ಒಗ್ಗಟ್ಟು ಇಲ್ಲದಿದ್ದರೆ ನಾಶ - ಸೋನಿಯಾ ಗಾಂಧಿ

7

ಒಗ್ಗಟ್ಟು ಇಲ್ಲದಿದ್ದರೆ ನಾಶ - ಸೋನಿಯಾ ಗಾಂಧಿ

Published:
Updated:
ಒಗ್ಗಟ್ಟು ಇಲ್ಲದಿದ್ದರೆ ನಾಶ - ಸೋನಿಯಾ ಗಾಂಧಿ

ಮಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ನಿಜವಾದ ಶಕ್ತಿ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಹಿರಿಯ ನಾಯಕರು ಮಾಡಬೇಕು. ತಮ್ಮ ನಡುವಿನ ಬಿಕ್ಕಟ್ಟನ್ನು ಬದಿಗೊತ್ತಿ, ಪಕ್ಷಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡದಿದ್ದರೆ ಪಕ್ಷಕ್ಕೆ ಗೆಲುವು ಸಿಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.`ನಾವು ಒಗ್ಗಟ್ಟಿನಿಂದ ಹೋರಾಡಿದಾಗಲೆಲ್ಲಾ ನಿಚ್ಚಳ ಗೆಲುವು ಸಾಧಿಸಿದ್ದೇವೆ. ಪಕ್ಷದ ನಾಯಕರ ನಡುವೆ ಭಿನ್ನಾಭಿಪ್ರಾಯ ಬದಿಗೊತ್ತದಿದ್ದರೆ ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ ಕರ್ನಾಟಕದ ಜನತೆ ಹತಾಶರಾಗಿದ್ದಾರೆ. ಈ ಅವಕಾಶವನ್ನು ಕಾಂಗ್ರೆಸ್ ಬಳಸಿಕೊಂಡು ಮುಂದೆ ಅಧಿಕಾರಕ್ಕೆ ಬರಬೇಕಾದರೆ ನಾಯಕರು ಒಗ್ಗಟ್ಟು ಪ್ರದರ್ಶಿಸಲೇಬೇಕು~ ಎಂದು  ಗುರುವಾರ ಸಂಜೆ ನೆಹರು ಮೈದಾನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ತಿಳಿಸಿದರು.ಈ ಮೂಲಕ ಬಿಜೆಪಿಯಲ್ಲಿನ ಭಿನ್ನಮತದ ಲಾಭ ಪಡೆಯುವ ತವಕದಲ್ಲಿರುವ ರಾಜ್ಯದ ಮುಖಂಡರಿಗೆ ತಮ್ಮ ಪಕ್ಷದಲ್ಲಿನ ಹುಳುಕನ್ನು ಎತ್ತಿ ತೋರಿಸಿದರು. ಒಗ್ಗಟ್ಟಿನ ಅಗತ್ಯವನ್ನು ಸಾರಿ ಹೇಳಿದರು.ತಮ್ಮ 20 ನಿಮಿಷಗಳ ಭಾಷಣದುದ್ದಕ್ಕೂ ಬಿಜೆಪಿಯನ್ನು ಕಟು ಶಬ್ದಗಳಿಂದ ಟೀಕಿಸುತ್ತಲೇ ಹೋದ ಸೋನಿಯಾ, ಕೇಂದ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ, ಕರ್ನಾಟಕ ಮಾತ್ರವಲ್ಲದೆ, ಮಧ್ಯಪ್ರದೇಶ, ಗುಜರಾತ್, ಜಾರ್ಖಂಡ್, ಛತ್ತೀಸ್‌ಗಡದಲ್ಲೆಲ್ಲ ಭ್ರಷ್ಟಾಚಾರ ತುಂಬಿದೆ.

 

ಇಷ್ಟಕ್ಕೂ ಮಾಹಿತಿ ಹಕ್ಕು ಕಾಯ್ದೆಯಂತಹ (ಆರ್‌ಟಿಐ) ನಂತಹ ಪ್ರಬಲ ಅಸ್ತ್ರವನ್ನು ಜಾರಿಗೆ ತಂದುದು ಯುಪಿಎ ಸರ್ಕಾರ ಹೊರತು ಎನ್‌ಡಿಎ ಸರ್ಕಾರವಲ್ಲ. `ಆರ್‌ಟಿಐ~ನಿಂದ ಹಲವಾರು ಹಗರಣಗಳು ಹೊರಗೆ ಬರುವಂತಾಗಿದೆ. ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ, ರಾಜ್ಯಸಭೆಯಲ್ಲಿ ಅದು ಅಂಗೀಕಾರವಾಗದಂತೆ ತಡೆದಿರುವುದು ಬಿಜೆಪಿ ಎಂದು  ಆರೋಪಿಸಿದರು.ದೇಶದ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಕೆಲವೊಂದು ಕಠಿಣ ನಿರ್ಧಾರಗಳನ್ನು ಕೇಂದ್ರ ಕೈಗೊಳ್ಳಬೇಕಾಯಿತು. ಶೇ 80ರಷ್ಟು ತೈಲವನ್ನು ನಾವು ಆಮದು ಮಾಡಿಕೊಳ್ಳಬೇಕಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಬೆಲೆ ಹೆಚ್ಚಿರುವುದರಿಂದ ನಮ್ಮಲ್ಲೂ ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಿಸಬೇಕಾಗಿ ಬಂದಿದೆ.

 

ಆದರೆ ಬಡವರು ಬಳಸುವ ಸೀಮೆ ಎಣ್ಣೆ ಬೆಲೆ ಹೆಚ್ಚಿಸಿಲ್ಲ. ಅಡುಗೆ ಅನಿಲಕ್ಕೆ ಮಿತಿ ಹೇರಿದ್ದು ಸಹ ಅನಿವಾರ್ಯ ಒತ್ತಡದಿಂದಲೇ. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಈ ಮಿತಿಯನ್ನು ವಾರ್ಷಿಕ 9ಕ್ಕೆ ಹೆಚ್ಚಿಸಲು ಕ್ರಮ ಕೈಗೊಂಡಿವೆ. ಕರ್ನಾಟಕ ಸರ್ಕಾರ ಏಕೆ ಇಂತಹ ಕ್ರಮ ಕೈಗೊಂಡಿಲ್ಲ, ಕರ್ನಾಟಕ ತಾನು ಹೆಚ್ಚಿಸಿರುವ ವ್ಯಾಟ್ ತೆರಿಗೆಯನ್ನು ಏಕೆ ತಗ್ಗಿಸಿಲ್ಲ ಎಂದು ಸೋನಿಯಾ ಪ್ರಶ್ನಿಸಿದರು.ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ನಮ್ಮ ರೈತರಿಗೆ ನೆರವಾಗುತ್ತದೆ. ಅಪಾರ ಉದ್ಯೋಗ ಅವಕಾಶ ಸಿಗುತ್ತದೆ. ಈ ಕಾರ್ಯಕ್ರಮ ಹಿಂದಿನ ಎನ್‌ಡಿಎ ಸರ್ಕಾರದ ಕಾರ್ಯಕ್ರಮವೇ ಆಗಿದ್ದರೂ ಅದನ್ನು ಇಂದು ರಾಜಕೀಯ ಕಾರಣಕ್ಕೆ ವಿರೋಧಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ರೈತ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಅವರು ಹರಿಹಾಯ್ದರು.ಯುಪಿಎ ಸರ್ಕಾರ ಕಳೆದ 5 ವರ್ಷಗಳಲ್ಲಿ ಕರ್ನಾಟಕಕ್ಕೆ ರೂ 80 ಸಾವಿರ ಕೋಟಿ  ಕೊಟ್ಟಿದೆ. ಈ ಹಿಂದೆ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಕೊಟ್ಟದ್ದು ಕೇವಲ ರೂ 40 ಸಾವಿರ ಕೋಟಿ ರೂ. ಕೇಂದ್ರ ನೀಡಿದ ಈ 80 ಸಾವಿರ ಕೋಟಿ ಹಣ ಏನು ಮಾಡಿದ್ದೀರಿ ಎಂದು ಪ್ರಶ್ನಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.ಚುನಾವಣಾ ಪ್ರಚಾರ?

ಸೋನಿಯಾ ಗಾಂಧಿ ಅವರ ಭಾಷಣ ಮುಂಬರುವ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದಂತಿತ್ತು. ಆರಂಭದಿಂದ ಅಂತ್ಯದ ವರೆಗೂ ಅವಕಾಶ ಸಿಕ್ಕಾಗಲೆಲ್ಲಾ ರಾಜ್ಯದ ಬಿಜೆಪಿ ಸರ್ಕಾರ ದೂಷಿಸಿದ ಅವರು, ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಜನ ಹತಾಶಗೊಂಡಿದ್ದಾರೆ, ಅವರು ಬದಲಾವಣೆ ಬಯಸಿದ್ದಾರೆ. ಈಗಿನಿಂದಲೇ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಈ ಗುರಿ ಈಡೇರುವುದು ಸಾಧ್ಯ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry