ಗುರುವಾರ , ಮೇ 19, 2022
24 °C

ಒಕ್ಕಲಿಗರ ಧನ್ಯತಾಭಾವ; ವಿರಾಟ್ ಶಕ್ತಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಜಯ ಘೋಷಗಳ ನಡುವೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಒಕ್ಕಲಿಗ ಸಮುದಾಯ ಭಾನುವಾರ ಗುರುವಂದನೆ ಸಲ್ಲಿಸುವುದರ ಮೂಲಕ ಧನ್ಯತಾಭಾವ ಮೆರೆದರೆ, ಮತ್ತೊಂದೆಡೆ ಬೃಹತ್ ಸಮಾವೇಶದ ಮೂಲಕ ತನ್ನ ವಿರಾಟ್ ಶಕ್ತಿಯನ್ನೂ ಪ್ರದರ್ಶಿಸಿತು.

ಒಕ್ಕಲಿಗರ ಸಂಘ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಗುರುವಂದನಾ ಹಾಗೂ ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರು, `ಇದು ಯಾವುದೇ ಸಮುದಾಯದ ವಿರುದ್ಧದ ದಬ್ಬಾಳಿಕೆ ಅಥವಾ ತೆಗಳಿಕೆ ಸಮಾವೇಶ ಅಲ್ಲ~ ಎಂದು ಒತ್ತಿ ಹೇಳಿದರು.

ಇದಕ್ಕೂ ಮುನ್ನ ಫ್ರೀಡಂ ಪಾರ್ಕ್ ಬಳಿಯಿಂದ ಆದಿಚುಂಚನಗಿರಿ ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಅರಮನೆ ಆವರಣದವರೆಗೆ ಕರೆತರಲಾಯಿತು. ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದಿತು. ಸಭಾಂಗಣದ ಮೂಲೆಯಿಂದ ಹೂವಿನ ಅಲಂಕೃತ ಕ್ರೇನ್‌ನಲ್ಲಿ ಸ್ವಾಮೀಜಿ ಅವರನ್ನು ವೇದಿಕೆಗೆ ಕರೆತರಲಾಯಿತು. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸ್ವಾಮೀಜಿ ಜತೆಗಿದ್ದರು. ಗುರುವಂದನಾ ಕಾರ್ಯಕ್ರಮದಲ್ಲಿ ಸ್ವಾಮೀಜಿಗೆ ಕಿರೀಟ ತೊಡಿಸುವ ಮೂಲಕ ಅವರ ಮೇಲೆ ಪುಷ್ಪವೃಷ್ಟಿಗರೆದು ಗುರುವಂದನೆ ಸಲ್ಲಿಸಲಾಯಿತು.

ಸಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, `ಸಾಮಾಜಿಕ ಪರಿವರ್ತನೆಯ ಹರಿಕಾರರಾದ ಆದಿಚುಂಚನಗಿರಿ ಶ್ರೀಗಳು ಶಿಕ್ಷಣ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಸಮಾಜಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು. ಶಿಕ್ಷಣ ಕೆಲವರ ಸ್ವತ್ತಲ್ಲ. ಅದು ದೇಶದ ಎಲ್ಲ ಜನರ ಸ್ವತ್ತು ಎಂಬ ಭಾವನೆಯೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಶ್ರೀಗಳು, ಜಾಗೃತಿ ಮೂಲಕ ಜನಾಂಗವನ್ನು ಸಂಘಟಿಸಲು ನಡೆಸಿದ ಪ್ರಯತ್ನ ಶ್ಲಾಘನೀಯ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರು ಮತ್ತು ಗುರಿ ಮುಖ್ಯ: `ಯಾವುದೇ ಸಮುದಾಯಕ್ಕೆ ಗುರು ಹಾಗೂ ಗುರಿ ಎರಡೂ ಮುಖ್ಯ. ಹಾಗೆಯೇ, ನಮ್ಮ ಸಮಾಜಕ್ಕೆ ಒಳ್ಳೆಯ ಗುರುಗಳು ಸಿಕ್ಕಿದ್ದಾರೆ. ಯಾವುದೇ ವ್ಯತ್ಯಾಸ, ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ಮುಖಂಡರೂ ಒಂದಾಗಿ ಸೇರುವ ಮೂಲಕ ಸಮಾವೇಶ ಯಶಸ್ವಿಯಾಗಿದೆ. ಇನ್ನು ಮುಂದೆಯೂ ಎಲ್ಲರೂ ಒಂದಾಗಿ ಸಮಾಜವನ್ನು ಒಗ್ಗೂಡಿಸಲು ಮುನ್ನುಗ್ಗಬೇಕು~ ಎಂದು ಅವರು ಕರೆ ನೀಡಿದರು.

`ಸಮಾಜ ಸದಾ ಸಂಘಟನೆ ಕಾಯ್ದುಕೊಳ್ಳಬೇಕು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಬೇಡ. ನಿರಂತರ ಶಸ್ತ್ರಾಭ್ಯಾಸದ ಮೂಲಕ ಮುಂದಿನ ಎಲ್ಲ ಯುದ್ಧಗಳನ್ನೂ ಗೆಲ್ಲಬೇಕು.

ಈ ಸಮಾವೇಶ ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದು, ಕೆಲಸ ಕಾರ್ಯಗಳ ವೇಗ ಹೆಚ್ಚಿಸಲು ಸಹಕಾರಿಯಾಗಿದೆ~ ಎಂದು ಮುಖ್ಯಮಂತ್ರಿಗಳು ನುಡಿದರು.

ಹೊಗಳಿಕೆಗೆ ಹಿಗ್ಗಿಲ್ಲ, ತೆಗಳಿಕೆಗೆ ಜಗ್ಗಿಲ್ಲ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ, `ಆದಿಚುಂಚನಗಿರಿ ಶ್ರೀಗಳು ನಡೆದು ಬಂದ ದಾರಿಯನ್ನು ಅವಲೋಕಿಸಿದರೆ ಅವರು ಎಂದಿಗೂ ಹೊಗಳಿಕೆಗೆ ಹಿಗ್ಗಲಿಲ್ಲ, ತೆಗಳಿಕೆಗೆ ಜಗ್ಗಲಿಲ್ಲ. ಜನಾಂಗದ ಶೈಕ್ಷಣಿಕ ಮುನ್ನಡೆಗಾಗಿಯೇ ಅವರು ತಮ್ಮ ಜೀವನದ ಬಹುತೇಕ ದಿನಗಳನ್ನು ಧಾರೆಯೆರೆದರು. ಶ್ರೀಗಳ ಆರೋಗ್ಯ ಕೊಂಚ ಕೆಡಲು ಅವರ ಅವಿರತ ಕಾಯಕವೇ ಕಾರಣ~ ಎಂದರು.

`ನಾನು ಮತ್ತು ನನ್ನ ಪೂರ್ವಜರು ಕೂಡ ಚುಂಚನಗಿರಿ ಮಠದ ಶಿಷ್ಯರು ಎಂಬುದನ್ನು ಹೇಳಲು ನನಗೆ ಹೆಮ್ಮೆ ಅನಿಸುತ್ತಿದೆ. ಕೆಲವರು ಮಠವನ್ನು ಕಬಳಿಸಲು ಹುನ್ನಾರ ನಡೆಸಿದಾಗ ನಮ್ಮ ಪೂರ್ವಜರು ಅದನ್ನು ಉಳಿಸಿ ಪ್ರವರ್ಧಮಾನಕ್ಕೆ ತರಲು ಪ್ರಯತ್ನ ನಡೆಸಿದರು. ಪರಿಣಾಮ, ಮೂರು ದಶಕಗಳಲ್ಲಿ ಆದಿಚುಂಚನಗಿರಿ ಮಠವು ಶಿಕ್ಷಣ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ನಮ್ಮ ಸಮಾಜದ ಮುನ್ನಡೆಗೆ ಭದ್ರ ಬುನಾದಿಯಾಗಿದೆ~ ಎಂದರು.

ದಬ್ಬಾಳಿಕೆ, ತೆಗಳಿಕೆ ಸಮಾವೇಶದ ಉದ್ದೇಶವಲ್ಲ: `ಇದು ಯಾವುದೇ ಸಮುದಾಯದ ವಿರುದ್ಧದ ದಬ್ಬಾಳಿಕೆ ಅಥವಾ ತೆಗಳಿಕೆ ಸಮಾವೇಶವಲ್ಲ. ನಮ್ಮ ಸಮುದಾಯ ಯಾವುದೇ ಸಮಾಜವನ್ನು ಅಗೌರವದಿಂದ ಕಾಣುವುದಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಮ್ಮ ಸಮಾಜವನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಆದರೆ, ನಮ್ಮನ್ನು ವೃಥಾ ಕೆರಳಿಸುವ ಪ್ರಯತ್ನ ಮಾಡಿದರೆ ಸುಮ್ಮನಿರುವುದಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

`ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಾಗೂ ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಪಶ್ಚಿಮಘಟ್ಟ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಜನರಿಗೆ ತೊಂದರೆಯಾಗದಂತೆ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತರಲು ತಕ್ಷಣ ಮುಖ್ಯಮಂತ್ರಿಗಳು ಆ ಭಾಗದ ಪ್ರಮುಖರು ಹಾಗೂ ಪರಿಸರವಾದಿಗಳ ಸಭೆ ಕರೆಯಬೇಕು~ ಎಂದು ಒತ್ತಾಯಿಸಿದರು.

`ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಯಾರಿಗೂ ಹೆದರಬೇಕಾಗಿಲ್ಲ. ನಮ್ಮ ಜನ ಹಾಗೂ ನಾವು ಸದಾ ಮುಖ್ಯಮಂತ್ರಿಗಳ ಜತೆಗಿರುತ್ತೇವೆ~ ಎಂದು ಕುಮಾರಸ್ವಾಮಿ ಅಭಯ ನೀಡಿದರು.

114 ಉಪ ಜಾತಿಗಳು ಒಂದೇ: ಸಾರಿಗೆ ಹಾಗೂ ಗೃಹ ಸಚಿವ ಆರ್. ಅಶೋಕ ಮಾತನಾಡಿ, `ರೆಡ್ಡಿ, ಕುಂಚಿಟಿಗ ಸೇರಿದಂತೆ ಒಕ್ಕಲಿಗ ಸಮುದಾಯದ ಎಲ್ಲ 114 ಉಪ ಜಾತಿಗಳು ಒಂದೇ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬುದನ್ನು ಸಮಾವೇಶ ಸಾಬೀತುಪಡಿಸಿದೆ. ರಾಜಕೀಯ ಹಾಗೂ ಪಕ್ಷದ ವಿಚಾರ ಬಂದಾಗ ಪಕ್ಷದ ಮುಖಂಡರು ಬೇರ್ಪಟ್ಟರೂ ಸಮಾಜದ ಸಮಸ್ಯೆ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ. ಯಾರೂ ರಾಜಕೀಯ ದುರುದ್ದೇಶಕ್ಕೋಸ್ಕರ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ~ ಎಂದರು.

ಪಟ್ಟನಾಯಕನಹಳ್ಳಿಯ ಗುರುಗುಂಡೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವದೂತ ಸ್ವಾಮೀಜಿ, `ಒಕ್ಕಲಿಗರ ದನಿ ಅಡಗಿಸಲು ಕೆಲವು ಶಕ್ತಿಗಳು ಸಣ್ಣಮಟ್ಟದಲ್ಲಿ ಪ್ರಯತ್ನ ನಡೆಸುತ್ತಿವೆ. ಆದರೆ, ಎಂದಿಗೂ ಅದು ಆಗದಿರುವ ಕೆಲಸ. ಒಕ್ಕಲಿಗರ ಅಖಂಡತೆಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ~ ಎಂದರು.

ನಟ ಅಂಬರೀಷ್, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸಂಸದ ಚಲುವರಾಯಸ್ವಾಮಿ ಮಾತನಾಡಿದರು. ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ಕೆ.ಮಹಾದೇವ್ ಸ್ವಾಗತಿಸಿದರು.

ಸಚಿವರಾದ ಬಿ.ಎನ್. ಬಚ್ಚೇಗೌಡ, ಸಿ.ಪಿ. ಯೋಗೇಶ್ವರ್, ಸಂಸದ ಡಿ.ಬಿ. ಚಂದ್ರೇಗೌಡ, ವಿಧಾನ ಪರಿಷತ್‌ನ ಉಪ ಸಭಾಪತಿ ವಿಮಲಾಗೌಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಉಪ ಮೇಯರ್ ಎಲ್. ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅನಾರೋಗ್ಯ ನಿಮಿತ್ತ ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸಮಾವೇಶಕ್ಕೆ ಗೈರು ಹಾಜರಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.