ಸೋಮವಾರ, ಏಪ್ರಿಲ್ 19, 2021
23 °C

ಒಕ್ಕಲಿಗರು ರಿಮೋಟ್ ಕಂಟ್ರೋಲ್ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ ರಾಜಕೀಯದಲ್ಲಿ ಅಲ್ಲಲ್ಲಿ ರಿಮೋಟ್ ಕಂಟ್ರೋಲ್‌ಗಳಿವೆ. ಕೆಟ್ಟ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿರುವ ಚಾನೆಲ್‌ಗಳನ್ನು ರದ್ದುಪಡಿಸುವ ಮತ್ತು ಬೇಕಾದ ಚಾನೆಲ್ ಅನ್ನು ನೋಡುವಂತೆ ಮಾಡುವ ರಿಮೋಟ್ ಕಂಟ್ರೋಲ್ ಆಗಿ ಗೌಡ ಜನಾಂಗ ರೂಪುಗೊಳ್ಳಬೇಕು~ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾರ್ಮಿಕವಾಗಿ ನುಡಿದರು.ರಾಜ್ಯ ಒಕ್ಕಲಿಗರ ಒಕ್ಕೂಟವು ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ `ಒಕ್ಕಲಿಗರ ಸಂಸ್ಕೃತಿ ಮಹಾಸಮ್ಮೇಳನ~ದಲ್ಲಿ ಅವರು ಮಾತನಾಡಿದರು.`ಒಕ್ಕಲಿಗರಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಪಕ್ಷ ಭೇದ ಇರಕೂಡದು. ಒಕ್ಕಲಿಗರಲ್ಲಿರುವ ದೌರ್ಬಲ್ಯವೆಂದರೆ ಯಾರಾದರೂ ಹೊಗಳಿ ಬಿಟ್ಟರೆ ಏರಿ ಬಿಡುತ್ತೇವೆ.ಆದರೆ ಯಾರದೋ ಕುತಂತ್ರದಿಂದ ಬಿದ್ದಾಗಲೇ ಬೆನ್ನು ಮೂಳೆ ಮುರಿದಿರುವುದು ಗೊತ್ತಾಗುವುದು. ಒಗ್ಗಟ್ಟಿನಿಂದಲೇ ಈ ಎಲ್ಲ ತಂತ್ರಗಳಿಗೂ ಉತ್ತರಿಸಬೇಕು~ ಎಂದು ಕರೆ ನೀಡಿದರು.`ಒಕ್ಕಲಿಗ ಸಮುದಾಯದಲ್ಲಿರುವ ಸಂಸ್ಕೃತಿ ಮತ್ತು ಸಂಸ್ಕಾರಗಳು ಇನ್ನಾವ ಸಮುದಾಯದಲ್ಲೂ ಇಲ್ಲ ಎಂದು ಖುಷಿಯಿಂದ ಹೇಳುತ್ತೇನೆ. ಈ ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೌಡ ಸಮುದಾಯವು ಒಂದಾಗಬೇಕು. ಭವಿಷ್ಯದ ನಡಿಗೆಯ ಬಗ್ಗೆ ಸೂಕ್ತ ಯೋಜನೆ  ಕಾರ್ಯಗತಗೊಳಿಸುವ ರಾಜಕೀಯ ಪ್ರಜ್ಞೆಯನ್ನು ಈ ಸಮುದಾಯ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.`ರಾಜ್ಯದ ಮುಖ್ಯಮಂತ್ರಿಯಾಗಿ 11 ತಿಂಗಳ ಕಾಲ ಉತ್ತಮ ಆಡಳಿತ ನೀಡಿದ್ದೇನೆ ಎಂಬ ತೃಪ್ತಿ ನನಗಿದೆ. ವ್ಯವಸ್ಥೆಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಬದ್ಧನಾಗಿದ್ದೇನೆ. ಎಲ್ಲ ರಾಜಕಾರಣಿಗಳನ್ನು ಕಳ್ಳರು ಎಂದು ಜನ ತಪ್ಪಾಗಿ ಭಾವಿಸಲಾರರು. ಯಾರು ಕಳ್ಳರು, ಯಾರು ಸುಳ್ಳರು ಎಂದು ತರ್ಕಿಸುವ ವಿವೇಚನೆ ಸಾಮಾನ್ಯ ಜನರಿಗೆ ಇದೆ~ ಎಂದು ಶಾಸಕ ಡಿ.ಕೆ. ಶಿವಕುಮಾರ್ ಅವರ ಮಾತಿಗೆ ಪ್ರತಿಯಾಗಿ ಉತ್ತರ ನೀಡಿದರು.ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, `ಪ್ರಸ್ತುತ ನಡೆಯುತ್ತಿರುವ ರಾಜಕಾರಣದಿಂದ ರಾಜಕಾರಣಿಗಳೆಲ್ಲರೂ ಕಳ್ಳರಂತೆ ಬಿಂಬಿತರಾಗಿದ್ದಾರೆ. ಮಕ್ಕಳು ನಮ್ಮನ್ನು ನೋಡಿಕೊಂಡು ಹೆದರುವ ಪರಿಸ್ಥಿತಿ ಬಂದಿದೆ. ಏನಾದರೂ ಸಾಧಿಸಬೇಕೆಂಬ ಹಠದಿಂದ ರಾಜಕೀಯ ಕ್ಷೇತ್ರಕ್ಕೆ ಬಂದರೆ, ಯಾವುದನ್ನೂ ಮಾಡದೇ ಕೇವಲ ಜಗಳದಲ್ಲಿ ಕಾಲಹರಣ ಮಾಡುತ್ತಿರುವುದು ಸಮಕಾಲೀನ ರಾಜಕಾರಣದ ದುರಂತ~ ಎಂದು ವಿಶ್ಲೇಷಿಸಿದರು.ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಆರ್.ಅಶೋಕ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಬೆಂಗಳೂರಿನ ವಿ.ಸಂಜನಾ ಮತ್ತು ಮೈಸೂರಿನ ಶ್ರೀಯಾ ಅವರಿಗೆ ರೂ 1 ಲಕ್ಷ ನಗದು ಬಹುಮಾನ ವಿತರಿಸಿದರು.ಪಿತೂರಿ ರಾಜಕಾರಣ: ಇದಕ್ಕೂ ಮುನ್ನ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, `ಒಕ್ಕಲಿಗರ ನಾಯಕರಿಂದ ಸಿದ್ದರಾಮಯ್ಯ, ಜಾಲಪ್ಪನಂತಹ ಇತರೆ ಸಮುದಾಯದ ವ್ಯಕ್ತಿಗಳು ರಾಜಕೀಯವಾಗಿ ಬಲಗೊಂಡಿರುವ ಉದಾಹರಣೆಗಳಿವೆ. ಹೀಗಿರುವಾಗ ಒಬ್ಬ ಪ್ರಾಮಾಣಿಕ ಮತ್ತು ನಿಷ್ಠಾವಂತ ಮುಖ್ಯಮಂತ್ರಿಯನ್ನು ಯಾವುದೇ ಕಾರಣ ನೀಡದೇ ಕೆಳಗಿಳಿಸಿದ್ದು, ಪಿತೂರಿ ರಾಜಕಾರಣ~ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ದನಿಗೂಡಿಸಿದ ನಂಜಾವಧೂತ ಸ್ವಾಮೀಜಿ, `ಸದಾನಂದಗೌಡರನ್ನು ಇಳಿಸಿದಾಗ ಒಕ್ಕಲಿಗರಷ್ಟೇ ಅಲ್ಲ. ಇತರೆ ಸಮುದಾಯಗಳು ಕೂಡ ಬೇಸರ ಪಟ್ಟುಕೊಂಡಿವೆ. ಪ್ರಧಾನಿಯಾಗಿದ್ದ ದೇವೇಗೌಡರನ್ನು, ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರ ಅಭಿವೃದ್ಧಿ ಸಹಿಸಲಾಗದೇ ಜನಾಂಗದ ವಿರುದ್ಧ ಸೇಡಿನ ರಾಜಕಾರಣ ನಡೆಸಲಾಗಿದೆ~ ಎಂದು ಹೇಳಿದರು.`ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ತಕ್ಷಣವೇ ಸರ್ಕಾರ ಗೌಡ ಸಮುದಾಯದ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಇದನ್ನು ತೀವ್ರವಾಗಿ ಖಂಡಿಸಬೇಕು. ರಾಜಕೀಯದಲ್ಲಿ ಮುಖ್ಯಮಂತ್ರಿ, ಮಂತ್ರಿಗಳನ್ನು ಹುಟ್ಟುಹಾಕುವ ಕಲೆಗಾರಿಕೆ ಒಕ್ಕಲಿಗರಿಗೂ ಸಿದ್ದಿಸಿದೆ.ಹಾಗಾಗಿ ಈ ವಿಚಾರದಲ್ಲಿ ಪಶ್ಚಾತ್ತಾಪ ಪಡುವುದಕ್ಕೂ ಅವಕಾಶವಿರದಂತೆ ಸಮಸ್ತ ಒಕ್ಕಲಿಗ ಕುಟುಂಬ ಒಂದಾಗಬೇಕು~ ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಇತರರು ಉಪಸ್ಥಿತರಿದ್ದರು.

ಬೀದಿ ನಾಯಿಗಳಿಗೆ ಬಿಸ್ಕೇಟ್ಸ್

`ಉತ್ತಮ ಕಾರ್ಯನಿರ್ವಹಿಸುವಾಗ ಆತಂಕಕಾರಿ ವ್ಯಕ್ತಿಗಳ ತೊಡರುಗಾಲು ಇದ್ದೇ ಇರುತ್ತದೆ. ಒಂದು ಒಳ್ಳೆಯ ಮಾರ್ಗದಲ್ಲಿ ಹೋಗುತ್ತಿದ್ದರೆ, ಅಲ್ಲಿ ಸಹ ಬೀದಿ ನಾಯಿಗಳ ಹಾವಳಿ ಇರುತ್ತದೆ. ಕೆಲವು ಕಚ್ಚುತ್ತವೆ, ಕೆಲವು ವಿನಾಕಾರಣ ಬೊಗಳುತ್ತಿರುತ್ತವೆ~ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮುಗುಮ್ಮಾಗಿ ನುಡಿದರು. `ಈ ಸಂದರ್ಭದಲ್ಲಿ ನನಗೆ ಉದ್ಯಮಿ ಬಿರ್ಲಾ ಅವರ ಮಾತುಗಳೇ ನೆನಪಾಗುತ್ತವೆ. ಅವರು “ಕಾಡುವ ನಾಯಿಗಳನ್ನು ಹದ್ದುಬಸ್ತಿನಲ್ಲಿಡಲು ಕಲ್ಲು ಹೊಡೆದುಕೊಂಡು ಕೂರಬಾರದು. ಬದಲಿಗೆ, ಬಿಸ್ಕೇಟ್ ಪ್ಯಾಕೇಟ್ ತೆಗೆದುಕೊಂಡು ಬಿಸ್ಕೇಟ್ ಎಸೆದು ನಮ್ಮ ಮಾರ್ಗದಲ್ಲಿ ಮುಂದುವರಿಯಬೇಕು” ಎಂದಿದ್ದರು. ಸದ್ಯಕ್ಕೆ ರಾಜಕೀಯದಲ್ಲಿ ಈ ನೀತಿಯನ್ನು ಅನುಸರಿಸುವ ಅನಿವಾರ್ಯತೆಯಿದೆ~ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೇ ಕುಟುಕಿದರು.`ಏನಾದರೂ ಕೆಲಸ ಮಾಡಿದ್ದರೆ ಗೌಡ ಸಮಾಜದವರೂ ಕೂಡ ಹೆಮ್ಮೆಪಡುವಂತಿರಬೇಕು ಎಂಬ ಮಾತನ್ನು ತಿರುಚಿ  ಗೌಡ ಸಮಾಜದಿಂದಲೇ ಅಧಿಕಾರಕ್ಕೆ ಬಂದೆ ಎಂದು ಹೇಳಿದ್ದೇನೆ ಎಂದು ಕೆಲವರು ಭಾವಿಸಿದರು. ನಾನು ಏನೇ ಮಾತನಾಡಿದರೂ ಆ ವಾಕ್ಯದ ಪ್ರತಿ ಪದಗಳು ವಿಶ್ಲೇಷಣೆಗೆ ಒಳಪಡುತ್ತದೆ. ಪ್ರತಿ ಮಾತು ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಇಲ್ಲಿ ಮಾಧ್ಯಮದವರು ಇದ್ದಾರೆ. ಹಾಗಾಗಿ ಇದು ಬ್ರೇಕಿಂಗ್ ನ್ಯೂಸ್ ಆಗಲಿ~ ಎಂದು ನಗುತ್ತಲೇ ಹೇಳಿದರು.ನಾಯಿ ನಿಯಂತ್ರಣ..

 “ಕಾಡುವ ನಾಯಿಗಳನ್ನು ಹದ್ದುಬಸ್ತಿನಲ್ಲಿಡಲು ಕಲ್ಲು ಹೊಡೆದುಕೊಂಡು ಕೂರಬಾರದು. ಬದಲಿಗೆ, ಬಿಸ್ಕೇಟ್ ಪ್ಯಾಕೇಟ್ ತೆಗೆದುಕೊಂಡು ಬಿಸ್ಕೇಟ್ ಎಸೆದು ನಮ್ಮ ಮಾರ್ಗದಲ್ಲಿ ಮುಂದುವರಿಯಬೇಕು” 

 -ಉದ್ಯಮಿ ಬಿರ್ಲಾ ಹೇಳಿಕೆ   ಉಲ್ಲೇಖಿಸಿದ ಡಿವಿಎಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.