ಒ.ಒ.ಡಿ ಚೀಟಿಗೆ ನೌಕರರ ಪಡಿಪಾಟಲು

7

ಒ.ಒ.ಡಿ ಚೀಟಿಗೆ ನೌಕರರ ಪಡಿಪಾಟಲು

Published:
Updated:
ಒ.ಒ.ಡಿ ಚೀಟಿಗೆ ನೌಕರರ ಪಡಿಪಾಟಲು

ವಿಜಾಪುರ: 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ  ಸರ್ಕಾರಿ ನೌಕರರು ನೋಂದಣಿ ಮತ್ತು ಓ.ಓ.ಡಿ ಚೀಟಿ ಪಡೆದುಕೊಳ್ಳಲು ಪ್ರತಿನಿಧಿಗಳ ಸಂಪರ್ಕ ಕೇಂದ್ರಗಳ ಎದುರು ಶನಿವಾರ ಬೆಳಿಗ್ಗೆ ಪರದಾಡುತ್ತಿದ್ದ ದೃಶ್ಯ ಕಂಡುಬಂದಿತು.ಸಮ್ಮೇಳನದ ಮುಖ್ಯ ವೇದಿಕೆಯ ಪಕ್ಕದಲ್ಲೇ ಪ್ರತಿನಿಧಿಗಳ ಸಂಪರ್ಕಕ್ಕಾಗಿ 10 ಕೇಂದ್ರಗಳನ್ನು ತೆರೆಯಲಾಗಿತ್ತು. ಸಮ್ಮೇಳನ ಉದ್ಘಾಟನೆಗೂ ಮುಂಚಿನಿಂದಲೇ ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಪ್ರತಿನಿಧಿಗಳಿಗೆ ಕಿಟ್ ವಿತರಣೆ ವ್ಯವಸ್ಥೆಯನ್ನು ಸಂಘಟಕರು ಮಾಡಿದ್ದರು. ಅದಕ್ಕೂ ಪೂರ್ವದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆದರೆ, ಪ್ರತಿನಿಧಿಗಳ ನೋಂದಣಿ ಮಾಡಿಸಿಕೊಳ್ಳಲು ವಿಳಂಬ ಮಾಡಲಾಗುತ್ತಿದೆ' ಎಂದು ಹಲವಾರು ಶಿಕ್ಷಕರು ದೂರಿದರು.`ಸಮ್ಮೇಳನಕ್ಕಾಗಿ ನೂರಾರು ರೂಪಾಯಿಗಳನ್ನು ಖರ್ಚು ಮಾಡಿ ದೂರದೂರದ ಊರುಗಳಿಂದ ಬಂದಿದ್ದೇವೆ. ಆದರೆ, ಇಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ಸಮ್ಮೇಳನಕ್ಕೂ ಪೂರ್ವದಲ್ಲಿ ಆಯಾ ಜಿಲ್ಲೆಗಳಿಗೆ ನಿಗದಿತ ಸಂಖ್ಯೆಯಲ್ಲಿ ನೋಂದಣಿ ಅರ್ಜಿಗಳನ್ನು ಕಳಿಸಲಾಗಿತ್ತು. ಆದರೆ, ಗ್ರಾಮೀಣ ಭಾಗದ ಅನೇಕ ಜನರಿಗೆ ಅಲ್ಲಿ ನೋಂದಣಿ ಮಾಡಿಸಿಕೊಳ್ಳಲು ಆಗಲಿಲ್ಲ. ಈ ಕುರಿತು ಆಯಾ ಜಿಲ್ಲಾ ಕಸಾಪ ಪದಾಧಿಕಾರಿಗಳನ್ನು ವಿಚಾರಿಸಿದರೆ ನೇರವಾಗಿ ವಿಜಾಪುರಕ್ಕೆ ಬನ್ನಿ, ಅಲ್ಲಿಯೇ ನೋಂದಣಿ ಮಾಡಿಸಿಕೊಂಡು ಓ.ಓ.ಡಿ ಚೀಟಿ ಮತ್ತು ಕಿಟ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ನಾವು ಇಲ್ಲಿಗೆ ಬಂದಿದ್ದು, ಇಲ್ಲಿ ನೋಂದಣಿ ಮಾಡಿಸಿಕೊಳ್ಳಲು ವಿಳಂಬ ಮಾಡಲಾಗುತ್ತಿದೆ. ಸಮ್ಮೇಳನ ಉದ್ಘಾಟನೆ ನಂತರ ನೋಂದಣಿ ಮಾಡಿಸಿಕೊಳ್ಳುವುದಾಗಿ ಸಂಘಟಕರು ಹೇಳುತ್ತಿದ್ದಾರೆ' ಎಂದು ಗದುಗಿನ ಶಿವಶಂಕರ, ಕೊಪ್ಪಳದ ಶ್ರೀನಿವಾಸ ಮುಂತಾದವರು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿನಿಧಿಗಳಿಗೆ ಓ.ಓ.ಡಿ ಚೀಟಿಗಳನ್ನು ಸೋಮವಾರ ನೀಡುವುದಾಗಿ ಸಮ್ಮೇಳನ ಉದ್ಘಾಟನೆಗೂ ಮುನ್ನವೇ ಸಂಘಟಕರು ಮುಖ್ಯ ವೇದಿಕೆಯಿಂದ ಧ್ವನಿವರ್ಧಕದ ಮೂಲಕ ಸೂಚನೆ ನೀಡುತ್ತಿದ್ದರೂ, ಸಂಪರ್ಕ ಕೇಂದ್ರಗಳ ಎದುರು ಮಾತ್ರ ಪ್ರತಿನಿಧಿಗಳ ನೂಕುನುಗ್ಗಲು ಮುಂದುವರಿದೇ ಇತ್ತು. ಮುಂಚೆಯೇ ನೋಂದಣಿ ಮಾಡಿಸಿಕೊಂಡ ಪ್ರತಿನಿಧಿಗಳಿಗೆ ಕಿಟ್ ನೀಡಲಾಗುತ್ತಿತ್ತು.`ಶನಿವಾರ ಬೆಳಿಗ್ಗೆ ಸಮ್ಮೇಳನದ ಮುಖ್ಯ ವೇದಿಕೆಯಿಂದ ಸುಮಾರು ಒಂದೂವರೆ ಕಿ.ಮೀ. ಅಂತರದಲ್ಲಿ ಬಸ್‌ಗಳಿಂದ ಜನರನ್ನು ಇಳಿಸಲಾಗುತ್ತಿದ್ದು, ಇದರಿಂದ ವಯೋವೃದ್ಧರು, ಅಂಗವಿಕಲರು ನಡೆದುಕೊಂಡು ಬರಲು ಹೈರಾಣಾಗುತ್ತಿದ್ದಾರೆ. ಸಮ್ಮೇಳನದ ಮುಖ್ಯ ವೇದಿಕೆ ಸಮೀಪದವರೆಗೂ ಬಸ್‌ಗಳು ಹೋಗುವಂತೆ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ' ಎಂದು ಯುವ ಸಾಹಿತಿ ವೀರಣ್ಣ ಮಡಿವಾಳರ ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry