ಗುರುವಾರ , ಜನವರಿ 23, 2020
28 °C

ಒಟ್ಟಾರೆ ಹಣದುಬ್ಬರ ದರ: ಪ್ರಣವ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಒಟ್ಟಾರೆ ಹಣದುಬ್ಬರ ದರವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿಸಿರುವ ಹಿತಕರ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿರುವುದು ಕಳವಳಕಾರಿ ಸಂಗತಿ. ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.ಸದ್ಯ ಒಟ್ಟಾರೆ ಹಣದುಬ್ಬರ ದರವು ಕಳೆದ ತಿಂಗಳ ಶೇ 9.73ರಿಂದ ಶೇ 9.11ಕ್ಕೆ ಕುಸಿದಿದೆ. ಡಿಸೆಂಬರ್ 3ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವೂ 4 ವರ್ಷಗಳ ಹಿಂದಿನ ಮಟ್ಟ ಶೇ 4.35ಕ್ಕೆ ಇಳಿಕೆ ಕಂಡಿದೆ. ಇದು ಸಮಾಧಾನಕರ ಸಂಗತಿ ಎಂದು ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು  ಸರ್ಕಾರ ಜತೆಯಾಗಿ ಹಣದುಬ್ಬರ ಏರಿಕೆ ತಡೆಯಲು ಪ್ರಯತ್ನಿಸುತ್ತಿದೆ. ಬೆಲೆ ಏರಿಕೆ ನಿಯಂತ್ರಿಸಲು ಬೇಳೆಕಾಳು ಮತ್ತು ಅಡುಗೆ ಎಣ್ಣೆ ಮೇಲಿನ ಆಮದು ತೆರಿಗೆ ಶೂನ್ಯಕ್ಕೆ ಇಳಿಸಲಾಗಿದೆ. ಬೇಳೆಕಾಳು, ಎಣ್ಣೆ ಕಾಳುಗಳ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ. ಕಚ್ಚಾ ತೈಲದ ಮೇಲಿನ ಅಬಕಾರಿ ಸುಂಕ ತಗ್ಗಿಸಲಾಗಿದೆ ಎಂದು  ಅವರು ಹೇಳಿದ್ದಾರೆ.ಹಣದುಬ್ಬರ ನಿಯಂತ್ರಿಸಲು `ಆರ್‌ಬಿಐ~ ಮಾರ್ಚ್ 2010ರಿಂದ ಇಲ್ಲಿಯವರೆಗೆ 13 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಬ್ಯಾಂಕುಗಳು `ಆರ್‌ಬಿಐ~ನಲ್ಲಿ ಇಡುವ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 1ರಷ್ಟು ಹೆಚ್ಚಿಸಲಾಗಿದೆ ಎಂದರು. ಆದಾಗ್ಯೂ ಇತ್ತೀಚಿನ ವಿತ್ತೀಯ ಪರಾಮರ್ಶೆಯಲ್ಲಿ `ಆರ್‌ಬಿಐ~ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಬಡ್ಡಿ ದರ ಇಳಿಕೆ ಸೂಚನೆ ಎಂದರು.

ಪ್ರತಿಕ್ರಿಯಿಸಿ (+)