ಶನಿವಾರ, ಜೂನ್ 19, 2021
24 °C

ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸಿಗರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಪಕ್ಷದೊಳಗಿದ್ದ ಅಸಮಾಧಾನ, ಗುಂಪು­ಗಾರಿಕೆ ಶಮನಗೊಳಿಸುವ ಪ್ರಯತ್ನವಾಗಿ ನಗರದ ಖಾಸಗಿ ಹೋಟೆಲೊಂದರಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಿತು. ಆದರೆ, ಸಭೆಯಲ್ಲಿ ಮುಖಂಡರು ಯಾವು­ದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಒಂದಷ್ಟು ಕಾವೇರಿದ ಚರ್ಚೆಗೆ ಸಭೆ ವೇದಿಕೆ ಒದಗಿಸಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.‘ಸಭೆ ಕರೆದಿದ್ದೇ ಬೇರೆ ವಿಷಯಕ್ಕೆ, ಅಲ್ಲಿ ಚರ್ಚೆಯಾಗಿದ್ದೆ ಬೇರೆ ವಿಷಯ. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅವರ ಕಾರ್ಯವೈಖರಿ ಕುರಿತು ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಕೆಲ ಮುಖಂಡರು ಟೀಕಿಸಿದರು’ ಎನ್ನಲಾಗಿದೆ.ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ‘ಡಾ.ಡಿ.ಎಲ್.ವಿಜಯಕುಮಾರ್ ಅವರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಆದರೆ, ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿಲ್ಲ. ಪಕ್ಷದ ಜಿಲ್ಲಾ ಪದಾಧಿಕಾರಿ ಅಲ್ಲದವರೊಂದಿಗೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇದು ಎಷ್ಟು ಸರಿ? ಪಕ್ಷದ ಜಿಲ್ಲಾ ಪದಾಧಿ­ಕಾರಿಗಳು ಅಲ್ಲದವರನ್ನು ಪಕ್ಕದಲ್ಲಿಟ್ಟುಕೊಂಡು ಜಿಲ್ಲಾಧ್ಯಕ್ಷರು ಕಾರ್ಯ ನಿರ್ವಹಿಸುತ್ತಾರೆಂಬ ಅಸಮಾಧಾನ ಪ್ರಮುಖ ಪದಾಧಿಕಾರಿಗಳಿಂದ ವ್ಯಕ್ತವಾಯಿತು’ ಎಂದು ಮೂಲಗಳು ಹೇಳಿವೆ. ಅಲ್ಲದೆ ನೂತನ ಅಧ್ಯಕ್ಷರು ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಜಿಲ್ಲಾ ಮುಖಂಡರೊಬ್ಬರ ಬಗ್ಗೆ ಲಘುವಾಗಿ ಮಾತನಾಡಿ, ಸಲ್ಲದ ಆರೋಪ ಮಾಡಿದ್ದಾರೆ. ತಾವು ಮಾಡಿರುವ ಆರೋಪ ಸಾಬೀತುಪಡಿಸಬೇಕು ಎಂದು ಕಾರ್ಯಕರ್ತರೊಬ್ಬರು ಪಟ್ಟುಹಿಡಿದರು. ಆಗ ನೂತನ ಅಧ್ಯಕ್ಷರು ತಾವು ಅಂತಹ ಯಾವುದೇ ಆರೋಪ ಮಾಡಿಲ್ಲ. ಅಂತಹ ಮಾತನ್ನೇ ಆಡಿಲ್ಲ ಎಂದು ಹೇಳಿ ನುಣಿಚಿಕೊಂಡರು ಎನ್ನಲಾಗಿದೆ.ಹಿಂದಿನ ಅಧ್ಯಕ್ಷರನ್ನು ಬದಲಾಯಿಸಿದ್ದಕ್ಕೆ ಸ್ಪಷ್ಟ ಕಾರಣ ನೀಡುವಂತೆ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಅವರು ಮುಖಂಡ­ರನ್ನು ಒತ್ತಾಯಿಸಿದರು.‘ಅಧಿಕಾರ ಅನುಭವಿಸಲು ಪಕ್ಷಕ್ಕೆ ಬಂದವರು ಈಗ ಸಂಚು ಮಾಡುತ್ತಿದ್ದಾರೆ. ಅವರ ಸಲಹೆ ಪಕ್ಷಕ್ಕೆ ಅನಗತ್ಯ’ ಎಂದು ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ನೇರವಾಗಿಯೇ ಸಭೆಯಲ್ಲಿದ್ದ ಕೆಲವರಿಗೆ ಟಾಂಗ್‌ ನೀಡಿದರು ಎಂದು ಮೂಲಗಳು ತಿಳಿಸಿವೆ.ಅಧ್ಯಕ್ಷರನ್ನು ಬದಲಾವಣೆ ಮಾಡು­ವಾಗ ಅವರು ಪಕ್ಷಕ್ಕೆ ದುಡಿದಿರುವುದನ್ನು ಗಮನಿಸಿ ಸೂಕ್ತ ಸ್ಥಾನ ನೀಡಬೇಕಿತ್ತು ಎಂದ ಸಂಸದ ಜಯಪ್ರಕಾಶ್‌ ಹೆಗ್ಡೆ, ಮೂರ್ತಿಯವರಿಗೆ ಸಾಂತ್ವನ ಹೇಳುವ ಪ್ರಯತ್ನ ನಡೆಸಿದರು. ಆಗ ಸಭೆಯಲ್ಲಿದ್ದ ಮುಖಂಡರೊಬ್ಬರು ‘ಮೂರ್ತಿಯವರು ಪ್ರಚಾರ ಸಮಿತಿ ಅಧ್ಯಕ್ಷಗಾದಿ ಹೊಣೆ ಹೊರಬೇಕು. ನೀವು ಎಲ್ಲರೊಂದಿಗೆ ಹೊಂದಿಕೊಳ್ಳುತ್ತೀರಿ, ನೀವೇ ಅಧ್ಯಕ್ಷರಾಗಿ’ ಎಂದು ಸಲಹೆ ನೀಡಿದರು. ಇಂತಹ ಸಲಹೆ ನೀಡಿದ ಮುಖಂಡರಿಗೆ ಮೂರ್ತಿಯವರು ನಯವಾದ ಮಾತುಗಳಲ್ಲೇ ತಿರುಗೇಟು ನೀಡಿದರು ಎಂದು ಮೂಲಗಳು ಹೇಳಿವೆ.ಸಭೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಡಿ.ಎಲ್.­ವಿಜಯ­ಕುಮಾರ್, ಸಂಸದ ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನಕಾರ್ಯದರ್ಶಿ ಕೆ.­ಮಹಮ್ಮದ್, ಟಿ.ಡಿ.ರಾಜೇಗೌಡ, ಮಾಜಿ ಅಧ್ಯಕ್ಷ ಎಂ.ಎಲ್.­ಮೂರ್ತಿ, ಕೆ.ಎಸ್‌.ಶಾಂತೇಗೌಡ ಇನ್ನಿತರರು ಪಾಲ್ಗೊಂ­ಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.