ಒಗ್ಗಟ್ಟು ಪ್ರದರ್ಶಿಸಿದ ರೈತ ಮುಖಂಡರು

7

ಒಗ್ಗಟ್ಟು ಪ್ರದರ್ಶಿಸಿದ ರೈತ ಮುಖಂಡರು

Published:
Updated:

ಚಿತ್ರದುರ್ಗ: ರೈತ ಸಂಘದ ಮುಖಂಡರ ಬಹಿರಂಗ ಒಗ್ಗಟ್ಟು ಪ್ರದರ್ಶನಕ್ಕೆ ಇಲ್ಲಿನ ಮುರುಘಾ ಮಠದಲ್ಲಿ ಮಂಗಳವಾರ ಸಂಜೆ ನಡೆದ `ಬಸವಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಯಿತು.ರಾಜ್ಯ ರೈತ ಸಂಘದ ಸಂಸ್ಥಾಪಕ ಮತ್ತು ಹೋರಾಟಗಾರ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುರುಘಾಮಠದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನಂಜುಂಡಸ್ವಾಮಿ ಅವರ ಮಕ್ಕಳಾದ ಚುಕ್ಕಿ ನಂಜುಂಡಸ್ವಾಮಿ ಮತ್ತು ಪಚ್ಚೆ ನಂಜುಂಡಸ್ವಾಮಿ ಅವರು ಪ್ರಶಸ್ತಿ ಸ್ವೀಕರಿಸಿದರು.ಪ್ರಶಸ್ತಿಯು ಮೂರು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.ಈ ಸಂದರ್ಭದ್ಲ್ಲಲಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, `ಮರಣೋತ್ತರ~ ಎನ್ನುವುದೇ ಅಪ್ರಸ್ತುತ. ವಿಚಾರವಾದಿಗಳ ವಿಚಾರಗಳಿಗೆ ಸಾವಿಲ್ಲ. ಅದಕ್ಕಾಗಿ ಬಸವಣ್ಣನ ಹೆಸರಿನಲ್ಲಿ ಇಂದಿಗೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಾತಿ ಜತೆ ಗುರುತಿಸಿಕೊಳ್ಳದೇ ಹೋರಾಡಿದ ವ್ಯಕ್ತಿ ನಂಜುಂಡಸ್ವಾಮಿ. ಇಂದು ಜೀವಂತವಾಗಿದ್ದಿದ್ದರೆ ಈ ಪ್ರಶಸ್ತಿ ಸ್ವೀಕರಿಸುತ್ತಿದ್ದರೋ ಇಲ್ಲವೋ ಎಂಬ ಅನುಮಾನ ತಮ್ಮನ್ನು ಕಾಡುತ್ತಿದೆ ಎಂದು ನುಡಿದರು.ರೈತರ ಹೋರಾಟ ಬುದ್ಧಿಜೀವಿಗಳ ಹೋರಾಟ. ಬುದ್ಧಿಜೀವಿಗಳಿಗೆ ಪ್ರಗತಿಪರ ಆಶಯಗಳಿರುತ್ತವೆ. ಈ ಪ್ರಶಸ್ತಿ ಎಲ್ಲರನ್ನೂ ಒಗ್ಗೂಡಿಸುವ ಆಶಯ ಹೊಂದಿದೆ. ಎಲ್ಲ ರೈತ ಸಂಘಟನೆಗಳು, ಗುಂಪುಗಳು, ಮುಖಂಡರು ಒಗ್ಗೂಡಿದರೆ ಪ್ರಶಸ್ತಿಯ ಆಶಯ ಈಡೇರುತ್ತದೆ. ಒಗ್ಗೂಡುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ವೇದಿಕೆ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ವೇದಿಕೆ ಮೇಲಿದ್ದ ರೈತ ಮುಖಂಡರಿಗೆ ಕರೆ ನೀಡಿದರು.

ಆಗ ಎಲ್ಲ ರೈತ ಮುಖಂಡರು ಎದ್ದು ನಿಂತು ಪರಸ್ಪರ ಕೈ ಎತ್ತುವ ಮೂಲಕ ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶರಣರು, ಬಹಿರಂಗವಾಗಿ ರೈತ ಮುಖಂಡರು ಒಂದಾಗಿದ್ದಾರೆ. ಅಂತರಂಗದಲ್ಲೂ ಒಂದಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ರೈತ ಸಂಘದ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ. ಗಂಗಾಧರ್, ಬಸವರಾಜ ತಂಬಾಕೆ, ಸುರೇಶ್ ಬಾಬು, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಇಳಕಲ್ ವಿಜಯ ಮಹಾಂತೇಶ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವಿಶ್ವ ರೈತ ಸಂಘಟನೆಯ ದಕ್ಷಿಣ ಏಷ್ಯ ಸಂಚಾಲಕ ಯುಧ್‌ವೀರ್ ಸಿಂಗ್ ಮತ್ತಿತರರು ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry