ಒಕ್ಕಲಿಗರ ಸಂಘದ ಚುನಾವಣೆ: ನಾಳೆ ಮತದಾನ

7
ಎಲ್ಲ ರಾಜಕೀಯ ಪಕ್ಷದ ಮುಖಂಡರು ಒಗ್ಗೂಡಿ ಪ್ರಚಾರ

ಒಕ್ಕಲಿಗರ ಸಂಘದ ಚುನಾವಣೆ: ನಾಳೆ ಮತದಾನ

Published:
Updated:

ಚಿಕ್ಕಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಮತ­ದಾನಕ್ಕೆ ಇನ್ನು ಒಂದೇ ದಿನ ಬಾಕಿ­ಯುಳಿದಿದ್ದು, ಅಂತಿಮ ಹಂತದ ಪ್ರಚಾರ ವೇಗ ಪಡೆದಿದೆ. ಈಗಾಗಲೇ ಒಂದೆರಡು ಸುತ್ತು ಪ್ರಚಾರ ಕಾರ್ಯ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈಗ ಬೆಂಬಲಿಗರ ಮೂಲಕ ಅಂತಿಮ ಹಂತದ ಪ್ರಚಾರ ನಡೆಸುತ್ತಿದ್ದಾರೆ.ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲ, ತಾಲ್ಲೂಕು ಕೇಂದ್ರಗಳಲ್ಲೂ ಭಾರಿ ಪ್ರಚಾರ ಕೈಗೊಳ್ಳಲಾಗಿದ್ದು, ಅಭ್ಯರ್ಥಿ­ಗಳ ಜತೆಗೆ ಬೆಂಬಲಿಗರೂ ಮನೆ–ಮನೆಗೆ, ಅಂಗಡಿ, ಮುಂಗಟ್ಟುಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ.ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಒಬ್ಬ ಅಭ್ಯರ್ಥಿ ಪರವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳ­ು­ವುದು ಅಥವಾ ಒಂದುಗೂಡಿಸುವುದು ಸಾಧ್ಯವೇ ಇಲ್ಲ ಎಂಬ ವಾತಾವರಣ ಇದೆ. ಆದರೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷದ, ಸಿದ್ಧಾಂತದ ಮುಖಂಡರು ತಮ್ಮ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದಾರೆ.ಫ್ಲೆಕ್ಸ್, ಬಂಟಿಂಗ್ಸ್‌ ಮುಂತಾದ ಪ್ರಚಾ­­­ರದ ಖರ್ಚು– ವೆಚ್ಚಗಳಿಗೆ ಅಭ್ಯರ್ಥಿಗಳು ಜತೆಗೆ ವಿವಿಧ ಪಕ್ಷ­ಗಳಲ್ಲಿರುವ ಅವರ ಬೆಂಬಲಿಗರು ಕೈಜೋಡಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅದ್ಯಕ್ಷ ಕೆ.ವಿ.ನಾಗರಾಜ್‌, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕಾಂಗ್ರೆಸ್‌ನ ಎಂ.ಪ್ರಕಾಶ್‌, ಚದುಲಪುರ ನಾರಾಯಣಸ್ವಾಮಿ, ಬಿಜೆಪಿಯ ಎ.ವಿ.­ಬೈರೇಗೌಡ, ನಾರಾಯಣಸ್ವಾಮಿ ಜೊತೆ­ಗೂಡಿ ಅಭ್ಯರ್ಥಿ ಪರ ನಗರ, ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದಾರೆ.ಆಯಾ ಪಕ್ಷಗಳ ಕಾರ್ಯಕರ್ತರು ವಿಧಾನಸಭೆ ಚುನಾವಣೆ ಮಾದರಿ­ಯಲ್ಲೇ ಕರಪತ್ರಗಳನ್ನು ಹಂಚುತ್ತಿದ್ದಾರೆ.

‘ರಾಜಕೀಯ ವಿಷಯದಲ್ಲಿ ನಾವೆ­ಲ್ಲರೂ ಬೇರೆ ಪಕ್ಷದವರು. ಬೇರೆ ವಿಚಾರ ಮತ್ತು ಸಿದ್ಧಾಂತಗಳನ್ನು ನಂಬಿದವರು. ವಿಧಾನಸಭೆ, ಲೋಕಸಭೆ ಚುನಾವಣೆ­ಯಲ್ಲಿ ನಾವೆಲ್ಲರೂ ಜಿದ್ದಾಜಿದ್ದಿನ ಸ್ಪರ್ಧಿ­ಗಳೇ. ಆದರೆ ಒಕ್ಕಲಿಗರ ಸಂಘದ ಚುನಾ­ವಣೆಯಲ್ಲಿ ಸೂಕ್ತ ಅಭ್ಯರ್ಥಿ ಗೆಲುವಿ­ಗಾಗಿ ಒಂದಾಗಿದ್ದೇವೆ’ ಎಂದು ವಿವಿಧ ಪಕ್ಷಗಳ ಮುಖಂಡರು ಹೇಳು­ತ್ತಾರೆ.ಕೋಲಾರ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ­ವಿದ್ದು, ಒಮ್ಮತದ ನಿರ್ಣಯ ತೆಗೆದು­ಕೊಂಡು ಮೂವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಬಗ್ಗೆ ಕೆಲ ದಿನಗಳ ಹಿಂದೆ ಚರ್ಚೆ ನಡೆದಿತ್ತು.ಆದರೆ, ಇದಕ್ಕೆ ಕೆಲ ಮುಖಂಡರು ಸಹಮತ ವ್ಯಕ್ತಪಡಿಸಿದರೆ, ಇನ್ನೂ ಕೆಲ­ವರು ವಿರೋಧ ವ್ಯಕ್ತಪಡಿಸಿದ್ದರು. ಸಂಘದ ಮುಖಂಡರು, ಕಾರ್ಯಕರ್ತ­ರಲ್ಲೇ ಅಸಮಾಧಾನ ಭುಗಿಲೆದ್ದಿತ್ತು. ಮಾತಿನ ಚಕಮಕಿಗೂ ಕಾರಣವಾಗಿತ್ತು.  ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಮ್ಮತದ ನಿರ್ಣಯ ಕೈಗೊಳ್ಳಲು ಸಾಧ್ಯವಾಗದಿದ್ದಾಗ 14 ಮಂದಿ ಚುನಾವಣೆ ಕದನಕ್ಕೆ ಇಳಿದರು. ಕೆಲ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷ ಮತ್ತು ಮಾಜಿ ಶಾಸಕರ ಬೆಂಬಲ ವ್ಯಕ್ತ­ವಾಗಿದ್ದು, ಇನ್ನೂ ಕೆಲವರಿಗೆ ಅಭಿಮಾನಿ­ಗಳ ಬೆಂಬಲವಿದೆ.ಸಂಘದ ಕಾರ್ಯಕಾರಿ ಸಮಿತಿಗೆ ಒಟ್ಟು 35 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ಜಿಲ್ಲಾ ವ್ಯಾಪ್ತಿ­ಯಲ್ಲಿ 15 ಮಂದಿ, ತುಮಕೂರು–2, ಮಂಡ್ಯ–4, ಮೈಸೂರು–3, ಕೋಲಾರ­–­3, ಹಾಸನ–3, ಶಿವಮೊಗ್ಗ–1, ಚಿಕ್ಕಮಗಳೂರು–1, ಚಿತ್ರದುರ್ಗ–1, ಕೊಡಗು–1 ಮತ್ತು ದಕ್ಷಿಣ ಕನ್ನಡ–1 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಿಂದ 20 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಒಕ್ಕಲಿಗರ ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಗುಡಿಬಂಡೆ ಹೊರತುಪಡಿಸಿ ಚಿಕ್ಕ­ಬಳ್ಳಾ­ಪುರ ಮತ್ತು ಕೋಲಾರ ಜಿಲ್ಲೆಗಳ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮತದಾನಕ್ಕೆ ವ್ಯವಸ್ಥೆ ಮಾಡಲಾಗು­ವುದು. ಜ.5ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯ­ಲಿದೆ. ಎರಡೂ ಜಿಲ್ಲೆ ಸೇರಿ ಕೋಲಾರ ಕ್ಷೇತ್ರದಲ್ಲಿ 35,010 ಮತದಾರರು ಇದ್ದಾರೆ. ಜ.6ರಂದು ಮತ ಎಣಿಕೆ ನಡೆಸಿದ ಬಳಿಕ ಫಲಿತಾಂಶ ಪ್ರಕಟಿಸ­ಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry