರ್ಸಲ್~ ಗೌರವಕ್ಕೆ ಪಾತ್ರರಾದರು.

ಮಹಿಳೆಯರ ವಿಭಾಗದಲ್ಲಿ ಶ್ರುತಿಮೋಳ್ `ಉತ್ತಮ ಸೆಟ್ಟರ್~, ಕೆಎಸ್‌ಇಬಿಯ ಶಿಬಾ ಪಿ.ವಿ. `ಉತ್ತಮ ದಾಳಿಗಾರ್ತಿ~, ತಲಶೇರಿಯ ಭಾರತ ಕ್ರೀಡಾ ಪ್ರಾಧಿಕಾರದ ಪೂರ್ಣಿಮಾ `ಉತ್ತಮ ಯೂನಿವರ್ಸಲ್~ ಆಟಗಾರ್ತಿ ಎನಿಸಿ ವೈಯಕ್ತಿಕ ಬಹುಮಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry