ಒಗ್ಗಟ್ಟು ಮುಗಿದ ಅಧ್ಯಾಯ: ಯಡಿಯೂರಪ್ಪ

7

ಒಗ್ಗಟ್ಟು ಮುಗಿದ ಅಧ್ಯಾಯ: ಯಡಿಯೂರಪ್ಪ

Published:
Updated:
ಒಗ್ಗಟ್ಟು ಮುಗಿದ ಅಧ್ಯಾಯ: ಯಡಿಯೂರಪ್ಪ

ಶಿವಮೊಗ್ಗ: `ಈಶ್ವರಪ್ಪ, ಸಚಿವ, ಉಪ ಮುಖ್ಯಮಂತ್ರಿ ಆಗಿರುವವರೆಗೂ ಅವರೊಂದಿಗೆ ಇನ್ನೆಂದೂ ಶಿವಮೊಗ್ಗದಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಪಥ ಮಾಡಿದ್ದಾರೆ.ನಗರದ ಗಾಂಧಿಬಜಾರ್‌ನಲ್ಲಿ ಬಸವೇಶ್ವರ ದೇವಾಲಯ ಆವರಣದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.`ನನ್ನ ದಾರಿ ನನಗೆ, ಅವರ ದಾರಿ ಅವರಿಗೆ. ನಾವೆಂದು ಒಟ್ಟಾಗಲು ಸಾಧ್ಯವಿಲ್ಲ~ ಎಂದು ಕಿಡಿಕಾರಿದರು.

`ಅಧಿಕಾರ ಸಿಕ್ಕ ತಕ್ಷಣ ವ್ಯಕ್ತಿಗಳು ಹೇಗೆ ಬದಲಾಗುತ್ತಾರೆ ಎಂಬುವುದಕ್ಕೆ ಈಶ್ವರಪ್ಪ ಸೂಕ್ತ ಉದಾಹರಣೆ. ಉಪ ಮುಖ್ಯಮಂತ್ರಿಯಾದ ತಕ್ಷಣ ಅವರು ನನ್ನ ವಿರುದ್ಧ ಸೇಡಿನ ರಾಜಕಾರಣ ಆರಂಭಿಸಿದ್ದಾರೆ~ ಎಂದು ದೂರಿದರು.ಶಿವಮೊಗ್ಗದ ಮಹಾತ್ಮಗಾಂಧಿ ಉದ್ಯಾನ ರೂ 10ರಿಂದ ರೂ 12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಆಗಿದೆ. ಈ ಉದ್ಯಾನ ಇಂದು ಉದ್ಘಾಟನೆ ಆಗಬೇಕಾಗಿತ್ತು. ಆಹ್ವಾನ ಪತ್ರಿಕೆಯೂ ಸಿದ್ಧಗೊಂಡಿತ್ತು. ಆದರೆ, ತಮ್ಮಿಂದ ಈ ಉದ್ಯಾನ ಉದ್ಘಾಟನೆಯಾಗಲಿದೆ ಎಂಬ ಏಕೈಕ ಕಾರಣದಿಂದ ಕಾರ್ಯಕ್ರಮವನ್ನು ಈಶ್ವರಪ್ಪ ರದ್ದುಗೊಳಿಸಿದ್ದಾರೆ. ಇದನ್ನೆಲ್ಲಾ ಸಾರ್ವಜನಿಕರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಇದಕ್ಕೆ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾವು ಮುಖ್ಯಮಂತ್ರಿಯಾದ ವೇಳೆ ಈಶ್ವರಪ್ಪ ಕ್ಷೇತ್ರ ಎಂದು ತಾರತ್ಯಮ ಮಾಡದೆ ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪ್ರಸ್ತುತ ಶಿವಮೊಗ್ಗ ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿದರೆ ಕಣ್ಣಲ್ಲಿ ನೀರು ಬರುತ್ತದೆ. ಜಲ್ಲಿ ಕ್ರಷರ್‌ಗಳು ಸ್ಥಗಿತಗೊಂಡಿವೆ. ಇದರಿಂದ ಕಟ್ಟಡ ಕಾಮಗಾರಿಗಳಿಗೆ ಅಡ್ಡಿಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ತಾವು ಜೈಲಿನಲ್ಲಿದ್ದಾಗ ಬೆಂಗಳೂರಿನ ಮೆಟ್ರೊ ರೈಲನ್ನು ಅಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟಿಸಿ, ಸೇಡು ತೀರಿಸಿಕೊಂಡರು ಎಂದೂ ಯಡಿಯೂರಪ್ಪ ಹಳೆಯ ಕಹಿ ಘಟನೆ ನೆನಪಿಸಿಕೊಂಡರು.ಅಂತಿಮಗೊಂಡಿಲ್ಲ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಯಾವುದೂ ಅಂತಿಮಗೊಂಡಿಲ್ಲ ಎಂದು ಚುಟುಕಾಗಿ ನುಡಿದರು.ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಜಕೀಯ ಮುಖಂಡರು ರಾಜೀನಾಮೆ ಸಲ್ಲಿಸುವ ತಂತ್ರ ಸರಿ ಇಲ್ಲ. ಕೇವಲ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವಂತಾಗಿದ್ದರೆ ಜಗದೀಶ್ ಶೆಟ್ಟರ್‌ಗೆ ಹೇಳಿ ವಿಧಾನಸಭೆ ವಿಸರ್ಜನೆ ಮಾಡಿಸಬಹುದಾಗಿತ್ತು. ಇದಕ್ಕಿಂತ ಮುಖ್ಯವಾಗಿ ಎಲ್ಲಾ ಪಕ್ಷಗಳ ಸಂಸತ್ ಸದಸ್ಯರು ಒಟ್ಟಾಗಿ ಪ್ರಧಾನಿ ಭೇಟಿಯಾಗಿ, ಮನವೊಲಿಸಬೇಕು ಎಂದು ಸಲಹೆ ಮಾಡಿದರು.ಈಶ್ವರಪ್ಪ ಮೇಧಾವಿ

ಕಾವೇರಿ ನೀರು ಬಿಡುಗಡೆ ಕುರಿತಂತೆ ಸರ್ಕಾರ ಅ.15ರ ನಂತರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಈಶ್ವರಪ್ಪ ಹೇಳಿದ್ದರಲ್ಲ ಎಂಬ ಪ್ರಶ್ನೆಗೆ, `ಅವರದ್ದು ಮೇಧಾವಿ ವ್ಯಕ್ತಿತ್ವ. ಅವರ ತಲೆಯಲ್ಲಿ ಏನಿದೆಯೋ?~ ಎಂದು ವ್ಯಂಗ್ಯವಾಡಿದರು.

ಭೇಟಿ ಮಾಡುವುದಿಲ್ಲ

ಇನ್ನು ಮುಂದೆ ಪಕ್ಷದ ಕೇಂದ್ರ ಹಾಗೂ ರಾಜ್ಯದ ವರಿಷ್ಠರನ್ನು ತಾವು ಭೇಟಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದ ಅವರು, ಪಕ್ಷದ ವರಿಷ್ಠರಿಗೆ ರಾಜ್ಯದ ನಾಯಕರೇ ಕಿವಿ ಚುಚ್ಚಿ ಬಂದಿದ್ದಾರೆ. ಅವರೊಂದಿಗೆ ಇನ್ನೆಂತಹ ಮಾತುಕತೆ ಎಂದು ಪ್ರತಿಕ್ರಿಯಿಸಿದರು.ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಆಗುವುದಿಲ್ಲ; ಅಧ್ಯಕ್ಷನೂ ಆಗುವುದಿಲ್ಲ ಎಂದು ಪುನರುಚ್ಚರಿಸಿದ ಯಡಿಯೂರಪ್ಪ, ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಹಿರಿಯರ ಅಭಿಪ್ರಾಯ ಪಡೆದು ಡಿಸೆಂಬರ್ ಅಂತ್ಯದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry