ಗುರುವಾರ , ನವೆಂಬರ್ 21, 2019
22 °C

ಒಕ್ಕಲೆಬ್ಬಿಸುವ ಹುನ್ನಾರ: ಆರೋಪ

Published:
Updated:

ಗದಗ: ಜಿಲ್ಲೆಯ ಕಪ್ಪತ್ತಗುಡ್ಡವನ್ನು ಸರ್ಕಾರ ವನ್ಯಧಾಮವನ್ನಾಗಿ ಘೋಷಣೆ ಮಾಡುವ ಮೂಲಕ  ಹಿಂದುಳಿದ ಸಮಾಜದವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ಚನ್ನದಾಸರ ಸಮಾಜ ಸೇವಾ ಸಂಘದ ಟ್ರಸ್ಟ್ ಆರೋಪಿಸಿದೆ.ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕುಗಳು ದಶಕಗಳಿಂದ ಬರಗಾಲದ ಹಣೆಪಟ್ಟಿ ಕಟ್ಟಿಕೊಂಡಿವೆ. ಈ ಪ್ರದೇಶದಲ್ಲಿ ಸಹಸ್ರಾರು ಜನ ಲಂಬಾಣಿಗರು, ವಾಲ್ಮೀಕಿ ಸಮುದಾಯ ಸೇರಿದಂತೆ ವಿವಿಧ ಹಿಂದುಳಿದ ಸಮಾಜದ ಜನರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಪ್ಪತ್ತಗುಡ್ಡದಲ್ಲಿ ಬೆಳೆಯುವ ಹುಲುಸಾದ ಹುಲ್ಲನ್ನು ಮೇಯುವ ಮೂಲಕ ಸಹಸ್ರಾರು ಜಾನುವಾರುಗಳು ಬದುಕುತ್ತಿವೆ. ಈಗ ವನ್ಯಧಾಮ ಮಾಡುವ ಮೂಲಕ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ಟ್ರಸ್ಟ್ ಅಧ್ಯಕ್ಷ ಪಾಂಡಪ್ಪ ಶಾಂತಪ್ಪ ದಾಸರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.ಡೋಂಗಿ ಪರಿಸರವಾದಿಗಳು ಕಪ್ಪತ್ತಗುಡ್ಡವನ್ನು ವನ್ಯಧಾಮ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಅತ್ಯಂತ ಖಂಡನೀಯ. ತಾಲ್ಲೂಕಿನ ಗಡಿ ಪ್ರದೇಶಗಳಲ್ಲಿ ತೀವ್ರ ಬರಗಾಲ ತಾಂಡವಾಡುತ್ತಿದೆ. ಜಾನುವಾರುಗಳು ಮೇವು, ಹುಲ್ಲು ಸಿಗದೇ ಪರದಾಡುತ್ತಿವೆ.  ಈ ಪ್ರದೇಶದಲ್ಲಿನ ಮೇಲ್ವರ್ಗದ ಜನತೆ, ಸಿರಿವಂತರು ಹೆಚ್ಚಿನ ದುಡ್ಡು ವೆಚ್ಚ ಮಾಡಿ ಬೇರೆ ಪ್ರದೇಶಗಳಿಂದ ಹೊಟ್ಟು, ಮೇವು ತರಿಸಿ ಜಾನುವಾರುಗಳ ರಕ್ಷಣೆ ಮಾಡುತ್ತಿದ್ದಾರೆ. ಆದರೆ ಬಡವರು, ಹಿಂದುಳಿದವರು ಮಾತ್ರ ಕಪ್ಪತ್ತಗುಡ್ಡದಲ್ಲಿ ಉಚಿತವಾಗಿ ದೊರೆಯುವ ಹುಲ್ಲನ್ನು ನಂಬಿಯೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.ಪಟ್ಟಭದ್ರ ಹಿತಾಸಕ್ತಿಗಳು ಕಪ್ಪತ್ತಗುಡ್ಡವನ್ನು ವನ್ಯಧಾಮದ ಹೆಸರಲ್ಲಿ, ದಲಿತರು, ಹಿಂದುಳಿದವರನ್ನು ದಮನ ಮಾಡಲು ಪ್ರಯತ್ನಿಸುತ್ತಿವೆ. ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳಿಲ್ಲ.  ಆದ್ದರಿಂದ ಸರ್ಕಾರ ವನ್ಯಧಾಮ ಮಾಡಬಾರದು. ಒಂದು ವೇಳೆ ವನ್ಯಧಾಮವಾಗಿ ಘೋಷಿಸಿದರೆ ವಿವಿಧ ಸಂಘಟನೆಗಳೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ನಿಯೋಗದಲ್ಲಿ ಎಸ್.ಬಿ.ಹುಯೀಲಗೋಳ, ಸಿ.ಜಿ.ದಾಸರ, ಎಸ್.ಎಂ.ಇಟಗಿ  ಹಾಜರಿದ್ದರು.

ಪ್ರತಿಕ್ರಿಯಿಸಿ (+)